ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಜೆಡಿಎಸ್‌ಗೆ ಎಷ್ಟು ಸ್ಥಾನ ನೀಡುತ್ತಾರೊ ಅಷ್ಟಕ್ಕೆ ಒಪ್ಪಿಕೊಳ್ಳುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಸೀಟು ಹಂಚಿಕೆ ಕುರಿತು ಇನ್ನೊಂದು ವಾರದಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ.
ಎಷ್ಟು ಸೀಟು ಲಭ್ಯವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಎನ್‌ಡಿಎ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತೇವೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರು ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜತೆ ಸೀಟು ಹಂಚಿಕೆ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 400 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದು, ಅವರೊಂದಿಗೆ ನಾವು ಕೈ ಜೋಡಿಸಿದ್ದೇವೆ ಎಂದು ತಿಳಿಸಿದರು.
ದಿನಬೆಳಗಾದರೆ ಮೋದಿ ಬಗ್ಗೆ ಸಿದ್ದು ಟೀಕೆ ಏಕೆ?
ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕರಾಗಿದ್ದು, ವಿಶ್ವವೇ ಅವರನ್ನು ಒಪ್ಪಿಕೊಂಡಿದೆ. ಹೀಗಿರುವಾಗ ಬೆಳಗ್ಗೆ ಎದ್ದರೆ ಮೋದಿ.. ಮೋದಿ.. ಎಂದು ಯಾಕೆ ಟೀಕೆ ಮಾಡುತ್ತಾರೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಿಡಿಕಾರಿದ್ದಾರೆ.
ಮಂಗಳವಾರ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶೂನ್ಯ ಸಾಧನೆ ಭಯಕ್ಕೆ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಹರಿಹಾಯ್ದರು.
ರಾಜ್ಯಕ್ಕೆ ದೊರೆಯಬೇಕಾದ ತೆರಿಗೆ ಹಣ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಟೀಕಿಸುತ್ತಿದ್ದಾರೆ.
ಹಣಕಾಸು ಸಮಿತಿ ಸೂಚಿಸಿದ ಹಣ ಬಿಟ್ಟು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯಕ್ಕೆ ಬೇರೇನು ನೀಡಿದ್ದಾರೆ? ಅದಕ್ಕೂ ಮುನ್ನ ಎ.ಬಿ.ವಾಜಪೇಯಿ ಏನು ನೀಡಿದ್ದಾರೆ? ಮೋದಿ ಸಮರ್ಥ ನಾಯಕ ಅಲ್ಲ ಎನ್ನುವುದಕ್ಕೆ ಇವರು ಯಾರು? ‘ಹು ಈಸ್ ದಿಸ್ ಮ್ಯಾನ್’ ಎಂದು ವಾಗ್ದಾಳಿ ನಡೆಸಿದರು.
ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯ ಅವರೇ ಹಣಕಾಸು ಸಚಿವರಾಗಿದ್ದರು. ಒಂದೂವರೆ ವರ್ಷದ ಒಂದು ನಿಗಮ ಮಂಡಳಿಗೂ ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ. ಆಗ ನಮಗೆ 113 ಸ್ಥಾನ ಇತ್ತು. ಈಗ ಅವರಿಗೆ 136 ಸ್ಥಾನ ನೀಡಿ ಜನತೆ ತೀರ್ಪು ನೀಡಿದ್ದಾರೆ.
ಗ್ಯಾರಂಟಿ ಯೋಜನೆ ಜನತೆಗೆ ತಲುಪಿದೆಯೇ ಎಂಬುದನ್ನು ನೋಡಲು ಐವರು ಮಾಜಿ ಸಚಿವರನ್ನು ನೇಮಕ ಮಾಡಲಾಗಿದೆ. ಅಲ್ಲದೇ, ಜಿಲ್ಲಾ ಮಟ್ಟದಲ್ಲಿಯೂ ಸಮಿತಿ ನೇಮಕ ಮಾಡಲಾಗಿದೆ.
ಇದು ಇವರ ಆಡಳಿತ ವೈಖರಿ ಎಂದು ಲೇವಡಿ ಮಾಡಿದರು.ಕೇಂದ್ರದಿಂದ ನಮಗೆ ಹಣ ಬಂದಿಲ್ಲ ಎನ್ನುವ ಇವರು, ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನಾ ಮಾಡಲು ಮತ್ತು ಕಡೆಯ ಪಕ್ಷ ಬಡ್ಡಿ ಮನ್ನ ಮಾಡುತ್ತೇವೆ ಒಪ್ಪಿಗೆ ನೀಡಿ ಎಂದರೂ ಒಪ್ಪಿಗೆ ನೀಡಲಿಲ್ಲ.
ಸಿದ್ದರಾಮಯ್ಯ ಆಗ ಹಣಕಾಸು ಸಚಿವರಾಗಿದ್ದರು. ಪ್ರಾಮಾಣಿಕತೆ ಇದ್ದರೆ ಏನು ನಡೆದಿದೆ ಎಂಬುದನ್ನು ಸತ್ಯ ಹೇಳಬೇಕು ಎಂದು ಟೀಕಾಪ್ರಹಾರ ನಡೆಸಿದರು.
ಜನಪರ ಕಳಕಳಿಯ ಸರ್ಕಾರ ನನ್ನದು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಹಾಗಾದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ, ಜಲಧಾರೆ ಕಾರ್ಯಕ್ರಮ ಮಾಡಿದ್ದರಲ್ಲವೇ? ಅವರಿಗೆ ಜನಪರ ಕಳಕಳಿ ಇರಲಿಲ್ಲವೇ? ಅವರ ಸರ್ಕಾರ ತೆಗೆದಿದ್ದು ಯಾರು ? ಅವರು ಮಾಡಿದ ಎಲ್ಲಾ ಕಾರ್ಯಕ್ರಮ ಅನುಷ್ಠಾನ ಮಾಡಿದ್ದು ಕುಮಾರಸ್ವಾಮಿ. ಅಂತಹ ಪಕ್ಷ ಉಳಿಯೊಲ್ಲ ಎನ್ನುತ್ತಾರೆ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ನಗರ ಘಟಕ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ ಉಪಸ್ಥಿತರಿದ್ದರು.
ಈ ಮುದುಕಪ್ಪನಿಗೆ ಸ್ವಾಭಿಮಾನ ಇದೆ:ಮಂಡ್ಯದ ನಾಯಕರೊಬ್ಬರು ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ. ಆ ಮುದುಕಪ್ಪನನ್ನ ಕಟ್ಟಿಕೊಂಡು ಏನೇನೋ ಮಾಡೋಕೆ ಹೋಗುತ್ತಿದ್ದಾರೆ ಎಂದಿದ್ದಾರೆ.
ಆ ಮುದುಕಪ್ಪನಿಗೆ ಸ್ವಾಭಿಮಾನ ಇದೆ. ಈ ಪಕ್ಷ ಉಳಿಸೋದು ಕಾವೇರಿ ನೀರಿಗಾಗಿ, ಅವರಿಗೆ ಮಾತಾಡುವ ಯೋಗ್ಯತೆ ಇಲ್ಲ. ಹೇಮಾವತಿ , ಹಾರಂಗಿ ಕಟ್ಟಿರುವವನು ನಿಮ್ಮ ಮುಂದೆ ಇದ್ದೇನೆ ಎಂದು ಪರೋಕ್ಷವಾಗಿ ಸಚಿವ ಚಲುವರಾಯಸ್ವಾಮಿ ವಿರುದ್ಧ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.