ಕನ್ನಡಪ್ರಭ ವಾರ್ತೆ ತುಮಕೂರು
ಪೋಷಕರು ಹೆಣ್ಣು ಮಕ್ಕಳ ಓದಿಗಿಂತ ಮದುವೆ ಬಗ್ಗೆ ಚಿಂತೆ ಮಾಡುತ್ತಾರೆ. ಗಂಡು-ಹೆಣ್ಣು ಮಕ್ಕಳ ತಾರತಮ್ಯ ಇಂದಿಗೂ ಕಾಣಬಹುದಾಗಿದೆ. ಆದರೆ ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣು ಮಕ್ಕಳು ಮುಂದಿದ್ದು, ಹೆಣ್ಣಾಗಿ ಹುಟ್ಟಿದ್ದಕ್ಕೆ ನಾವೆಲ್ಲಾ ಹೆಮ್ಮೆ ಪಡಬೇಕು ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಸಹಭಾಗಿತ್ವದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ " ಕಾರ್ಯಕ್ರಮದಡಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಿಗೆ ಮೊದಲು ಒಳ್ಳೆಯ ಶಿಕ್ಷಣ ನೀಡಬೇಕು. 1 ರಿಂದ 10 ತರಗತಿಯವರೆಗೂ ನಾನು ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ಸರ್ಕಾರಿ ಶಾಲೆಯಲ್ಲಿ ವಿಶೇಷ ತರಬೇತಿ ಪಡೆದ ಶಿಕ್ಷಕರು ಉತ್ತಮ ಶಿಕ್ಷಣ ನೀಡುತ್ತಾರೆ. ಮಕ್ಕಳ ಗಮನ ಓದಿನ ಕಡೆ ಇರಬೇಕು, ಇದಲ್ಲದೇ ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಡ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಸಾಧನೆ ಮಾಡಿದ್ದಾರೆ ಎಂದರು.ಸಮಾಜವು ಹೆಣ್ಣು ಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸಿ, ಆರ್ಥಿಕವಾಗಿ ಸ್ವಾವಲಂಬನೆ, ಮಾನಸಿಕ ಸ್ಥೈರ್ಯ, ದೈಹಿಕ, ಮಾನಸಿಕ, ಸಾಮಾಜಿಕವಾಗಿ ಎಲ್ಲದರಲ್ಲೂ ಸದೃಢರಾಗಲು ಪ್ರೇರೇಪಿಸಬೇಕು ಎಂದು ತಿಳಿಸಿದರು.
ಮನೆಯಲ್ಲಿ ಕೊಟ್ಟಿರುವ ಸ್ವಾತಂತ್ರ, ನಂಬಿಕೆಯನ್ನು ಎಲ್ಲರೂ ಉಳಿಸಿಕೊಳ್ಳಬೇಕು. ಮೌಲ್ಯಾಧಾರಿತ ಶಿಕ್ಷಣವನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಸಾಧನೆ ಹಾದಿಯಲ್ಲಿ ಕಷ್ಟಗಳು ಇರುತ್ತವೆ. ಎಲ್ಲವನ್ನು ದಾಟಿ ಸಾಧನೆ ಗುರಿ ತಲುಪಬೇಕು. ಅನೇಕ ಹೆಣ್ಣು ಮಕ್ಕಳು ನ್ಯಾಯಾಧೀಶರಾಗಿ, ವಿಜ್ಞಾನಿಗಳಾಗಿ, ರಾಷ್ಟ್ರಪತಿಗಳಾಗಿ, ಐಎಎಸ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.ನಕಾರಾತ್ಮಕ ಭಾವನೆ, ವಿಚಾರಗಳು ನಮ್ಮ ಸಮಾಜಕ್ಕೆ ಕಪ್ಪು ಚುಕ್ಕೆ ಆಗಿದೆ. ಪ್ರಕೃತಿ ವಿರುದ್ಧವಾಗಿ ಹೋದರೆ ಸಫಲತೆ ಕಾಣಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ಜಾಸ್ತಿಯಾಗಿದೆ ಇದನ್ನು ತಡೆಯಬೇಕು, ಮಕ್ಕಳು ಪಠ್ಯಪುಸ್ತಕಗಳ ಕಡೆ ಗಮನ ಕೊಡುವಂತೆ ಪೋಷಕರಿಗೆ ಗಮನ ಹರಿಸಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್. ಶ್ರೀಧರ ಮಾತನಾಡಿ, ಭವ್ಯ ಸಮಾಜವನ್ನು ನಿರ್ಮಾಣ ಮಾಡಲು ಹೆಣ್ಣು ಮಕ್ಕಳನ್ನು ಸಶಕ್ತರನ್ನಾಗಿ ಮಾಡಬೇಕು. ಸರ್ಕಾರವು ಹೆಣ್ಣು ಮಕ್ಕಳಿಗೆ ಅನೇಕ ಯೋಜನೆಗಳನ್ನು ರೂಪಿಸಿದೆ. ಕಳೆದ ೨೦ ದಿನಗಳಿಂದ ಜಿಲ್ಲಾದ್ಯಂತ ಲಿಂಗ ತಾರತಮ್ಯ, ಬಾಲ್ಯ ವಿವಾಹಗಳ ಬಗ್ಗೆ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಕೊಟ್ಟಾಗ ಏನು ಬೇಕಾದರೂ ಸಾಧಿಸುತ್ತಾರೆ, ಹೆಣ್ಣು ಎಂಬ ತಾರತಮ್ಯ ಮಾಡದೆ ಸಮಾನವಾಗಿ ಭಾವಿಸಿ ಎಂದು ಹೇಳಿದರು.ಜಿಲ್ಲಾ ಬಾಲ ಭವನ ಸಮಿತಿ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಪ್ರತಿ ದಿನ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಬೇಕು. ಹೆಣ್ಣು ಮಕ್ಕಳು ಬೇರೆ ಯಾವುದೇ ಆಸೆಗಳಿಗೆ ಮಾರೋ ಹೋಗದೆ, ಓದಿನ ಕಡೆ ಹೆಚ್ಚಿನ ಗಮನಹರಿಸಿ ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣಾಧಿಕಾರಿ ಪವಿತ್ರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಂದಕುಮಾರ್, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಮಕ್ಕಳು, ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು ಮತ್ತಿತರರು ಭಾಗವಹಿಸಿದ್ದರು.Quote 1ದೇಶದಲ್ಲಿ ಲಿಂಗಾನುಪಾತ ಜಾಸ್ತಿ ಆಗುತ್ತಿದ್ದು, ಇದಕ್ಕೆ ಕಾರಣ ಭ್ರೂಣ ಹತ್ಯೆ, ಆದ್ದರಿಂದ ಇದನ್ನು ತಡೆಯಬೇಕು. ದೇಶದ ಅಭಿವೃದ್ಧಿಗೆ ಹೆಣ್ಣು ಮಕ್ಕಳು ಬಹಳ ಮುಖ್ಯ, ಹೆಣ್ಣು ಮಕ್ಕಳಲ್ಲಿ ರಕ್ತ ಹೀನತೆ, ಮುಟ್ಟು, ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಆರೋಗ್ಯದ ಕಡೆ ಬಹಳ ಗಮನ ಕೊಡಬೇಕು ಪೌಷ್ಟಿಕ ಆಹಾರ, ಸಮತೋಲನ ಆಹಾರ, ಸಿರಿಧಾನ್ಯ, ದ್ವಿದಳ ಧಾನ್ಯ, ತರಕಾರಿಯನ್ನು ಅತಿ ಹೆಚ್ಚಾಗಿ ಸೇವಿಸಬೇಕು. ಹೆಣ್ಣು ಮಕ್ಕಳಿಗೆ ಅಭದ್ರತೆ ಹೆಚ್ಚಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗುತ್ತಾಳೆ. ಅದನ್ನು ಕಡಿಮೆ ಮಾಡಬೇಕು.
ಡಾ. ರಶ್ಮಿ, ಸಿದ್ದಗಂಗಾ ಮಠದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿQuote 2ಮನೆಯಲ್ಲಿ ಕೊಟ್ಟಿರುವ ಸ್ವಾತಂತ್ರ, ನಂಬಿಕೆಯನ್ನು ಎಲ್ಲರೂ ಉಳಿಸಿಕೊಂಡು ಮೌಲ್ಯಾಧಾರಿತ ಶಿಕ್ಷಣವನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಸಾಧನೆ ಹಾದಿಯಲ್ಲಿ ಕಷ್ಟಗಳು ಇರುತ್ತವೆ. ಎಲ್ಲವನ್ನು ದಾಟಿ ಸಾಧನೆ ಗುರಿ ತಲುಪಬೇಕು.
ನೂರುನ್ನೀಸ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು