ಬೆಂಗಳೂರು : ಜನರು, ವಿರೋಧ ಪಕ್ಷದವರು, ಮೀಡಿಯಾದವರು ಸೇರಿದಂತೆ ಯಾರೇ ಬೈದ್ರು, ವಿರೋಧಿಸಿದ್ರು ನೀರಿನ ದರ ಏರಿಸುತ್ತೇವೆ. ಚರ್ಚೆ, ಧರಣಿ ಮಾಡಿದ್ರೂ ಬಿಡಲ್ಲ! ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ವಿಧಾನಸೌಧ ಆವರಣದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯಿಂದ ಗುರುವಾರ ಆಯೋಜಿಸಿದ್ದ ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ-110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿ, ಕಳೆದ ಸುಮಾರು 12 ವರ್ಷಗಳಿಂದ ನೀರಿನ ದರ ಪರಿಷ್ಕರಣೆ ಆಗಿಲ್ಲ. ಆದರೆ, ಪ್ರತಿ ವರ್ಷ ವಿದ್ಯುತ್ ದರ ಪರಿಷ್ಕರಣೆ ಆಗುತ್ತಿದೆ. ಇದರಿಂದ ಜಲಮಂಡಳಿಯ ವಿದ್ಯುತ್ ಬಿಲ್ ಹೆಚ್ಚುತ್ತಿದೆ. ಆದರೆ, ಬಿಲ್ ಕಟ್ಟಲು, ನೌಕರರ ಸಂಬಳ ಪಾವತಿಸಲು ಆಗುತ್ತಿಲ್ಲ. ಹೀಗಾಗಿ, ದರ ಹೆಚ್ಚಿಸದೇ ಬೇರೆ ಆಯ್ಕೆ ಇಲ್ಲ. ಇದೇ ರೀತಿ ಮುಂದುವರೆದರೆ ಜಲಮಂಡಳಿ ಉಳಿಯುವುದಿಲ್ಲ ಎಂದರು.
ಜನಸಂಖ್ಯೆ ಹೆಚ್ಚುತ್ತಿರುವ ರಾಜಧಾನಿಯಲ್ಲಿ ಈಗಲೇ 1.40 ಕೋಟಿ ಜನರಿದ್ದಾರೆ. ಎಲ್ಲರಿಗೂ ನೀರು ಒದಗಿಸಲೇಬೇಕು. ಭವಿಷ್ಯದ ದೃಷ್ಟಿಯಿಂದ ಸಾಲ ಮಾಡಿ, ಸಂಪರ್ಕ ಜಾಲವನ್ನು ಹೆಚ್ಚಿಸದ ಹೊರತು ನೀರು ಕೊಡಲು ಕಷ್ಟವಾಗುತ್ತದೆ. ಇನ್ನೂ ಜನರಿಗೆ ಎಷ್ಟು ಮಾಡಿದರೂ, ಏನು ಮಾಡಿದರೂ ಉಪಕಾರ ಸ್ಮರಣೆ ಇಲ್ಲ. ಅವರಿಗೆ ನೀರು ಬಂದರೆ ಸರಿ. ಇಲ್ಲದಿದ್ದರೆ ಬೈತಾರೆ, ಉಗಿತಾರೆ. ಅವರಿಗೆ ಜಲಮಂಡಳಿಯವರ ಕಷ್ಟದ ಅರಿವಿಲ್ಲ. ಬಿಲ್ ಕಟ್ಟುವವರು ಕಟ್ಟುತ್ತಾರೆ, ಕಟ್ಟದವರು ಇದ್ದಾರೆ. ಹೀಗಾಗಿ, ಏನೇ ಆದರೂ, ದರ ಹೆಚ್ಚಳಕ್ಕೆ ಬದ್ಧನಾಗಿದ್ದೇನೆ. ಚರ್ಚೆ, ಧರಣಿ ಮಾಡಿದರೂ ಬಿಡಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಪ್ರತ್ಯೇಕ ವಿದ್ಯುತ್ ತಯಾರಿಕಾ ಕಂಪನಿ:
ಜಲಮಂಡಳಿ, ಬಿಬಿಎಂಪಿ, ಬಿಎಂಆರ್‌ಸಿಎಲ್ ಮುಂತಾದ ನಾಲ್ಕೈದು ಸಂಸ್ಥೆಗಳಿಗೆ ಅಗತ್ಯವಿರುವ ವಿದ್ಯುತ್ ಅನ್ನು ಸಂಸ್ಥೆಗಳೇ ಉತ್ಪಾದಿಸುವ, ಖರೀದಿಸಿ ಬಳಕೆ ಮಾಡಿಕೊಳ್ಳುವಂತೆ ಪ್ರತ್ಯೇಕ ಕಂಪನಿ ಸ್ಥಾಪಿಸುವ ಪ್ರಸ್ತಾವನೆ ಇದೆ. ಈ ನಿಟ್ಟಿನಲ್ಲಿ ಕೆಲಸ ಪ್ರಗತಿಯಲ್ಲಿದೆ. ಈ ಹಿಂದೆ ನಾನು ಇಂಧನ ಸಚಿವನಾಗಿದ್ದಾಗ ಪಾವಗಡ ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಿದ್ದೆ. ಅದನ್ನು ಹಲವರು ಟೀಕಿಸಿದರು. ಆದರೆ, ಇಂದು 3.50 ಪೈಸೆಗೆ ವಿದ್ಯುತ್ ಲಭ್ಯವಾಗುತ್ತಿದೆ. ನಾವು ಭವಿಷ್ಯದ ಬಗ್ಗೆ ಯೋಚಿಸಿ ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಖಾಸಗೀಕರಣ ಸಾಧ್ಯವಿಲ್ಲ:
ವಿದ್ಯುತ್ ಸರಬರಾಜು, ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಕುರಿತು ಕೆಲವು ವ್ಯಕ್ತಿಗಳು ಪ್ರಸ್ತಾವನೆ ತಂದಿದ್ದರು. ವಿವಿಧ ರಾಜ್ಯಗಳಲ್ಲಿ ಅದಾನಿಯಂತಹ ಸಂಸ್ಥೆಗಳು ಈಗಾಗಲೇ ವಿದ್ಯುತ್ ಪೂರೈಕೆ ಮಾಡುತ್ತಿರುವ ಕಾರಣ ಅದೇ ರೀತಿ ರಾಜ್ಯದಲ್ಲಿ ಮಾಡಬಹುದು ಎಂದಿದ್ದರು. ಆದರೆ, ಅದಕ್ಕೆ ನಾನು ಒಪ್ಪಿಗೆ ಸೂಚಿಸಿಲ್ಲ. ನಾನು ಇರುವವರೆಗೂ ಖಾಸಗೀಕರಣ ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಬೆಂಗಳೂರು ಜಲಮಂಡಳಿ ವಿದ್ಯುತ್ ಬಿಲ್ ಹೆಚ್ಚಾಗಿರುವ ಕಾರಣ ಬಿಲ್ ಪಾವತಿ, ನೌಕರರ ವೇತನ ಪಾವತಿ ಕಷ್ಟವಾಗಿದೆ. ನೀರಿನ ದರ ಹೆಚ್ಚಳದ ಪ್ರಸ್ತಾವನೆ ಕಳೆದ 8-9 ವರ್ಷಗಳಿಂದ ಇದೆ. ಹೀಗಾಗಿ, ಕೆಲವು ವರ್ಗಗಳಿಗೆ ನೀರಿನ ದರ ಹೆಚ್ಚಿಸುತ್ತೇವೆ. ಎಷ್ಟು ಪ್ರಮಾಣದಲ್ಲಿ ಹೆಚ್ಚಿಸಬೇಕು ಎಂಬುದನ್ನು ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ.
-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ.