ಕನ್ನಡಪ್ರಭ ವಾರ್ತೆ ಹುಣಸೂರು
ಜೀವಜಲವನ್ನು ಉಳಿಸಿಕೊಳ್ಳುವ ಮೂಲಕ ಸಕಲ ಜೀವರಾಶಿಗಳನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ಕರೆ ನೀಡಿದರು.ತಾಪಂ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಗುರುವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜನೆಗೊಂಡಿದ್ದ ವಿಶ್ವ ಜಲ ದಿನಾಚರಣೆ, ಕುಡಿಯುವ ನೀರು ನಿರ್ವಹಣೆ ಕುರಿತು ನೀರು ಗಂಟಿಗಳಿಗೆ ಅರಿವು ಕಾರ್ಯಾಗಾರ ಮತ್ತು ಮತದಾನದ ಮಹತ್ವದ ಕುರಿತಾದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಂಡಲದ ಶೇ. 70 ಭಾಗ ನೀರಿದೆ. ಆದರೆ ಈ ಪೈಕಿ ಶೇ. 97.5 ರಷ್ಟು ನೀರು ಉಪ್ಪುನೀರು ಆಗಿದೆ. ಶೇ. 1.5 ಭಾಗ ಹಿಮಗಡ್ಡೆಯಾಗಿದ್ದರೆ, ಕೇವಲ ಶೇ. 0.5 ರಷ್ಟು ಮಾತ್ರ ಕುಡಿಯಲು ಯೋಗ್ಯವಾದ ನೀರು ಎನಿಸಿಕೊಂಡಿದೆ. ಪರಿಸ್ಥಿತಿ ಹೀಗಿದ್ದರೂ ನಾವು ನೀರಿನ ಬಳಕೆಯನ್ನು ವಿವೇಚನೆಯಿಂದ ಮಾಡುತ್ತಿಲ್ಲ. ಮಹಾ ನಗರಪಾಲಿಕೆಗಳಲ್ಲಿ ನೀರನ್ನು ಲೀಟರ್ ಲೆಕ್ಕದಲ್ಲಿ ಅಳೆದು ಪಡೆಯುವಂತಹ ದುಸ್ಥಿತಿಗೆ ತಲುಪಿದ್ದೇವೆ. ನೀರಿನ ಸಂರಕ್ಷಣೆ ಕುರಿತು ನೀರುಗಂಟಿಗಳಿಗೆ ಅರಿವು ಮೂಡಿಸಬೇಕು. ನೀರಿನ ಸದ್ಬಳಕೆ ಕುರಿತು ನೀರುಗಂಟಿಗಳು ತಮ್ಮ ವ್ಯಾಪ್ತಿಯ ಗ್ರಾಮೀಣರಿಗೆ ತಿಳಿಸುವ ಮೂಲಕ ಬದಲಾವಣೆ ತರಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಹಾಯಕ ಚುನಾವಣಾಧಿಕಾರಿ (ಎಆರ್ಒ) ಮಹಮದ್ ಹ್ಯಾರಿಸ್ ಸುಮೇರ್ ಮಾತನಾಡಿ, ಪ್ರತಿಹನಿ ನೀರು ಬೃಹತ್ ಸಾಗರವನ್ನು ಸೃಷ್ಟಿಸುತ್ತದೆ. ಅಂತೆಯೇ ಪ್ರತಿಯೊಬ್ಬ ಮತದಾರ ಮತ ಚಲಾಯಿಸಿದಲ್ಲಿ ಮಾತ್ರ ಸದೃಢ ಪ್ರಜಾತಂತ್ರ ವ್ಯವಸ್ಥೆ ಉಳಿಯಲು ಸಾಧ್ಯ. ಏ. 26ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿರಿ. ಸಂವಿಧಾನ ನಮಗೆ ಮೂಲಭೂತ ಹಕ್ಕುಗಳನ್ನು ನೀಡುವುದರೊಂದಿಗೆ ಮೂಲಭೂತ ಕರ್ತವ್ಯಗಳನ್ನೂ ನೀಡಿದ್ದು, ಕರ್ತವ್ಯಪಾಲನೆಯಲ್ಲಿ ವಿಮುಖರಾಗುವುದು ಬೇಡ. ನೀರಿನ ಸದ್ಬಳಕೆ ಮನೆಯಿಂದಲೇ ಅಗಲಿ ಎಂದು ಆಶಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ವೈ. ಮನುಪಟೇಲ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್. ಶಿವಣ್ಣೇಗೌಡ ಮಾತನಾಡಿದರು. ವಿಶ್ವ ಜಲದಿನಾಚರಣೆ ಕುರಿತು ವಕೀಲ ಎಚ್.ವಿ. ವೆಂಕಟೇಶ್ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಡಾ.ಎಂ. ನಯನಾ, ನಗರಸಭೆ ಪೌರಾಯುಕ್ತೆ ಎಂ. ಲಕ್ಷ್ಮೀ, ಸಹಾಯಕ ಸರ್ಕಾರಿ ಅಬಿಯೋಜಕಿ ಎಚ್.ಡಿ. ಪಾರ್ವತಿ, ತಾಪಂ ಇಒ ಶಿವಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಸಿ. ಹರೀಶ್ ಕುಮಾರ್, ಕಾರ್ಯದರ್ಶಿ ಸಂದೀಪ್, ಎಇಇ ಮಹಮದ್ ಕಲೀಂ ಹಾಗೂ ಪಿಡಿಒಗಳು ಮತ್ತು ನೀರುಗಂಟಿಗಳು ಇದ್ದರು. ಕಡ್ಡಾಯ ಮತದಾನದ ಕುರಿತು ಸಭೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.