-ಬಹುಭಾಷಿಕತೆ, ಆಧುನಿಕತೆ ಶಿಕ್ಷಣದ ಹೊಸ ಸವಾಲು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜ್ಞಾನ ಶಾಖೆಗಳ ಬೆಳೆಸಲು ಇಂದಿನ ಶಿಕ್ಷಣ ಪದ್ಧತಿ ಯಶಸ್ವಿ ಆಗುತ್ತಿಲ್ಲ. ಕನ್ನಡ ಕೂಡ ಅನ್ನದ ಭಾಷೆಯಾಗುವಲ್ಲಿ ಸೊರಗುತ್ತಿದೆ. ಹೀಗಾಗಿ ಭಾಷಾ ಅನುಸಂದಾನದ ಅಗತ್ಯ ನಮ್ಮ ಮುಂದಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಕುವೆಂಪು ವಿವಿ, ಸಹ್ಯಾದ್ರಿ ಕಲಾ ಕಾಲೇಜು ಭಾಷಾ ಶಾಸ್ತ್ರ ಮತ್ತು ಶಿಕ್ಷಣ ವಿಭಾಗ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಬಹುಭಾಷಿಕತೆ, ಆಧುನಿಕತೆ ಮತ್ತು ಶಿಕ್ಷಣದ ಹೊಸ ಸವಾಲುಗಳು ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕವನ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಭಾಷೆಗಳಲ್ಲಿ ಜ್ಞಾನ ದೃಷ್ಟಿಯನ್ನು ಸಮೃದ್ಧಿಗೊಳಿಸುವಲ್ಲಿ ನಾವು ವಿಫಲರಾಗಿದ್ದೇವೆ. ಭಾಷೆಯಿಂದಲೇ ಜ್ಞಾನ ಶಾಖೆಗಳು ಬೆಳೆಯುತ್ತವೆ. ಹಾಗಾಂತ ಯಾವ ಭಾಷೆಯೂ ಹೇರಿಕೆಯೂ ಆಗಬಾರದು. ಬಹುಭಾಷಾ ಸಂಸ್ಕೃತಿಯನ್ನು ನಾವು ಗೌರವಿಸಬೇಕಾಗುತ್ತದೆ. ಯಾವ ಧರ್ಮಕ್ಕೂ ಅದನ್ನು ಜೋಡಿಸುವುದು ಸರಿಯಲ್ಲ ಎಂದರು.
ಒಂದು ಮಗು ಕಲಿಯುವುದು ಮಾತೃಭಾಷೆಯಾದರೂ ಬಹುಭಾಷಾ ವಾತಾವರಣದಲ್ಲಿ ಬೆಳೆಸುವುದರಿಂದ ಮಗುವಿನ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ. ಹಾಗಾಗಿ, ಒಂದು ಭಾಷೆಗೆ ಮಾತ್ರ ಬಲವಂತದ ಸ್ಥಾನ ನೀಡುವುದು ಸರಿಯಲ್ಲ. ಕರ್ನಾಟಕ ಬಹುಭಾಷೆಗಳ ಮಿನಿ ಇಂಡಿಯಾ ಆಗಿದೆ. ಶೇ.೫೫ರಷ್ಟು ಕನ್ನಡಿಗರಿದ್ದಾರೆ. ಉಳಿದವರು ಶೇ.೪೫ರಷ್ಟಿದ್ದಾರೆ. ಹಾಗಾಗಿ, ಕನ್ನಡ ಕೂಡ ಹೇರಿಕೆ ಭಾಷೆಯಾಗಬಾರದು ಎಂದರು.
ಭಾಷಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಮೇಟಿ ಮಲ್ಲಿಕಾರ್ಜುನ ಮಾತನಾಡಿ, ಬಹುಭಾಷಾಕತೆ ಎಂಬುದು ಸಹಜ ವಿದ್ಯಾಮಾನ ಅದನ್ನು ಪೋಷಿಸುವ ಬಗ್ಗೆ ನಾವು ಸೋಲುತ್ತಿದ್ದೇವೆ. ಭಾಷಾ ನೀತಿ ಬಗ್ಗೆ ತೀವ್ರ ಚರ್ಚೆಯಾಗುತ್ತದೆ. ತ್ರಿಭಾಷಾ ಸೂತ್ರದ ಬಗ್ಗೆಯೂ ನಾವು ಮಾತನಾಡುತ್ತಿದ್ದೇವೆ. ಶಿಕ್ಷಣದ ಮೇಲೆ ಆಗುವ ಅಪಾಯಗಳ ಬಗ್ಗೆ ನಾವು ಯೋಚಿಸುತ್ತಿಲ್ಲ ಎಂದರು.
ಹೊಸ ಶಿಕ್ಷಣ ನೀತಿಗಳ ಬಗ್ಗೆ ಅಪಸ್ವರ ಎತ್ತಿದ ಅವರು ಎನ್‌ಇಪಿಯಲ್ಲಿ ಗೊಂದಲವಿದೆ. ಭಾಷಿಕ ವ್ಯವಿಧ್ಯತೆಯ ಮೂಲಕ ಇದನ್ನು ಸರಿಪಡಿಸಬಹುದೇ ಹೊರತು ವೈವಿಧ್ಯತೆ ಮತ್ತು ಏಕತೆಯನ್ನು ಎರಡು ಒಟ್ಟಿಗೆ ಇಡಲು ಸಾಧ್ಯವಿಲ್ಲ. ಮೇಷ್ಟ್ರುಗಳು ಕೂಡ ನಿದ್ರೆಯಿಂದ ಎದ್ದೇಳದ ಹೊರತು ವಿದ್ಯಾರ್ಥಿಗಳು ಉದ್ಧಾರವಾಗಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಸೈಯ್ಯದ್ ಸನಾವುಲ್ಲಾ ವಹಿಸಿದ್ದರು. ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಎಚ್.ಪಿ.ಮಂಜುನಾಥ್ ಸ್ವಾಗತಿಸಿದರು. ಸಂತೋಷ್ ವಂದಿಸಿದರು.
ಪೊಟೋ: 27ಎಸ್‌ಎಂಜಿಕೆಪಿ03