ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಸಣ್ಣದೊಂದು 60x40 ಅಳತೆಯ ಮನೆ ಕಟ್ಟೋಕೆ ಉಸ್ತುವಾರಿಗಾಗಿ ಓರ್ವ ಇಂಜಿನಿಯರ್, ಮೇಸ್ತ್ರಿ, ಹತ್ತಾರು ಮಂದಿ ಕೆಲಸಗಾರರು, ಬ್ಯಾಂಕ್ ನಲ್ಲಿ ಒಂದಿಷ್ಟು ಸಾಲ, ಕಬ್ಬಿಣ, ಸಿಮೆಂಟ್ ಅಂಗಡಿಯಲ್ಲಿ ಬಾಕಿ ಮೊತ್ತದ ನಾಲ್ಕಾರು ಬಿಳಿ ಚೀಟಿ ಇರುತ್ತೆ. ಆದರೆ, 323 ಅಡಿ ಎತ್ತರದ ಪ್ರತಿಮೆ ನಿರ್ಮಿಸಲು ಎಷ್ಟು ಮಂದಿ ಇಂಜಿನಿಯರ್ ಗಳು, ಎಷ್ಟು ಮಂದಿ ತಜ್ಞರು, ಕೆಲಸಗಾರರು ಇರಬೇಕು. ಅವರಿಗೆಲ್ಲ ವಸತಿ ಸೇರಿದಂತೆ ಇತರೆ ಸೌಲಭ್ಯ ಹೇಗೆ ಕಲ್ಪಿಸಬೇಕು ಎಂಬುದು ತಕ್ಷಣದ ಲೆಕ್ಕಾಚಾರಕ್ಕೆ ನಿಲುಕದು. ಮುರುಘಾಮಠದಿಂದ ನಿರ್ಮಾಣವಾಗುತ್ತಿರುವ ಬಸವ ಪ್ರತಿಮೆ ಪ್ರದೇಶದಲ್ಲಿ ಇಂತಹ ಧಾವಂತಗಳಾಗಲೀ, ಯಂತ್ರಗಳ ಸದ್ದು ಹಾಗೂ ಹಾಗೂ ಕಾರ್ಮಿಕರ ಸಮೂಹ ಕಂಡು ಬಂದಿದ್ದೇ ಕಡಿಮೆ.
ಇದುವರೆಗೂ ವಿಶ್ವದಲ್ಲಿ ನಿರ್ಮಾಣವಾದ ಅತಿ ಎತ್ತರದ ಪ್ರತಿಮೆಗಳ ಹಿಂದೆ ಬಹುದೊಡ್ಡ ತಾಂತ್ರಿಕತೆ, ಕಾರ್ಮಿಕರ ಶ್ರಮ, ಉನ್ನತ ಮಟ್ಟದ ಕುಸುರಿ, ಯೋಜನಾ ಬದ್ಧ ನಿರೂಪಣೆ ಎಲ್ಲವೂ ಇದೆ. ಅಂತಹ ಚಿತ್ರಣಗಳು ಬಸವಪುತ್ಥಳಿ ನಿರ್ಮಾಣದ ಹಿಂದೆ ಕಾಣಿಸುತ್ತಿಲ್ಲ. 323 ಅಡಿ ಎತ್ತರದ ಬಸವಪ್ರತಿಮೆ ನಿರ್ಮಾಣ ಆರಂಭವಾಗಿ ಹೆಚ್ಚು ಕಡಿಮೆ ಹತ್ತು ವರ್ಷಗಳಾಗಿವೆ. ಮುರುಘಾಮಠದ ಮೂಲಗಳ ಪ್ರಕಾರ 2024 ರ ವೇಳೆಗೆ ಪುತ್ಥಳಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಇನ್ನು ತಳಪಾಯದಲ್ಲಿ ಇದೆ. 300 ಇಂಜಿನಿಯರ್ ಕೆಲಸ ಮಾಡಿದ್ದರು.ಗುಜರಾತ್‌ನಲ್ಲಿ ನಿರ್ಮಾಣ ಮಾಡಲಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ವಿಶ್ವದಲ್ಲಿಯೇ ಅತಿ ಎತ್ತರದ್ದಾಗಿದೆ. ಒಟ್ಟು ಎತ್ತರ 240 ಮೀಟರ್(790 ಅಡಿ) ಇದ್ದು ಎಲ್ ಅ್ಂಡ್ ಟಿ ಕಂಪನಿಯ 300 ಇಂಜಿನಿಯರ್ ಗಳು, ಮೂರು ಸಾವಿರ ಕಾರ್ಮಿಕರು ಮೂರುವರೆ ವರ್ಷದಲ್ಲಿ 3050 ಕೋಟಿ ರುಪಾಯಿ ವೆಚ್ಚದ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆ ಕಾರ್ಯ ಮುಗಿಸಿದ್ದರು. ಚೀನಾದ ತಜ್ಞ ಇಂಜಿನಿಯರ್ ಗಳ ತಂಡ ಮೇಲುಸ್ತುವಾರಿ ಮಾಡಿತ್ತು. 180 ಕಿಮೀ ವೇಗವಾಗಿ ಗಾಳಿ ಬೀಸಿದರೂ ಪ್ರತಿಮೆ ತಡೆದುಕೊಳ್ಳುವ ಸಾಮರ್ಥ್ಯವಿದೆ. ರಿಕ್ಟರ್ ಮಾಪಕದಲ್ಲಿ 6.5 ದಾಖಲಾಗಿ ಭೂಮಿ ಕಂಪಿಸಿದರೂ ಪ್ರತಿಮೆಗೆ ಏನೂ ಆಗುವುದಿಲ್ಲ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಬಳಸಿ ಪ್ರತಿಮೆ ಅಂತಿಮಗೊಳಿಸಲಾಗಿದೆ.
ಚೀನಾದ ಗೌತಮ ಬುದ್ಧ ಪ್ರತಿಮೆ(153 ಮೀಟರ್) ಹಾಗೂ ನ್ಯಾಯಾರ್ಕ್ ನ ಲಿಬರ್ಟಿ ಪ್ರತಿಮೆ (93 ಮೀಟರ್) ನಿರ್ಮಾಣದ ಹಿಂದೆಯೂ ಉನ್ನತ ಮಟ್ಟದ ತಂತ್ರಜ್ಞಾನವಿದೆ. 323 ಅಡಿಯ ಚಿತ್ರದುರ್ಗದ ಬಸವ ಪುತ್ಥಳಿ ನಿರ್ಮಾಣದ ಹಿಂದೆ ಇಂತಹ ಯಾವುದೇ ತಂತ್ರಜ್ಞಾನ ಅಷ್ಟಾಗಿ ಕಂಡು ಬರುತ್ತಿಲ್ಲ. ಹೆಸರಾಂತ ನಾಗಾರ್ಜುನ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಮುರುಘಾಮಠ ಹೇಳುತ್ತಿದೆಯಾದರೂ ಪ್ರತಿಮೆ ಆಸುಪಾಸಿನ ಚಹರೆಗಳು ಸ್ಪಷ್ಟಪಡಿಸುತ್ತಿಲ್ಲ.ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಾಂಶುಪಾಲ ತೇಜೇಂದ್ರಸಿಂಗ್ ಬೋನಿಗೆ ಬಸವ ಪುತ್ಥಳಿ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಲಾಗುತ್ತಿದ್ದು ಅವರು ಅಷ್ಟಾಗಿ ಪ್ರತಿಮೆ ನಿರ್ಮಾಣದ ಸೈಟ್ ನಲ್ಲಿ ಕಾಣ ಸಿಗುವುದಿಲ್ಲ. ಮುರುಘಾಮಠದ ಇಂಜಿನಿಯರ್ ಜಗದೀಶ್ ಎಂಬುವರು ಮಾತ್ರ ಪ್ರತ್ಯಕ್ಷವಾಗಿ ತಾವು ಗ್ರಹಿಸಿರುವಷ್ಟು ಮಾಹಿತಿ ನೀಡುತ್ತಾರೆ.
ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆ ಎತ್ತರದ ಅರ್ಧದಷ್ಟಿರುವ ಮುರುಘಾಮಠದ ಪುತ್ಥಳಿ ನಿರ್ಮಾಣಕ್ಕೆ ಕನಿಷ್ಟ ಐವತ್ತು ಮಂದಿ ಇಂಜಿನಿಯರ್, 200 ಮಂದಿ ಕಾರ್ಮಿಕರು ಕಂಡು ಬರಬೇಕಿತ್ತು. ಇಂತಹ ಯಾವುದೇ ಚಿತ್ರಣಗಳು ನೋಡುಗರ ಕಣ್ಣಲ್ಲಿ ಸೆರೆಯಾಗಿಲ್ಲ. ತಳಪಾಯ(ಪೀಠ)ದ ಕಾಮಗಾರಿ ಅರೆಬರೆಯಲ್ಲಿದ್ದುಸರ್ಕಾರಿ ಅನುದಾನ ಹೊರತು ಪಡಿಸಿ ಇತರೆ ಮೂಲಗಳಿಂದ ಹಣ ಬಂದಂತೆ ಕಾಣಿಸುತ್ತಿಲ್ಲ. ಮುರುಘಾಮಠದ ಆಡಳಿತದಲ್ಲಿ ಉಂಟಾಗದ ಗೊಂದಲಗಳಿಂದಾಗಿ ಕಳೆದ ಒಂದು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆಯಾದರೂ. ಐದು ವರ್ಷಗಳಾಗಿದೆ ಎಂಬುದ ಪಾಳು ಬಿದ್ದ ಅಲ್ಲಿನ ದೃಶ್ಯಗಳು ದೃಢಪಡಿಸುತ್ತವೆ.