ಕಾರವಾರ: ನವರಾತ್ರಿ ಹಬ್ಬ ಎಂದಾಕ್ಷಣ ಕಾರವಾರ ಭಾಗದಲ್ಲಿ ನೆನಪಾಗುವುದೇ ದಾಂಡಿಯಾ ನೃತ್ಯ. ನವರಾತ್ರಿಯ ಒಂಬತ್ತು ದಿನಗಳ ಕಾಲ ನಗರ ಹಾಗೂ ಗ್ರಾಮೀಣ ಭಾಗದ ವಿವಿಧೆಡೆ ದಾಂಡಿಯಾ ಆಡುವ ಮೂಲಕ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.ದೇವಸ್ಥಾನಗಳನ್ನು ಹಾಗೂ ದಾಂಡಿಯಾ ನೃತ್ಯ ಮಾಡುವ ಪ್ರದೇಶವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಒಂಬತ್ತು ದಿನಗಳ ಕಾಲ ರಾತ್ರಿ ನಡೆಯುವ ದಾಂಡಿಯಾದಲ್ಲಿ ಪ್ರಪ್ರಥಮವಾಗಿ ಗರ್ಬಾ ನೃತ್ಯ ನಡೆಯುತ್ತದೆ. ಬಳಿಕ ಸಾರ್ವಜನಿಕರು ಸಾಮೂಹಿಕವಾಗಿ ನೃತ್ಯ ಮಾಡುತ್ತಾರೆ. ೯ ದಿನಗಳ ಕಾಲ ದೇವಿಗೆ ಇಷ್ಟವಾದ ಬಣ್ಣದ ಸೀರೆ ತೊಡಿಸಿ ಪೂಜಿಸಲಾಗುತ್ತದೆ. ರಾತ್ರಿ ನಡೆಯುವ ಗರ್ಬಾ ನೃತ್ಯದಲ್ಲಿ ಪಾಲ್ಗೊಳ್ಳುವವರೂ ಕೂಡಾ ಅದೇ ಬಣ್ಣದ ಸೀರೆಯನ್ನು ತೊಟ್ಟಿರುತ್ತಾರೆ. ಕೈಯಲ್ಲಿ ದಾಂಡಿಯಾ ಕೋಲನ್ನು ಹಿಡಿದು ಇಂಪಾದ ಗಾಯನಕ್ಕೆ ಸೊಗಸಾಗಿ ಹೆಜ್ಜೆ ಹಾಕುತ್ತಾರೆ. ಈ ನೃತ್ಯದಲ್ಲಿ ಯಾವುದೇ ಭೇದ ಭಾವವಿಲ್ಲದೇ ಮಹಿಳೆಯರು ಮಕ್ಕಳು, ಯುವಕರು ಒಟ್ಟಾಗಿ ಪಾಲ್ಗೊಂಡು ಹೆಜ್ಜೆ ಹಾಕಿ ಸಂತಸಪಡುತ್ತಾರೆ. ನಗರದ ದೇವಳಿವಾಡ, ಸೋನಾರವಾಡ, ಬಾಂಡಿಶಿಟ್ಟಾ, ತಾಲೂಕಿನ ಕೆರವಡಿ, ಹಿಂದೂವಾಡ, ಲಕ್ಷ್ಮೀನಗರ, ಅಮದಳ್ಳಿ, ಚೆಂಡಿಯಾ, ಕಿನ್ನರ, ಕಡವಾಡ, ಬಿಣಗಾ, ತೋಡೂರು ಸೇರಿದಂತೆ ಹಲವು ಭಾಗದಲ್ಲಿ ದಾಂಡಿಯಾ ನೃತ್ಯವನ್ನು ಸಮಿತಿಯವರು ಆಯೋಜಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ಕೇವಲ ರಾಜಸ್ಥಾನ, ಗುಜರಾತ್, ಪಂಜಾಬ್ ನಂತಹ ಕೆಲವೇ ರಾಜ್ಯಗಳಿಗೆ ಸೀಮಿತ ಎನ್ನಲಾದ ದಾಂಡಿಯಾ ನೃತ್ಯವನ್ನು ಹಲವಾರು ವರ್ಷದಿಂದ ಕಾರವಾರಿಗರೂ ಆಡುತ್ತಾ ಬರುತ್ತಿದ್ದಾರೆ.ಹಲವೆಡೆ ಆಯೋಜನೆ: ಈ ಭಾಗದ ಪ್ರಮುಖ ದೇವತೆಗಳಾದ ದುರ್ಗಾದೇವಿ, ಸಂತೋಷಿ ಮಾತಾ, ಕುಂಠಿ ಮಹಾಮಾಯಿ, ತುಳಜಾಭವಾನಿ ಸೇರಿದಂತೆ ಅನೇಕ ದೇವಾಲಯಗಳ ಆವರಣದಲ್ಲಿ ದಾಂಡಿಯಾವನ್ನು ಆಯೋಜನೆ ಮಾಡಲಾಗಿದೆ. ಜತೆಗೆ ಕೆಲವಡೆ ಪುಟಾಣಿಗಳಿಗಾಗಿ, ಮಹಿಳೆಯರಿಗಾಗಿ, ಬಾಲಕ- ಬಾಲಕಿಯರಿಗಾಗಿ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಕೂಡಾ ಮಾಡುವುದು ವಿಶೇಷವಾಗಿದೆ. ನವರಾತ್ರಿ ಬಂದರೆ ಒಂಬತ್ತು ದಿನಗಳ ಕಾಲ ದಾಂಡಿಯಾದಲ್ಲಿ ಪಾಲ್ಗೊಳ್ಳುವುದೇ ಸಂತೋಷದ ಸಂಭ್ರಮದ ಕ್ಷಣವಾಗಿರುತ್ತದೆ.
ಸಂತಸ ಪಡುತ್ತಾರೆ: ಯಾವುದೇ ಭೇದ- ಭಾವವಿಲ್ಲದೇ ಮಹಿಳೆಯರು, ಮಕ್ಕಳು, ಪುರುಷರು, ಯುವಕ-ಯುವತಿಯರು ಒಟ್ಟಾಗಿ ಪಾಲ್ಗೊಂಡು ದಾಂಡಿಯಾದಲ್ಲಿ ನೃತ್ಯ ಮಾಡಿ ಸಂತಸ ಪಡುತ್ತಾರೆ. ನೃತ್ಯ ವೀಕ್ಷಣೆಗೂ ಸಾವಿರಾರು ಜನರು ಬರುತ್ತಾರೆ. ಪ್ರತಿವರ್ಷವೂ ದಾಂಡಿಯಾ ಆಡುವುದನ್ನು ನೋಡುತ್ತೇವೆ ಎಂದು ಪ್ರೇಕ್ಷಕ ರವಿ ಗೌಡ ತಿಳಿಸಿದರು.ಸಾಮೂಹಿಕ ನೃತ್ಯ: ಶೇಜವಾಡದ ತುಳಜಾಭವಾನಿ ದೇವಸ್ಥಾನದಲ್ಲಿ ದಾಂಡಿಯಾ ಆಯೋಜನೆ ಮಾಡಿದ್ದೇವೆ. ನವರಾತ್ರಿಯ ಒಂಬತ್ತು ದಿನಕ್ಕೆ ಒಂಬತ್ತು ಬಣ್ಣವಿದ್ದು, ಅದೇ ಸೀರೆಯನ್ನು ತೊಟ್ಟು ಮಹಿಳೆಯರು, ಹೆಣ್ಣುಮಕ್ಕಳು ಗರ್ಬಾನೃತ್ಯ ಮಾಡುತ್ತಾರೆ. ಬಳಿಕ ಸಾಮೂಹಿಕ ನೃತ್ಯ ನಡೆಯುತ್ತದೆ ಎಂದು ಶೇಜವಾಡದ ದಾಂಡಿಯಾ ಆಯೋಜಕ ಸಮೀರ ನಾಯ್ಕ ತಿಳಿಸಿದರು.