ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಏಯ್ ನೀನು ಜಾಸ್ತಿ ಮಾತಾಡಬೇಡ, ನೀನು ರಾಜಕೀಯ ಮಾಡುತ್ತಿದ್ದು, ಮುಗ್ಧ ನೇಕಾರರನ್ನು ಹಾದಿ ತಪ್ಪಿಸುತ್ತಿರುವೆ ಎಂದು ಶಾಸಕ ಸಿದ್ದು ಸವದಿ ಸೋಮವಾರ ತಮ್ಮ ನಿವಾಸಕ್ಕೆ ಹೋರಾಟ ನಡೆಸುತ್ತಿರುವ ನೂರಕ್ಕೂ ಹೆಚ್ಚು ನೇಕಾರರು ಮುತ್ತಿಗೆ ಹಾಕಿದಾಗ ಧುರೀಣ ಟಿರಕಿ ಜೊತೆ ಏಕವಚನ ಬಳಕೆ ಮಾಡಿದ್ದು, ತೀವ್ರ ವಾಗ್ಯುದ್ಧಕ್ಕೆ ಕಾರಣವಾಯಿತು.ಇದಕ್ಕೆ ಪ್ರತಿಯಾಗಿ, ಗೌರವದಿಂದ ಮಾತಾಡಿ, ನಾನು ಯಾವುದೇ ರಾಜಕೀಯ ನಡೆಸಿಲ್ಲ. ನಿಗಮದಲ್ಲಿ ನಡೆದಿರುವ ಅವ್ಯವಹಾರದ ತನಿಖೆ ನಡೆಸುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಕೈಮಗ್ಗ ನೇಕಾರರಿಗೆ ಇದುವರೆಗೂ ಆಗಿರುವ ಅನ್ಯಾಯ ಸರಿಪಡಿಸಲು ಮುಂದಾಗಿದ್ದೇನೆ. ನಾನು ರಾಜಕಾರಣ ಮಾಡುತ್ತಿರುವ ಬಗ್ಗೆ ನೀವು ಪ್ರಮಾಣ ಮಾಡಿರಿ ಎಂದರು. ಆಣೆ-ಪ್ರಮಾಣದ ಪ್ರಹಸನದಲ್ಲಿ ಶಾಸಕ ಸವದಿ ನಿರುತ್ತರಾಗಿ, ನೇಕಾರರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಸದನದಲ್ಲಿ ನಾನೇ ಸಾಕಷ್ಟು ಬಾರಿ ಧ್ವನಿಯಾಗಿದ್ದೇನೆಂದು ತಮ್ಮನ್ನು ಸಮರ್ಥಿಸಿಕೊಂಡರು.
೧೪ ದಿನಗಳ ಕಾಲ ಕೆಎಚ್‌ಡಿಸಿ ಕಚೇರಿ ಎದುರು ಕೈಮಗ್ಗ ನೇಕಾರರು ನಡೆಸುತ್ತಿರುವ ಸತ್ಯಾಗ್ರಹ ಸೋಮವಾರ ಶಾಸಕ ಸವದಿ ನಿವಾಸಕ್ಕೆ ಮುತ್ತಿಗೆ ಹಾಕುವಂತಾಯ್ತು. ಶಾಸಕರ ಸೂಚನೆಯಂತೆ ೧೦ ಜನ ನೇಕಾರ ಧುರೀಣರು ಮಾತ್ರ ಕಚೇರಿ ಪ್ರವೇಶಿಸಿ ಮಾತುಕತೆ ನಡೆಸಿದರು. ನೇಕಾರರಿಗೆ ನಿರಂತರ ಉದ್ಯೋಗ ಸಿಗುವಂತೆ ಕಚ್ಚಾನೂಲ, ವಸ್ತುಗಳು ಪೂರೈಕೆಯಾಗಬೇಕು. ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಕಾರ್ಮಿಕ ಸೌಲಭ್ಯ ವಿಸ್ತರಿಸಬೇಕು. ಕಳೆದ ೩೮ ವರ್ಷಗಳಿಂದ ಡಚ್ ಮನೆಗಳ ಹಕ್ಕುಪತ್ರ, ಉತಾರ ನೀಡುವಂತೆ ಮತ್ತು ಉಳಿದ ನೇಕಾರರಿಗೆ ನಿವೇಶನ ನೀಡಲು ನಡೆಸುತ್ತಿರುವ ಹೋರಾಟಕ್ಕೆ ಸಕಾರಾತ್ಮಕ ಕ್ರಮ ತಕ್ಷಣ ಜರುಗಿಸಬೇಕು. ೫೫ ವಯೋಮಾನದ ನೇಕಾರರಿಗೆ ಮಾಸಿಕ ೫ ಸಾವಿರ ಮಾಸಾಶನ ನೀಡಬೇಕೆಂಬ ಬೇಡಿಕೆಗಳಿಗೆ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದರು.ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಮ್ಮವೇ ಆಗಿರುವುದರಿಂದ ಅರಣ್ಯ ಇಲಾಖೆಯ ಒಡೆತನದ ಜಾಗೆಯನ್ನು ಇತ್ಯರ್ಥಗೊಳಿಸಿ ನೇಕಾರರಿಗೆ ಶಾಶ್ವತ ಪರಿಹಾರ ನೀಡಲಾಗುವುದೆಂದು ತಾವೇ ಸಮಾರಂಭದಲ್ಲಿ ಹೇಳಿದ್ದ ಮಾತು ಇದೂವರೆಗೆ ಈಡೇರಿಲ್ಲವೆಂದು ಹಿರಿಯ ನೇಕಾರ ಗಂಗಪ್ಪ ಬೇಸರಿಸಿದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಶಾಸಕ ಸವದಿ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಸಾಕಷ್ಟು ಶ್ರಮಿಸಿದ್ದೇನೆ. ಈಗಲೂ ನಿಮ್ಮ ಎಲ್ಲ ಬೇಡಿಕೆಗಳ ಪತ್ರ ತಯಾರಿಸಿ ಸಿಎಂ ಹಾಗೂ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ಕಚೇರಿ ಎದುರಿನ ಸತ್ಯಾಗ್ರಹ ಸ್ಥಳಕ್ಕೆ ಮರಳಿದ ನೇಕಾರರು ತಮ್ಮ ನಿರಶನ ಮುಂದುವರೆಸಿದರು. ಸತ್ಯಾಗ್ರಹದಲ್ಲಿ ಕಲ್ಲಪ್ಪ ಮೈತ್ರಿ, ರವೀಂದ್ರ ಕಡ್ಲಿ, ಶಂಕರ ಮರೇಗುದ್ದಿ, ಮೋಹನ ಧಡೂತಿ, ಸಿದ್ದು ಕಡ್ಲಿಮಟ್ಟಿ, ಪಾರ್ವತಿ ಜವಳಗಿ, ನಿರ್ಮಲಾ ಮಾಳವದೆ, ಶಿಲ್ಪಾ ಬಾಣಕಾರ, ಶ್ರೀಶೈಲ ಮುಗಳೊಳ್ಳಿ, ಮಲೀಕ್ ಜಮಾದಾರ ಸೇರಿದಂತೆ ನೂರಾರು ನೇಕಾರರಿದ್ದರು.