ಜೆ.ನಾಗೇಂದ್ರ, ಕನ್ನಡಪ್ರಭ ವಾರ್ತೆ ಪಾವಗಡ
ಅದೊಂದು ಗ್ರಾಮ ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಅಲ್ಲಿನ ಜನರಿಗೆ ಕತ್ತಲೆಯಂದರೆ ಭಯ. 40 ವರ್ಷಗಳಿಂದ ಜನ ವಾಸವಿದ್ದರೂ ಸಹ ಅಲ್ಲಿನ ಜನರಿಗೆ ಸರ್ಕಾರಿ ಸೌಲಭ್ಯಗಳು ತಲುಪಿಲ್ಲ.ಇಂದಿನ ಕಾಲದಲ್ಲೂ ಈ ರೀತಿಯ ಗ್ರಾಮವೊಂದು ಇದೆ ಎನ್ನುವುದೇ ಆಶ್ಚರ್ಯಕರ ಸಂಗತಿಯಾದರೂ ಇದು ಸತ್ಯ. ಇನ್ನೊಂದು ವಿಚಿತ್ರ ಎಂದರೆ ಈ ಗ್ರಾಮದ ಅಸ್ತಿತ್ವದ ಕುರಿತು ಯಾವೊಬ್ಬ ಜನಪ್ರತಿನಿಧಿಗಳು ಸಹ ಇಲ್ಲಿಯವರೆಗೂ ಕನಿಷ್ಠ ಮಟ್ಟದ ಚಿಂತನೆ ಮಾಡದೆ ಇರುವುದು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಾಗಲಿ, ರಸ್ತೆಯಾಗಲಿ, ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಾಗಲಿ ಏನು ಇಲ್ಲ.
ಈ ಮೇಲಿನ ಎಲ್ಲಾ ಇಲ್ಲಗಳಿಗೆ ಹಾಗೂ ದಯನೀಯ ಸ್ಥಿತಿಯಲ್ಲಿರುವ ಗ್ರಾಮವಿರುವುದು ಪಾವಗಡ ತಾಲೂಕಿನ ಸಾಸಲಕುಂಟೆ ವ್ಯಾಪ್ತಿಯಲ್ಲಿ. ಗ್ರಾಮದ ಹೆಸರು ಕರೆಗುಟ್ಟೆ. ಈ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಜನಸಂದಣಿ ಇದ್ದು ಬಹುತೇಕರು ಅನಕ್ಷರಸ್ಥರಾಗಿದ್ದು, ಪಶುಪಾಲನೆ, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಗ್ರಾಮ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಭಾಗದಲ್ಲಿದ್ದು ಕರ್ನಾಟಕದ ಭೂಪಟದಲ್ಲಿದ್ದರೂ ಸಹ ಕರ್ನಾಟಕ ಸರ್ಕಾರ ಇಲ್ಲಿಯವರೆಗೂ ಜಾರಿಗೊಳಿಸಿರುವ ಯಾವೊಂದು ಯೋಜನೆಗಳು ತಲುಪದೆ ಇರುವುದು ಹಾಗೂ ಈ ಯೋಜನೆಗಳು ನಮ್ಮ ಗ್ರಾಮಕ್ಕೆ ಸಿಗುತ್ತವೆ ಎಂದು ಅಲ್ಲಿನ ಜನ ಅರಿಯದೇ ಇರುವುದು ದೊಡ್ಡ ದುರಂತ.ಕತ್ತಲಾದರೆ ಭಯ
ಕರೆಗುಟ್ಟೆಗೆ ರಸ್ತೆಯಿಲ್ಲ. ಪರಿಣಾಮ ಬಸ್ ಹಾಗೂ ಆಟೋ ಇತರೆ ಯಾವುದೇ ವಾಹನ ಗ್ರಾಮಕ್ಕೆ ಬರುವುದಿಲ್ಲ. ಅಲ್ಲದೇ ಗ್ರಾಮಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲ. ಸಂಜೆ 6ಗಂಟೆಯ ಬಳಿಕ ಕಗ್ಗತಲೇ ಆವರಿಸುತ್ತದೆ. ರಾತ್ರಿ ವೇಳೆ ಹೊರಹೋಗಲು ಸಾಧ್ಯವಾಗುತ್ತಿಲ್ಲ. ಈ ಊರು ಬೆಟ್ಟದ ತಪ್ಪಲಿನಲ್ಲಿರುವ ಕಾರಣ, ರಾತ್ರಿ ವೇಳೆ ಸೌದೆ ಹತ್ತಿಸಿಕೊಂಡು ಬೆಂಕಿ ಬೆಳಕಿನಲ್ಲಿ ಓಡಾಡಬೇಕು. ಕಾಡು ಪ್ರಾಣಿಗಳಾದ ಕರಡಿ, ಕಾಡುಹಂದಿ, ನರಿ ಆಗಾಗ ಗ್ರಾಮದೊಳಗೆ ಪ್ರವೇಶಿಸುವುದರಿಂದ ಭಯಾದ ವಾತವರಣ ಸೃಷ್ಟಿಯಾಗಿದೆ. ಗ್ರಾಮದ ಬಹುತೇಕ ಗುಡಿಸಲುಗಳು ಗರಿಗಳಿಂದ ನಿರ್ಮಾಣವಾಗಿದ್ದು ಚೇಳು ಹಾಗೂ ಹಾವುಗಳ ಉಪಟಳದಿಂದ ಜನ ತತ್ತರಿಸಿ ಹೋಗಿದ್ದಾರೆ.ಬಾಕ್ಸ್
ಕೇಂದ್ರ ಸರ್ಕಾರ ಆಧಾರ ಕಾರ್ಡ್ ಕಡ್ಡಾಯ ಮಾಡಿ ದಶಕಗಳೆ ಕಳೆದಿದ್ದರೂ ಸಹ ಇಲ್ಲಿನ ಜನರಿಗೆ ಇಂದಿಗೂ ಆಧಾರ ಕಾರ್ಡ್ ಮರಿಚಿಕೆಯಾಗಿದೆ. ಇರುವ 25-30 ಕುಟುಂಬಗಳ ಸದಸ್ಯರಿಗೆ ಇಲ್ಲಿಯವರಿಗೂ ಆಧಾರ್ ಕಾರ್ಡ್ ಮಾಡಿಸಿಲ್ಲ. ಇದರಿಂದಾಗಿ ಸರ್ಕಾರದ ಯಾವುದೇ ಯೋಜನೆಗಳ ಸೌಲಭ್ಯ ತಲುಪಿಲ್ಲ. ಗ್ಯಾರೆಂಟಿ ಯೋಜನೆಗಳ ಕುರಿತು ಸರ್ಕಾರ ಉಸ್ತುವಾರಿ ಸಮಿತಿ ರಚನೆ ಮಾಡಿದ್ದರೂ ಸಹ ಯಾರೊಬ್ಬರು ಈ ಗ್ರಾಮದತ್ತ ಸುಳಿಯದೆ ಇರುವುದು ಸರ್ಕಾರದ ಕಾರ್ಯ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ಗ್ರಾಮದಲ್ಲಿ ಬೆಳಕಿಲ್ಲಕುಟೀರ್ ಜ್ಯೋತಿ ಸೇರಿದಂತೆ ಅನೇಕ ವಿದ್ಯುತ್ ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಾರಿಯಾಗಿದ್ದರೂ ಇಲ್ಲಿನ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ. ಇದರಿಂದಾಗಿ ಇಲ್ಲಿನ ಜನರಿಗೆ ಹೊರಗಿನ ಜಗತ್ತಿನ ಯಾವುದೇ ಆಗುಹೋಗುಗಳ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲ. ಕನ್ನಡಪ್ರಭ ಪತ್ರಿಕೆ ಇಲ್ಲಿನ ಜನರನ್ನು ಮಾತನಾಡಿಸಿದಾಗ ಅಲ್ಲಿನ ಗ್ರಾಮಸ್ಥರು ಕರೆಂಟ್ ಇಲ್ಲ ಹೀಗಾಗಿ ನಮಗೇನು ಗೊತ್ತಿಲ್ಲ ಎಂದು ಉತ್ತರಿಸಿದ್ದು ಸಾಕಷ್ಟು ಆಶ್ಚರ್ಯ ಮೂಡಿಸಿತು.
ಮತದಾನಕ್ಕೆ ಮಾತ್ರ ಅವಕಾಶಇಲ್ಲಿನ ಬಹುತೇಕ ಕುಟುಂಬಗಳು ಜಮೀನಿನ ಮೇಲೆ ಅವಲಂಬಿತಾಗಿದ್ದರೆ ಇನ್ನೂ ಕೆಲವರು ಆ ಜಮೀನಿನಲ್ಲಿ ಕೆಲ ಮಾಡುವ ಮೂಲಕ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ. ನಮ್ಮ ಊರು ಯಾವ ಗ್ರಾಪಂಗೆ ಸೇರಿದೆ ಎಂಬ ಅರಿವು ಕೂಡ ಇವರಲ್ಲಿ ಕಾಣುವುದು ಅಪರೂಪ. ಇಲ್ಲಿ ಚುನಾವಣೆಯ ವೇಳೆ, ಕೇಂದ್ರಸ್ಥಾನ ಸಾಸಲಕುಂಟೆ ಗ್ರಾಮದಲ್ಲಿ ಮತಘಟ್ಟೆ ಸ್ಥಾಪಿಸಿ, ಗುರ್ತಿನ ಚೀಟಿ ಹೊಂದಿದವರಿಂದ ಮತ ಪಡೆಯುವ ಜಿಲ್ಲಾಡಳಿತ ಅಧಿಕಾರಿಗಳು ಹಾಗೂ ಮತ ಪಡೆದು ಗೆದ್ದು ಬಂದ ಜನಪ್ರತಿನಿಧಿಗಳು ಇಲ್ಲಿಗೆ ಮತ್ತೆ ಬರುವುದೇ ಇಲ್ಲ. ಈಗಾಗಿ ಇಲ್ಲಿನ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿವೆ.
ಶಾಲೆಯಿಲ್ಲಇಲ್ಲಿನ ಮಕ್ಕಳಿಗೆ ಶಾಲೆಯಿಲ್ಲ. ಮಕ್ಕಳು ವಿದ್ಯಾಭ್ಯಾಸಕ್ಕೆ ಬೇರೆ ಊರುಗಳ ಸರ್ಕಾರಿ ಶಾಲೆಗಳಿಗೆ ಕಳುಹಿಸುವ ಅನಿರ್ವಾಯತೆ ಇದೆ. ಶಾಲೆಗೆ ಹೋಗಬೇಕಾದರೆ ಇಲ್ಲಿಂದ ಸಾಸಲಕುಂಟೆ ಅಥವಾ ಆಂಧ್ರದ ಕುಂದರಿಪಿ ಗ್ರಾಮದ ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು. ಮಳೆಗಾಲದಲ್ಲಿ ಮಕ್ಕಳು ಶಾಲೆಗೆ ಹೋಗುವುದೇ ಕಡಿಮೆ. ರಸ್ತೆ ಇಲ್ಲವಾದ್ದರಿಂದ ಮಕ್ಕಳನ್ನು ಸುರಕ್ಷಿತವಾಗಿ ಕಳುಹಿಸುವುದು ಹಾಗೂ ಮರಳಿ ಕರೆ ತರುವುದು ಸಾಧನೆಗೆ ಸಮವಾಗಿದೆ. ಬಹುತೇಕ ಮನೆಗಳು ಗರಿಯಿಂದ ಮಾಡಿರುವುದರಿಂದ ಮಕ್ಕಳ ಪಠ್ಯಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ಮಳೆಯಿಂದ ಕಾಪಾಡಿಕೊಳ್ಳುವುದು ಸಹ ಇಲ್ಲಿನ ಜನರಿಗೆ ಇರುವ ಮತ್ತೊಂದು ಸವಾಲು.
ಒಟ್ಟಿನಲ್ಲಿ ಕರೆಗುಟ್ಟ ಗ್ರಾಮಕ್ಕೆ ಅಭಿವೃದ್ಧಿಯ ಕರೆ ಬರುವುದು ಯಾವಾಗ ಎಂದು ಅಲ್ಲಿನ ಜನ ಜಾತಕ ಪಕ್ಷಿಗಳಂತೆ ಕಾಯುತ್ತಿರುವುದು ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದೆ.ಕೋಟ್... 1
ತಾಲೂಕಿನ ಸಾಸಲಕುಂಟೆ ಗ್ರಾಪಂನ ಕರೆಗುಟ್ಟೆ ಗ್ರಾಮದ ಮೂಲಭೂತ ಸೌಲಭ್ಯ ಮರಿಚಿಕೆ ಆಗಿರುವ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದ್ದು ಈ ಸಂಬಂಧ ಕೂಡಲೇ ಅಗತ್ಯ ಸೌಲಭ್ಯ ಕಲ್ಪಿಸಿ ವರದಿ ಸಲ್ಲಿಸುವಂತೆ ಈಗಾಗಲೇ ತಹಸೀಲ್ದಾರ್ ಹಾಗೂ ತಾಪಂ ಇಒಗೆ ಆದೇಶಿಸಲಾಗಿದೆ- ಎಚ್.ವಿ. ವೆಂಕಟೇಶ್, ಪಾವಗಡ ಶಾಸಕಕೋಟ್ 2
ಗ್ರಾಮದ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲಾಗಿದೆ. ಸಾಸಲಕುಂಟೆ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದ್ದು ಆದಷ್ಟ ಬೇಗ ಅಲ್ಲಿನ ಜನರಿಗೆ ಆಧಾರ್ ಕಾರ್ಡ್ ಹಾಗೂ ನರೇಗಾ ಜಾಬ್ ಕಾರ್ಡ್ ಮಾಡಿಕೊಡಲಾಗುವುದು. ಉಳಿದ ಅಭಿವೃದ್ಧಿ ಕುರಿತು ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುವುದು- ಜಾನಕಿರಾಮ್ ತಾಪಂ ಇಒ