ಕನ್ನಡಪ್ರಭ ವಾರ್ತೆ ಸೊರಬ
ಮನುಷ್ಯತ್ವದ ಗುಣ ಬೆಳೆಸಿಕೊಂಡು ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾಲಘಟ್ಟದಲ್ಲಿ ನಾವಿರುವ ಈಗಿನ ಸಂದರ್ಭದಲ್ಲಿ ಸ್ನೇಹಮಯ ಹಾಗೂ ಸೌಹಾರ್ದತೆಯ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು ಎಂದು ಚಿಂತಕ, ವಾಗ್ಮಿ ಎಂ.ಎಸ್. ತಿಮ್ಮಪ್ಪ ಹೇಳಿದರು.ತಾಲೂಕಿನ ನಿಸರಾಣಿ ಗ್ರಾಮದಲ್ಲಿ ವಿ.ಸಂ. ಪ್ರೌಢಶಾಲೆ ವತಿಯಿಂದ 1966-67ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸಿದ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈಚಾರಿಕ ಜೀವನ ಕ್ರಮದ ಮೂಲಕ ನಮ್ಮಲ್ಲಿನ ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು. ಸನಾತನ ಧರ್ಮ ನಿರೂಪಿಸಿ ಕೊಟ್ಟ, ವಸುದೈವ ಕುಟುಂಬದ ವಿಸ್ತೃತ ಮನನವಾಗಬೇಕು ಎಂದ ಅವರು, ವಿ.ಸಂ. ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ದಿನಗಳನ್ನು ನೆನಪಿಸಿಕೊಂಡರು.ಕಾರ್ಯಕ್ರಮದಲ್ಲಿ ಅನೇಕ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳನ್ನು ಮತ್ತು ಜೀವನದಲ್ಲಿ ಉತ್ತುಂಗಕ್ಕೇರಲು ದೊರೆತ ಶಿಕ್ಷಣ, ಸಂಸ್ಥೆಯ ಹುಟ್ಟು, ಬೆಳವಣಿಗೆ ಕುರಿತ ನೆನಪುಗಳನ್ನು ಮೆಲುಕು ಹಾಕಿ ವಿವೇಕ, ನೀತಿ, ತಾತ್ವಿಕ ಆವರಣದ ಶಿಕ್ಷಣಕ್ಕೆ ಮೌಲ್ಯವಿರುವುದಾಗಿ ನಿರೂಪಿಸಿದರು.
1966-67ನೇ ಸಾಲಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನಿ ವೆಂಕಟಾಚಲ ಬಿ.ಜೆ.ಕೆರೆಕೊಪ್ಪ, ಕೃಷಿ ಅಧಿಕಾರಿ ಕೋಡನಕಟ್ಟೆ ನಾಗರಾಜ್, ಟಿ.ಎಸ್. ರಾಘವೇಂದ್ರ, ವಕೀಲ ನಾರಾಯಣಮೂರ್ತಿ ಉಳ್ಳೂರು, ಪ್ರಗತಿಪರ ಕೃಷಿಕ, ಉದ್ಯಮಿ ರಾಜಾರಾಂ ವಿ. ಹೊಸಬಾಳೆ, ರಮೇಶ್ ನಾಡಿಗ್, ಕೆರೆಕೊಪ್ಪ ರಘುಪತಿ, ನಿವೃತ್ತ ಅಸಿಸ್ಟೆಂಟ್ ರಿಜಿಸ್ಟ್ರರ್ ಕೆ.ಎ. ಪ್ರಭಾಕರ್, ಕೆ.ಆರ್. ಗಾಯತ್ರಿ, ಬಿ.ಜೆ. ಪ್ರಭಾವತಿ. ಕೆ.ಎಸ್. ಮಹಾಬಲಗಿರಿ ಅನಿಸಿಕೆಗಳನ್ನು ಹಂಚಿಕೊಂಡರು.ನಿವೃತ್ತ ಶಿಕ್ಷಕ ಟಿ.ರಾಮಚಂದ್ರ ಭಟ್, ಲಕ್ಷ್ಮೀನಾರಾಯಣ, ಶಿಮುಲ್ ಅಧ್ಯಕ್ಷ ಶ್ರೀಪಾದ ರಾವ್ ನಿಸರಾಣಿ, ತಾಲೂಕು ಬ್ರಾಹ್ಮಣ ಸಮಾಜ ಮಾಜಿ ಅಧ್ಯಕ್ಷ ಕಟ್ಟಿನಕೆರೆ ಸೀತಾರಾಮಯ್ಯ, ಸಹಕಾರಿ ಧುರೀಣ ಎಚ್.ಎಸ್. ಮಂಜಪ್ಪ, ಸಂಸ್ಥೆ ಉಪಾಧ್ಯಕ್ಷ ಕಂಚಿ ಶಿವರಾಮ ಹೆಗಡೆ, ಕಲಾವಿದ, ಹಿರಿಯ ಪತ್ರಕರ್ತ ಬಿ.ಎನ್.ಸಿ. ರಾವ್ ಸೇರಿದಂತೆ ಇತರರು ಇದ್ದರು.
- - - ಬಾಕ್ಸ್ ವಿವಿಧ ಕಾರ್ಯಕ್ರಮ ಪ್ರೌಢಶಾಲೆ ನಿರ್ಮಾತೃ ದೇವಪ್ಪ ಹೆಗಡೆ ನಿಸರಾಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅನಂತರ ಗೀತಾ ರಾವ್ ಅವರ ಹಾಡುಹಸೆ, ಕಲಾತ್ಮಕ ಕರಕುಶಲ ವಸ್ತು ಪ್ರದರ್ಶನ, ರಮೇಶ್ ನಾಡಿಗ್ ಅವರಿಂದ ಹಾಸ್ಯೋತ್ಸವ ರಂಜಿಸಿತು.- - - -11ಕೆಪಿಸೊರಬ02:
ಸೊರಬ ತಾಲೂಕಿನ ನಿಸರಾಣಿ ಗ್ರಾಮದ ವಿ.ಸಂ. ಪ್ರೌಢಶಾಲೆಯಲ್ಲಿ 1966-67ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ನಡೆಸಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.