ಹಾವೇರಿ ಐತಿಹಾಸಿಕ ಭಗವತಿ ಕೆರೆಯಲ್ಲಿ ಬೇಸಿಗೆಯಲ್ಲೂ ನೀರು

KannadaprabhaNewsNetwork | Updated : May 11 2024, 01:15 PM IST

ಸಾರಾಂಶ

ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗಿ ಎಲ್ಲ ಕೆರೆ ಕಟ್ಟೆಗಳು ಬತ್ತಿ ಬರಿದಾಗಿದೆ. ಆದರೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಜೋಕನಾಳ ಗ್ರಾಮದ ಬಳಿಯಿರುವ ಭಗವತಿ ಕೆರೆ ನೀರಿನಿಂದ ತುಂಬಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಸತೀಶ ಸಿ.ಎಸ್.

 ರಟ್ಟೀಹಳ್ಳಿ :  ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗಿ ಎಲ್ಲ ಕೆರೆ ಕಟ್ಟೆಗಳು ಬತ್ತಿ ಬರಿದಾಗಿದೆ. ಆದರೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಜೋಕನಾಳ ಗ್ರಾಮದ ಬಳಿಯಿರುವ ಭಗವತಿ ಕೆರೆ ನೀರಿನಿಂದ ತುಂಬಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಇದು ಬೆಟ್ಟಗುಡ್ಡಗಳಿಂದ ಸುತ್ತುವರಿದ ಪ್ರದೇಶವಾಗಿದ್ದು, ಬೇಸಿಗೆಯಲ್ಲಿ ಎಲ್ಲೆಲ್ಲೂ ನೀರಿನ ಬರ ಎದುರಾದರೆ ಇಲ್ಲಿ ಮಾತ್ರ ಅನೇಕ ವರ್ಷಗಳಿಂದ ನೀರಿನ ಸೆಲೆ ಕಾಲುವೆಯ ಮೂಲಕ ಹರಿಯುತ್ತದೆ. ಬೆಟ್ಟಗುಡ್ಡಗಳ ಮಧ್ಯೆ ಗೌಪ್ಯವಾಗಿ ಜಿನುಗುವ ನೀರಿನ ಸೆಲೆ ಎಲ್ಲಿಂದ ಪ್ರಾರಂಭವಾಗಿದೆ ಎಂಬುದೇ ಇಲ್ಲಿಯವರೆಗೂ ಗೊತ್ತಾಗಿಲ್ಲ. ಭಗವತಿ ಕೆರೆ 5 ಕಿ.ಮೀ. ದೂರದ ಕಡೂರ ಗ್ರಾಮದ ಮಾಜಿಗೌಡ್ರ ಎಂಬುವವರ ಹೊಲದಲ್ಲಿ ಅಂತ್ಯಗೊಳ್ಳುತ್ತದೆ. ಅಲ್ಲಿಂದ ನೀರನ್ನು ಮುಂದುವರಿಸಲು ಪ್ರಯತ್ನಿಸಿದರೂ ಬೇರೆಡೆ ನೀರು ಹರಿಯುವುದಿಲ್ಲ. ಆದರೆ ಗ್ರಾಮದ ಹಿರಿಯರು ಆ ನೀರು ಭೂಮಿಯಲ್ಲಿ ಇಂಗಿ ಮುಂದೆ ಕುಮದ್ವತಿ ನದಿಗೆ ಸೇರುತ್ತದೆ ಎನ್ನುತ್ತಾರೆ.

ಭಗವತಿ ಕೆರೆ ಅಭಿವೃದ್ಧಿ ಮಾಡಬೇಕೆಂದು ಹತ್ತಾರು ವರ್ಷಗಳ ಹಿಂದೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ಆ ಸಮಯದಲ್ಲಿ ಇಲ್ಲಿನ ನೀರು ಕೆಂಪಾಗಿ ಗೋಚರವಾಗಲು ಪ್ರಾರಂಭವಾಯಿತು. ಕಾರಣ ಗ್ರಾಮಸ್ಥರು ಇದು ಭಗವತಿಯ ಶಾಪವೆಂದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದರು. ಆದರೆ ಬಿ.ಸಿ. ಪಾಟೀಲ್ ಕೃಷಿ ಸಚಿವರಾಗಿದ್ದ ಸಂದರ್ಭದಲ್ಲಿ ಕೆರೆ ಅಭಿವೃದ್ಧಿಗೆ ಮತ್ತೆ ಮುನ್ನುಡಿ ಬರೆಯಲಾಯಿತು. ಆಗ ಯಾವುದೇ ಅಡೆ ತಡೆ ಉಂಟಾಗಲಿಲ್ಲ. ಕಾಮಗಾರಿ ಸುಸೂತ್ರವಾಗಿ ಸಾಗಿತು. ಈಗ ಬೃಹತ್ ಕೆರೆ ನಿರ್ಮಾಣವಾಗಿದೆ. ಕಣವಿಸಿದ್ಗೇರಿ, ಪರ್ವತಸಿದ್ಗೇರಿ, ಜೋಕನಾಳ ಗ್ರಾಮದ ವ್ಯಾಪ್ತಿಯ ಎಲ್ಲ ಹೊಲಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ.

ಇದೇ ಪ್ರದೇಶದಲ್ಲಿ ಭಗವತಿ ದೇವಸ್ಥಾನ, ಈಶ್ವರ ದೇವಸ್ಥಾನಗಳಿವೆ. ಬೆಟ್ಟಗುಡ್ಡಗಳು ಬಿರು ಬೇಸಿಗೆಯಲ್ಲೂ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ ಹಾಗೂ ಔಷಧಿ ಸಸ್ಯಗಳು ಇಲ್ಲಿವೆ.

ಕೆರೆಗೆ ಶತಮಾನಗಳ ಇತಿಹಾಸವಿದೆ. ಇಲ್ಲಿರುವ ಶಿಲಾ ಶಾಸನಗಳು ಕಣವಿಸಿದ್ಗೇರಿ ಸಿದ್ದೇಶ್ವರ ದೇವಸ್ಥಾನದಲ್ಲಿರುವ ಶಿಲಾ ಶಾಸನಕ್ಕೂ ಸಂಬಂಧವಿದೆ. ಎರಡು ಬೆಟ್ಟಗಳ ಮಧ್ಯ ಕ್ರಿ.ಶ. 1238ರಿಂದಲೂ ಕೆರೆ ಇದೆ ಎಂದು ಶಿಲಾಶಾಸನಗಳಿಂದ ತಿಳಿದು ಬರುತ್ತದೆ, ಕಣವಿದ್ಗೇರಿ ದೇವಸ್ಥಾನದಲ್ಲಿರುವ ಶಿಲಾ ಶಾಸನದ ಪ್ರಕಾರ ಭಗವತಿ ಘಟ್ಟದ ರಾಮೇಶ್ವರ ದೇವರಿಗೆ ಪಾಂಡ್ಯನೂ ಕುಮಾರ ಚೌಂಡರಸನೂ 1238ರಲ್ಲಿ ನೀಡಿದ ದಾನಗಳ ಉಲ್ಲೇಖವಿದೆ.

ಭಗವತಿ ಕೆರೆ ತಾಲೂಕಿನ ಜೋಕನಾಳ ಗ್ರಾಮದಿಂದ 3 ಕಿ.ಮೀ. ದೂರ ಕಾಡಿನ ಮಧ್ಯ ಇರುವುದರಿಂದ ಸ್ಥಳ ಪ್ರಶಾಂತವಾಗಿದೆ. ಅನೇಕ ದಶಕಗಳ ಹಿಂದೆ ಚೀನಿ ಯಾತ್ರಿಕರು ಇಲ್ಲಿಗೆ ಬರುತ್ತಿದ್ದರೆಂಬ ಐತಿಹ್ಯವಿದೆ. ರಾಮೇಶ್ವರ ಮತ್ತು ಭಗವತಿ ದೇವರ ಸ್ಥಾಪನೆ ಮಾಡಲಾಗಿದೆ. ಜೋಕನಾಳ ಗ್ರಾಮದಿಂದ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಅನುಕೂಲಕರ ರಸ್ತೆ ಇದ್ದು, ಕೆರೆಯ ತನಕ ಉತ್ತಮ ರಸ್ತೆ ಇರುವುದರಿಂದ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿದೆ.

ಕೆರೆಯ ದಂಡೆಯನ್ನು ಅಭಿವೃದ್ಧಿಪಡಿಸಿ ಕೆಳ ಹಂತದ ಪ್ರದೇಶದಲ್ಲಿ ಉತ್ತಮ ವನ ನಿರ್ಮಾಣ, ಭಕ್ತರಿಗೆ ತಂಗುದಾಣ ನಿರ್ಮಾಣ ಮಾಡಿದರೆ ಪ್ರವಾಸಿಗರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ ಎಂದು ಪ್ರವಾಸಿಗ ವಿನಾಯಕ ಭೀಮಪ್ಪನವರ ಹೇಳಿದರು.

Share this article