ಜಗಜೀವನ್‌ ರಾಮ್‌ ಹಾದಿಯಲ್ಲಿ ನಾವು ಸಾಗಬೇಕಿದೆ: ಸಿಎಂ

KannadaprabhaNewsNetwork | Published : Jul 7, 2024 1:18 AM

ಸಾರಾಂಶ

ಮಾಜಿ ಉಪ ಪ್ರಧಾನಮಂತ್ರಿ ದಿವಂಗತ ಡಾ.ಬಾಬು ಜಗಜೀವನ್‌ ರಾಮ್‌ ಅವರು ಆಹಾರ ಮಂತ್ರಿಯಾಗಿದ್ದಾಗ ಆಹಾರ ಭದ್ರತೆ ಮಾಡಿಕೊಟ್ಟರು. ದೇಶಕ್ಕೆ ಆಹಾರ ಭದ್ರತೆ ನೀಡಿದ ಅವರ ಹಾದಿಯಲ್ಲಿ ನಾವು ಸಾಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಉಪ ಪ್ರಧಾನಮಂತ್ರಿ ದಿವಂಗತ ಡಾ.ಬಾಬು ಜಗಜೀವನ್‌ ರಾಮ್‌ ಅವರು ಆಹಾರ ಮಂತ್ರಿಯಾಗಿದ್ದಾಗ ಆಹಾರ ಭದ್ರತೆ ಮಾಡಿಕೊಟ್ಟರು. ದೇಶಕ್ಕೆ ಆಹಾರ ಭದ್ರತೆ ನೀಡಿದ ಅವರ ಹಾದಿಯಲ್ಲಿ ನಾವು ಸಾಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಡಾ.ಬಾಬು ಜಗಜೀವನ್‍ರಾಮ್ ಅವರ ಪುಣ್ಯತಿಥಿಯ ಅಂಗವಾಗಿ ಶನಿವಾರ ವಿಧಾನಸೌಧದ ಪಶ್ಚಿಮದ್ವಾರದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಅವರು ಮಾತನಾಡಿದರು.ಇದು ಬಾಬು ಜಗಜೀವನ್‌ರಾಮ್‌ ಬಿಟ್ಟು ಹೋದ ದಾರಿಯಲ್ಲಿ ನಡೆದುಕೊಂಡು ಹೋಗುವ ದಿನ. ಅವರು ಹಸಿರು ಕ್ರಾಂತಿಯ ಹರಿಕಾರರು. ದೇಶಕ್ಕೆ ಆಹಾರ ಭದ್ರತೆ ಸಿಕ್ಕಿದ್ದರೆ ಅದಕ್ಕೆ ಕಾರಣ ಅವರೇ. ಹೀಗಾಗಿ ಅವರ ದಕ್ಷ ಆಡಳಿತ, ಕಾರ್ಮಿಕ ಕಾನೂನು, ಬಡವರ ಪರ ಕಾರ್ಯಕ್ರಮಗಳನ್ನು ನಾವು ನೆನೆಯಬೇಕು ಎಂದು ಶ್ಲಾಘಿಸಿದರು. ನಾವು ಸಹ ಅವರಂತೆ ಕಾರ್ಮಿಕರು, ದಲಿತರು ಹಾಗೂ ಬಡವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ 100 ಕೋಟಿ ರು. ವೆಚ್ಚದಲ್ಲಿ ಅವರ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದೆ. ಇದೀಗ ಜು.23 ರಂದು ಬಾಬು ಜಗಜೀವನ್‌ ರಾಮ್‌ ಭವನ ಉದ್ಘಾಟನೆ ಮಾಡಲಿದ್ದೇವೆ ಎಂದರು.

ಈ ವೇಳೆ ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ.ಎಚ್.ಸಿ. ಮಹದೇವಪ್ಪ, ಆರ್.ಬಿ. ತಿಮ್ಮಾಪುರ ಮಾಜಿ ಸಚಿವ ಎಚ್‌. ಆಂಜನೇಯ ಸೇರಿದಂತೆ ಹಲವರು ಹಾಜರಿದ್ದರು.ಪಿಟಿಸಿಎಲ್‌ ಸಮರ್ಪಕ ಅನುಷ್ಠಾನಕ್ಕೆ ದಲಿತ ಮುಖಂಡರ ಆಗ್ರಹ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಬು ಜಗಜೀವನ್‌ರಾಮ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ವೇಳೆ ಕೆಲ ದಲಿತ ಸಂಘಟನೆಗಳ ಪ್ರತಿನಿಧಿಗಳು ಜೋರು ಧ್ವನಿಯಲ್ಲಿ ಪಿಟಿಸಿಎಲ್‌ ಕಾಯ್ದೆ ಸಮರ್ಪಕ ಜಾರಿಗೆ ಒತ್ತಾಯಿಸಿ ಘೋಷಣೆ ಕೂಗಿದರು. ದಲಿತರು ಪರಭಾರೆ ಮಾಡಿರುವ ಭೂಮಿಯನ್ನು ವಾಪಸು ಕೊಡಿಸಿ. ಪಿಟಿಸಿಎಲ್‌ ಕಾಯ್ದೆ ಹೊರತಾಗಿಯೂ ದಲಿತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಹೀಗಿದ್ದರೂ ಸರ್ಕಾರ, ಅಧಿಕಾರಿಗಳು ಏನೂ ಮಾಡುತ್ತಿಲ್ಲ ಎಂದು ಹೇಳಿ ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು ಹೋದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ಮುಖ್ಯಮಂತ್ರಿಗಳು ಹೊರಟು ಹೋದರು. ಬಳಿಕ ದಲಿತ ಮುಖಂಡರು ಡಾ.ಎಚ್.ಸಿ.ಮಹದೇವಪ್ಪ, ಕೆ.ಹೆಚ್. ಮುನಿಯಪ್ಪ ಅವರಿಗೆ ಮುತ್ತಿ ಹಾಕಿದರು. ಇದರ ನಡುವೆಯೂ ಇಬ್ಬರೂ ಸಚಿವರು ಕಾರು ಏರಿ ಹೊರಟು ಹೋದರು.

Share this article