ಕಟ್ಟಡ ಕೆಡವಿದ ತ್ಯಾಜ್ಯ ವಿಲೇವಾರಿಗೆ ಎಲ್ಲಿದೆ ಜಾಗ ?

KannadaprabhaNewsNetwork | Published : Dec 30, 2024 1:03 AM

ಸಾರಾಂಶ

ಚಿತ್ರದುರ್ಗ ನಗರದ ಪ್ರಮುಖ ರಸ್ತೆಯ ಅಗಲೀಕರಣ ಕೈಗೆತ್ತಿಕೊಂಡಿರುವ ನಗರಸಭೆ ಮುಂದೆ ಹಲವಾರು ಸವಾಲುಗಳಿವೆ. ನಾಲ್ಕಾರು ಮಂದಿ ಕುಳಿತುಕೊಂಡು ತೀರ್ಮಾನ ಕೈಗೊಂಡಾಕ್ಷಣ ಎಲ್ಲವೂ ಸುಲಲಿತವಾಗುವುದಿಲ್ಲ.

ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭ ವಾರ್ತೆ ಚಿತ್ರದುರ್ಗಚಿತ್ರದುರ್ಗ ನಗರದ ಪ್ರಮುಖ ರಸ್ತೆಯ ಅಗಲೀಕರಣ ಕೈಗೆತ್ತಿಕೊಂಡಿರುವ ನಗರಸಭೆ ಮುಂದೆ ಹಲವಾರು ಸವಾಲುಗಳಿವೆ. ನಾಲ್ಕಾರು ಮಂದಿ ಕುಳಿತುಕೊಂಡು ತೀರ್ಮಾನ ಕೈಗೊಂಡಾಕ್ಷಣ ಎಲ್ಲವೂ ಸುಲಲಿತವಾಗುವುದಿಲ್ಲ. ಚಳ್ಳಕೆರೆ ವೃತ್ತದಿಂದ ಕನಕ ಪ್ರತಿಮೆ ತನಕ ಬರೋಬ್ಬರಿ ಮೂರು ಕಿಮೀನಷ್ಟು ಎರಡೂ ಬದಿಯ ರಸ್ತೆ ಅಗಲೀಕರಣದಿಂದಾಗಿ ಸೃಷ್ಟಿಯಾಗುವ ಕಟ್ಟಡ ಕೆಡವಿದ ತ್ಯಾಜ್ಯ ವಿಲೇವಾರಿ ಮಾಡುವುದೂ ಕೂಡ ಸಾಹಸದ ಕೆಲಸ.

ಸಾವಿರಾರು ಲೋಡುಗಳಷ್ಟು ತ್ಯಾಜ್ಯವ ಒಂದೆಡೆ ಸಂಗ್ರಹಿಸಲು ಕನಿಷ್ಠ ಐದು ಎಕರೆ ಭೂಮಿ ಬೇಕು. ಈ ತ್ಯಾಜ್ಯವ ಹಾಲಿ ಹಂಪಯ್ಯನಮಾಳಿಗೆ ಇರುವ ನಗರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸುರಿಯುವಂತಿಲ್ಲ. ಅಲ್ಲಿ ಒಣ ಕಸ ಹಾಗೂ ಹಸಿ ಕಸ ಸಂಗ್ರಹಿಸಲಷ್ಟೇ ಬಳಸಬೇಕು. ಇಂತಹ ಗಾರ್ಬೇಜ್ (ಕಟ್ಟಡ ತ್ಯಾಜ್ಯ) ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಬೇಕು. ನಗರಾಭಿವೃದ್ಧಿ ಇಲಾಖೆ ಈ ಬಗ್ಗೆ ಸೂಚನೆಗಳ ನೀಡಿದೆ.

ಹಾಗೆ ನೋಡಿದರೆ ನಗರಸಭೆ ಕಟ್ಟಡ ಕೆಡವಿದ ತ್ಯಾಜ್ಯ ವಿಲೇವಾರಿಗೆ ಎಂದೋ ವ್ಯವಸ್ಥಿತ ಜಾಲ ಹೊಂದಬೇಕಿತ್ತು. ದೂರದೃಷ್ಟಿತನದ ಕೊರತೆ ಕಾರಣಕ್ಕೆ ಅದು ಸಾಧ್ಯವಾಗಿಲ್ಲ. ಚಿತ್ರದುರ್ಗಕ್ಕೆ ಐತಿಹಾಸಿಕ ನಗರವೆಂಬ ಸ್ಪರ್ಶವಿದೆ. ಹಳೆ ಕಟ್ಟಡಗಳ ಕೆಡವಿ ಹೊಸ ಕಟ್ಟಡಗಳು ಇಲ್ಲಿ ವಿಪರೀತವಾಗಿ ನಿರ್ಮಾಣವಾಗುತ್ತಿವೆ. ಕಟ್ಟಡ ಕೆಡವುದಕ್ಕಷ್ಟೇ ಅನುಮತಿ ನೀಡುವ ನಗರಸಭೆ ತ್ಯಾಜ್ಯ ಎಲ್ಲಿ ಸುರಿಯುತ್ತೀರ ಎಂದು ಪ್ರಶ್ನೆ ಮಾಡುತ್ತಿಲ್ಲ. ಪರಿಣಾಮ ಗ್ರಾಮೀಣ ಪ್ರದೇಶದ ರಸ್ತೆಗಳ ಇಕ್ಕೆಲಗಳಲ್ಲಿ ಒಯ್ದುಸುರಿಯಲಾಗುತ್ತಿದೆ.

ಇದಕ್ಕಾಗಿ ರಾತ್ರಿ ಕಾರ್ಯಾಚರಣೆ ಮಾಡಲೆಂದೇ ಟ್ರಾಕ್ಟರ್‌ಗಳಿವೆ. ಹಗಲು ತ್ಯಾಜ್ಯ ಸುರಿದರೆ ನೋಡಿದವರು ಬೈಯತ್ತಾರೆಂಬ ಕಾರಣಕ್ಕೆ ರಾತ್ರಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ನಗರದ ಹೊಲಸು ಹಳ್ಳಿಗಳಿಗೆ ಪಸರಿಸಲಾಗುತ್ತಿದೆ. ತಮಟಕಲ್ಲು ಗ್ರಾಮಕ್ಕೆ ಹೋಗುವ ರಸ್ತೆ, ಯಾದವ ಗುರುಪೀಠದ ಬಳಿ ಇರುವ ರಸ್ತೆ, ಹಳೇ ಜೈಲು ರಸ್ತೆ, ತುರುವನೂರುಗೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ನಗರದ ಹಳೇ ಕಟ್ಟಡ ಕೆಡವಿದ ತ್ಯಾಜ್ಯ ಸುರಿಯಲಾಗಿದೆ.

ಕನಿಷ್ಠ ಐದು ಎಕರೆ ಭೂಮಿ ಬೇಕು

ರಸ್ತೆ ಅಗಲೀಕರಣದ ಕಾರಣಕ್ಕಾಗಿ ಅಲ್ಲದಿದ್ದರೂ ನಿತ್ಯವೂ ಸಂಗ್ರಹವಾಗುವ ಕಟ್ಟಡ ಕೆಡವಿದ ತ್ಯಾಜ್ಯ ನಿರ್ವಹಣೆಗೆ ಕನಿಷ್ಠ ಐದು ಎಕರೆ ಭೂಮಿ ಬೇಕು. ನಗರದ ತ್ಯಾಜ್ಯವ ನಿಗದಿತ ಜಮೀನಿಗೆ ಸಾಗಿಸಲು ಪ್ರತ್ಯೇಕ ವಾಹನ ವ್ಯವಸ್ಥೆ ಬೇಕು. ಹಾಲಿ ಕಸ ಸಾಗಿಸುವ ವಾಹನದಲ್ಲಿ ಈ ತ್ಯಾಜ್ಯ ತುಂಬಿಕೊಂಡು ಹೋಗುವಂತಿಲ್ಲ. ಟೆಂಡರ್ ಕರೆದು ಎಲ್ಲವನ್ನು ನಿರ್ವಹಣೆ ಮಾಡಬೇಕು. ಕಟ್ಟಡ ತ್ಯಾಜ್ಯ ಸಂಗ್ರಹದ ಪ್ರದೇಶ ನಗರದಿಂದ ಎಷ್ಟು ದೂರದಲ್ಲಿದೆ. ಅಲ್ಲಿಗೆ ತ್ಯಾಜ್ಯ ಸಾಗಿಸಲು ಎಷ್ಟು ಖರ್ಚು ಬರುತ್ತದೆ ಎಂಬುದನ್ನು ಪ್ರಾದೇಶಿಕ ಸಾರಿಗೆ ಇಲಾಖೆ ನೆರವಿನಿಂದ ಲೆಕ್ಕಾಚಾರ ಹಾಕಬೇಕು. ವಾಹನಕ್ಕೆ ಜಿಪಿಎಸ್ ಅಳವಡಿಸಿ ಅದು ಓಡಾಡುವ ಮಾರ್ಗ ದಾಖಲು ಪಡಿಸಬೇಕು. ಕಟ್ಟಡ ಕೆಡವಿದ ತ್ಯಾಜ್ಯ ರವಾನೆಗೆ ಮಾಲೀಕರಿಂದಲೇ ಸಾಗಾಣಿಕೆ ವೆಚ್ಚ ವಸೂಲು ಮಾಡಬೇಕು. ಇಂತಹದ್ದೊಂದು ವ್ಯವಸ್ಥಿತ ಜಾಲದ ಮೂಲಕ ತ್ಯಾಜ್ಯ ವಿಲೇವಾರಿ ಮಾಡಬೇಕು. ಇದುವರೆಗೂ ಇಂತಹ ವ್ಯವಸ್ಥೆ ನಗರಸಭೆ ಹೊಂದಿಲ್ಲ.

ರಸ್ತೆ ಅಗಲೀಕರಣದ ತ್ಯಾಜ್ಯ ಸಂಗ್ರಹಿಸಲು ತುರ್ತಾಗಿ ಐದು ಎಕರೆ ಭೂಮಿಯ ಜಿಲ್ಲಾಡಳಿತದಿಂದ ಮಂಜೂರು ಮಾಡಿಸಿಕೊಂಡ ನಂತರವೇ ಕಾರ್ಯಾಚರಣೆ ಮಾಡಬೇಕು. ಇಲ್ಲವಾದರೆ ಪರಿಸರ ಹಾನಿಯಂತಹ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ. ಹಳೇ ಕಟ್ಟಡದ ತ್ಯಾಜ್ಯ ಆರೋಗ್ಯಕ್ಕೆ ಹಾನಿಕರ. ಅದರಿಂದ ಪಸರಿಸುವ ಧೂಳು ಶ್ವಾಸಕೋಶಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ.

ಹಂಪಯ್ಯನಮಾಳಿಗೆ ಬಳಿ ಚಿತ್ರದುರ್ಗ ನಗರಸಭೆಯ ಘನತ್ಯಾಜ್ಯ ನಿರ್ಹವಣಾ ಘಟಕವಿದೆ. ಇದರಿಂದ ರೈತರು ಈಗಾಗಲೇ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಕಟ್ಟಡ ನಿರ್ಮಾಣದ ತ್ಯಾಜ್ಯವನ್ನೇನಾದರೂ ತಂದು ಇಲ್ಲಿ ಸುರಿದರೆ ಅದರ ಧೂಳು ಬೆಳೆಗಳ ಮೇಲೆ ಕುಳಿತು ಪರಿಣಾಮ ಬೀರಬಹುದು. ಕಟ್ಟಡ ತ್ಯಾಜ್ಯವ ಸಂಗ್ರಹಕ್ಕೆ ನಮ್ಮದೇನೂ ವಿರೋಧವಿಲ್ಲ. ವೈಜ್ಞಾನಿಕವಾಗಿ ಸಂಗ್ರಹ ಮಾಡಲಿ.ಹಂಪಯ್ಯನ ಮಾಳಿಗೆ ಧನಂಜಯ, ಅಧ್ಯಕ್ಷ, ರೈತ ಸಂಘದ ಜಿಲ್ಲಾ ಘಟಕ.

Share this article