ಮಂಡ್ಯ ಜಿಲ್ಲೆಯ ಕೊತ್ತತ್ತಿಯಲ್ಲೂ ವಕ್ಫ್‌ ಖಾತೆ ಕ್ಯಾತೆ - ದಿನಕ್ಕೊಂದು ಕಡೆ ವಿವಾದ : ಗ್ರಾಮಸ್ಥರ ಆಕ್ರೋಶ

KannadaprabhaNewsNetwork | Updated : Nov 09 2024, 05:12 AM IST

ಸಾರಾಂಶ

  ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಮತ್ತು ಚಂದಗಾಲು ಗ್ರಾಮಗಳಲ್ಲಿ ದೇವಸ್ಥಾನದ ಜಾಗ, ಸರ್ಕಾರಿ ಶಾಲೆ ಜಾಗ ವಕ್ಫ್‌ ಹೆಸರಿಗೆ ಖಾತೆಯಾಗಿರುವ ಪ್ರಕರಣದ ಬೆನ್ನಲ್ಲೇ ಮಂಡ್ಯ ತಾಲೂಕು ಕೊತ್ತತ್ತಿ ಗ್ರಾಮದ ಸರ್ಕಾರಿ ಗುಂಡುತೋಪು ಮತ್ತು ರೈತರ ಸರ್ಕಾರಿ ಜಮೀನು ವಕ್ಫ್‌ಗೆ ಖಾತೆಯಾಗಿರುವುದು ಬೆಳಕಿಗೆ ಬಂದಿದೆ.

 ಮಂಡ್ಯ : ಜಿಲ್ಲೆಯಲ್ಲಿ ವಕ್ಫ್‌ ಖಾತೆ ಕ್ಯಾತೆ ಮುಗಿದಿಲ್ಲ. ದಿನಕ್ಕೊಂದು ಕಡೆ ವಿವಾದ ನಾಯಿಕೊಡೆಯಂತೆ ಹುಟ್ಟಿಕೊಳ್ಳುತ್ತಲೇ ಇದೆ. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಮತ್ತು ಚಂದಗಾಲು ಗ್ರಾಮಗಳಲ್ಲಿ ದೇವಸ್ಥಾನದ ಜಾಗ, ಸರ್ಕಾರಿ ಶಾಲೆ ಜಾಗ ವಕ್ಫ್‌ ಹೆಸರಿಗೆ ಖಾತೆಯಾಗಿರುವ ಪ್ರಕರಣದ ಬೆನ್ನಲ್ಲೇ ಮಂಡ್ಯ ತಾಲೂಕು ಕೊತ್ತತ್ತಿ ಗ್ರಾಮದ ಸರ್ಕಾರಿ ಗುಂಡುತೋಪು ಮತ್ತು ರೈತರ ಸರ್ಕಾರಿ ಜಮೀನು ವಕ್ಫ್‌ಗೆ ಖಾತೆಯಾಗಿರುವುದು ಬೆಳಕಿಗೆ ಬಂದಿದೆ.

ಕೊತ್ತತ್ತಿ ಗ್ರಾಮದ ಸರ್ವೇ ನಂಬರ್ 237ರಲ್ಲಿ ಸರ್ಕಾರಿ ಗುಂಡು ತೋಪು ಹಾಗೂ ರೈತರೊಬ್ಬರಿಗೆ ಸೇರಿದ ಒಟ್ಟು ಮೂರು ಎಕರೆ ಜಮೀನು ವಕ್ಫ್‌ ಬೋರ್ಡ್‌ಗೆ ಖಾತೆಯಾಗಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಕೆರೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಕೆಲವು ಮುಸ್ಲಿಂ ವ್ಯಕ್ತಿಗಳು ದರ್ಗಾ ನಿರ್ಮಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವೇ ನಂಬರ್ 237ರಲ್ಲಿ 3 ಎಕರೆ ಜಮೀನನ್ನು ವಕ್ಫ್‌ ಬೋರ್ಡ್‌ಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ಖಾತೆ ನಂಬರ್ 1224ರಲ್ಲಿ ಒಂದು ಎಕರೆ ಸರ್ಕಾರಿ ಗುಂಡುತೋಪು, ಖಾತೆ ನಂಬರ್ 774ರಲ್ಲಿ ಕೆ.ಪಿ.ಸೋಮಶೇಖರ್ ಬಿನ್ ಪುಟ್ಟೇಗೌಡ ಅವರಿಗೆ ಸೇರಿದ ಎರಡು ಎಕರೆ ಸಂಪೂರ್ಣ ಜಮೀನು ವಕ್ಫ್‌ ಬೋರ್ಡ್‌ಗೆ 2017ರಲ್ಲಿ ಖಾತೆಯಾಗಿದೆ.

ನೂರಾರು ವರ್ಷಗಳಿಂದಲೂ ಈ ಜಾಗ ಸೋಮಶೇಖರ್ ಅವರಿಗೆ ಪಿತ್ರಾರ್ಜಿತ ಆಸ್ತಿಯಾಗಿ ಬಂದಿದೆ. ಜೊತೆಗೆ ಆರು ವರ್ಷಗಳ ಹಿಂದೆ ರಚನೆಯಾಗಿರುವ ಈ ಗ್ರಾಮದಲ್ಲಿ ಶ್ರೀಬ್ಯಾಲಕಮ್ಮ ದೇವಿ ದೇವಾಲಯವಿದೆ. ಹೀಗಿರುವಾಗ ಈ ಜಾಗ ವಕ್ಫ್‌ ಬೋರ್ಡ್‌ಗೆ ಖಾತೆಯಾಗಿದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ರೈತರಿಂದ ಪ್ರತಿಭಟನೆ:

ಗ್ರಾಮಸ್ಥರು ಹಾಗೂ ರೈತರು ಬ್ಯಾಲಕಮ್ಮ ದೇವಾಲಯದ ಆವರಣದಲ್ಲಿ ಸೇರಿ ವಕ್ಫ್‌ ಬೋರ್ಡ್‌ಗೆ ಅಕ್ರಮವಾಗಿ ಖಾತೆ ಮಾಡಿರುವುದನ್ನು ರದ್ದುಪಡಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಅವರಿಗೆ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಅವರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾದರು.

ಇದೇ ವೇಳೆ ಎಸ್.ಸಚ್ಚಿದಾನಂದ ಅವರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಪೋನ್ ಕರೆ ಮಾಡಿ ಸರ್ಕಾರಿ ಗುಂಡುತೋಪು ಹಾಗೂ ರೈತರ ಖಾಸಗಿ ಜಮೀನು ಅಕ್ರಮವಾಗಿ ವಕ್ಫ್‌ ಬೋರ್ಡ್‌ಗೆ ಖಾತೆಯಾಗಿರುವುದನ್ನು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಈ ವಿಷಯ ಈಗಾಗಲೇ ತಮ್ಮ ಗಮನಕ್ಕೆ ಬಂದಿದೆ. ಅದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಆಗ ಸಚ್ಚಿದಾನಂದ ಅವರು ಗ್ರಾಮಕ್ಕೆ ಖುದ್ದಾಗಿ ನೀವೇ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಕಂದಾಯಾಧಿಕಾರಿ, ಗ್ರಾಮ ಆಡಳಿತಾಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಿಕೊಡಬೇಕು. ಗ್ರಾಮಸ್ಥರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಡುವಂತೆ ಮನವಿ ಮಾಡಿದಾಗ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದರು.

Share this article