ಕನ್ನಡಪ್ರಭ ವಾರ್ತೆ ಬೇಲೂರು
ಕೇರಳದ ವೈನಾಡಿನಲ್ಲಿ ನಡೆದ ಪ್ರಕೃತಿ ವಿಕೋಪ ಮನುಕುಲಕ್ಕೆ ಪಾಠವಾಗಿದ್ದು ಇನ್ನಾದರೂ ಪರಿಸರದ ಉಳಿವಿನ ಬಗ್ಗೆ ಜಾಗೃತಿ ವಹಿಸಿ ಕಾಪಾಡಬೇಕು ಎಂದು ಬೇಲೂರು ತಹಸೀಲ್ದಾರ್ ಎಂ ಮಮತಾ ಕರೆ ನೀಡಿದರು.ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ವಿವಿಧ ಇಲಾಖೆ ಸಹಯೋಗದೊಂದಿಗೆ ನಡೆದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಡೆಸಿ ಸಂದೇಶ ನೀಡಿದ ಅವರು, ಪ್ರಕೃತಿ ವಿಕೋಪಗಳನ್ನು ತಡೆಗಟ್ಟಲು ಭಾರತವನ್ನು ಪರಿಸರ ಸ್ನೇಹಿ ದೇಶವನ್ನಾಗಿಸಲು ಯುವಕರು ಪಣತೊಡಬೇಕಿದೆ. ಸರ್ವರಿಗೂ ಸಮಪಾಲು ತಮ್ಮ ಬಾಳು ಎಂದು ಸಂವಿದಾನ ನೀಡಿದ ಡಾ.ಅಂಬೇಡ್ಕರ್ ಅವರ ಆಶೋತ್ತರಗಳನ್ನು ಗೌರವಿಸಬೇಕು. ತ್ಯಾಗ ಬಲಿದಾನದಿಂದ ಪಡೆದ ಸ್ವಾತಂತ್ರ್ಯ ನಮಗೆ ಆತ್ಮಗೌರವ ನೀಡುವ ಸಂಕೇತವಾಗಬೇಕಿದೆ. ಶಾಂತಿಯುತ ಬದುಕು ಪ್ರತಿಯೊಬ್ಬ ಭಾರತೀಯರ ಉಸಿರಾಗಬೇಕಿದೆ. ಭಾರತದ ಸ್ವಾತಂತ್ರ್ಯಕ್ಕೆ ಕರುನಾಡಿನ ಪಾತ್ರ ಹಿರಿದು, ಹಾಸನ ಜಿಲ್ಲೆಯಲ್ಲಿನ ಹತ್ತಾರು ಮಹನೀಯರು ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಹೊಯ್ಸಳರ ನಾಡಿಗೆ ಮಹಾತ್ಮ ಗಾಂಧಿಯವರು ಬಂದು ಇಲ್ಲಿನ ಚನ್ನಕೇಶವಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಶಿಲ್ಪಕಲಾ ವೈಭವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರ ಎಂದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ವಿಶ್ವವಿಖ್ಯಾತ ಪ್ರವಾಸಿ ಕೇಂದ್ರ ಬೇಲೂರು ಮತ್ತು ಹಳೇಬೀಡನ್ನು ಅಭಿವೃದ್ಧಿಪಡಿಸುವುದು ತಮ್ಮ ಗುರಿಯಾಗಿದೆ. ಬೇಲೂರು ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣದ ಬಗ್ಗೆ ನೂರಾರು ಬಾರಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಹೀಗಿರುವ ಬಸ್ ನಿಲ್ದಾಣದ ಸ್ಥಳದಲ್ಲೇ ಪಕ್ಕದ ಪ್ರವಾಸಿ ಮಂದಿರದ ಜಾಗವನ್ನು ನೀಡಿದರೆ ಹೈಟೆಕ್ ಮಾದರಿಯ ಬಸ್ ನಿಲ್ದಾಣ ನಡೆಸಲು ಅನುಕೂಲವಾಗುತ್ತದೆ ಎಂದು ಸಚಿವರಿಗೆ ವಿವಿಧ ಪ್ರಗತಿಪರ ಸಂಘಟನೆ ಹಾಗೂ ಸರ್ವಪಕ್ಷಗಳನ್ನು ಒಗ್ಗೂಡಿಸಿಕೊಂಡು ಮನವಿ ಸಲ್ಲಿಸಲಾಗಿದೆ. ನಮ್ಮ ಜಿಲ್ಲೆಯ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಲು ಕಲಾಭವನದ ಅವಶ್ಯಕತೆ ಇದೆ. ಮಹಿಳೆಯರ ಸಬಲೀಕರಣಕ್ಕೆ ಗಾರ್ಮೆಂಟ್ಸ್ ಕೈಗಾರಿಕೆ ಮತ್ತು ಗುಡಿಕೈಗಾರಿಕೆಗೆ ಪ್ರೋತ್ಸಾಹ, ಮನೆ ಮನೆ ಕುಡಿಯುವ ನೀರು, ಕನ್ನಡ ಭಾಷೆಗ ಪ್ರಥಮ ಶಿಲಾ ಶಾಸನ ನೀಡಿದ ಹಲ್ಮಿಡಿ ಗ್ರಾಮದ ಸಮಗ್ರ ಅಭಿವೃದ್ಧಿ ತಾವು ಬದ್ಧರಾಗಿರುವುದಾಗಿ ಹೇಳಿದರು.ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಮುಖ್ಯಾಧಿಕಾರಿ ಸುಜಯ್ ಕುಮಾರ್, ವೃತ್ತನಿರೀಕ್ಷಕ ಸುಬ್ರಹ್ಮಣ್ಯ, ಪುರಸಭಾ ಸದಸ್ಯರಾದ ಜಮಾಲ್ಲುದ್ದೀನ್, ಭರತ್, ಫಯಾಜ್, ಪ್ರಭಾಕರ್, ಕೃಷಿ ಅಧಿಕಾರಿ ರಂಗಸ್ವಾಮಿ ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಮಂಜುನಾಥ ಮತ್ತು ನಾಗಭೂಷಣ ಅವರಿಗೆ ಸನ್ಮಾನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಬಾರಿ ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ವಿವಿಧ ಇಲಾಖೆ ಸಹಯೋಗದೊಂದಿಗೆ ನಡೆದ ೭೮ನೇ ಸ್ವಾತಂತ್ರ್ಯ ದಿನಾಚರಣೆ ವೈಶಿಷ್ಟ್ಯಪೂರ್ಣವಾಗಿ ನೆರವೇರಿತು.