ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೀರು ಕಲುಷಿತ

KannadaprabhaNewsNetwork |  
Published : Sep 14, 2025, 02:00 AM IST
13ಎಚ್‌ಯುಬಿ 27ನವಲಗುಂದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಗುಡಿಸಾಗರ ಗ್ರಾಮದ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. | Kannada Prabha

ಸಾರಾಂಶ

ಮನೆ-ಮನೆಗೆ ನೀರು ತಲುಪುವ ಜೆಎಂಎಂ ಹಾಗೂ ಜಲಧಾರೆ ಕಾಮಗಾರಿ ಮುಗಿದಿದ್ದರೆ ಗುಡಿಸಾಗರ ಗ್ರಾಮಸ್ಥರು ಇಂತಹ ಸಂಕಟ ಪಡುವ ಅವಶ್ಯಕತೆ ಇರುತ್ತಿರಲಿಲ್ಲ

ನವಲಗುಂದ: ತಾಲೂಕಾಡಳಿತದ ಬೇಜವಾಬ್ದಾರಿಯಿಂದ ಗುಡಿಸಾಗದ ಗ್ರಾಮಸ್ಥರು ಕಲುಷಿತ ನೀರು ಕುಡಿದು ಅಸ್ವಸ್ಥರಾಗುವಂತಾಗಿದ್ದು, ಇದಕ್ಕೆಲ್ಲ ಯಾರು ಹೊಣೆ ಎಂದು ಮಾಜಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅಸಮಾಧಾನ ವ್ಯಕ್ತ ಪಡಿಸಿದರು.

ಶನಿವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡ ರೋಗಿಗಳನ್ನು ಭೇಟಿ ಮಾಡಿ ಹಣ್ಣು-ಹಂಪಲು ನೀಡಿ ಯೋಗ ಕ್ಷೇಮ ವಿಚಾರಿಸಿ ಮಾತನಾಡಿದರು.

ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಅಧಿಕಾರವಧಿಯಲ್ಲಿಯೇ ₹330 ಕೋಟಿ ವೆಚ್ಚದಲ್ಲಿ ಜೆಎಂಎಂ ಹಾಗೂ ಜಲಧಾರೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಟೆಂಡರ್ ಪಡೆದ ಏಜನ್ಸಿಯವರು 2024ರ ಅಕ್ಟೋಬರ್ ತಿಂಗಳಲ್ಲಿಯೇ ಕಾಮಗಾರಿ ಮುಕ್ತಾಯಗೊಳಿಸಬೇಕಿದ್ದರೂ ಇದುವರೆಗೆ ಕಾಮಗಾರಿ ಮುಕ್ತಾಯವಾಗಿಲ್ಲ. ಆಡಳಿತ ನಡೆಸುವವರ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬವಾಗಿದೆಯೋ ಅಥವಾ ಕಾಮಗಾರಿ ನಡೆಸುತ್ತಿರುವ ಏಜೆನ್ಸಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೋ ಎಂಬ ಸತ್ಯ ಹೊರ ಬರಬೇಕಾದರೆ ಕಾಮಗಾರಿ ವಿಳಂಬ ಕುರಿತಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಮನೆ-ಮನೆಗೆ ನೀರು ತಲುಪುವ ಜೆಎಂಎಂ ಹಾಗೂ ಜಲಧಾರೆ ಕಾಮಗಾರಿ ಮುಗಿದಿದ್ದರೆ ಗುಡಿಸಾಗರ ಗ್ರಾಮಸ್ಥರು ಇಂತಹ ಸಂಕಟ ಪಡುವ ಅವಶ್ಯಕತೆ ಇರುತ್ತಿರಲಿಲ್ಲ, ಇಲ್ಲಿಯವರೆಗೆ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿ ಗ್ರಾಮಸ್ಥರಿಗೆ ಯೋಜನೆಯಡಿ ಹನಿ ನೀರನ್ನೂ ಪೂರೈಸದಿರುವುದು ದುರ್ದೈವದ ಸಂಗತಿಯಾಗಿದೆ. ಜಿಲ್ಲಾಡಳಿತ ಈ ಕುರಿತಾಗಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.

ಆಸ್ಪತ್ರೆಯಲ್ಲಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಹೊನಕೇರಿ ರೋಗಿಗಳಿಗೆ ನೀಡಲಾದ ಚಿಕಿತ್ಸೆ ಕುರಿತು ವಿವರಿಸಿದರು.

ನಂತರ ಗುಡಿಸಾಗರ ಗ್ರಾಮಕ್ಕೆ ತೆರಳಿ ಗ್ರಾಮದ ಕೆರೆ ಹಾಗೂ ತಾತ್ಕಾಲಿಕವಾಗಿ ಸ್ಥಾಪಿಸಲಾದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಗ್ರಾಮದಲ್ಲಿ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡವಿದ್ದರೂ ಕಾಯಂ ಆಸ್ಪತ್ರೆ ಇಲ್ಲದ ಕಾರಣ ಗ್ರಾಪಂ ವ್ಯಾಪ್ತಿಯ 4 ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿದ್ದು, ಗ್ರಾಮದಲ್ಲಿ ಕಾಯಂ ಆಸ್ಪತ್ರೆ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಗ್ರಾಮಸ್ಥರು ಆಗ್ರಹಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಗಂಗಪ್ಪ ಮನಮಿ, ಶರಣಪ್ಪಗೌಡ ಪಾಟೀಲ್, ಸಿದ್ದಣ್ಣ ಕಿಟಗೇರಿ, ಪ್ರಭು ಇಬ್ರಾಹಿಂಪೂರ, ಆನಂದ ಮುನೇನಕೊಪ್ಪ, ಮಲ್ಲಿಕಾರ್ಜುನ ಸಂಗನೌಡರ, ದೇವರಾಜ ಕರಿಯಪ್ಪನವರ, ಪುರಸಭೆ ಸದಸ್ಯರಾದ ಶರಣಪ್ಪ ಹಕ್ಕರಕಿ, ಜಯಪ್ರಕಾಶ ಬದಾಮಿ, ಬಸವರಾಜ ಕಟ್ಟಿಮನಿ ಮತ್ತಿತರರಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ