ಕನ್ನಡಪ್ರಭ ವಾರ್ತೆ ಮದ್ದೂರು
ಮನುಷ್ಯರಲ್ಲಿ ಹೆಚ್ಚಾಗಿರುವ ದುರಾಸೆ ಎಂಬ ರೋಗದಿಂದ ಇಂದು ಯಾರು ಎಷ್ಟೇ ತಪ್ಪು, ಭ್ರಷ್ಟಾಚಾರ ಮಾಡಿದರೂ ಅವರನ್ನು ಪುರಸ್ಕರಿಸುವಂಥ ಸಮಾಜದಲ್ಲಿ ನಾವಿದ್ದೇವೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.ತಾಲೂಕಿನಲ್ಲಿ ಕೆ.ಹೊನ್ನಲಗೆರೆಯ ಆರ್.ಕೆ.ವಿದ್ಯಾಸಂಸ್ಥೆಯಲ್ಲಿ ಆರ್.ಕೆ.ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಗುರುವಾರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಶೈಕ್ಷಣಿಕ ವರ್ಷದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀಮಂತರಿಗೆ, ಅಧಿಕಾರದಲ್ಲಿರುವವರಿಗೆ ಇಂದು ಸಲಾಂ ಹೊಡೆಯುತ್ತಿದ್ದಾರೆ. ತಪ್ಪು ಮಾಡಿ ಜೈಲಿಗೆ ಹೋದರೂ, ಪ್ರಕರಣದಲ್ಲಿ ಖುಲಾಸೆಯಾಗದಿದ್ದರೂ ಜಾಮೀನಿನ ಮೇಲೆ ಬಂದಾಗ ಪ್ರೋತ್ಸಾಹಿಸುವ ಸ್ಥಿತಿಗೆ ಜನರು ಹೋಗಿದ್ದಾರೆ ಎಂದು ವಿಷಾದಿಸಿದರು.ದುರಾಸೆಯ ರೋಗ ಇಂದು ಮನುಷ್ಯನಲ್ಲಿ ಹೆಚ್ಚಾಗಿದೆ. ಈ ರೋಗಕ್ಕೆ ಮಿತಿ ಇಲ್ಲ. ಎಷ್ಟು ಮಾಡಿದರೂ ಸಾಲುತ್ತಿಲ್ಲ. ಮತ್ತೆ ಮತ್ತೆ ಬೇಕು ಎನ್ನುತ್ತಿದೆ. ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದರೂ ಎಲ್ಲಕ್ಕಿಂತ ಮುಖ್ಯವಾಗಿ ಅಭಿವೃದ್ಧಿಯಾಗಿರುವುದು ದುರಾಸೆಯಾಗಿದೆ ಎಂದರು.
ದೇಶದಲ್ಲಿ ಪ್ರತಿ ದಶಕದಲ್ಲೂ ಸಾವಿರಾರು ಹಗರಣಗಳು ನಡೆಯುತ್ತಲೇ ಇವೆ. ಇಂದು ಒಂದು ರಾಜಕೀಯ ಪಕ್ಷ ಇನ್ನೊಂದು ಪಕ್ಷದ ಮೇಲೆ ಆರೋಪ ಸಾಮಾನ್ಯವಾಗಿದೆ. ಒಂದು ಪಕ್ಷ 40 ಪರ್ಸೆಂಟ್ ಮಾಡಿದರೆ, ಮತ್ತೊಂದು ಪಕ್ಷ 60 ಪರ್ಸೆಂಟ್ ಮಾಡುತ್ತಿದೆ. ಭ್ರಷ್ಟಾಚಾರ ರಾಜಕೀಯ ಪಕ್ಷಗಳ ನಡುವೆ ಪರಸ್ಪರ ಪೈಪೋಟಿ ಮಟ್ಟಕ್ಕೆ ಹೋಗಿದೆ. ಪ್ರಾಮಾಣಿಕರಿಗೆ ಬೆಲೆ ಇಲ್ಲದೆ ಇಂದು ಭ್ರಷ್ಟರನ್ನು ಪುರಸ್ಕರಿಸುವ ಸಂದರ್ಭ ಬಂದಿದೆ ಎಂದು ಕಿಡಿಕಾರಿದರು.ಸಮಾಜದಲ್ಲಿ ದುರಾಸೆ ಅಭಿವೃದ್ಧಿಯಾದರೆ ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ಏನಾಗಬಹುದು. ಹಣದುಬ್ಬರ ಹೆಚ್ಚಳವಾದರೆ ಮುಂದಿನ ದಿನಗಳಲ್ಲಿ ಹಣಕ್ಕೆ ಬೆಲೆ ಇದೆಯೇ? ಎಲ್ಲ ರೋಗಗಳಿಗೆ ಮದ್ದಿದೆ. ಆದರೆ, ದುರಾಸೆಗೆ ಕೋರ್ಟ್ ನ ಹೆದರಿಕೆ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು 50 ರಿಂದ 60 ವರ್ಷವಾಗುತ್ತಿದೆ. ಅಲ್ಲದೆ ನ್ಯಾಯಾಲಯಕ್ಕೂ ಭ್ರಷ್ಟಾಚಾರ ಅಂಟಿದೆ. ಇಡೀ ಸಮಾಜವೇ ಭ್ರಷ್ಟಾಚಾರವನ್ನು ಒಪ್ಪಿಕೊಂಡರೆ ಇದಕ್ಕೆ ಕಡಿವಾಣ ಹೇಗೆ ಎಂದು ಪ್ರಶ್ನಿಸಿದರು.
ಪ್ರತಿಯೊಬ್ಬರೂ ಹಿರಿಯರು ಕಟ್ಟಿದ ಮೌಲ್ಯ, ತೃಪ್ತಿ ಅನ್ನೋ ಗುಣವನ್ನು ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ತೃಪ್ತಿ ಇದ್ದರೆ ದುರಾಸೆ ಬರಲ್ಲ. ದುರಾಸೆಗೆ ತೃಪ್ತಿ ಮದ್ದಾಗಿದೆ. ನಾವು ತಪ್ಪು ಮಾಡಿದರೆ ಪೋಷಕರಿಂದ ಏಟು ತಿನ್ನುತ್ತಿದ್ದೇವು. ಆದರೆ, ನಮಗೆ ಕೋಪ ಬರುತ್ತಿರಲಿಲ್ಲ. ಸರಿದಾರಿಗೆ ಹೋಗುವ ಸಂದೇಶ ಕೊಡುತ್ತಿದ್ದರು ಎಂದರು.ಇದ್ದುದ್ದರಲ್ಲೇ ಸಂತಸ ಪಟ್ಟರೆ ಅದು ತೃಪ್ತಿ. ಪದವಿ ಪಡೆದು ಕೆಲಸ ಮಾಡಿದಾಗ ಕಾನೂನು ಚೌಕಟ್ಟಿನಲ್ಲಿ ಎಷ್ಟೇ ಸಂಪಾದಿಸಿ ಅದು ತಪ್ಪಲ್ಲ. ಕೋಟ್ಯಾಂತರ ರು. ಹಣ ಮಾಡಿ ತೆರಿಗೆ ಕಟ್ಟಿ, ಇಷ್ಟ ಇದ್ದರೆ ದಾನ ಮಾಡಿ. ಆದರೆ, ಯಾರೂ ಹುದ್ದೆ ಖರೀದಿ ಮಾಡಬಾರದು. ಖರೀದಿಸಿದರೆ ಭ್ರಷ್ಟರಾಗುತ್ತೇವೆ. ತೃಪ್ತಿ ಇದ್ದು ಕಾನೂನು ಚೌಕಟ್ಟಿನಲ್ಲಿ ಪಡೆದ ಆಸ್ತಿಯಿಂದ ನೆಮ್ಮದಿ ಜೀವನ ಸಾಧ್ಯ ಎಂದು ಹೇಳಿದರು.
ಅಧಿಕಾರದಿಂದ ಎಲ್ಲವನ್ನೂ ಖರೀದಿ ಮಾಡಬಹುದು. ಅಧಿಕಾರದಲ್ಲಿದ್ದರೆ ಶ್ರೀಮಂತಿಕೆ ಬರುತ್ತದೆ ಎಂಬ ಭ್ರಮೆ ಬಂದಿದೆ. ಸರ್ಕಾರಿ ಹುದ್ದೆ ಇರುವುದು ಜನರ ಕಷ್ಟಕ್ಕೆ ಸ್ಪಂದಿಸಲು. ದುರಾಸೆಯನ್ನು ಮಟ್ಟ ಹಾಕದಿದ್ದರೆ ಮುಂದೊಂದು ದಿನ ಈ ದೇಶದಲ್ಲಿ ಕ್ರಾಂತಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮಕ್ಕಳು ಪೋಷಕರೊಂದಿಗೆ, ಪೋಷಕರು ಮಕ್ಕಳೊಂದಿಗೆ ಸಂಪರ್ಕವಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ಮಾನವೀಯತೆ, ಮೌಲ್ಯಗಳನ್ನು ಅಳವಡಿಸಿಕೊಂಡು ಮಾನಸಿಕ ಅಭಿವೃದ್ಧಿಯಾದರೆ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ಧತೆ ಕಾಣಬಹುದು ಎಂದರು.
ಸಂಸ್ಕೃತಿ ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಪ್ರಧಾನ ಭಾಷಣ ಮಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣದೊಂದಿಗೆ ಜಗತ್ತಿನ ವಿದ್ಯಮಾನಗಳನ್ನು ಅರ್ಥೈಸಿಕೊಳ್ಳಬೇಕು. ದೊಡ್ಡವರ ಆದರ್ಶ ಮತ್ತು ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಮಾರಂಭದಲ್ಲಿ ಆರ್.ಕೆ.ವಿದ್ಯಾಸಂಸ್ಥೆ ವ್ಯವಸ್ಥಾಪಕ ವಿನಯ್ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯ ನಿರ್ವಾಹಕ ಅಧಿಕಾರಿ ಕೀರ್ತನಾ ಆರ್. ನಿಖಿಲ್, ಸಂಸ್ಥೆ ಅಧ್ಯಕ್ಷ ಬಿ.ರಾಮಕೃಷ್ಣ, ಆಡಳಿತ ಮಂಡಳಿ ಸಲಹಾ ಸಮಿತಿ ಸದಸ್ಯರಾದ ಡಾ.ಎಸ್.ತುಕಾರಾಂ, ಎಚ್.ಎನ್.ಶಿವಣ್ಣಗೌಡ, ಆಡಳಿತಾಧಿಕಾರಿ ಮರಿಸ್ವಾಮಿಗೌಡ, ಪ್ರಾಂಶುಪಾಲರಾದ ಸತೀಶ್ ಬಾಬು, ಪ್ರಾಧ್ಯಾಪಕ ಅಜಯ್ ಇದ್ದರು.