ಕನ್ನಡಪ್ರಭ ವಾರ್ತೆ ಮಂಗಳೂರು
ಪಕ್ಷ ಸಂಘಟನೆ, ಪಕ್ಷ ನಿಷ್ಠ, ಸಂಘ ನಿಷ್ಠರಾಗಿದ್ದು, ರಾಜ್ಯಾಧ್ಯಕ್ಷರಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರೂ ನಳಿನ್ ಕುಮಾರ್ ಕಟೀಲ್ ಟಿಕೆಟ್ ವಂಚಿತರಾಗಿರುವುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯಾಧ್ಯಕ್ಷನಾಗಿ ಇಡೀ ರಾಜ್ಯವನ್ನು 18 ಬಾರಿ ಪ್ರವಾಸ ಮಾಡಿ ಪಕ್ಷವನ್ನು ತಳಮಟ್ಟದಲ್ಲಿ ಬೇರೂರುವಂತೆ ಮಾಡಿದರೂ ನಳಿನ್ ಕುಮಾರ್‌ಗೆ ಟಿಕೆಟ್ ಕೈಹಿಡಿಯಲಿಲ್ಲ.ಟಿಕೆಟ್ ತಪ್ಪಲು ಏನು ಕಾರಣ?:
ಉತ್ತಮ ಸಂಘಟಕನಾಗಿ, ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತರಿಸಿಕೊಂಡು ನಂಬರ್ ವನ್ ಸಂಸದ ಎಂದು ಕರೆಸಿಕೊಂಡ ನಳಿನ್ ಕುಮಾರ್‌ಗೆ ಟಿಕೆಟ್ ತಪ್ಪಲು ಕಾರಣ ಏನು ಎಂದು ಹುಡುಕುತ್ತಾ ಹೋದರೆ ಅನೇಕ ಕಾರಣಗಳು ಸಿಗುತ್ತವೆ.ಮುಖ್ಯವಾಗಿ ಈಶ್ವರಪ್ಪ ಸೇರಿದಂತೆ ಕೆಲವು ಹಿರಿಯ ನಾಯಕರ ಬಗ್ಗೆ ರಾಜ್ಯಾಧ್ಯಕ್ಷರಾಗಿದ್ದಾಗ ನಳಿನ್ ಕುಮಾರ್ ಆಡಿದ್ದಾರೆ ಎನ್ನಲಾದ ಆಡಿಯೋ ತುಣುಕು ಸಾಕಷ್ಟು ವೈರಲ್ ಆಗಿ ಬಿಜೆಪಿ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ನಳಿನ್ ಕುಮಾರ್ ಕಟೀಲ್ ಜತೆಗಿದ್ದವರೇ ಆಡಿಯೋ ಹರಿಯಬಿಟ್ಟು ಅವರ ವಿರುದ್ಧ ಪ್ರತಿರೋಧಕ್ಕೆ ಅವಕಾಶ ಮಾಡಿಕೊಟ್ಟಿತ್ತು.
ಮೂರನೇ ಅವಧಿಗೆ ಸಂಸದನಾಗಿ ಆಯ್ಕೆಯಾದ ಕೆಲವೇ ತಿಂಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಲಭಿಸಿತ್ತು. ಆ ಬಳಿಕ ಕ್ಷೇತ್ರದ ಕಡೆ ಗಮನ ಹರಿಸಲು ಸಾಧ್ಯವಾಗದೆ ಇಡೀ ರಾಜ್ಯ ಪ್ರವಾಸ ಮಾಡಬೇಕಾಗಿ ಬಂತು. ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಗೊಂಡ ಬಳಿಕ ಕ್ಷೇತ್ರದತ್ತ ಮುಖ ಮಾಡಿದಾಗ ಆಗಲೇ ಕಾರ್ಯಕರ್ತರ ಅಸಮಾಧಾನ ಸ್ಫೋಟಗೊಳ್ಳತೊಡಗಿತ್ತು.ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭ ಸಂಸದರ ಕಾರನ್ನೇ ಅಲುಗಾಡಿಸುವ ಮೂಲಕ ನಳಿನ್ ಕುಮಾರ್ ಮೇಲಿನ ಅಸಮಾಧಾನ ಸ್ಫೋಟಗೊಂಡಿತ್ತು. ನಂತರದ ದಿನಗಳಲ್ಲಿ ಅದನ್ನು ಬಿಜೆಪಿ ಹಾಗೂ ಸಂಘಪರಿವಾರ ಸರಿಯಾದ ರೀತಿಯಲ್ಲಿ ನಿಭಾಯಿಸದೇ ಇದ್ದುದು ನಳಿನ್ ಕುಮಾರ್ ವಿರುದ್ಧ ಕಾರ್ಯಕರ್ತರ ಅಸಮಾಧಾನ ಮುಂದುವರಿಯಲು ಕಾರಣವಾಯಿತು.
ಉದ್ಯಮಿಯೊಬ್ಬರಿಗೆ ರಾಜ್ಯಸಭಾ ಸದಸ್ಯತ್ವ ದೊರಕಿಸಿಕೊಡಲು ವಿಫಲ ಎಂಬುದನ್ನು ವಿರೋಧಿಗಳ ಗುಂಪು ಬಿಂಬಿಸುವಲ್ಲಿ ಯಶಸ್ವಿಯಾದ್ದು, ನಳಿನ್ ಕುಮಾರ್‌ರ ಸುತ್ತಮುತ್ತ ವಿರೋಧಿ ಪಾಳಯ ಸೃಷ್ಟಿಗೆ ಕಾರಣಾಯಿತು. ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ತಾಂತ್ರಿಕ ಕಾರಣ ಇದ್ದರೂ ಅದರ ಬಗ್ಗೆ ನಳಿನ್ ಕುಮಾರ್ ವಿರುದ್ಧವೇ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ಆಗಿರುವುದು, ಅದನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಗಿರುವುದು ಕೂಡ ನಳಿನ್ ಕುಮಾರ್ ವರ್ಚಸ್ಸಿಗೆ ಹಾನಿ ಉಂಟು ಮಾಡಿತ್ತು. ಕೆಲವೊಂದು ವಿಚಾರಗಳಲ್ಲಿ ತನ್ನ ವರ್ತನೆಯಲ್ಲಿ ಬದಲಾವಣೆ ತರದೇ ಇದ್ದುದು ಇವೇ ಮೊದಲಾದ ಕಾರಣಗಳು ಕೂಡ ನಳಿನ್ ಕುಮಾರ್ ಪಾಲಿಗೆ ಮುಳುವಾಯಿತು ಎಂದೇ ವಿಶ್ಲೇಷಿಸಲಾಗುತ್ತಿದೆ. ಬಾಕ್ಸ್---ಮೊದಲೇ ದೈವ ಎಚ್ಚರಿಕೆ ನೀಡಿತ್ತೇ?
ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವ ಬಗ್ಗೆ ದೈವವೊಂದು ಮೊದಲೇ ಎಚ್ಚರಿಕೆ ನೀಡಿತ್ತೇ?ಈ ಕುರಿತ ವಿಡಿಯೋ ತುಣುಕು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಮೇನಾಲದಲ್ಲಿ ವಾರದ ಹಿಂದೆ ನಡೆದಿದ್ದ ವಯನಾಟ್ ಕುಲವನ್ ದೈವದ ಧರ್ಮನೇಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದರು. ವಿಷ್ಣುಮೂರ್ತಿ ಧರ್ಮನೇಮದಲ್ಲಿ ನಳಿನ್ ಕುಮಾರ್‌ಗೆ ವಿಷ್ಣುಮೂರ್ತಿ ದೈವ ಎಚ್ಚರಿಕೆ ನೀಡಿತ್ತು.‘ನಿನಗೆ ವೈರಿಗಳು ತುಂಬಾನೇ ಇದ್ದಾರೆ. ದಾಯಾದಿಗಳೇ ಪರಸ್ಪರ ವೈರಿಗಳಾಗಿ ಕುರುಕ್ಷೇತ್ರದಲ್ಲಿ ಯುದ್ಧ ನಡೆಯಲಿಲ್ಲವೇ? ಅಂದು ಪಾರ್ಥನಿಗೂ ಧರ್ಮ ಕಾಪಾಡುವಂತೆ ನಾನು ಸಲಹೆ ನೀಡಿದ್ದೆ. ವೈರಿಗಳು ಎಷ್ಟಿದ್ದರೇನು ಕೊನೆಗೆ ಸತ್ಯ, ಧರ್ಮ ಮಾತ್ರ ಗೆಲ್ಲುವುದು. ಯಾವುದಕ್ಕೂ ಕುಗ್ಗಬೇಡ ಎಂದಿರುವ ದೈವ, ನೀನು ಹಿಂದಿರುಗಿ ನೋಡಬೇಡ, ನಿನಗೆ ಮುಂದೊಂದು ದಿನ ಜಯವಿದೆ’ ಎಂದು ವಿಷ್ಣುಮೂರ್ತಿ ದೈವ ಸಂಸದ ನಳಿನ್ ಕುಮಾರ್‌ಗೆ ಅಭಯ ನೀಡುವ ದೃಶ್ಯ ವಿಡಿಯೋ ತುಣುಕಿನಲ್ಲಿದೆ.