ಬಿಜೆಪಿ- ಜೆಡಿಎಸ್ ನಾಯಕರು ಪಾದಯಾತ್ರೆಯಿಂದ ಏನು ಸಾಧಿಸಿದರು?

KannadaprabhaNewsNetwork | Published : Aug 11, 2024 1:35 AM

ಸಾರಾಂಶ

ಕಡೂರು, ತಮ್ಮ ಸುದೀರ್ಘ ರಾಜಕಾರಣದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯೂ ಇಲ್ಲದ ನಮ್ಮ ನಾಯಕ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಟ್ಟ ಹೆಸರು ತಂದು ಕಾಂಗ್ರೆಸ್ ಸರ್ಕಾರ ಉರುಳಿಸುವ ಹುನ್ನಾರ ಮಾಡಿದ ಬಿಜೆಪಿ- ಜೆಡಿಎಸ್ ನಾಯಕರು ಪಾದಯಾತ್ರೆ ಮಾಡಿ ಎನು ಸಾಧಿಸಿದರು ಎಂದು ಶಾಸಕ ಕೆ.ಎಸ್.ಆನಂದ್ ಲೇವಡಿ ಮಾಡಿದರು.

ಕಡೂರಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಕೆ.ಎಸ್.ಆನಂದ್ ಲೇವಡಿ

ಕನ್ನಡಪ್ರಭ ವಾರ್ತೆ, ಕಡೂರು

ತಮ್ಮ ಸುದೀರ್ಘ ರಾಜಕಾರಣದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯೂ ಇಲ್ಲದ ನಮ್ಮ ನಾಯಕ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಟ್ಟ ಹೆಸರು ತಂದು ಕಾಂಗ್ರೆಸ್ ಸರ್ಕಾರ ಉರುಳಿಸುವ ಹುನ್ನಾರ ಮಾಡಿದ ಬಿಜೆಪಿ- ಜೆಡಿಎಸ್ ನಾಯಕರು ಪಾದಯಾತ್ರೆ ಮಾಡಿ ಎನು ಸಾಧಿಸಿದರು ಎಂದು ಶಾಸಕ ಕೆ.ಎಸ್.ಆನಂದ್ ಲೇವಡಿ ಮಾಡಿದರು.

ಕಡೂರಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ದೇಶದಲ್ಲಿಯೇ ಮಾದರಿ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ- ಜೆಡಿಎಸ್ ನಾಯಕರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದರು.

40 ವರ್ಷದ ತಮ್ಮ ಸಕ್ರಿಯ ರಾಜಕೀಯ ಜೀವನದಲ್ಲಿ ಕಳಂಕ ರಹಿತ ಜೀವನ ನಡೆಸಿದ ಸಿದ್ದರಾಮಯ್ಯ ಕರ್ನಾಟಕ ಕಂಡ ಅಪರೂಪದ ಮತ್ತು ದಿಟ್ಟತನದ ಜನಪರ ರಾಜಕಾರಣಿ. ಅಂತವರ ವಿರುದ್ಧ ಆಪಾದನೆ ಮಾಡಲು ಯಾವುದೇ ಅವಕಾಶ ಸಿಗದೆ 2 ಪಕ್ಷಗಳು ಮೂಡಾ ಹಗರಣವನ್ನು ಕೆದಕುವ ಮೂಲಕ ಕಳಂಕ ಹಚ್ಚಲು ಯತ್ನಿಸಿದ್ದಾರೆ. ಮುಖ್ಯಮಂತ್ರಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡುತ್ತಿರುವುದನ್ನು ಸಹಿಸಲು ಆಗುತ್ತಿಲ್ಲ. ಬಿಜೆಪಿ- ಜೆಡಿಎಸ್ ಮುಖಂಡರೂ ಸಹ ಮುಡಾ ನಿವೇಶನ ಪಡೆದಿದ್ದಾರೆ. ಯಾವುದೋ ಹುರುಳಿಲ್ಲದ ದೂರು ಆಧರಿಸಿ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು‌ ನೋಟಿಸ್ ನೀಡುತ್ತಾರೆಂದರೆ ಇದು ಕುತಂತ್ರವೆಂದು ತಿಳಿಯುತ್ತದೆ. ಅವರ ಕುತಂತ್ರ ಫಲಿಸಲ್ಲ. ಪಕ್ಷದ ಕಾರ್ಯ ಕರ್ತರು ಧೃತಿಗೆಡಬೇಕಿಲ್ಲ. ಕಾಂಗ್ರೆಸ್ ಸರ್ಕಾರ ಸುಭಧ್ರವಾಗಿದೆ. 5 ವರ್ಷಗಳ ಅವಧಿ ಮುಗಿಸಲಿದ್ದು ಯಾವುದೇ ಅನುಮಾನ ಬೇಡ. ರಾಜ್ಯದ ಜನರು ನಮ್ಮ ಜೊತೆಗಿದ್ದಾರೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಬಿಜೆಪಿ- ಜೆಡಿಎಸ್ ಪಕ್ಷದವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿರುವ ತಪ್ಪುಗಳನ್ನು ಮುಚ್ಚಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಜನತೆ ಕಾಂಗ್ರೆಸ್ ಸರ್ಕಾರದ ಪರವಾಗಿ ದ್ದಾರೆ ಎನ್ನುವುದಕ್ಕೆ ಜನಾಂದೋಲನ ಸಮಾವೇಶಕ್ಕೆ ಸೇರಿದ ಜನಸ್ತೋಮವೇ ಸಾಕ್ಷಿ. ಬಡವರ ನಾಯಕ ಸಿದ್ದರಾಮಯ್ಯ ನವರ ವಿರುದ್ಧ ನಡೆಸುತ್ತಿರುವ ಪಿತೂರಿಯ ಪಾದಯಾತ್ರೆ ತಂತ್ರ ಫಲಿಸುವುದಿಲ್ಲ ಎಂದರು.

ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್, ಪುರಸಭಾ ಸದಸ್ಯ ಈರಳ್ಳಿ ರಮೇಶ್, ಕಂಸಾಗರ ಸೋಮಶೇಖರ್, ಅಬಿದ್ ಪಾಶ, ಚಿಕ್ಕಂಗಳ ಪ್ರಕಾಶ್ ನಾಯ್ಕ,ಸೋಮಶೇಖರ್, ಸತೀಶ್ ನಾಯ್ಕ, ಮತ್ತಿತರರು ಇದ್ದರು.

-- ಬಾಕ್ಸ್‌ ಸುದ್ದಿಗೆ-

ರಾಜ್ಯಪಾಲರ ನಡೆ ಖಂಡಿಸಿ ನಾಳೆ ಸೋಮವಾರ ಪಕ್ಷದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯಲ್ಲಿ ಸಮಾವೇಶಗೊಂಡು ಮರವಂಜಿ ವೃತ್ತದ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪಹಾರ ಅರ್ಪಿಸಿದ ನಂತರ ಬಿ.ಎಚ್ ರಸ್ತೆ ಮೂಲಕ ಮೆರ‍ವಣಿಗೆಯಲ್ಲಿ ಕಾರ್ಯಕರ್ತರೊಡನೆ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಗುವುದು. ತಾಲೂಕಿನ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬೇಕು ಎಂದು ಶಾಸಕ ಆನಂದ್ ಮನವಿ‌ ಮಾಡಿದರು.

10ಕೆಕೆಡಿಯು1.

ಕಡೂರು ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಮು ಖಂಡರನ್ನು ಉದ್ದೇಶಿಸಿ ಶಾಸಕ ಕೆ.ಎಸ್. ಆನಂದ್ ಮಾತನಾಡಿದರು.

Share this article