ಸರ್ಕಾರ 7ನೇ ವೇತನ ಆಯೋಗ ಜಾರಿ ಮಾಡುವ ವಿಶ್ವಾಸವಿದೆ: ಷಡಕ್ಷರಿ

KannadaprabhaNewsNetwork | Published : Jan 21, 2024 1:30 AM

ಸಾರಾಂಶ

ರಾಜ್ಯ ಸರ್ಕಾರ 7ನೇ ವೇತನ ಆಯೋಗದ ವರದಿ ಜಾರಿ ಮಾಡುವ ವಿಶ್ವಾಸವಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆ: ನಿರಂತರ ಶ್ರಮ, ಪ್ರಯತ್ನವೊಂದಿದ್ದರೆ ಸವಾಲಿನ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನಗರದ ವಿಜಯನಗರ ಕಾಲೇಜಿನ ಸುವರ್ಣ ಭವನದಲ್ಲಿ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು. ಸಾಧಿಸುವ ಗುರಿಯ ಹಾದಿಯಲ್ಲಿ ಛಲದಿಂದಾಗಿ ನಿರಂತರ ಶ್ರಮ ಮತ್ತು ಪ್ರಯತ್ನದಿಂದ ಸಾಗಿದರೆ ಯಶಸ್ಸು ಸಾಧಿಸಬಹುದು. ಪ್ರಸ್ತುತ ಮಾನವ ಸಮಸ್ಯೆಗಳ ಆಗರದಲ್ಲಿಯೇ ಬದುಕುತ್ತಿದ್ದಾನೆ. ಸಮಸ್ಯೆ ಇಲ್ಲದ ಮನುಷ್ಯ ಇರಲು ಸಾಧ್ಯವಿಲ್ಲ. ಸಮಸ್ಯೆ ಒಳಗೊಂಡ ಜೀವನ ನಡೆಸುವ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಅದಕ್ಕೆ ಪರಿಹಾರ ಕಂಡುಕೊಂಡು ಬದುಕಿದರೆ ಜೀವನ ಸುಗಮ ಸಾಗುತ್ತದೆ ಎಂದರು.7ನೇ ವೇತನದ ಆಯೋಗದ ಅಂತಿಮ ವರದಿ ಪಡೆದು ಅನುಷ್ಠಾನ, ಎನ್‌ಪಿಎಸ್ ರದ್ದು ಮಾಡಿ ಒಪಿಎಸ್ ಜಾರಿಗೆ ಕ್ರಮ ವಹಿಸಬೇಕು. ಆರೋಗ್ಯ ಸಂಜೀವಿನಿ ಯೋಜನೆಯ ಲೋಕಾರ್ಪಣೆ ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಸರ್ಕಾರದ ಜತೆ ಈಗಾಗಲೇ ಚರ್ಚೆ ಮಾಡಿದ್ದೇವೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ವೇತನ ಆಯೋಗದಿಂದ ವರದಿ ಪಡೆದು ಅನುಷ್ಠಾನ ಮಾಡುವ ವಿಶ್ವಾಸ ಇದೆ ಎಂದರು.ಅಪರ ಜಿಲ್ಲಾಧಿಕಾರಿ ಅನುರಾಧಾ ಮಾತನಾಡಿ, ಸರ್ಕಾರಿ ನೌಕರರ ಜೀವನ ನೆಮ್ಮದಿ ಮತ್ತು ಸಂತೋಷದಿಂದ ಕೂಡಿರುತ್ತದೆ ಎಂಬುದು ಸಮಾಜದ ಕಲ್ಪನೆಯಾಗಿದೆ. ಆದರೆ ಸರ್ಕಾರಿ ನೌಕರರು ಎದುರಿಸುತ್ತಿರುವ ಕರ್ತವ್ಯದ ಒತ್ತಡ ಮತ್ತು ಚೌಕಟ್ಟು ಏನೆಂಬುದು ಅವರ ಅವಲಂಬಿತವಾದ ಪರಿವಾರಕ್ಕೆ ತಿಳಿದಿರುತ್ತದೆ ಎಂದರು.ಜಿಲ್ಲಾಧ್ಯಕ್ಷ ಜಿ. ಮಲ್ಲಿಕಾರ್ಜುನ ಗೌಡ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಎ. ಲತಾ ಉದ್ಘಾಟಿಸಿದರು. ವೈದ್ಯರಾದ ಡಾ. ಕೇದಾರೇಶ್ವರ, ಡಾ. ಮುನಿವಾಸುದೇವ ರೆಡ್ಡಿ ಉಪನ್ಯಾಸ ನೀಡಿದರು.

ಕೇಂದ್ರ ಸಂಘದ ಕಾರ್ಯದರ್ಶಿ ಡಾ. ಸದಾನಂದಪ್ಪ ನೆಲ್ಕುದ್ರಿ, ರಾಜ್ಯ ಕಾರ್ಯಾಧ್ಯಕ್ಷ ಬಿ. ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ತಿಮ್ಮೇಗೌಡ, ಉಪಾಧ್ಯಕ್ಷರಾದ ಎಂ.ವಿ. ರುದ್ರಪ್ಪ, ಎಸ್. ಬಸವರಾಜ, ಬಳ್ಳಾರಿ ಜಿಲ್ಲಾ ಸಂಘದ ಎಂ. ಶಿವಾಜಿರಾವ್ ಮತ್ತಿತರರಿದ್ದರು.

Share this article