ಕನ್ನಡಪ್ರಭ ವಾರ್ತೆ ಹಾಸನ
ಜೀವಮಾನದ ಸಾಧನೆ ಇನ್ನೇನು ಕೈಗೂಡಿತು ಎನ್ನುವಷ್ಟರಲ್ಲಿ ವಿಧಿಯಾಟವೋ, ಯಾರ ನಿರ್ಲಕ್ಷ್ಯವೋ ಕಾರಣ ಏನೇ ಇರಬಹುದು ಆದರೆ ಭವಿಷ್ಯದಲ್ಲಿ ಪೊಲೀಸ್ ಇಲಾಖೆಯ ದೊಡ್ಡ ಸ್ಥಾನಕ್ಕೇರುತ್ತಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ತನ್ನ ವೃತ್ತಿ ಜೀವನದ ಮೊದಲ ದಿನವೇ ಬಲಿಯಾಗಿದ್ದಾರೆ. ಜೀಪ್ ಅಪಘಾತದಲ್ಲಿ ಮೃತಪಟ್ಟ ಹರ್ಷಬರ್ಧನ್ ಅವರ ಶವವನ್ನು ಸೋಮವಾರ ಬೆಂಗಳೂರು ಮೂಲಕವಾಗಿ ಮಧ್ಯಪ್ರದೇಶಕ್ಕೆ ಕಳುಹಿಸಿಕೊಡಲಾಯಿತು.ತಾಲೂಕಿನ ಮೈಸೂರು ರಸ್ತೆಯ ಕಿತ್ತಾನೆ ಗಡಿಯಲ್ಲಿ ಭಾನುವಾರ ಸಂಜೆ ಸಂಭವಿಸಿದ ಪೊಲೀಸ್ ಜೀಪ್ ಅಪಘಾತದಲ್ಲಿ ಹೊಳೆನರಸೀಪುರ ವಿಭಾಗದ ಡಿವೈಎಸ್ಪಿಯಾಗಿ ನಿಯೋಜನೆಗೊಂಡಿದ್ದ ಮಧ್ಯಪ್ರದೇಶದ ಹರ್ಷಬರ್ಧನ್ ಅವರು ನಿಧನರಾಗಿದ್ದಾರೆ. ಅವರ ಶವವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹಾಸನದಿಂದ ಬೆಂಗಳೂರಿಗೆ ಆ್ಯಂಬುಲೆನ್ಸ್‌ನಲ್ಲಿ ಹಾಗೂ ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ವಿಮಾನದಲ್ಲಿ ಕಳುಹಿಸಿಕೊಡಲಾಯಿತು. ಅಪಘಾತ ಸಂಭವಿಸಿದ ಮರು ಕ್ಷಣದಿಂದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಅವರು ಚಿಕಿತ್ಸೆ ಕೊಡಿಸುವುದರಿಂದ ಹಿಡಿದು ಕಳೆಬರವನ್ನು ಅವರ ತವರು ಜಿಲ್ಲೆಗೆ ಕಳುಹಿಸಿಕೊಡುವವರೆಗೆ ಮುಂದೆ ನಿಂತು ನಿರ್ವಹಿಸಿದರು.
ಅನ್ಯಾಯದ ಸಾವಿನ ಹೊಣೆ ಯಾರದ್ದು?: ಭವಿಷ್ಯದಲ್ಲಿ ಈ ದೇಶದ ದೊಡ್ಡ ಆಸ್ತಿಯಾಗುತ್ತಿದ್ದ ಒಬ್ಬ ಯುವ ಅಧಿಕಾರಿ ಇದೀಗ ಇಲ್ಲ. ಆದರೆ, ಅಪಘಾತ ಸಂಭವಿಸಿದ ಆರಂಭದಲ್ಲಿ ತಿಳಿದುಬಂದ ಕೆಲವೊಂದು ಕಾರಣಗಳು ಆ ಕ್ಷಣಕ್ಕಷ್ಟೆ ಸೀಮಿತವಾಗಿದ್ದವು. ಆದರೆ, ನಂತರದಲ್ಲಿ ಕೇಳಿಬಂದಿರುವ ಕಾರಣಗಳು ಸತ್ಯಕ್ಕೆ ಹತ್ತಿರವಾಗಿವೆ. ಇದಕ್ಕೆ ಪೂರಕ ಎನ್ನುವಂತೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಅಪಘಾತವಾದ ಜೀಪಿನ ಚಾಲಕ ಮಂಜೇಗೌಡ ಮೇಲೆಯೇ ಅತಿಯಾದ ವೇಗ ಹಾಗೂ ಅಜಾಗರೂಕತೆಯ ಕಾರಣದಿಂದ ಅಪಘಾತ ಸಂಭವಿಸಿದೆ ಎಂದು ಎಫ್‌ಐಆರ್ ದಾಖಲಿಸಲಾಗಿದೆ.ಕಾರು ಅಪಘಾತ ಹೇಗಾಯಿತು?: ಅಪಘಾತ ಸಂಭವಿಸಿದ ರಸ್ತೆ ನೇರವಾಗಿದ್ದು, ಜೀಪಿಗೆ ಯಾವುದೇ ಅಡೆತಡೆಯೂ ಇರಲಿಲ್ಲ. ಪ್ರತ್ಯಕ್ಷದರ್ಶಿಗಳ ಪ್ರಕಾರ ವೇಗವಾಗಿ ಬರುತ್ತಿದ್ದ ಜೀಪು ನೋಡು ನೋಡುತ್ತಿದ್ದಂತೆ ಆ ರಸ್ತೆಯ ಪೆಟ್ರೋಲ್ ಬಂಕ್ ಬಳಿಯಿಂದ ರಸ್ತೆಯನ್ನು ಬಿಟ್ಟು ನಿಧಾನವಾಗಿ ಕೆಳಗಿಳಿದಿದೆ. ನಂತರ ರಸ್ತೆ ಬದಿ ನೆಟ್ಟಿದ್ದ ಸಿಮೆಂಟ್ ಕಂಬಗಳಿಗೆ ಗುದ್ದಿ ಸುಮಾರು 6 ಕಂಬಗಳನ್ನು ಮುರಿದುಕೊಂಡು ಮುಂದೆ ಹೋಗಿ ಹಲವು ಬಾರಿ ಉರುಳಿಬಿದ್ದು ಕಡೆಯಲ್ಲಿ ಮಾದಾಪುರಕ್ಕೆ ತೆರಳುವ ರಸ್ತೆಯಲ್ಲಿದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಅಲ್ಲಿದ್ದ ಮನೆಯೊಂದರ ಬಾಗಿಲ ಮುಂದೆ ಬಿದ್ದಿದೆ. ಈ ವೇಳೆ ಪ್ರೊಬೆಷನರಿ ಐಪಿಎಸ್ ಅಧಿಕಾರಿ ತಲೆಗೆ ಗಂಭೀರವಾದ ಪೆಟ್ಟುಗಳಾಗಿದ್ದವು. ಚಾಲಕ ಜೀಪಿನ ಸ್ಟೀರಿಂಗನ್ನು ಬಿಗಿಯಾಗಿ ಹಿಡಿದಿದ್ದರಿಂದ ಸಾಧಾರಣ ಗಾಯಗಳಾಗಿವೆ. ಹಾಗಾಗಿ ನೇರ ರಸ್ತೆಯಲ್ಲಿ ಹೋಗುತ್ತಿದ್ದ ಜೀಪು ಏಕಾಏಕಿ ರಸ್ತೆ ಬಿಟ್ಟು ಕೆಳಗಿಳಿದಿದ್ದನ್ನು ಕಂಡ ಜನರು ಚಾಲಕ ನಿದ್ದೆ ಮಂಪರಿನಲ್ಲಿದ್ದಿರಬಹುದು ಎಂದು ದೂರಿದ್ದಾರೆ.
ಏರ್ ಬ್ಯಾಗ್ ಇಲ್ಲದ ಜೀಪುಗಳು!: ಒಂದು ವೇಳೆ ಈ ಅಪಘಾತ ಸಂಭವಿಸಿದ ಜೀಪಿನಲ್ಲಿ ಏರ್ ಬ್ಯಾಗ್ ಇದ್ದಿದ್ದರೆ ಯುವ ಅಧಿಕಾರಿ ಬದುಕುವ ಸಾಧ್ಯತೆಗಳು ಹೆಚ್ಚಿತ್ತು. ಆದರೆ, ಅಪಘಾತ ಸಂಭವಿಸಿದ ಆ ಜೀಪಿನಲ್ಲಿ ಆ ಸವಲತ್ತು ಇಲ್ಲದ ಕಾರಣ ಜೀವಹಾನಿ ಸಂಭವಿಸಿದೆ.ಭಾರತೀಯ ಮೋಟಾರು ವಾಹನ ಕಾಯ್ದೆ ಪ್ರಕಾರ ಇತ್ತೀಚಿನ ಕೆಲ ವರ್ಷಗಳಿಂದೀಚೆಗೆ ನಾಲ್ಕು ಚಕ್ರದ ಎಲ್ಲಾ ವಾಹನಗಳಲ್ಲೂ ಮುಂದಿನ ಎರಡು ಸೀಟುಗಳಲ್ಲಿ ಏರ್‌ಬ್ಯಾಗ್ ಮತ್ತು ಎಬಿಎಸ್ ( ಆ್ಯಂಟಿ ಲಾಕಿಂಗ್ ಬ್ರೇಕಿಂಗ್ ಸಿಸ್ಟಂ) ಇರಲೇಬೇಕು. ಆದರೆ, ಪೊಲೀಸ್ ಇಲಾಖೆಯಲ್ಲಿರುವ ಬಹುತೇಕ ಜೀಪುಗಳಲ್ಲಿ ಇದ್ಯಾವುದೂ ಇಲ್ಲ. ಕೆಲ ಜೀಪುಗಳಲ್ಲಿ ಚಾಲಕನ ಒಂದು ಬದಿ ಮಾತ್ರ ಏರ್‌ಬ್ಯಾಗ್ ಇದೆ. ಇತ್ತೀಚೆಗೆ ಅಂದರೆ ಎರಡು ವರ್ಷಗಳಿಂದೀಚೆಗೆ ಬರುತ್ತಿರುವ ಬೊಲೇರೋ ಜೀಪುಗಳಲ್ಲಿ ಎರಡೂ ಬದಿ ಏರ್‌ಬ್ಯಾಗ್ ಮತ್ತು ಎಬಿಎಸ್ ಇವೆ. ಆದರೆ, ಅಪಘಾತ ಸಂಭವಿಸಿದ ಜೀಪಿನಲ್ಲಿ ಡ್ರೈವರ್ ಬದಿ ಏರ್‌ಬ್ಯಾಗ್ ಇದೆ ಎಂದು ಹೇಳಲಾಗುತ್ತಿದೆಯಾದರೂ, ಅಪಘಾತದ ವೇಳೆ ಅದು ತೆರೆದುಕೊಂಡಿಲ್ಲ. ಬಹುತೇಕ ಪೊಲೀಸ್ ಜೀಪುಗಳಲ್ಲಿ ಏರ್‌ಬ್ಯಾಗ್ ಹಾಗೂ ಎಬಿಎಸ್ ಇಲ್ಲದಿರುವುದು ಕೂಡ ಸಾಕಷ್ಟು ಅನಾಹುತಗಳಿಗೆ ಕಾರಣವಾಗಿದೆ. ಅದರಲ್ಲೂ ಕೆಲ ಹೋಬಳಿ ಮಟ್ಟದಲ್ಲಿ ಎಸ್‌ಐಗಳಿಗೆ ಕೊಟ್ಟಿರುವ ಜೀಪುಗಳು ಬಡಕಲು ದೇಹದವಾಗಿದ್ದು, ಅವುಗಳು ರಸ್ತೆ ಮೇಲೆ ಓಡುವ ಶಕ್ತಿಯನ್ನೇ ಕಳೆದುಕೊಂಡು ಪೊಲೀಸ್ ಇಲಾಖೆಯನ್ನೇ ಅಣಕಿಸುವಂತಿವೆ.