ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿ
ಬಿಸಿಲಿನ ತಾಪ ಹೆಚ್ಚಳ ಪರಿಣಾಮ ಕಾವೇರಿ ನದಿ ಸಂಪೂರ್ಣ ಬತ್ತಿ ಹೋಗಿದೆ. ನದಿ ಮೂಲವನ್ನೇ ನಂಬಿಕೊಂಡಿರುವ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರ ಹೆಚ್ಚಾಗಿದ್ದು, ಮಳೆ ತೀರಾ ಅನಿವಾರ್ಯವಾಗಿದೆ.ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಪಟ್ಟಣ, ಬಸವನಹಳ್ಳಿ, ಗುಡ್ಡೆಹೊಸೂರು ಭಾಗದಲ್ಲಿ ನೀರಿಗೆ ಹೆಚ್ಚಿನ ಸಮಸ್ಯೆ ಉಂಟಾಗಿದ್ದು, ಕುಡಿಯುವ ನೀರಿಗೆ ಗ್ರಾಮದ ಜನರು ಪರಿತಪಿಸುವಂತಾಗಿದೆ.
ಮಾದಪಟ್ಟಣದಲ್ಲಿ 420, ಬಸವನಹಳ್ಳಿ 35 ಮನೆಗಳಲ್ಲಿ ಕುಡಿಯುವ ನೀರಿಗೆ ಹೆಚ್ಚು ಸಮಸ್ಯೆಯಾಗಿದೆ. ಇಲ್ಲಿನ ನಿವಾಸಿಗಳಿಗೆ ಕಾವೇರಿ ನದಿಯಿಂದ ಮೋಟಾರ್ ಪಂಪ್ ಸೆಟ್‌ಗಳ ಮೂಲಕ ನೀರನ್ನು ತೆಗೆದು ಸಂಸ್ಕರಣಾ ಘಟಕದ ಮೂಲಕ ಸಂಸ್ಕರಿಸಿ ನೀರನ್ನು ಗ್ರಾಮಸ್ಥರಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ನೀರಿನ ಪ್ರಮಾಣ ಗಣನೀಯವಾಗಿ ಇಳಿಮುಖವಾದ ಹಿನ್ನೆಲೆಯಲ್ಲಿ ನೀರು ಇಲ್ಲದೆ ಜನರು ಸಂಕಷ್ಟಕ್ಕೀಡಾಗಿದ್ದಾರೆ.ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಮರಳಿನ ಮೂಟೆಯನ್ನು ನದಿಗೆ ಅಡ್ಡಲಾಗಿ ಹಾಕಿ ನೀರನ್ನು ತಡೆಹಿಡಿಯಲಾಗಿತ್ತಾದರೂ ಸದ್ಯ ನೀರು ಸಂಪೂರ್ಣ ಖಾಲಿಯಾಗಿದೆ. ಇದರಿಂದ ಮೋಟಾರ್ ಪಂಪ್ ಸೆಟ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರನ್ನು ಗ್ರಾಮಸ್ಥರಿಗೆ ನೀಡುವ ಕೆಲಸ ಮಾಡಲಾಗುತ್ತಿದೆ.
* ಡಿಸೆಂಬರ್‌ನಿಂದಲೇ ಟ್ಯಾಂಕರ್: ಕಳೆದ ಡಿಸೆಂಬರ್ ತಿಂಗಳಿಂದಲೇ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಗ್ರಾಮಸ್ಥರಿಗೆ ವಿತರಣೆ ಮಾಡಲಾಗುತ್ತಿದೆ. ಈ ವರೆಗೆ ಪಂಚಾಯಿತಿಯಿಂದ ಸುಮಾರು 180 ಟ್ಯಾಂಕರ್‌ಗಳಲ್ಲಿ ನೀರನ್ನು ವಿತರಿಸಲಾಗಿದೆ. ಇದೀಗ ಕುಶಾಲನಗರ ತಹಸೀಲ್ದಾರ್ ಟಾಸ್ಕ್‌ಫೋರ್ಸ್ ಸಮಿತಿಯಿಂದ ಕಳೆದ ಮೂರು ದಿನಗಳಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ.* ಮಳೆ ಬಂದರೆ ಸಮಸ್ಯೆ ಪರಿಹಾರ: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಪರಿಹಾರ ಆಗಬೇಕಾದರೆ ಆದಷ್ಟು ಬೇಗ ಮಳೆ ಅತ್ಯವಶ್ಯವಾಗಿದೆ. ಮಳೆ ಸುರಿದರೆ ಮಾತ್ರ ನೀರನ್ನು ಪಂಪ್ ಸೆಟ್ ಮೂಲಕ ತೆಗೆದು ಸಂಸ್ಕರಣೆ ಮಾಡಿ ಗ್ರಾಮಸ್ಥರಿಗೆ ವಿತರಿಸಲು ಅನುಕೂಲ ಆಗುತ್ತದೆ. ಈ ಭಾಗದಲ್ಲಿ ಕೃಷಿ ಚಟುವಟಿಕೆಗೂ ಕೂಡ ನೀರಿನ ಅಭಾವ ತೀರಾ ಕಾಡುತ್ತಿದೆ. ಕಾಫಿ, ಕಾಳು ಮೆಣಸು, ಶುಂಠಿ ಸೇರಿದಂತೆ ವಿವಿಧ ಕೃಷಿಗೆ ತೊಂದರೆಯಾಗಿದೆ. ಬೋರ್‌ವೆಲ್‌ಗಳಲ್ಲಿ ಅಂತರ್ಜಲಮಟ್ಟ ಕುಸಿದ ಪರಿಣಾಮ ನೀರಿಲ್ಲದೆ ಕೃಷಿ ಬೆಳೆಗಳು ಒಣಗುವಂತಹ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಈ ಭಾಗದ ಗ್ರಾಮಸ್ಥರು ವರುಣನಿಗಾಗಿ ಎದುರು ನೋಡುತ್ತಿದ್ದಾರೆ.------
ಪಂಚಾಯಿತಿ ವ್ಯಾಪ್ತಿಯ ಮಾದಪಟ್ಟಣ, ಬಸವನಹಳ್ಳಿ ಹಾಗೂ ಗುಡ್ಡೆಹೊಸೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಕಾವೇರಿ ನದಿಯಿಂದ ಮೋಟಾರ್‌ಗಳ ಮೂಲಕ ನೀರು ತೆಗೆದು ಸಂಸ್ಕರಣೆ ಮಾಡಿ ಸರಬರಾಜು ಮಾಡಲಾಗುತ್ತಿತ್ತು. ಆದರೆ ನದಿಯಲ್ಲಿ ನೀರು ಖಾಲಿಯಾದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಆದ್ದರಿಂದ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.। ಸುಮೇಶ್, ಪಿಡಿಒ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ