ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ನಗರದಲ್ಲಿ ಟ್ರಾಫಿಕ್ ಜ್ಯಾಂ ಎಂದರೆ ಮೊದಲಿಗೆ ನೆನಪಾಗೋದೆ ನಂತೂರು. ‘ಮಂಗಳೂರಿಗೆ ಯಾವ ದಿಕ್ಕಿನಿಂದ ಬೇಕಾದರೂ ಹೋಗಿ, ನಂತೂರು ಮೂಲಕ ಮಾತ್ರ ಹೋಗಬೇಡಿ’ ಎನ್ನುವ ಮಾತೂ ಜನಜನಿತ. ಅಷ್ಟರ ಮಟ್ಟಿಗೆ ಕುಖ್ಯಾತಿ ಹೊಂದಿರುವ ನಂತೂರು ಸರ್ಕಲ್‌ನಲ್ಲಿ ಕೊನೆಗೂ ‘ವೆಹಿಕ್ಯುಲರ್ ಓವರ್‌ಪಾಸ್’ ಕಾಮಗಾರಿ ಆರಂಭವಾಗಿದೆ. ಇದರೊಂದಿಗೆ ಟ್ರಾಫಿಕ್ ಜ್ಯಾಂ ಸಮಸ್ಯೆ ಇನ್ನಷ್ಟು ಹೆಚ್ಚಾಗಿದ್ದು, ಧೂಳಿನ ಹೊಸ ಸಮಸ್ಯೆಯೂ ಆರಂಭವಾಗಿದೆ. ರಸ್ತೆಯಂತೂ ಎಷ್ಟು ಹದಗೆಟ್ಟಿದೆ ಎಂದರೆ ಕಲ್ಲು, ಜಲ್ಲಿ, ಮಣ್ಣೇ ಕಾಣುತ್ತದೆಯೇ ಹೊರತು ಡಾಂಬರೇ ಇಲ್ಲ!
ಎರಡು ರಾಷ್ಟ್ರೀಯ ಹೆದ್ದಾರಿಗಳು ಪರಸ್ಪರ ಕೂಡುವ, ನಗರ ಪ್ರವೇಶಕ್ಕೆ ರಹದಾರಿಯೂ ಆಗಿರುವ ನಂತೂರು ಸರ್ಕಲ್‌ನ ಅವ್ಯವಸ್ಥೆ ಇಂದು ನಿನ್ನೆಯದಲ್ಲ. ದಶಕದಿಂದಲೂ ಇದೇ ಗೋಳು. 2007ರೊಳಗೆ ನಂತೂರಲ್ಲಿ ಫ್ಲೈಓವರ್ ನಿರ್ಮಿಸುವ ಪ್ರಸ್ತಾಪ ಇದ್ದರೂ ಸಕಾಲದಲ್ಲಿ ಭೂಸ್ವಾಧೀನವಾಗದೆ ಕಾಮಗಾರಿ ನಡೆಯಲಿಲ್ಲ. ನಂತರ ಭೂಸ್ವಾಧೀನವಾದರೂ ಯೋಜನಾ ವೆಚ್ಚ ಹೆಚ್ಚಿದ್ದರಿಂದ ಗುತ್ತಿಗೆ ಸಂಸ್ಥೆಯು ಕಾಮಗಾರಿಗೆ ಒಪ್ಪದೆ ನೆನೆಗುದಿಗೆ ಬಿದ್ದಿತ್ತು. ಅಲ್ಲಿಂದ ಈವರೆಗೂ ಇಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ಅವ್ಯವಸ್ಥೆ ಕಾಯಂ.ಈಗಿನ ಪರಿಸ್ಥಿತಿ ಏನು?: ನಂತೂರು ಸರ್ಕಲ್‌ನ ನಾಲ್ಕೂ ದಿಕ್ಕಿನಲ್ಲೂ ಓವರ್‌ಪಾಸ್ ಮತ್ತು ಸರ್ವಿಸ್ ರಸ್ತೆಗಾಗಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಮಣ್ಣು ಅಗೆಯುವ ಜೆಸಿಬಿಗಳು ದಿನವಿಡಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಏಳುವ ಧೂಳು ಇಡೀ ಪ್ರದೇಶ ಆವರಿಸುತ್ತದೆ. ಟ್ರಾಫಿಕ್ ಜ್ಯಾಂನಲ್ಲಿ ನಿಲ್ಲುವ ವಾಹನ ಸವಾರರಿಗೆ ನಿತ್ಯ ಹಿಂಸೆ. ಮೇಲಾಗಿ, ಜಂಕ್ಷನ್‌ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಾರೀ ಗುಂಡಿಗಳೆದ್ದು ರಸ್ತೆಯೇ ಮಾಯವಾಗಿದೆ. ದೊಡ್ಡ ದೊಡ್ಡ ಕಲುಗಳೆದ್ದಿವೆ. ಮಳೆಗಾಲ ಮುಗಿದು ತಿಂಗಳಾಗುತ್ತಾ ಬಂದರೂ ತೇಪೆ ಹಾಕುವ ಕೆಲಸ ಇನ್ನೂ ಶುರು ಮಾಡಿಲ್ಲ.
ಟ್ರಾಫಿಕ್ ಜ್ಯಾಂಗೆ ಗುಂಡಿ ಕೊಡುಗೆ!: ಮೊದಲೇ ತೀವ್ರ ಟ್ರಾಫಿಕ್ ಜ್ಯಾಂ ಸಂಭವಿಸುವ ನಂತೂರಿನಲ್ಲಿ ವಾಹನ ದಟ್ಟಣೆ ಸಮಸ್ಯೆ ಇನ್ನಷ್ಟು ಹದಗೆಡಲು ದೊಡ್ಡ ಕೊಡುಗೆ ನೀಡೋದೆ ಇಲ್ಲಿನ ರಸ್ತೆ ಗುಂಡಿಗಳು. ಲಕ್ಷಾಂತರ ವಾಹನಗಳು ನಿತ್ಯ ಸಂಚಾರ ಮಾಡುತ್ತವೆ. ಒಂದು ದಿಕ್ಕಿನಿಂದ ವಾಹನಗಳನ್ನು ಸಂಚರಿಸಲು ಬಿಟ್ಟರೆ ಈ ಗುಂಡಿಗಳಲ್ಲಿ ಬಿದ್ದು ಎದ್ದು ಸರ್ಕಸ್ ಮಾಡುತ್ತಾ ಸಾಗಬೇಕು. ಸರಾಗವಾಗಿ ಸಂಚರಿಸಲು ಸಾಧ್ಯವಾಗದೆ ಮತ್ತಷ್ಟು ಟ್ರಾಫಿಕ್ ಜ್ಯಾಂ ಉಂಟಾಗುತ್ತಿದೆ. ಅಲ್ಲಿನ ಟ್ರಾಫಿಕ್ ಪೊಲೀಸರು, ಹೋಮ್ ಗಾರ್ಡ್ಸ್ ಪಾಡಂತೂ ಹೇಳತೀರದು.ಕೆಲವೊಮ್ಮೆ ರಾ.ಹೆದ್ದಾರಿ 66ರಲ್ಲಿ ಕೆಪಿಟಿವರೆಗೆ, ಅತ್ತ ಬಿಕರ್ನಕಟ್ಟೆ ಫ್ಲೈಓವರ್‌ವರೆಗೆ ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿಯಿದೆ. ಆಂಬ್ಯುಲೆನ್ಸ್‌ಗಳು ಬಂದರೆ ಅದರಲ್ಲಿರೋ ರೋಗಿಗಳ ಪಾಡು ದೇವರೇ ಬಲ್ಲ!
ತೇಪೆ ಏಕೆ ಹಾಕ್ತಿಲ್ಲ?: ‘ಓವರ್‌ಪಾಸ್ ಕಾಮಗಾರಿ ನಡೆಯಲಿ. ಒಳ್ಳೆಯದೇ. ಆದರೆ ಕಾಮಗಾರಿ ಮುಗಿಯುವವರೆಗೆ ಈಗ ಇರುವ ಸಮಸ್ಯೆಗಳನ್ನಾದರೂ ಪರಿಹಾರ ಮಾಡದಿದ್ದರೆ ಹೇಗೆ? ಸರ್ಕಲ್‌ನಲ್ಲಿ ವಾಹನಗಳಿಗೆ ಓಡಾಡಲಿಕ್ಕೇ ಆಗುತ್ತಿಲ್ಲ. ಕನಿಷ್ಠ ರಸ್ತೆಗೆ ತೇಪೆ ಹಾಕುವ ಕೆಲಸವಾದರೂ ಏಕೆ ಮಾಡಲು ಸಾಧ್ಯವಾಗುತ್ತಿಲ್ಲ? ಜತೆಗೆ ಕಾಮಗಾರಿ ಮುಗಿಯುವವರೆಗೆ ಧೂಳು ಏಳದಂತೆ ನಿತ್ಯ ನೀರು ಸಿಂಪರಣೆ ಮಾಡುವ ಕೆಲಸವೂ ಆಗಬೇಕು. ನಾವು ಪುಕ್ಕಟೆ ರಸ್ತೆ ಬಳಕೆ ಮಾಡುತ್ತಿಲ್ಲ ಎನ್ನುತ್ತಾರೆ ಬಿಕರ್ನಕಟ್ಟೆಯ ನಿತ್ಯ ಸಂಚಾರಿ ನಾಗೇಶ್.ಮರಣಕೂಪಕ್ಕೆ ಕೊನೆ ಎಂದು?:
ನಂತೂರು ಸರ್ಕಲ್‌ನ ಅವ್ಯವಸ್ಥೆ ಎಷ್ಟೋ ಜೀವಗಳನ್ನು ಬಲಿ ತೆಗೆದುಕೊಂಡಿವೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ- ವಿವಾಹ ನಿಗದಿಯಾಗಿದ್ದ 27ರ ಯುವತಿ ಸಾವಿಗೀಡಾಗಿದ್ದಾರೆ. ಕಳೆದ ವರ್ಷ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ತಂದೆ ಮಗಳ ಸಾವು, ಕೆಲ ತಿಂಗಳ ಹಿಂದಷ್ಟೆ ಲಾರಿ ಅಡಿಗೆ ಬಿದ್ದು ಯುವಕನ ಸಾವು, ಮಾರ್ಚ್‌ನಲ್ಲಿ ಕಾರು ಅಪಘಾತಕ್ಕೀಡಾಗಿ ಯುವಕ ಮೃತ್ಯು.. ಹೀಗೆ ಸಾಲು ಸಾಲು ಸಾವುಗಳು ಸಂಭವಿಸುತ್ತಿವೆ. ಸಣ್ಣಪುಟ್ಟ ಅಪಘಾತಗಳಂತೂ ನಿತ್ಯದ ಅವಸ್ಥೆ. ರಸ್ತೆ ಹದಗೆಟ್ಟು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬೀಳುತ್ತಿರುವುದು ನಡೆಯುತ್ತಲೇ ಇದೆ. ಆದರೂ ದಿವ್ಯ ನಿರ್ಲಕ್ಷ್ಯ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಂತೂ ಕಣ್ಣಿಗೆ ಬಟ್ಟೆ ಕಟ್ಟಿ ಕೂತಿದೆ.ಓವರ್‌ಪಾಸ್ ಹೇಗಿರಲಿದೆ?ನಂತೂರಲ್ಲಿ ನಡೆಯುತ್ತಿರುವುದು ವೆಹಿಕ್ಯುಲರ್ ಓವರ್‌ಪಾಸ್. ಅಂದರೆ ಕದ್ರಿಯಿಂದ ಬಿಕರ್ನಕಟ್ಟೆ ಸಂಪರ್ಕಿಸುವ ರಸ್ತೆಯು ರಾಷ್ಟ್ರೀಯ ಹೆದ್ದಾರಿಯ ಮೇಲ್ಭಾಗದಲ್ಲಿ ಹಾದುಹೋಗುತ್ತದೆ. ಪಂಪ್‌ವೆಲ್‌ನಿಂದ ಕೆಪಿಟಿ ಕಡೆಗೆ ಹೋಗುವ ಹೆದ್ದಾರಿ ಅಂಡರ್‌ಪಾಸ್‌ನಂತೆ ಇರಲಿದೆ. ಇದರಿಂದ ಪಂಪ್‌ವೆಲ್ ಮತ್ತು ಕೆಪಿಟಿ ನಡುವೆ ರಾ.ಹೆದ್ದಾರಿ 66ರಲ್ಲಿ ತಡೆರಹಿತ ಸಂಚಾರ ಸಿಗಲಿದೆ ಎನ್ನುವುದು ಇದರ ಕಾನ್ಸೆಪ್ಟ್.
ಆದರೆ ಪಂಪ್‌ವೆಲ್‌ನಿಂದ ಬಿಕರ್ನಕಟ್ಟೆ ಕಡೆಗೆ, ಕೆಪಿಟಿಯಿಂದ ಕದ್ರಿ ಕಡೆಗೆ, ಬಿಕರ್ನಕಟ್ಟೆಯಿಂದ ಕೆಪಿಟಿ, ಕದ್ರಿಯಿಂದ ಪಂಪ್‌ವೆಲ್ ಕಡೆಗೆ ಹೋಗುವ ವಾಹನಗಳು ಮುಖಾಮುಖಿಯಾಗುತ್ತವೆ. ಇದರ ನಿರ್ವಹಣೆಯ ಅಗತ್ಯ ಬರಲಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಸುರಕ್ಷತಾ ನಿಧಿಯಿಂದ 51 ಕೋಟಿ ರು. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಸುವ ಗಡುವು ನೀಡಲಾಗಿದೆ. ಕಾಮಗಾರಿ ಮುಗಿದ ಬಳಿಕ ಮತ್ತೆ ಸಂಚಾರ ಸಮಸ್ಯೆ ಬಾರದಿರಲಿ ಎನ್ನುವುದು ನಾಗರಿಕರ ಆಶಯ.