ಯಾವಗಲ್ಲ ಸೇತುವೆ ಜಲಾವೃತ; ಗ್ರಾಮಸ್ಥರಲ್ಲಿ ಬೆಣ್ಣೆಹಳ್ಳದ ಪ್ರವಾಹ ಭೀತಿ

KannadaprabhaNewsNetwork |  
Published : Oct 13, 2024, 01:04 AM IST
12   ರೋಣ 2. ಬೆಣ್ಣಿಹಳ್ಳ‌ ಉಕ್ಕಿ   ಹರಿದಿದ್ದರಿಂದ ಜಲಾವೃತಗೊಂಡ ಯಾವಗಲ್ಲ ಸಮೀಪ ಬೆಣ್ಣಿಹಳ್ಳ ಸೇತುವೆ.12 ರೋಣ 2ಎ.. ಬೆಣ್ಣಿ ಹಳ್ಳ ಪ್ರವಾಹದಿಂದ ನೀರು ಪಾಲಾದ ಗೋವಿನಜೋಳ ಬೆಳೆ. | Kannada Prabha

ಸಾರಾಂಶ

ಮತ್ತೆ ಹುಬ್ಬಳಿ ಭಾಗದ ಕೆಲ ಗ್ರಾಮಗಳಲ್ಲಿ ಮಳೆಯಾಗಿದ್ದರಿಂದ ಸಂಜೆ ಬೆಣ್ಣೆ ಹಳ್ಳದ ನೀರಿನ ಹರಿವು ಏರಿಕೆಯಾಗಿದ್ದು ಕಂಡು ಬಂದಿತು

ರೋಣ: ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಯಾವಗಲ್ಲ ಸಮೀಪದ ಬೆಣ್ಣೆಹಳ್ಳ ತುಂಬಿ ಹರಿದ ಪರಿಣಾಮ ಯಾವಗಲ್ಲ ಸೇತುವೆ 3 ದಿನಗಳಿಂದ ಜಲಾವೃತಗೊಂಡಿದ್ದು, ರೋಣ ಮತ್ತು ನರಗುಂದ,ಯಲ್ಲಮ್ಮಗುಡ್ಡ, ಗೋಕಾಕ ಸಂಚಾರ ಸ್ಥಗಿತಗೊಂಡಿದೆ.

ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ತಾಲೂಕಿನ ಯಾವಗಲ್ಲ ಸಮೀಪ ಬೆಣ್ಣೆಹಳ್ಳದ ಸೇತುವೆ ಮೇಲೆ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಹಳ್ಳದ ಪಾತ್ರದಲ್ಲಿರುವ ಯಾವಗಲ್ಲ, ಯಾ.ಸ.ಹಡಗಲಿ, ಮಾಳವಾಡ, ಮೆಣಸಗಿ, ಅಸೂಟಿ, ಕರಮುಡಿ, ಮೇಗೂರ,ಮೆಣಸಗಿ, ಗುಳಗಂದಿ ಗ್ರಾಮಗಳ ಜನರಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಯಾವಗಲ್ಲ ಸಮೀಪ ಬೆಣ್ಣೆಹಳ್ಳಕ್ಕೆ ನಿರ್ಮಿಸಲಾದ ಸೇತುವೆ ಮೇಲೆ ನೀರಿನ ಹರಿವು ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೆ ಏರಿಕೆಯಾಗುತ್ತಲೇ ಇತ್ತು.ಇದರಿಂದ ಈ ಮಾರ್ಗವಾಗಿ ನರಗುಂದ, ಗೋಕಾಕ, ಸವದತ್ತಿ ಮತ್ತು ರೋಣ, ಗಜೇಂದ್ರಗಡ, ಕುಷ್ಟಗಿ, ಸಿಂದನೂರ, ಬೆಳವಣಕಿ ತೆರಳುವ ವಾಹನಗಳ ಸಂಪೂರ್ಣ ಸಂಚಾರ ಸ್ಥಗೀತಗೊಂಡಿದೆ.ಇದರಿಂದ ವಾಹನ ಸವಾರರು ರೋಣದಿಂದ ನರಗುಂದಕ್ಕೆ ತೆರಳಲು ಬೆಳವಣಕಿಯಿಂದ ನವಲಗುಂದ ಮಾರ್ಗವಾಗಿ ಸುತ್ತುವರೆದು ನರಗುಂದಕ್ಕೆ, ನರಗುಂದದಿಂದ‌ ನವಲಗುಂದ ಮಾರ್ಗವಾಗಿ ರೋಣಕ್ಕೆ ತೆರಳುವಂತಾಯಿತು. ಶನಿವಾರ ಬೆಳಗ್ಗೆ ಹುಬ್ಬಳ್ಳಿ- ಧಾರವಾಡದಲ್ಲಿ ಮಳೆಯ ಪ್ರಮಾಣ ಕುಗ್ಗಿದ್ದು, ಇದರಿಂದ ಬೆಣ್ಣೆಹಳ್ಳದ ನೀರಿನ ಹರಿವು ಮದ್ಯಾಹ್ನದವರೆಗೆ ಕಡಿಮೆಯಾಗಿತ್ತು. ಆದರೆ ಮತ್ತೆ ಹುಬ್ಬಳಿ ಭಾಗದ ಕೆಲ ಗ್ರಾಮಗಳಲ್ಲಿ ಮಳೆಯಾಗಿದ್ದರಿಂದ ಸಂಜೆ ಬೆಣ್ಣೆ ಹಳ್ಳದ ನೀರಿನ ಹರಿವು ಏರಿಕೆಯಾಗಿದ್ದು ಕಂಡು ಬಂದಿತು.

ಜಮೀನುಗಳಿಗೆ ನುಗ್ಗಿದ ನೀರು: ಯಾವಗಲ್ಲ‌ ಸಮೀಪ‌ದ ಬೆಣ್ಣಿಹಳ್ಳ ಸೇತುವೆ ಜಲಾವೃತಗೊಂಡಿದ್ದು, ಬೆಣ್ಣಿಹಳ್ಳಕ್ಕೆ ಹೊಂದಿಕೊಂಡ ಯಾವಗಲ್ಲ, ಯಾ.ಸ. ಹಡಗಲಿ, ಮಾಳವಾಡ, ಅಸೂಟಿ, ಕರಮಡಿ, ಮೆಣಸಗಿ, ಮೇಗೂರ ಭಾಗದ ಜಮೀನುಗಳಿಗೆ ಹಳ್ಳದ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡಿದ್ದು, ಹೆಸರು, ಈರುಳ್ಳಿ, ಶೆಂಗಾ, ಗೋವಿನಜೋಳ, ಹತ್ತಿ, ಮೆನಸಿಕಾಯಿ ಬೆಳೆ ನೀರು ಪಾಲಾಗಿವೆ.

ತಹಸೀಲ್ದಾರ್‌ ನಾಗರಾಜ, ಯಾವಗಲ್ಲ ಸಮೀಪ ಜಲಾವೃತಗೊಂಡ ಸೇತುವೆ ಹಾಗೂ ಜಮೀನುಗಳಲ್ಲಿ ನುಗ್ಗಿದ ನೀರಿನಿಂದ ಹಾನಿಯಾದ ಬೆಳೆಗಳ ವೀಕ್ಷಣೆ ಮಾಡಿದರು. ಕಳೆದ ಮೂರು ದಿನಗಳಿಂದ ಹುಬ್ಬಳ್ಳಿ - ಧಾರವಾಡ ಭಾಗದಲ್ಲಿ ಸುರಿದ ಮಳೆಯಿಂದ ಬೆಣ್ಣೆ ಹಳ್ಳ ಪ್ರವಾಹ ಅಪಾಯ ಮಟ್ಟ ತಲುಪಿದ್ದು, ಆದ್ದರಿಂದ ಹಳ್ಳದ ಪಾತ್ರದ ಗ್ರಾಮಸ್ಥರು ಹಾಗೂ ಜಮೀನುಗಳ ಮಾಲೀಕರು ಮುಂಜಾಗೃತ ಕ್ರಮ ಅನುಸರಿಸಬೇಕು. ಬೆಣ್ಣೆ ಹಳ್ಳ ಮತ್ತು ಮಲಪ್ರಭಾ ನದಿ ದಡದತ್ತ ಯಾರೊಬ್ಬರು ಹೋಗಬಾರದು ಎಂದು ತಹಸೀಲ್ದಾರರು ತಿಳಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...