ಮುಂದಿನ ಚುನಾವಣೆಗೆ ಒಟ್ಟಾಗಿ ಹೋಗುತ್ತೇವೆ : ರಾಮದಾಸ್

KannadaprabhaNewsNetwork | Published : Nov 24, 2023 1:30 AM

ಸಾರಾಂಶ

ಮಾಜಿ ಸಚಿವ ವಿ. ಸೋಮಣ್ಣ ಹಾಗೂ ಸಚಿವ ಪರಮೇಶ್ವರ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಯಾವುದೋ ವಿಚಾರಕ್ಕೆ, ಎಲ್ಲಿಯೋ ಭೇಟಿಯಾಗುತ್ತಾರೆ. ಯಾರನ್ನೋ ಭೇಟಿಯಾದ ಕೂಡಲೇ ಬಿಜೆಪಿಗೆ ಏನೋ ಆಯ್ತು ಎನ್ನುವುದು ಸರಿಯಸಲ್ಲ್ಲ ಎಂದು ಮಾಜಿ ಸಚಿವ ಎ. ರಾಮದಾಸ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಾಜಿ ಸಚಿವ ವಿ. ಸೋಮಣ್ಣ ಹಾಗೂ ಸಚಿವ ಪರಮೇಶ್ವರ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಯಾವುದೋ ವಿಚಾರಕ್ಕೆ, ಎಲ್ಲಿಯೋ ಭೇಟಿಯಾಗುತ್ತಾರೆ. ಯಾರನ್ನೋ ಭೇಟಿಯಾದ ಕೂಡಲೇ ಬಿಜೆಪಿಗೆ ಏನೋ ಆಯ್ತು ಎನ್ನುವುದು ಸರಿಯಸಲ್ಲ್ಲ ಎಂದು ಮಾಜಿ ಸಚಿವ ಎ. ರಾಮದಾಸ್‌ ಹೇಳಿದರು.

ಅವರು ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸೋಮಣ್ಣ ಅವರು 6ನೇ ತಾರೀಕಿಗೆ ನಿರ್ಧಾರ ತಿಳಿಸುತ್ತೇನೆ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಕೆಲವು ಸಂದರ್ಭದಲ್ಲಿ ವೈಯಕ್ತಿಕವಾಗಿ ಕೆಲವು ನಿರ್ಧಾರ ಮಾಡುತ್ತಾರೆ.

ಭಾವನೆಗಳನ್ನು ತುಲನಾತ್ಮಕವಾಗಿ ಚಿಂತಿಸಿ ನಿರ್ಧರಿಸುತ್ತಾರೆ. ಆ ದೃಷ್ಟಿಯಲ್ಲಿ ಬಿಜೆಪಿಯಲ್ಲೇ ಉಳಿದುಕೊಳ್ಳುತ್ತೇನೆ ಎಂದು ನಿರ್ಧಾರ ಮಾಡಲೂಬಹುದು ಎಂದರು. ಎಲ್ಲವನ್ನೂ ಸರಿಮಾಡಿಕೊಂಡು ಮುಂದಿನ ಚುನಾವಣೆಗೆ ಒಟ್ಟಾಗಿ ಹೋಗುತ್ತೇವೆ.

ಹೊಸದಾಗಿ ಅಧ್ಯಕ್ಷರಾಗಿ ಬಂದಿರುವ ವಿಜಯೇಂದ್ರ ಆ ಕೆಲಸವನ್ನು ಮಾಡುತ್ತಾರೆ ಎಂದು

ಹಿರಿಯರೊಂದಿಗೆ ಮಾತನಾಡದೆ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಸಮಯದಲ್ಲಿ ಎಲ್ಲ ನಿರ್ಧಾರಗಳು ಸಂತೋಷ ಕೊಡಲ್ಲ. ನಮ್ಮ ತತ್ವ ಸಿದ್ಧಾಂತಗಳ ಆಧಾರದಲ್ಲಿ ಹೋಗಬೇಕಾ ಬಿಡಬೇಕಾ ಎನ್ನುವ ನಿರ್ಧಾರ ಇರುತ್ತದೆ. ಆ ನಿರ್ಧಾರವನ್ನು ಆಯಾ ರಾಜಕಾರಣಿಗಳು ತೆಗೆದುಕೊಳ್ಳುತ್ತಾರೆ. ಹಾಗಾಗಿ ಸೋಮಣ್ಣ ಅವರು ಹಿರಿಯರಿದ್ದಾರೆ. ಅವರು ಬೇರೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಕೊಂಡಿದ್ದೇನೆ ಎಂದರು.ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ವಿಧಾನಸಭೆ ಅಧಿವೇಶನಕ್ಕೆ ಬಿಡಲ್ಲ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಡಲ್ಲ ಎನ್ನುವುದು ಕೇವಲ ಫಿಜಿಕಲ್ ಆಗಿ ಅಲ್ಲ. ಲೋಕಸಭೆ, ವಿಧಾನಸಭೆ ಆಗಿರಬಹುದು. ಅಲ್ಲಿ ಅಧ್ಯಕ್ಷರಾಗಿ ಕೂರುವವರಿಗೆ ಸಂವಿಧಾನಬದ್ಧವಾಗಿ ಸ್ಥಾನ ಕೊಡಲಾಗಿದೆ. ಒಬ್ಬ ನ್ಯಾಯಾಧೀಶ ಯಾವ ಧರ್ಮದವರೆಂದು ಯೋಚನೆ ಮಾಡಲ್ಲ. ಅಲ್ಲಿಗೆ ಹೋದ ಕೂಡಲೇ ಮೈಲಾರ್ಡ್ ಎಂದು ಹೇಳುತ್ತೇವೆ. ಅದೇ ರೀತಿ ಸ್ಪೀಕರ್ ಯಾವುದೇ ಸಮಾಜ ಧರ್ಮದವರಾಗಿರಲಿ ಆ ಸ್ಥಾನಕ್ಕೆ ಗೌರವವಿದೆ. ಆದರೆ ರಾಜಕೀಯವಾಗಿ ಇದನ್ನು ಉಪಯೋಗಿಸಲಾಗಿದೆ. ಇದು ಕೇವಲ ರಾಜಕೀಯ ಪಕ್ಷಗಳಿಗೆ ಮಾಡುವ ಅಪಮಾನವಲ್ಲ. ಅದು ಆ ಸ್ಥಾನ, ಸಂವಿಧಾನಕ್ಕೆ ಮಾಡಿದಂತಹ ಅವಮಾನ. ಆದ್ದರಿಂದ ಸಂವಿಧಾನಕ್ಕೆ ವಿರೋಧ ಮಾಡುವವರನ್ನು ವಿಧಾನಸಭೆ ಬಿಡಬಾರದು ಎನ್ನುವುದು ನಮ್ಮ ಚಿಂತನೆ. ಅದನ್ನು ನಮ್ಮ ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ನಮ್ಮ ಶಾಸಕರು, ವಿಪಕ್ಷ ನಾಯಕರು ಅದರ ವಿರುದ್ಧ ಏನು ಮಾಡಬೇಕೋ ಹಾಗೆ ಮಾಡುತ್ತಾರೆ ಎಂದು ರಾಮದಾಸ್‌ ಹೇಳಿದರು. ಕಾಂತರಾಜ್ ವರದಿ ಜಾರಿಯಾಗಲ್ಲ: ಕಾಂತರಾಜ್ ವರದಿ ಮೂಲಪ್ರತಿ ಕಾಣೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಮದಾಸ್‌, ರಾಜ್ಯದಲ್ಲಿ ಈ ವರದಿಯೇ ಜಾರಿಯಾಗಲ್ಲ. ಇದನ್ನು ಜಾರಿ ಮಾಡುವುದಾಗಿದ್ದರೆ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿರುವಾಗಲೇ ಜಾರಿ ಮಾಡುತ್ತಿದ್ದರು. ಆದರೆ ಇದು ಹಿಂದೂ ಸಮಾಜವನ್ನು ಒಡೆದಾಳುತ್ತದೆ ಎನ್ನುವುದು ಅದರಲ್ಲಿ ಇದೆ. ಹೀಗಾಗಿ ಆ ವರದಿಯನ್ನು ಸಿದ್ದರಾಮಯ್ಯ ಜಾರಿ ಮಾಡಲಿಲ್ಲ. ಈಗಲೂ ಅದನ್ನು ಜಾರಿ ಮಾಡುವುದಿಲ್ಲ. ಬದಲಾಗಿ ರಾಹುಲ್ ಗಾಂಧಿಯವರನ್ನು ಮೆಚ್ಚಿಸುವುದಕ್ಕಾಗಿ, ವಿವಿಧ ರಾಜ್ಯಗಳಲ್ಲಿ ಮತ್ತು ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆ ಅಷ್ಟೇ ಎಂದರು. ಆರು ತಿಂಗಳಲ್ಲಿ ಈ ಸರ್ಕಾರದ ಮೇಲೆ ಒಬಿಸಿ ಸಮುದಾಯಕ್ಕೆ ಭ್ರಮನಿರಸನವಾಗಿದೆ. ಇದನ್ನು ಬೇರೆಡೆ ಗಮನ ಸೆಳೆಯುವುದಕ್ಕಾಗಿ ವರದಿ ವಿಚಾರ ಮುನ್ನೆಲೆಗೆ ತರಲಾಗಿದೆ. ಈ ವರದಿ ಜಾರಿಯಾಗಲ್ಲ ಎಂದು ಹೇಳಿದರು.

Share this article