ಕೆಆರ್‌ಎಸ್‌ ನಂಬಿಕೊಂಡ ನಗರಗಳಿಗೆ ಇನ್ನೆರಡು ತಿಂಗಳಲ್ಲಿ ನೀರಿನ ಸಮಸ್ಯೆ

KannadaprabhaNewsNetwork |  
Published : Mar 15, 2024, 01:18 AM ISTUpdated : Mar 15, 2024, 01:25 PM IST
ಕೆಆರ್‌ಎಸ್‌ | Kannada Prabha

ಸಾರಾಂಶ

ಕೆಆರ್‌ಎಸ್‌ ಜಲಾಶಯದಲ್ಲಿ ನೀರು ಬೆಂಗಳೂರಿನ ಬೇಡಿಕೆಯಷ್ಟು ಇಲ್ಲ, ಹಾಗಾಗಿ ಇನ್ನೆರಡು ತಿಂಗಳಲಿನಲ್ಲಿ ನೀರಿಗೆ ಸಮಸ್ಯೆ ಆಗುವುದು ಖಚಿತ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದಿನದಿಂದ ದಿನಕ್ಕೆ ಕಾವೇರಿ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಕಳೆದೊಂದು ವಾರದಿಂದೀಚೆಗೆ ಕೆಆರ್‌ಎಸ್‌ ಜಲಾಶಯದಲ್ಲಿ 1 ಟಿಎಂಸಿ ನೀರು ಇಳಿಕೆಯಾಗಿದೆ. ಇದನ್ನು ಗಮನಿಸಿದರೆ ಕಾವೇರಿ ನದಿ ನೀರು ನಂಬಿಕೊಂಡಿರುವ ನಗರಗಳಿಗೆ ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಗಳಿವೆ.

ಬೆಂಗಳೂರು ನಗರಕ್ಕೆ ಮಾಸಿಕ 1.54 ಟಿಎಂಸಿ ನೀರಿನ ಅವಶ್ಯಕತೆಯಿದೆ. ಅದೇ ಮಾರ್ಚ್‌ನಿಂದ ಜುಲೈ ಅಂತ್ಯದವರೆಗೆ 8 ಟಿಎಂಸಿ ನೀರು ಬೇಕಾಗಲಿದೆ. ಅಷ್ಟೂ ನೀರನ್ನು ಕೆಆರ್‌ಎಸ್‌ನಿಂದ ಪಡೆಯಲಾಗುತ್ತದೆ. 

ಆದರೆ, ಸದ್ಯ ಕೆಆರ್‌ಎಸ್‌ ಜಲಾಶಯದಲ್ಲಿ ಡೆಡ್‌ ಸ್ಟೋರೇಜ್‌ ಹೊರತುಪಡಿಸಿ 6.40 ಟಿಎಂಸಿ ನೀರು ಮಾತ್ರ ಉಳಿದಿದ್ದು, ಅದರಿಂದ ಮೈಸೂರು, ಮಂಡ್ಯ ಜಿಲ್ಲೆಗಳಿಗೂ ಪೂರೈಸಬೇಕಿದೆ. 

ಹೀಗಾಗಿ ಬೆಂಗಳೂರಿಗೆ ಮುಂದಿನ ಎರಡು ತಿಂಗಳು 4ರಿಂದ 5 ಟಿಎಂಸಿ ಮಾತ್ರ ಸಿಗಲಿದೆ. ಅದಾದ ನಂತರ ಬೆಂಗಳೂರಿಗೆ ಕುಡಿಯುವ ನೀರು ತರಲು ಪರದಾಡಬೇಕಿದೆ.

ಬೆಂಗಳೂರು ಸೇರಿದಂತೆ ಕಾವೇರಿ ನದಿ ನೀರಿನ ಅವಲಂಬಿತವಾಗಿರುವ ನಗರಗಳಿಗೆ ಜುಲೈ ಅಂತ್ಯದವರೆಗೆ 17 ಟಿಎಂಸಿ ನೀರು ಬೇಕಾಗಲಿದೆ. ಅಂದರೆ ಮಾಸಿಕ 3.4 ಟಿಎಂಸಿ ನೀರಿನ ಅವಶ್ಯಕತೆಯಿದೆ. 

ಅದರಲ್ಲಿ ಕೆಆರ್‌ಎಸ್‌ನಿಂದ ಬೆಂಗಳೂರು, ಮೈಸೂರು, ಮಂಡ್ಯಕ್ಕೆ ನೀರು ಪೂರೈಕೆಯಾದರೆ, ಹೇವಾವತಿ ಜಲಾಶಯದಿಂದ ಹಾಸನ, ತುಮಕೂರಿಗೆ ನೀರು ಕೊಡಲಾಗುತ್ತದೆ. ಹಾರಂಗಿ, ಕಬಿನಿಯಿಂದ ಮಡಿಕೇರಿ ಸೇರಿದಂತೆ ಇನ್ನಿತರ ಜಲಾಶಯಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.

ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಆ ಜಲಾಶಯಗಳಲ್ಲೂ ನೀರಿನ ಪ್ರಮಾಣ ಕಡಿಮೆಯಿದೆ. ಹೇಮಾವತಿಯಲ್ಲಿ ಡೆಡ್‌ಸ್ಟೋರೇಜ್‌ ಹೊರತುಪಡಿಸಿ 8.28 ಟಿಎಂಸಿ, ಕಬಿನಿಯಲ್ಲಿ 0.76 ಟಿಎಂಸಿ ಹಾಗೂ ಹಾರಂಗಿಯಲ್ಲಿ 2.58 ಟಿಎಂಸಿ ಸೇರಿದಂತೆ 11.62 ಟಿಎಂಸಿ ನೀರು ಮಾತ್ರ ಶೇಖರಣೆಯಿದೆ. 

ಈ ಮೂರು ಜಲಾಶಯಗಳ ನೀರು ಅವುಗಳ ಅಕ್ಕಪಕ್ಕದ ಜಿಲ್ಲೆಗಳಿಗೆ ಮಾತ್ರ ಸಾಕಾಗುತ್ತದೆ. ಹೀಗಾಗಿ ಬೆಂಗಳೂರಿಗೆ ಪರ್ಯಾಯ ನೀರಿನ ವ್ಯವಸ್ಥೆ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ.ಕಣ್ವ ನೀರು ನಗರಕ್ಕೆ?

ಸದ್ಯದ ಪರಿಸ್ಥಿತಿಯಲ್ಲಿ ಕಾವೇರಿ ಕೊಳ್ಳದ ಜಲಾಶಯಗಳ ಪೈಕಿ ಕಣ್ವ ಜಲಾಶಯದಲ್ಲಿ ಮಾತ್ರ ಅತಿಹೆಚ್ಚು ನೀರು ಶೇಖರಣೆಯಾಗಿದೆ. ಕಣ್ವ ಜಲಾಶಯದ ನೀರು ರಾಮನಗರ ಸೇರಿ ಸುತ್ತಲಿನ ನಗರಗಳಿಗೆ ಪೂರೈಕೆಯಾಗುತ್ತಿದೆ. 

ಕಣ್ವದಲ್ಲಿ ಸದ್ಯ ಡೆಡ್‌ ಸ್ಟೋರೇಜ್‌ ಹೊರತುಪಡಿಸಿ 29.35 ಟಿಎಂಸಿ ನೀರಿದ್ದು, ಅದನ್ನು ಬೆಂಗಳೂರಿಗೆ ಪೂರೈಕೆ ಮಾಡಬಹುದಾಗಿದೆ. ಆದರೆ, ಅದಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಯೋಜಿಸಬೇಕಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...