ಕೊಕ್ಕರೆ ಬೆಳ್ಳೂರಿನಲ್ಲಿ ನೀರಿಗೆ ಹಾಹಾಕಾರ

KannadaprabhaNewsNetwork | Published : Apr 12, 2024 1:00 AM

ಸಾರಾಂಶ

ಕೊಕ್ಕರೆಗಳಿಗೆ ರಾಜ್ಯದಲ್ಲಿ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದಾದ ಕೊಕ್ಕರೆ ಬೆಳ್ಳೂರಿಗೆ ವಂಶಾಭಿವೃದ್ಧಿಗಾಗಿ ಸಾವಿರಾರು ಕಿಮೀ ದೂರದಿಂದ ಬರುವ ಕೊಕ್ಕರೆಗಳು ಭೀಕರ ಬರಗಾಲ ಆವರಿಸಿರುವುದರಿಂದ ಕುಡಿಯಲು ನೀರು ಮತ್ತು ಆಹಾರ ಸಿಗದೆ ತತ್ತರಿಸುತ್ತಿವೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಕೊಕ್ಕರೆಗಳಿಗೆ ರಾಜ್ಯದಲ್ಲಿ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದಾದ ಕೊಕ್ಕರೆ ಬೆಳ್ಳೂರಿಗೆ ವಂಶಾಭಿವೃದ್ಧಿಗಾಗಿ ಸಾವಿರಾರು ಕಿಮೀ ದೂರದಿಂದ ಬರುವ ಕೊಕ್ಕರೆಗಳು ಭೀಕರ ಬರಗಾಲ ಆವರಿಸಿರುವುದರಿಂದ ಕುಡಿಯಲು ನೀರು ಮತ್ತು ಆಹಾರ ಸಿಗದೆ ತತ್ತರಿಸುತ್ತಿವೆ.

ಜನವರಿ ತಿಂಗಳಲ್ಲಿ ಬರುವ ಕೊಕ್ಕರೆಗಳು ವರ್ಷದಲ್ಲಿ 6 ತಿಂಗಳ ಕಾಲ ಬೆಳ್ಳೂರಿನಲ್ಲಿ ನೆಲೆಸಿ ಗೂಡು ಕಟ್ಟಿಕೊಂಡು ವಾಸಿಸುತ್ತವೆ. ಈ ಪಕ್ಷಿಗಳನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಪಕ್ಷಿ ಪ್ರೇಮಿಗಳು ಬರುವುದು ಸರ್ವೇ ಸಾಮಾನ್ಯವಾಗಿದೆ.

ಪ್ರತಿವರ್ಷವೂ ನಿಗಧಿಯ ಸಮಯಕ್ಕೆ ಬಣ್ಣದ ಕೊಕ್ಕರೆ (ಪೇಟೆಂಡ್ ಸ್ಟಾರ್ಕ್), ಫೆಲಿಕಾನ್, ಪಾರ್ಕ್‌ಪೇಂಟರ್, ನೈಟ್‌ಎರಾನ್, ವೈಟ್‌ಹೇಬಿಸ್, ಪಾಂಡ್‌ಎರಾನ್, ಕಾರ್ಮೋರೆಂಟ್ ಸೇರಿ ವಿವಿಧ ಬಗೆಯ ಕೊಕ್ಕರೆಗಳು ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಇನ್ನಿತರೆ ವಿವಿಧ ದೇಶದ ಮೂಲೆ-ಮೂಲೆಯಿಂದ ಇಲ್ಲಿಗೆ ಬರುತ್ತಿವೆ.

ಈಗಾಗಲೇ ಹಕ್ಕಿಜ್ವರದಿಂದ ಪಕ್ಷಿಗಳು ಕ್ಷೀಣಿಸುತ್ತಿದ್ದವು. ಇದರ ಮಧ್ಯೆ ಭೀಕರ ಬರಗಾಲದಿಂದ ಎಲ್ಲಾ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಹಕ್ಕಿಗಳು ಸಾವು - ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಕೊಕ್ಕರೆಗಳು ಆಹಾರ ಮತ್ತು ನೀರಿಗೆ ಶಿಂಷಾನದಿಯನ್ನು ಅವಲಂಬಿಸಿದ್ದವು. ಆದರೀಗ ಅದೂ ಕೂಡ ಸಂಪೂರ್ಣವಾಗಿ ಬರಿದಾಗಿದೆ.

ಪಕ್ಷಿಗಳಿಗೆ ತೊಂದರೆ:

ಬೆಳ್ಳೂರಿನ ಕೂಗಳತೆ ದೂರದಲ್ಲಷ್ಟೆ ೮೦೦ ಎಕರೆ ವಿಸ್ತೀರ್ಣದ ಶಿಂಷಾನದಿ ಕೆರೆ ಅಭಿವೃದ್ದಿಗೂ ಸರ್ಕಾರ ಮುತ್ತುವರ್ಜಿ ತೋರುತ್ತಿಲ್ಲ. ಕೊಕ್ಕರೆಗಳ ಹಿತದೃಷ್ಟಿಯಿಂದ ಅಭಿವೃದ್ಧಿ ಅಗತ್ಯವಾಗಿದೆ. ಆಹಾರಕ್ಕಾಗಿ ಈ ಶಿಂಷಾನದಿ ಪಾತ್ರಕ್ಕೆ ಬರುವ ಕೊಕ್ಕರೆಗಳಿಗೆ ತೊಂದರೆಯಾಗಿದೆ.

ಕೊಕ್ಕರೆ ಮರಿಗಳನ್ನು ಬದುಕಿಸಲು ಹರಸಾಹಸ:

ಕೊಕ್ಕರೆಗಳ ವಿವಿಧ ಭಂಗಿ, ಆಹಾರ ಹಿಡಿಯಲು ಕುತೂಹಲಕರ ನೋಟ, ಒಂದಕ್ಕೊಂದು ಪ್ರೀತಿ ಮಾಡುವ ಮಧುರ ಕ್ಷಣಗಳು ಇವೆಲ್ಲವೂ ಇಲ್ಲಿ ವಿಶಿಷ್ಟವಾಗಿರುತ್ತವೆ. ರಾಜ್ಯದಲ್ಲಿ ಹಲವು ಕಡೆ ಪಕ್ಷಿಧಾಮಗಳಿವೆ ಜೊತೆಗೆ ಶಿಂಷಾನದಿಯ ಪಾತ್ರದಲ್ಲಿ ನೂರಾರು ಹೆಮ್ಮರಗಳಿದ್ದರೂ ಹಕ್ಕಿಗಳಿಗೆ ಮಾತ್ರ ಶಿಂಷಾನದಿಯ ದಂಡೆಯ ಮೇಲಿನ ಶ್ರೀ ವೈದ್ಯನಾಥಶ್ವೇರ ದೇವಾಲಯ ಸಮೀಪದ ಕೊಕ್ಕರೆ ಬೆಳ್ಳೂರೇ ಇಷ್ಟ. ಹಾಗಾಗಿ ಕೊಕ್ಕರೆಗಳು ಸಾವಿರಾರು ಕಿಮೀ ದೂರಗಳಿಂದ ಕೊಕ್ಕರೆ ಬೆಳ್ಳೂರಿಗೆ ಆಗಮಿಸುತ್ತವೆ.

ಈ ಕೊಕ್ಕರೆಗಳಿಗೆ ಪ್ರಮುಖವಾಗಿ ಜಲಚರಗಳಲ್ಲಿರುವ ಮೀನು, ಹುಳುಗಳು, ಕಪ್ಪೆ, ಏಡಿ ಸೇರಿ ಇನ್ನಿತರೆ ಆಹಾರವೇ ಮುಖ್ಯ. ಆದರೆ ಈ ಬರಗಾಲದಿಂದ ಕೆರೆ-ಕಟ್ಟೆ, ಜೀವನದಿಯಾದ ಶಿಂಷಾ ನದಿ ಬರಿದಾಗಿ ಆಹಾರ ಸಿಗದೆ ವಂಶಾಭಿವೃದ್ಧಿಗೆ ಬಂದಿದ್ದ ಕೊಕ್ಕರೆಗಳು ತಮ್ಮ ಮರಿಗಳನ್ನು ಬದುಕಿಸಿಕೊಳ್ಳಲು ಹರಸಾಹಸ ಪಡುತ್ತಿವೆ.

ಕೊಕ್ಕರೆಗಳ ಸಂಖ್ಯೆ ಇಳಿಮುಖ:

ಈಗಾಗಲೇ ವರ್ಷದಿಂದ ವರ್ಷಕ್ಕೆ ಬೆಳ್ಳೂರಿನಲ್ಲಿ ಕೊಕ್ಕರೆಗಳ ಸಂಖ್ಯೆ ಹಕ್ಕಿಜ್ವರದಿಂದ ಇಳಿಮುಖಗೊಂಡಿದೆ. ಇದರ ನಡುವೆ ಬರಗಾಲದಿಂದ ಕೆರೆಕಟ್ಟೆ, ಶಿಂಷಾನದಿ ನೀರಿಲ್ಲದೆ ನೆಲ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಹಕ್ಕಿಗಳ ಸಂತಾನೋತ್ಪತ್ತಿಗಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ನೀರಾವರಿ ಇಲಾಖೆ ಪಕ್ಷಿಗಳ ಸಂರಕ್ಷಣೆಗೆ ಮತ್ತು ಕೊಕ್ಕರೆಗಳ ವೈವಿದ್ಯತೆ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಬೆಳ್ಳೂರಿನಲ್ಲಿರುವ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಕ್ರಮಕೈಗೊಳ್ಳುವ ಅಗತ್ಯತೆ ಇದೆ. ಕ್ಷೇತ್ರದ ಶಾಸಕರು ಕೊಕ್ಕರೆ ಬೆಳ್ಳೂರಿನ ಅಭಿವೃದ್ಧಿಗೆ ಗಮನ ಹರಿಸುವ ಜೊತೆಗೆ ಬರಿದಾಗಿರುವ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಹಲವಾರು ವರ್ಷಗಳಿಂದಲೂ ಈ ಗ್ರಾಮಕ್ಕೆ ಹಕ್ಕಿಗಳು ಬರುತ್ತಿವೆಯಾದರೂ ಇವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಸರ್ಕಾರ ಎಲ್ಲಾ ಪಕ್ಷಿಧಾಮಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಅಭಿವೃದ್ಧಿಪಡಿಸುತ್ತಿದೆ. ಈ ಕೊಕ್ಕರೆ ಬೆಳ್ಳೂರು ಗ್ರಾಮವನ್ನು ಮಾತ್ರ ತಲೆಕೆಡಿಸಿಕೊಳ್ಳದಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಯಕ್ಷ ಪಶ್ನೆಯಾಗಿ ಉಳಿದಿದೆ.

ಕಳೆದ ೨೫ ವರ್ಷಗಳಿಂದಲೂ ಸರ್ಕಾರ ಅಭಿವೃದ್ಧಿಪಡಿಸುವ ಭರವಸೆ ನೀಡುತ್ತಿದೆ. ಆದರೆ ಶೇ.೧ರಷ್ಟು ಹೊರತು ಪಡಿಸಿದರೆ ಶೇ.೯೯ ರಷ್ಟು ಕೆಲಸಗಳು ಕಾರ್ಯಗತವಾಗಿಲ್ಲ. ವಿದ್ಯುಚ್ಛಕ್ತಿಯ ಬದಲು ಸೌರಶಕ್ತಿ ಬಳಸಿದರೆ ಪಕ್ಷಿಗಳನ್ನು ಸಂರಕ್ಷಿಸಬಹುದು. ಜೊತೆಗೆ ಸಮೀಪವಿರುವ ಶಿಂಷಾನದಿ ತೀರವನ್ನು ಬೆಳ್ಳೂರಿನಂಥ ಪಕ್ಷಿಗ್ರಾಮ ವಿದೇಶದಲ್ಲಿದ್ದಿದ್ದರೆ ಅಭಿವೃದ್ಧಿಪಡಿಸುತ್ತಿದ್ದರು. ಆದರೆ ಇಲ್ಲಿನ ಸರ್ಕಾರದ ಬೇಜವಾಬ್ದಾರಿತನದಿಂದ ನೆನೆಗುದಿಗೆ ಬಿದ್ದಿದೆ.

- ಡಾ.ಬಿ.ಸಿ.ಬಾಬು ಪರಿಸರ ಪ್ರೇಮಿ ಕೊಕ್ಕರೆ ಬೆಳ್ಳೂರು

ಕೊಕ್ಕರೆಗಳು ಹಾಗೂ ಮರಿಗಳನ್ನು ರಕ್ಷಿಸಿ ಚಿಕಿತ್ಸೆ ನೀಡುವ ಕೆಲಸವು ಬಳಗದ ಸದಸ್ಯರಿಂದ ನಡೆಯುತ್ತಿವೆ. ಪ್ರತಿವರ್ಷವೂ 40-50 ವಿವಿಧ ಜಾತಿಯ ಪಕ್ಷಿಗಳನ್ನು ರಕ್ಷಿಸಿ ನಂತರ ಸ್ವತಂತ್ರವಾಗಿ ಹಾರಾಡಲು ಬಿಡುತ್ತಿದ್ದೇವೆ. ಆದರೆ ಈ ಭಾರಿ ಬರಗಾಲ ಆವರಿಸಿರುವುದರಿಂದ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಕೊಕ್ಕರೆಗಳು ಪರಿತಪಿಸುತ್ತಿವೆ. ಕೂಡಲೇ ಜಿಲ್ಲಾಡಳಿತ ಹಾಗೂ ಸಂಬಂಧ ಪಟ್ಟ ಇಲಾಖೆಗಳು ಅಗತ್ಯಕ್ರಮ ಕೈಗೊಳ್ಳಬೇಕಾಗಿದೆ.

Share this article