ಈಶ್ವರ ಶೆಟ್ಟರ್
ಕನ್ನಡಪ್ರಭ ವಾರ್ತೆ ಬಾಗಲಕೋಟೆಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬೀಳುವ ಸಾಧ್ಯತೆಗಳು ನಿಚ್ಚಳವಾಗಿವೆ. ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಲ್ಲಿ ಜಯಭೇರಿ ಬಾರಿಸಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಪೈಪೋಟಿ ಏರ್ಪಟ್ಟಿತ್ತು. ಈಗ ಫಲಿತಾಂಶ ಸಮಯ ಬಂದಿದೆ. ಕೋಟೆ ನಾಡಿನ ಜಯ ಯಾರ ಕೊರಳಿಗೆ ಬೀಳಲಿದೆ ಎಂಬ ಕಾತರ ಸಾರ್ವಜನಿಕರಲ್ಲಿದೆ. ಜತೆಗೆ ರಾಜಕೀಯ ಭವಿಷ್ಯ ಏನಾಗುವುದೋ ಎಂಬ ಆತಂಕದಲ್ಲಿ ಅಭ್ಯರ್ಥಿಗಳ ಎದೆಬಡಿತ ಕೂಡ ಜೋರಾಗಿದೆ..
ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ನಡುವೆ ರಣಕಣ ಜೋರಾಗಿತ್ತು. ಎರಡು ಪಕ್ಷಗಳಿಂದಲೂ ಮತದಾರರ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ಹಾಗೂ ಅಬ್ಬರ ಪ್ರಚಾರ ಜೋರಾಗಿದ್ದವು. ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದು, ದಾಖಲೆಯ ಐದನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಗದ್ದಿಗೌಡರ ದಾಖಲೆಯ ಗೆಲುವಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಕಾಂಗ್ರೆಸ್ಸಿಗರನ್ನೆಲ್ಲ ಒಗ್ಗೂಡಿಸಿಕೊಂಡು ತೀವ್ರ ಪೈಪೋಟಿ ಒಡ್ಡಿದ್ದಾರೆ. ಪ್ರಚಾರದ ವೇಳೆ ಎರಡೂ ಪಕ್ಷಗಳಿಂದಲೂ ತೀವ್ರ ಹಣಾಹಣಿ ಕಂಡುಬಂದಿತ್ತು. ಕ್ಷೇತ್ರದ ಮತದಾರಪ್ರಭು ಮತಯಂತ್ರದಲ್ಲಿ ಮೇ 7ರಂದೇ ಅಭ್ಯರ್ಥಿಗಳ ಹಣೆಬರಹ ಭದ್ರಪಡಿಸಿದ್ದಾನೆ.ಚುನಾವಣೆ ಮುಗಿದ ಬಳಿಕ ತಿಂಗಳವಿಡಿ ಸೋಲು-ಗೆಲುವಿನ ಲೆಕ್ಕಾಚಾರಗಳು ನಡೆದಿವೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದ್ದು, ಫಲಿತಾಂಶ ತಿಳಿಯಲು ಕ್ಷೇತ್ರದ ಜನತೆ ತುದಿಗಾಲ ಮೇಲೆ ನಿಂತಿದ್ದಾರೆ.
ಗದ್ದಿಗೌಡರಿಗೆ ಸಂಯುಕ್ತಾ ಪ್ರಬಲ ಪೈಪೋಟಿ?:2004 ರಿಂದ ಇದುವರೆಗಿನ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರ ಬಿಜೆಪಿ ಪಾಲಿಗೆ ಸುಲಭದ ತುತ್ತಾಗಿತ್ತು. ಈ ಬಾರಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ. ಇಲ್ಲಿಯವರೆಗೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ರಾಜಕೀಯ ಒಳಸುಳಿಯಲ್ಲಿ ಎಲ್ಲರ ವಿಶ್ವಾಸ ಗಳಿಸುವ ಮೂಲಕ ಸತತ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಗದ್ದಿಗೌಡರ ಸತತ ಗೆಲುವಿಗೆ ಕಾರಣರಾದವರೂ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಪಣ ತೊಟ್ಟಿದ್ದು, ಗದ್ದಿಗೌಡರ ಪಾಲಿಗೆ ಈ ಚುನಾವಣೆ ಕಬ್ಬಿಣದ ಕಡಲೆಯಂತಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಕಾಂಗ್ರೆಸ್ಸಿಗರ ಒಗ್ಗಟ್ಟು ಬಿಜೆಪಿಗರ ನಿದ್ದೆಗೆಡಿಸಿದ್ದು ಸುಳ್ಳಲ್ಲ.
ಏತನ್ಮಧ್ಯೆ ಸಂಸದ ಪಿ.ಸಿ.ಗದ್ದಿಗೌಡರ ಪ್ರಧಾನಿ ಮೋದಿ ವರ್ಚಸ್ಸು ತಮ್ಮನ್ನು ಮತ್ತೊಮ್ಮೆ ಗೆಲುವಿನ ದಡ ಸೇರಿಸಲಿದೆ ಎನ್ನುವ ಆತ್ಮವಿಶ್ವಾಸದಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪಕ್ಷದ ಮುಖಂಡರ ಒಗ್ಗಟ್ಟು, ಇತರ ಪಕ್ಷಗಳಿಂದ ಪ್ರಭಾವಿ ವ್ಯಕ್ತಿಗಳ ಪಕ್ಷ ಸೇರ್ಪಡೆ, ಸರ್ಕಾರದ ಪಂಚ ಗ್ಯಾರಂಟಿಗಳು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿವೆ ಎನ್ನುವ ಭರವಸೆ ಹೊಂದಿದ್ದಾರೆ.ಮತದಾನೋತ್ತರ ಸಮೀಕ್ಷೆ ಹೊರಬಿದ್ದ ಬಳಿಕ ಬಿಜೆಪಿಗರಲ್ಲಿ ಹೆಚ್ಚಿನ ಉತ್ಸಾಹ ಕಂಡು ಬರುತ್ತಿದ್ದರೂ ಕಾಂಗ್ರೆಸ್ಸಿಗರು ಎದೆಗುಂದಿದಂತೆ ಕಾಣುತ್ತಿಲ್ಲ. ಸಮೀಕ್ಷೆ ಏನೇ ಇರಲಿ ನಮ್ಮ ಅಭ್ಯರ್ಥಿ ಆಯ್ಕೆ ನಿಶ್ಚಿತ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿ ದ್ದಾರೆ. ಇದಕ್ಕೆ ಕಾರಣವೂ ಇದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಮತದಾನೋತ್ತರ ಸಮೀಕ್ಷೆ ಒಂದು ರೀತಿಯಾಗಿದ್ದರೆ ಫಲಿತಾಂಶ ಇನ್ನೊಂದು ರೀತಿ ಆಗಿತ್ತು. ಹಾಗಾಗಿ ಕಾಂಗ್ರೆಸ್ಸಿಗರು ಸಮೀಕ್ಷೆಗಳಿಂದ ಎದೆಗುಂದಿಲ್ಲ. ಏನೇ ಆದರೂ ನಾಳೆ ಮಧ್ಯಾಹ್ನದ ಹೊತ್ತಿಗೆ ಹೊರ ಬೀಳುವ ಫಲಿತಾಂಶ ಮತದಾರನ ಯಾರ ಪರವಾಗಿದ್ದಾನೆ ಎಂಬುದು ಜಗಜ್ಜಾಹೀರಾಗಲಿದೆ.