ಹುಬ್ಬಳ್ಳಿ:
ರಾಜ್ಯ ಸರ್ಕಾರ ಜನರಿಗೆ ಗ್ಯಾರಂಟಿ ಕೊಟ್ಟ ಮೇಲೆ ಚುನಾವಣೆಯಲ್ಲಿ ಕಾಂಗ್ರೆಸ್ ಅವುಗಳನ್ನೇ ಪ್ರಮುಖವಾಗಿ ಏಕೆ ಪ್ರಚಾರ ಮಾಡುತ್ತಿದೆ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.ಕೇಂದ್ರ ಸರ್ಕಾರ ನಾಲ್ಕು ಕೋಟಿ ಮನೆ ನಿರ್ಮಿಸಿದೆ ಎಂದು ಸುಳ್ಳು ಹೇಳುತ್ತಿದೆ ಎಂಬ ಸಚಿವ ಸಂತೋಷ ಲಾಡ್ ಹೇಳಿಕೆಗೆ ಶುಕ್ರವಾರ ನಗರದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಲಾಡ್ ಹಳ್ಳಿಗಳಲ್ಲಿ ಓಡಾಡಿಲ್ಲ. ಹಾಗಾಗಿ ನಾವು ಮನೆ ನಿರ್ಮಿಸಿರುವುದು ಅವರಿಗೆ ಗೊತ್ತಿಲ್ಲ. ಮೇಲಿನಿಂದ ನಿರ್ದೇಶನ ಇರುವ ಕಾರಣಕ್ಕೆ ಮನಸ್ಸಿಗೆ ಬಂದಂತೆ ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು.
ನಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದೆ ಇಡುವುದರಲ್ಲಿ ತಪ್ಪೇನಿದೆ. ಕಾಂಗ್ರೆಸ್‌ನವರಂತೆ ನಾವೇನು ಉದ್ರಿ ಭಾಗ್ಯಗಳ ಬಗ್ಗೆ ಪ್ರಚಾರ ಮಾಡಿದರೆ ನಡೆಯುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಒಂದು ಕಾಳು ಅಕ್ಕಿ ಕೊಟ್ಟಿಲ್ಲ. ಆದಾಗ್ಯೂ ಕೊಡಲಾರದ ಅನ್ಯ ಭಾಗ್ಯದ ಬಗ್ಗೆ ಪ್ರಚಾರ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು.ಎಲ್ಲ ಸಮುದಾಯದ ಬೆಂಬಲ:
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಹಿಂದ ಮತಗಳ ಗಮನದಲ್ಲಿಟ್ಟುಕೊಂಡು ಚುನಾವಣೆ ಮಾಡುತ್ತಿದೆ. ಆದರೆ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗದ ನಾಯಕರಾಗಿದ್ದಾರೆ. 1996ರಿಂದ ಎಲ್ಲ ಸಮುದಾಯದ ಜನ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಈ ಚುನಾವಣೆಯಲ್ಲಿಯೂ ಎಲ್ಲ ಸಮುದಾಯಗಳ ಬೆಂಬಲ ಬಿಜೆಪಿಗೆ ಸಿಗಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.ನಾವು ಅಭಿವೃದ್ಧಿ ಪರ ಚಿಂತನೆ ಇಟ್ಟುಕೊಂಡು ಚುನಾವಣೆ ಮಾಡುತ್ತಿದ್ದೇವೆ. ಮೋದಿಯವರ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ. ಇದರ ಪರಿಣಾಮವಾಗಿ ತಮಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಧಾರವಾಡ ಕ್ಷೇತ್ರವಷ್ಟೇ ಅಲ್ಲದೇ, ರಾಜ್ಯದ 28ಕ್ಕೂ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸಕ್ತ ಚುನಾವಣೆಯು ಸ್ಥಳೀಯ ಅಭಿವೃದ್ಧಿಗಳು, ದೇಶದ ಸುರಕ್ಷತೆ, ಆರ್ಥಿಕ ಸ್ಥಿತಿ, ವಿಕಸಿತ ಭಾರತ ಒಟ್ಟಾರೆ ದೇಶದ ಅಭಿವೃದ್ಧಿ ಮೇಲೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಎಲ್ಲ ಸಮುದಾಯದ ಮುಖಂಡರ ಸಭೆ ನಡೆಸಿ ಮೋದಿ ದೇಶಕ್ಕೆ ಏಕೆ ಬೇಕು ಎಂಬುದನ್ನು ಮನವರಿಕೆ ಮಾಡಿ ಕೊಡಲಾಗುತ್ತಿದೆ ಎಂದು ಹೇಳಿದರು.