ಕನ್ನಡಪ್ರಭ ವಾರ್ತೆ ಬ್ಯಾಕೋಡು
ಬಡತನದ ನಡುವೆ ಮೌಲ್ಯಗಳಿಗೆ ರಾಜಿ ಆಗದೇ ಮಾನವೀಯ ನೆಲೆಯಲ್ಲಿ ಬದುಕು ಎಂದು ನಮ್ಮ ಹಿರಿಯರು ಹೇಳಿದ್ದರು. ಅದನ್ನೇ ಜೀವನದಲ್ಲಿ ರೂಢಿಸಿಕೊಂಡು ಬದುಕುತ್ತಿರುವೆ ಎಂದು ಪೇಟೆ ತಿಮ್ಮಣ್ಣ ಹೇಳಿದರು.ತಮ್ಮ ಜೀವನ ಆಧಾರಿತವಾದ ಅಪ್ಪಯ್ಯ ಕೃತಿ ಈಚೆಗೆ ಗ್ರಾಮದಲ್ಲಿ ಬಿಡುಗಡೆಯಾದ ಹಿನ್ನೆಲೆಯಲ್ಲಿ ಐವತ್ತೆಂಟು ವರ್ಷದ ದಾಂಪತ್ಯ ಪೂರೈಕೆಯಾದ ಕಾರಣ, ಜ್ಞಾನವಿಕಾಸ ಸಂಘ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬದುಕು ಪುಸ್ತಕ ಆಗುತ್ತದೆ ಎಂದು ಭಾವಿಸಿರಲಿಲ್ಲ. ಆದರೆ, ಮುಳುಗಡೆಯಾದ ದ್ವೀಪದಲ್ಲಿ ಮೂಲಸೌಲಭ್ಯ ಕೊರತೆಗಳಲ್ಲಿ ಕುಟುಂಬ ಸಲಹಿ, ಬದುಕು ಕಟ್ಟುವುದು ಸವಾಲು ಆಗಿತ್ತು. ಇನ್ನೊಬ್ಬರಿಗೆ ಮೋಸ ವಂಚನೆ ಮಾಡದೇ, ಬದುಕುವುದೇ ನಿಜವಾದ ಧರ್ಮ. ಈ ಕಾರಣದಿಂದಲೇ ಮುಳುಗುಡೆ ಮುನ್ನ ಎಲ್ಲ ಧರ್ಮದವರು ಒಟ್ಟಾಗಿ ಬದುಕಿದೆವು. ಈಗಿನ ರೀತಿ ನಮ್ಮದೇ ಕಾರಣಕ್ಕೆ ನಾವು ಬೇರೆ ಆಗಲಿಲ್ಲ. ಬದಲಿಗೆ ಮುಳುಗಡೆ ನಮ್ಮನ್ನು ಬೇರೆ ಮಾಡಿತು ಎಂದು ಮಾರ್ಮಿಕವಾಗಿ ನುಡಿದರು.ಲೇಖಕ ಜಿ.ಟಿ. ಸತ್ಯನಾರಾಯಣ ಮಾತನಾಡಿ, ಮುಳುಗಡೆ ಜತೆ ನಮ್ಮ ಜನರುಗಳ ಭಾವನೆ ಬೆಸೆದುಕೊಂಡಿದೆ. ಹಳ್ಳಿಯೊಂದರಲ್ಲಿ ಸಾಮಾನ್ಯನಂತೆ ಬದುಕಿದ ವ್ಯಕ್ತಿಗಳ ಬದುಕು ಕೂಡ ಅಧ್ಯಯನ ಯೋಗ್ಯ. ಅದು ಕೊಡುವ ಸಂದೇಶ ದೊಡ್ಡದು ಎಂದರು.
ಜನಸಾಮಾನ್ಯರು ಎಂದು ಸರಳವಾಗಿ ಕರೆದುಕೊಂಡು ನಾವು ಅವರು ಸಾಮಾಜಿಕ ಮೌಲ್ಯಗಳನ್ನು ಕಟ್ಟುವುದಕ್ಕೆ ನೀಡಿದ ಕೊಡುಗೆ ಬಗ್ಗೆ ದಾಸ್ಟ್ಯದಿಂದ ಇದ್ದೇವೆ. ಆದರೆ, ಪ್ರತಿ ಜನಸಾಮಾನ್ಯನೂ ಜ್ಞಾನದ ಕಣಜ ಆಗಿದ್ದಾನೆ ಎಂದು ಹೇಳಿದರು.ಜ್ಞಾನವಿಕಾಸ ತಾಲೂಕು ಸಂಯೋಜಕಿ ಗೌರಮ್ಮ ಮಾತನಾಡಿ, ಹಳ್ಳಿಗಳಲ್ಲಿ ಹಿರಿಯರನ್ನು ಗೌರವಿಸುವ ಸಂಪ್ರದಾಯ ಜಾರಿಯಲ್ಲಿ ಇದೆ. ಬಡವರ ಪರವಾಗಿ ಕಾಳಜಿ ಹೊಂದಿ ಬದುಕಿದ ಪ್ರತಿ ವ್ಯಕ್ತಿಯು ಗೌರವಕ್ಕೆ ಅರ್ಹ ಎಂದರು.
ಜ್ಞಾನವಿಕಾಸ ಆಗುವುದು ಎಂದರೇ ಜಗತ್ತಿಗೆ ನಮ್ಮನ್ನು ತೆರೆದುಕೊಳ್ಳುವುದು. ಈ ಹಿನ್ನೆಲೆಯಲ್ಲಿ ಓದು ಮತ್ತು ಅನುಭವ ದೊಡ್ದ ಪಾಠ ನೀಡುತ್ತವೆ. ತಿಮ್ಮಪ್ಪ ಬಚ್ಚಮ್ಮ ದಂಪತಿ ದಾಂಪತ್ಯದಲ್ಲಿ ಕೂಡ ನಮಗೆ ಪಾಠ ಇದೆ ಎಂದು ವಿವರಿಸಿದರು.ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ನೀಲಮ್ಮ ಸಭೆ ಅಧ್ಯಕ್ಷತೆ ವಹಿಸಿದ್ದು ,ಕಾರ್ಯಕ್ರಮವನ್ನು ಸುಶೀಲ ಗಂಟೆ, ನಿರೂಪಿಸಿ, ನಾಗರತ್ನ ಸ್ವಾಗತಿಸಿ, ಕಮಲಾಕ್ಷಿ ವಂದಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳಾದ ಲೋಹಿತ್, ಶಿಲ್ಪ, ಮಂಜಮ್ಮ ಮತ್ತಿತರರು ಹಾಜರಿದ್ದರು.
- - - -07ಬ್ಯಾಕೋಡು01:ಜ್ಞಾನವಿಕಾಸ ಸ್ವಸಹಾಯ ಸಂಘಗಳಿಂದ ಪೇಟೆ ತಿಮ್ಮಣ್ಣ ದಂಪತಿಯನ್ನು ಗೌರವಿಸಲಾಯಿತು. ಲೇಖಕ ಜಿ.ಟಿ.ಸತ್ಯನಾರಾಯಣ ಇತರರು ಇದ್ದರು.