ರಾಮಮಂದಿರ ಲೋಕಾರ್ಪಣೆ ಕಣ್ತುಂಬಿಕೊಳ್ಳುವ ಸೌಭಾಗ್ಯ ನಮ್ಮದಾಗಿದೆ: ಘೋರ್ಪಡೆ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ನೂರಾರು ವರ್ಷಗಳಿಂದ ಕೋಟ್ಯಂತರ ಹಿಂದೂಗಳು ಕಾತುರದಿಂದ ಕಾಯುತ್ತಿದ್ದ ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆಗೊಳ್ಳುವ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ನಮ್ಮದಾಗುತ್ತಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಹೇಳಿದರು.

ಗಜೇಂದ್ರಗಡ: ನೂರಾರು ವರ್ಷಗಳಿಂದ ಕೋಟ್ಯಂತರ ಹಿಂದೂಗಳು ಕಾತುರದಿಂದ ಕಾಯುತ್ತಿದ್ದ ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆಗೊಳ್ಳುವ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ನಮ್ಮದಾಗುತ್ತಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಹೇಳಿದರು.ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ಗುರುವಾರ ಪಟ್ಟಣದ ೧೬ನೇ ವಾರ್ಡಿನಲ್ಲಿ ಮನೆ, ಮನೆಗೆ ತೆರಳಿ ಪವಿತ್ರ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಮ ಮಂದಿರ ನಿರ್ಮಾಣ ಎನ್ನುವುದು ಒಬ್ಬರ ಅಥವಾ ಲಕ್ಷ ಜನರ ಕನಸಾಗಿರಲಿಲ್ಲ. ಅಖಂಡ ಭಾರತದ ಕನಸು ಕಂಡ ಪ್ರತಿ ಭಾರತೀಯನ ಕನಸಾಗಿತ್ತು. ಇಂತಹ ಕನಸನ್ನು ಸಾಕಾರಗೊಳಿಸಲು ಅನೇಕ ಕರಸೇವಕರು ತಮ್ಮ ಪ್ರಾಣವನ್ನು ಅರ್ಪಣೆ ಮಾಡುವ ಮೂಲಕ ಈ ತಿಂಗಳು ರಾಮ ಮಂದಿರವು ಲೋಕಾರ್ಪಣೆಗೊಳ್ಳುತ್ತಿದೆ. ಇಂತಹ ಸೌಭಾಗ್ಯದ ದಿನವನ್ನು ತರಲು ಶ್ರಮಿಸಿದ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರಿಗೆ ರಾಮನ ಮೇಲಿರುವ ಗೌರವ ಹಾಗೂ ಭಕ್ತಿಯಿಂದಾಗಿ ರಾಮ ಮಂದಿರ ಉದ್ಘಾಟನೆಯಾಗುವ ದಿನ ನಾವು ಅಲ್ಲಿಗೆ ಹೋಗಲು ಸಾಧ್ಯವಾಗದಿದ್ದರೂ ನಾವಿರುವ ಜಾಗದಲ್ಲೇ ಪೂಜಿಸಿ, ದೀಪ ಹಚ್ಚುವ ಮೂಲಕ ಸಂಭ್ರಮಿಸೋಣ ಎಂದರು.

ಪುರಸಭೆ ಸದಸ್ಯೆ ಲೀಲಾ ಸವಣೂರ ಹಾಗೂ ಮುಖಂಡ ಉಮೇಶ ಚನ್ನುಪಾಟೀಲ ಮಾತನಾಡಿ, ಅಕ್ಷತೆ ಆಹ್ವಾನ ಮಹಾ ಅಭಿಯಾನವು ಈಗಾಗಲೇ ಚಾಲನೆಯಾಗಿದ್ದು ಜ.೧೫ರ ವರೆಗೆ ನಡೆಯುತ್ತಿದೆ. ರಾಮನ ಭಕ್ತರಾದ ನಾವುಗಳು ಮನೆ, ಮನೆಗೆ ಹೋಗಿ ಅಕ್ಷತೆ ಆಹ್ವಾನದ ಜತೆಗೆ ರಾಮ ಮಂದಿರ ನಿರ್ಮಾಣದ ಭಾವಚಿತ್ರ ಒಳಗೊಂಡಿರುವ ಮಾಹಿತಿಯ ಕರಪತ್ರ ಜತೆಗೆ ಪವಿತ್ರ ಅಕ್ಷತೆ ಪಟ್ಟಣದಲ್ಲಿ ವಿತರಿಸುತ್ತಿದ್ದೇವೆ ಎಂದರು.

ಆರ್‌ಎಸ್‌ಎಸ್ ಮುಖಂಡ ತಿಮ್ಮಣ್ಣ ವನ್ನಾಲ, ವಿಶ್ವ ಹಿಂದೂ ಪರಿಷತ್‌ನ ಸಂಜೀವ ಜೋಶಿ, ಪುರಸಭೆ ಮಾಜಿ ಸದಸ್ಯ ರವಿ ಕಲಾಲ, ಶ್ಯಾಮಣ್ಣ ವನ್ನಾಲ ಸೇರಿ ೧೬ ವಾರ್ಡಿನ ಪ್ರಮುಖರು ಭಾಗವಹಿಸಿದ್ದರು.

Share this article