ಚುನಾವಣಾ ಕಣದಿಂದ ಆನೆಯನ್ನ ಹಿಮ್ಮೆಟ್ಟಿದವರು ಯಾರು?

KannadaprabhaNewsNetwork | Published : Apr 11, 2024 12:50 AM

ಸಾರಾಂಶ

ರಾಮನಗರ: ತೀರಾ ಜಿದ್ದಾಜಿದ್ದಿನಿಂದ ಕೂಡಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಆನೆ (ಬಿಎಸ್ಪಿ ಅಭ್ಯರ್ಥಿ)ಯನ್ನು ಚುನಾವಣಾ ಕಣದಿಂದ ಹಿಮ್ಮೆಟ್ಟಿಸಿದವರು ಯಾರೆಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿ ನಡೆದಿದೆ.

ರಾಮನಗರ: ತೀರಾ ಜಿದ್ದಾಜಿದ್ದಿನಿಂದ ಕೂಡಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಆನೆ (ಬಿಎಸ್ಪಿ ಅಭ್ಯರ್ಥಿ)ಯನ್ನು ಚುನಾವಣಾ ಕಣದಿಂದ ಹಿಮ್ಮೆಟ್ಟಿಸಿದವರು ಯಾರೆಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿ ನಡೆದಿದೆ.

ಈ ಕ್ಷೇತ್ರದಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ಗೆಲ್ಲುವಷ್ಟು ಶಕ್ತಿ ಹೊಂದದೆ ಇರಬಹುದು. ಆದರೆ, ಪ್ರಸ್ತುತ ಚುನಾವಣೆಯ ಮಟ್ಟಿಗೆ ಕಾಂಗ್ರೆಸ್ ನ ಡಿ.ಕೆ.ಸುರೇಶ್ ಹಾಗೂ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಸೋಲು-ಗೆಲುವಿನಲ್ಲಿ ಬಿಎಸ್ಪಿ ನಿರ್ಣಾಯಕ ಪಾತ್ರ ವಹಿಸುತ್ತಿತ್ತು ಎನ್ನುವುದರಲ್ಲಿ ಅನುಮಾನ ಇಲ್ಲ.

ಆನೆಗೆ ಅಂಕುಶ ಹಾಕಿದರೇ ಡಿಕೆ ಬ್ರದರ್ಸ್:

ಎಲ್ಲ ರಾಜಕೀಯ ಪಕ್ಷಗಳಂತೆ ಬಿಎಸ್ಪಿ ಕೂಡ ತನ್ನದೇ ಆದ ವೋಟ್ ಬ್ಯಾಂಕ್ ಹೊಂದಿದೆ. ಹಿಂದಿನ ಲೋಕಸಭಾ ಚುನಾವಣೆಗಳನ್ನು ಅವಲೋಕಿಸಿದರೆ 15ರಿಂದ 20 ಸಾವಿರ ಮತಗಳು ಬಿಎಸ್ಪಿ ಅಭ್ಯರ್ಥಿಗೆ ಚಲಾವಣೆಯಾಗಿವೆ.

ಅಂದರೆ ಅವೆಲ್ಲವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಆದಿವಾಸಿ ಬುಡಕಟ್ಟು, ಅಲ್ಪಸಂಖ್ಯಾತ ಸೇರಿದಂತೆ ಇತರೆ ಸಣ್ಣಪುಟ್ಟ ಸಮುದಾಯದ ಮತಗಳಾಗಿದ್ದವು. ಈ ಸಾಂಪ್ರದಾಯಿಕ ಮತಗಳು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೆಂಬ ಡಿಕೆ ಸಹೋದರರ ಲೆಕ್ಕಾಚಾರಗಳು ಬಿಎಸ್ಪಿ ಹುರಿಯಾಳು ಕಣದಿಂದ ಹಿಂದಕ್ಕೆ ಸರಿಯುವಂತೆ ಮಾಡಿರುವ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧೆಮಾಡಿದ್ದ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ಅವರೇ ಈ ಬಾರಿಯೂ ಕ್ಷೇತ್ರದಲ್ಲಿ ಸಾಕಷ್ಟು ಸಂಚಾರ ಮಾಡಿ ಪ್ರಬಲ ಪೈಪೋಟಿ ನೀಡುವುದಾಗಿ ಘೋಷಣೆ ಮಾಡಿದ್ದರು.

ಕೃತಕ ಆನೆಯ ಬೆನ್ನೇರಿ ಸಹಸ್ರಾರು ಜನರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸುವ ಮೂಲಕ ಸಾಕಷ್ಟು ಗಮನ ಸೆಳೆದಿದ್ದರು. ಇವರ ನಾಮಪತ್ರ ಸಲ್ಲಿಕೆಗೆ ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಕಾರ್ಯದರ್ಶಿ ಎಂ.ನಾಗೇಶ್ ಸೇರಿದಂತೆ ಹಲವು ಪ್ರಮುಖ ಮುಖಂಡರು ಪಾಲ್ಗೊಂಡು ಪಕ್ಷದಿಂದ ಪ್ರಬಲ ಸ್ಪರ್ಧೆ ನೀಡುವ ಸುಳಿವು ನೀಡಿದ್ದರು.

ಆದರೆ, ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದ ಏಪ್ರಿಲ್ 8ರಂದು ಚಿನ್ನಪ್ಪ ವೈ.ಚಿಕ್ಕಹಾಗಡೆರವರು ಉಮೇದುವಾರಿಕೆ ಹಿಂಪಡೆದು ಏಕಾಏಕಿ ಕಣದಿಂದ ಹಿಂದೆ ಸರಿದಿದ್ದಾರೆ. ಅವರು ನಾಮಪತ್ರ ಹಿಂದಕ್ಕೆ ಪಡೆದಿರುವ ಮಾಹಿತಿ ಪಕ್ಷದ ವರಿಷ್ಠರಿಗೆಯೇ ತಿಳಿದಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೊಬ್ಬರು ಏಕಾಏಕಿ ಕಣದಿಂದ ಹಿಂದಕ್ಕೆ ಸರಿದಿರುವುದು ಪಕ್ಷಕ್ಕೆ ಮುಜುಗರವನ್ನು ತಂದಿದೆ. ಉಮೇದುವಾರಿಕೆ ವಾಪಸ್ ಪಡೆದ ದಿನದಿಂದ ಚಿನ್ನಪ್ಪ ವೈ.ಚಿಕ್ಕಹಾಗಡೆ ನಾಪತ್ತೆಯಾಗಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ಬಿಎಸ್ಪಿಗೆ ತನ್ನದೇ ವೋಟ್ ಬ್ಯಾಂಕ್ :

ಈ ಕ್ಷೇತ್ರದಲ್ಲಿ ಬಿಎಸ್ಪಿ ಮೊದಲಿನಿಂದಲೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ರಾಜಕೀಯ ನಿಲುವುಗಳನ್ನು ವಿರೋಧಿಸಿಕೊಂಡು ಪರ್ಯಾಯವಾಗಿ ರಾಜಕಾರಣ ಮಾಡಿಕೊಂಡು ಬಂದಿತ್ತು. ಅದರಲ್ಲೂ ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮುಂತಾದ ಘಟಾನುಘಟಿ ನಾಯಕರ ವಿರುದ್ಧ ತೊಡೆತಟ್ಟಿ ಅಖಾಡದಲ್ಲಿ ತನ್ನ ಹೋರಾಟ ಪ್ರತಿರೋಧವನ್ನು ಒಡ್ಡುತ್ತಲೇ ಇತ್ತು. ಆ ಮುಖಾಂತರ ಕ್ಷೇತ್ರದಲ್ಲಿರುವ ಅ ಸಂಖ್ಯಾ ಬಲಹೀನ ಕಾರ್ಯಕರ್ತರಿಗೆ ಮತ್ತು ದುರ್ಬಲ ವರ್ಗದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಆದಿವಾಸಿ ಬುಡಕಟ್ಟು ಜನರಿಗೆ ಬಹುಜನ ಸಮಾಜ ಪಕ್ಷ ತನ್ನ ರಕ್ಷಣೆಯನ್ನು ಕೊಡುತ್ತಲೇ ಬಂದಿತ್ತು.

ಆದರೀಗ ಬಿಎಸ್ಪಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿದು ಬೇರೊಂದು ರಾಜಕೀಯ ಪಕ್ಷಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿರುವ ಅನುಮಾನಗಳು ‍ವ್ಯಕ್ತವಾಗಿವೆ.ಬಾಕ್ಸ್‌............

ಬಿಎಸ್ಪಿಯ ಮತ ಗಳಿಕೆ ಪ್ರಮಾಣ ವೃದ್ಧಿ!

1991ರಿಂದ 2019ರವರೆಗೆ ಒಟ್ಟು 5 ಲೋಕಸಭಾ ಚುನಾವಣೆಗಳಲ್ಲಿ ಬಹುಜನ ಸಮಾಜ ಪಾರ್ಟಿ ಸ್ಪರ್ಧೆ ಮಾಡಿದೆ. ಚುನಾವಣೆಯಿಂದ ಚುನಾವಣೆಗೆ ಆ ಪಕ್ಷದ ಮತ ಗಳಿಕೆ ಪ್ರಮಾಣ ವೃದ್ಧಿಯಾಗಿದೆ. 1996, 1999 ಹಾಗೂ 2004ರ ಚುನಾವಣೆಗಳಲ್ಲಿ ಬಿಎಸ್ಪಿ ಸ್ಪರ್ಧೆ ಮಾಡಲಿಲ್ಲ.

*1991ರ ಲೋಕಸಭಾ ಚುನಾವಣೆಯಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಎಂ.ವಿ.ಚಂದ್ರಶೇಖರ ಮೂರ್ತಿ 3,01,455 ಮತ ಪಡೆದು ಗೆಲುವು ಸಾಧಿಸಿದರೆ, ಬಿಜೆಪಿಯ ರಾಮಚಂದ್ರಗೌಡ 2,67,992 ಮತ ಪಡೆದು 2ನೇ ಸ್ಥಾನದಲ್ಲಿದ್ದರು. ಬಹುಜನ ಸಮಾಜ ಪಾರ್ಟಿಯಿಂದ ಬಿ.ಗೋಪಾಲ್ ಸ್ಪರ್ಧಿಸಿ 4,509 ಮತ ಪಡೆದು 4ನೇ ಸ್ಥಾನ ಪಡೆದಿದ್ದರು.

*1998ರ ಚುನಾವಣೆಯಲ್ಲಿ ಮುನಿಯಪ್ಪ ಬಿಎಸ್ಪಿಯಿಂದ ಸ್ಪರ್ಧಿಸಿ 15,732 ಮತ ಪಡೆದರು. ಬಿಜೆಪಿ ಅಭ್ಯರ್ಥಿ ಎಂ.ಶ್ರೀನಿವಾಸ್ 470387 ಮತ ಪಡೆದು ಗೆಲುವು ಸಾಧಿಸಿದರೆ, ಕಾಂಗ್ರೆಸ್ ಡಾ.ಡಿ.ಪ್ರೇಮಚಂದ್ರ ಹಾಗೂ ಜೆಡಿಎಸ್ ಕುಮಾರಸ್ವಾಮಿ ಕ್ರಮವಾಗಿ 2 ಮತ್ತು 3ನೇ ಸ್ಥಾನ ಅಲಂಕರಿಸಿದರು.

*2009ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಹುರಿಯಾಳಾಗಿದ್ದ ಮಹಮ್ಮದ್ ಹಫೀಜ್ ಉಲ್ಲಾ 12,909 ಮತ ಪಡೆದರೆ, ಪಕ್ಷೇತರರಾಗಿ ಸ್ಪರ್ಧಿಸಿದ್ದ ವೈ.ಚಿನ್ನಪ್ಪ 2,067 ಮತ ಪಡೆದಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್ ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು.

*2014ರಲ್ಲಿ ಸಿ.ತೋಪಯ್ಯ ಬಿಎಸ್ಪಿಯಿಂದ ಸ್ಪರ್ಧಿಸಿ 11594 (ಶೇ.0.53) ಮತ ಪಡೆದರೆ, ಕಾಂಗ್ರೆಸ್ ನ ಡಿ.ಕೆ.ಸುರೇಶ್ 6,52,723 (ಶೇ.29.8) ಮತ ಪಡೆದು ಗೆಲುವು ಸಾಧಿಸಿದ್ದರು.

*2019ರ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಡಿ.ಕೆ.ಸುರೇಶ್ 8,78,258 ಮತ ಪಡೆದು ಗೆಲುವು ಸಾಧಿಸಿದರೆ, ಬಿಎಸ್ಪಿಯ ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ 19,972 (ಶೇ.1.23) ಮತ ಪಡೆದು 3ನೇ ಸ್ಥಾನ ಅಲಂಕರಿಸಿದರು.

ಕೋಟ್ ..............

ಸಾವಿರಾರು ಕಾರ್ಯಕರ್ತರೊಂದಿಗೆ ಕೃತಕ ಆನೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ್ದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಇದ್ದಕ್ಕಿದ್ದ ಹಾಗೆಯೇ ನಾಮಪತ್ರ ಹಿಂಪಡೆದು ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಲು ಕಾರಣವೇನು? ಅಖಾಡದಲ್ಲಿದ್ದ ಆನೆಯನ್ನು ಯಾರಾದರೂ ಕೊಂಡುಕೊಂಡರೆ ಅಥವಾ ಅಖಾಡದಲ್ಲಿದ್ದ ಆನೆಗೆ ಯಾರಾದರೂ ಅಂಕುಶ ಹಾಕಿ ಬೆದರಿಸಿದರೆ. ಇಲ್ಲವಾದರೆ ಕಾರ್ಯಕರ್ತರ ಅಸಹಕಾರ, ಹಣಕಾಸಿನ ಮುಗ್ಗಟ್ಟು ಇತ್ಯಾದಿ ಯಾವುದಾದರೂ ಸಾಂದರ್ಭಿಕ ತೊಂದರೆಗಳು ಎದುರಾದವೇ ಎಂಬುದನ್ನು ನಾವಿಲ್ಲಿ ಪ್ರಶ್ನಿಸಲೇಬೇಕು.

- ಮಲ್ಲಿಕಾರ್ಜುನ್, ಸಾಮಾಜಿಕ ಹೋರಾಟಗಾರರು, ಕನಕಪುರ

10ಕೆಆರ್ ಎಂಎನ್ 2,3.ಜೆಪಿಜಿ

2.ಬಿಎಸ್ಪಿ ಅಭ್ಯರ್ಥಿ ಚಿನ್ನಪ್ಪ ವೈ.ಚಿಕ್ಕಹಾಗಡೆ ನಾಮಪತ್ರ ಸಲ್ಲಿಸಲು ಕೃತಕ ಆನೆ ಮೇಲೆ ಮೆರವಣಿಗೆಯಲ್ಲಿ ಬಂದ ದೃಶ್ಯ.

3.ಮಲ್ಲಿಕಾರ್ಜುನ್ , ಸಾಮಾಜಿಕ ಹೋರಾಟಗಾರ

Share this article