ಮಾರುಕಟ್ಟೆಯಲ್ಲಿ ಕಳೆಗಟ್ಟಿದ ದೀಪಾವಳಿ ವ್ಯಾಪಾರ

KannadaprabhaNewsNetwork | Updated : Nov 01 2024, 12:33 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಗುಮ್ಮಟ ನಗರಿ ಹಾಗೂ ಬಸವನಾಡು ವಿಜಯಪುರ ಜಿಲ್ಲೆ ಸಜ್ಜಾಗಿದೆ. ಹಬ್ಬದ ಮೊದಲ ದಿನ ಗುರುವಾರ ಎಲ್ಲೆಡೆ ಹಬ್ಬದ ಸಡಗರ ಜೋರಾಗಿದೆ. ವಿಜೃಂಭಣೆಯಿಂದ ದೀಪಾವಳಿಯನ್ನು ಆಚರಿಸಲು ಜನರು ಭರ್ಜರಿ ಸಿದ್ಧತೆ ನಡೆಸಿದ್ದು, ಮನೆಗಳ ಅಲಂಕಾರ, ಸಿಂಗಾರ ಜೋರಾಗಿದೆ. ಇನ್ನು, ಮಾರುಕಟ್ಟೆಯಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಇತ್ತ ನಗರದೆಲ್ಲೆಡೆ ಜನರು ಹಬ್ಬಕ್ಕೆ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು ಆದ ಅತಿವೃಷ್ಟಿಯ ಪರಿಣಾಮ ದೀಪಾವಳಿಯ ಮೇಲೆ ಬಿದ್ದಂತೆ ಕಂಡು ಬರುತ್ತಿಲ್ಲ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಗುಮ್ಮಟ ನಗರಿ ಹಾಗೂ ಬಸವನಾಡು ವಿಜಯಪುರ ಜಿಲ್ಲೆ ಸಜ್ಜಾಗಿದೆ. ಹಬ್ಬದ ಮೊದಲ ದಿನ ಗುರುವಾರ ಎಲ್ಲೆಡೆ ಹಬ್ಬದ ಸಡಗರ ಜೋರಾಗಿದೆ. ವಿಜೃಂಭಣೆಯಿಂದ ದೀಪಾವಳಿಯನ್ನು ಆಚರಿಸಲು ಜನರು ಭರ್ಜರಿ ಸಿದ್ಧತೆ ನಡೆಸಿದ್ದು, ಮನೆಗಳ ಅಲಂಕಾರ, ಸಿಂಗಾರ ಜೋರಾಗಿದೆ. ಇನ್ನು, ಮಾರುಕಟ್ಟೆಯಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಇತ್ತ ನಗರದೆಲ್ಲೆಡೆ ಜನರು ಹಬ್ಬಕ್ಕೆ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು ಆದ ಅತಿವೃಷ್ಟಿಯ ಪರಿಣಾಮ ದೀಪಾವಳಿಯ ಮೇಲೆ ಬಿದ್ದಂತೆ ಕಂಡು ಬರುತ್ತಿಲ್ಲ.

ನಗರಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ದೀಪಾವಳಿಯ ಸಂಭ್ರಮ ಮೇಳೈಸಿದ್ದು, ವಾಹನಗಳ ಖರೀದಿ, ಮಾರಾಟ ಮತ್ತು ಸಾಮಗ್ರಿಗಳ ಮಾರಾಟ ಹಾಗೂ ಖರೀದಿ ಜೋರಾಗಿದೆ. ಹಬ್ಬದ ಹಿನ್ನಲೆ ಎರಡ್ಮೂರು ದಿನಗಳಿಂದಲೇ ಮಾರುಕಟ್ಟೆಗಳು ಜನರಿಂದ ಕಿಕ್ಕಿರಿದು ತುಂಬಿದೆ. ಎಂದಿನಂತೆ ದೀಪಾವಳಿ ಹಬ್ಬದ ಖರೀದಿಗೆ ಜನರು ಆಗಮಿಸಿದ್ದು, ನಗರದ ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ, ಸರಾಫ್ ಬಜಾರ್, ರಾಮ ಮಂದಿರ ರಸ್ತೆ, ಶ್ರೀ ಸಿದ್ಧೇಶ್ವರ ದೇವಸ್ಥಾನ ರಸ್ತೆ, ಗಣಪತಿ ಚೌಕ್, ಸ್ಟೇಷನ್ ರಸ್ತೆ, ಸ್ಟೇಡಿಯಂ ರಸ್ತೆ ಸೇರಿದಂತೆ ಎಲ್ಲಿ ನೋಡಿದರೂ ಹೂ ಹಣ್ಣು, ಕಬ್ಬು, ಬಾಳೆ, ಹೂವಿನ ಗಿಡಗಳು, ಅಲಂಕಾರಿಕ ವಸ್ತುಗಳು ಸೇರಿ ಅಗತ್ಯ ಪದಾರ್ಥಗಳ ಖರೀದಿ ಜೋರಾಗಿದೆ. ಮಾರುಕಟ್ಟೆಯಲ್ಲಿ ಹಾಗೂ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ವಹಿವಾಟು ಜೋರಾಗಿ ನಡೆಯುತ್ತಿದೆ.

ಮಣ್ಣಿನ ಹಣತೆಗಳಿಗೆ ಬೇಡಿಕೆ:

ನಗರದ ಬಹುತೇಕ ಕಡೆಗಳಲ್ಲಿ ಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ಮನೆಯಲ್ಲೂ ದೀಪ ಬೆಳಗುವುದರಿಂದ ಜನರು ಮಣ್ಣಿನ ದೀಪಗಳ ಖರೀದಿಗೆ ಹೆಚ್ಚಾಗಿ ಒತ್ತುಕೊಟ್ಟಿದ್ದಾರೆ. ಈ ಹಿನ್ನೆಲೆ ಹಣತೆಗಳ ಖರೀದಿ ಜೋರಾಗಿಯೇ ನಡೆದಿದೆ. ಅದರೊಟ್ಟಿಗೆ ಮನೆ, ಅಂಗಡಿಗಳು ಹಾಗೂ ವಾಹನಗಳು ಸೇರಿದಂತೆ ಎಲ್ಲಡೆ ಝಗಮಗಿಸುವ ಲೈಟಿಂಗ್ಸ್ ಅಳವಡಿಸಲೆಂದು ಮಾರುಕಟ್ಟೆಯಲ್ಲಿ ಕಲರ್‌ಫುಲ್ ಲೈಟಿಂಗ್ಸ್, ಎಲ್‌ಇಡಿ ಚಿತ್ತಾರ, ಆಕಾಶಬುಟ್ಟಿ ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಅಲ್ಲದೇ, ಪೂಜೆಗೆ ಅಗತ್ಯವಾದ ಹೂವಿನ ದೊಡ್ಡದೊಡ್ಡ ಹಾರಗಳು, ಬಾಳೆ ದಿಂಡುಗಳು, ಕಬ್ಬು, ತೆಂಗಿನ ಗರಿಗಳು, ಕುಂಬಳಕಾಯಿ ಸೇರಿದಂತೆ ಇತರೇ ಹೂ ಹಾಗೂ ಹಣ್ಣುಗಳ ಖರೀದಿ ಜೋರಾಗಿದೆ. ಪ್ರವಾಹದಿಂದಾಗಿ ಸ್ವಲ್ಪಮಟ್ಟಿಗೆ ಸಮಸ್ಯೆಯಾದರೂ ರೈತಾಪಿ ವರ್ಗದಲ್ಲಿ ಹಬ್ಬದ ಕಳೆ ಮಾತ್ರ ಕುಂದಿಲ್ಲ.

ಗಗನಕ್ಕೇರಿರುವ ಬೆಲೆ:

ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಸಾಮಾನ್ಯವಾಗಿಯೇ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೆಚ್ಚಿನ ಪ್ರಮಾಣದಲ್ಲಿ ಹೂ ಮಾರುಕಟ್ಟೆಗೆ ಬಾರದ್ದರಿಂದ ಒಂದು ಕೇಜಿ ಚೆಂಡು ಹೂವಿಗೆ ₹ 150 ರಿಂದ 250 ಬೆಲೆ ಬಂದಿದೆ. ಜೋಡಿ ಬಾಳೆದಿಂಡಿಗೆ ₹ 100 ರಿಂದ 200, ಜೋಡಿ ಕಬ್ಬಿಗೆ ₹ 50, ಬೂದು ಕುಂಬಳಕಾಯಿಗೆ ₹ 100ರಿಂದ 150 ಗೆ ಮಾರಾಟ ಮಾಡಲಾಗುತ್ತಿದೆ. ಜೋಡಿ ಹಣತೆಗಳಿಗೆ ₹ 30ರಿಂದ 100ರ ವರೆಗೆ ಬೆಲೆ ಇದ್ದು, ಸಾಯಂಕಾಲದ ವೇಳೆ ಮನೆಗಳು, ಅಂಗಡಿಗಳ ಮುಂದೆ ಹಾಕುವ ಆಕಾಶಬುಟ್ಟಿಗಳು ₹ 150ರಿಂದ 500ರ ವರೆಗೆ ಮಾರಾಟ ಮಾಡಲಾಗುತ್ತಿದೆ. ಒಟ್ಟಿನಲ್ಲಿ ನಾಡಿನ ಜನತೆ ದೀಪಾವಳಿ ಸಂಭ್ರಮದಲ್ಲಿದ್ದು, ಯಾವುದನ್ನು ಲೆಕ್ಕಿಸದೇ ಹಬ್ಬ ಆಚರಣೆಯಲ್ಲಿ ತೊಡಗಿದ್ದಾರೆ.----------ಕೋಟ್

ದೀಪಾವಳಿ ಒಂದು ವಿಶಿಷ್ಠ ಹಬ್ಬವಾಗಿದ್ದು, ಮನೆಯಲ್ಲಿ ಸಹೋದರರಿಗೆ ಆರತಿ ಬೆಳಗುವುದು, ಸಂಜೆ ಮನೆಗಳ ಮುಂದೆ, ಓಣಿಗಳಲ್ಲಿ ದೀಪ ಹಚ್ಚುವುದು, ಪಟಾಕಿ ಹೊಡೆಯುವುದು ಸೇರಿದಂತೆ ಸಂಭ್ರಮ ಮನೆಮಾಡಿದೆ. ಜೊತೆಗೆ ಅಂಗಡಿಗಳ ಪೂಜೆಗಳನ್ನೂ ಸಹ ಅತ್ಯುತ್ಸಾಹದಿಂದ ಮಾಡುತ್ತಿದ್ದೇವೆ.

- ಪೂಜಾಶ್ರೀ, ಗೃಹಿಣಿ.

ಕಳೆದ ಬಾರಿಗೆ ಹೋಲಿಸಿದರೆ ಜನರು ಸಂಭ್ರಮದಿಂದ ದೀಪಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಬಾರಿ ವ್ಯಾಪಾರ ಚೆನ್ನಾಗಿ ಆಗುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಬೆಳಗ್ಗೆಯಿಂದ ರಾತ್ರಿಯವರೆಗೆ ಸಾಮಗ್ರಿಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

- ಶಿವು ಗಡಗಿ, ವ್ಯಾಪಾರಸ್ಥ.

Share this article