ಸೋಮಣ್ಣರಿಂದ ಸಿದ್ಧಗಂಗಾ ಮಠದಲ್ಲಿ ರಾಜಕಾರಣವೇಕೆ?

KannadaprabhaNewsNetwork | Published : Nov 27, 2023 1:15 AM

ಸಾರಾಂಶ

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಸಮಾಧಾನ , ವಿನಾಕಾರಣ ಬಿಎಸ್‌ವೈ ಬಗ್ಗೆ ಮಾತನಾಡುವುದು ಸರಿಯಲ್ಲ

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಸಮಾಧಾನ । ವಿನಾಕಾರಣ ಬಿಎಸ್‌ವೈ ಬಗ್ಗೆ ಮಾತನಾಡುವುದು ಸರಿಯಲ್ಲ

ಕನ್ನಡಪ್ರಭ ವಾರ್ತೆ ದಾವಣಗೆರೆ

ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಹೋಗಿ ರಾಜಕಾರಣ ಮಾತನಾಡುವ ಅವಶ್ಯಕತೆ ಇತ್ತಾ? ಶ್ರೀಮಠದಲ್ಲಿ ಮಾಜಿ ಸಚಿವ ವಿ.ಸೋಮಣ್ಣ ರಾಜಕಾರಣ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಯಡಿಯೂರಪ್ಪನವರು ಕರೆದು, ನಮಗೆ ಹೊಡೆದರೂ ಪರವಾಗಿಲ್ಲ. ಬಿಎಸ್‌ವೈ ಬಗ್ಗೆ ಯಾರೇ ಮಾತನಾಡಿದರೂ ನಾನೂ ಅಂತಹವರ ವಿರುದ್ಧ ಮಾತನಾಡುತ್ತೇನೆ. ವಿನಾಕಾರಣ ಬಿಎಸ್‌ವೈ ಬಗ್ಗೆ ಮಾತನಾಡುವುದು ಸರಿಯಲ್ಲ. ವಿಧಾನಸಭೆ ಚುನಾವಣೆ ಸೋಲಿನ ಹೊಡೆತವನ್ನು ವರಿಷ್ಠರು ನೋಡಿದ್ದಾರೆ. ಹಾಗಾಗಿಯೇ ವಿಜಯೇಂದ್ರಗೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ ಎಂದು ತಿಳಿಸಿದರು.

ನಮಗೆ ಸಚಿವರಾಗುವ ಸಾಮರ್ಥ್ಯ ಇರಲಿಲ್ಲವೇ?

ಕಾಂಗ್ರೆಸ್ಸಿನಿಂದ ಬಂದ ನೀವೇ 2 ಸಲ ಸಚಿವರಾಗಿದ್ದಲ್ಲದೇ, ಇಂತಹದ್ದೇ ಖಾತೆ ಬೇಕೆಂದು ಸೋಮಣ್ಣ ಪಡೆದಿದ್ದರು. ಬಿಜೆಪಿಯಲ್ಲಿದ್ದ ನಮಗೆ ಸಚಿವರಾಗುವ ಸಾಮರ್ಥ್ಯ ಇರಲಿಲ್ಲವೇ? ಅನ್ಯಾಯವಾಗಿದ್ದು ನಮಗೆ ಹೊರತು 2 ಸಲ ಸಚಿವರಾದ ನಿಮಗಲ್ಲ ಸೋಮಣ್ಣ. ನಿರಂತರ ಅಧಿಕಾರವನ್ನು ಅನುಭವಿಸಿ ಈಗ ಯಡಿಯೂರಪ್ಪ ಬಗ್ಗೆ ಮಾತನಾಡುತ್ತಿದ್ದೀರಾ?

ವಿಜಯೇಂದ್ರ ಸಂಘಟನಾ ಸಾಮರ್ಥ್ಯ, ಚುನಾವಣಾ ಚಾಣಾಕ್ಷ್ಯತೆ, ಪಕ್ಷ ನಿಷ್ಠೆ ಗುರುತಿಸಿ, ರಾಷ್ಟ್ರೀಯ ನಾಯಕರು ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾಗಿದ್ದಕ್ಕೆ ರಾಜ್ಯವ್ಯಾಪಿ ಪಕ್ಷಕ್ಕೆ ಹೆಚ್ಚು ಬಲ ಬಂದಂತಾಗಿದೆ ಎಂದು ತಿಳಿಸಿದರು.

ನಿರಂತರ ಅಧಿಕಾರ ಅನುಭವಿಸಿ, ಈಗ ಯಡಿಯೂರಪ್ಪ ಬಗ್ಗೆ ಕೀಳು ಮಟ್ಟದ ಭಾಷೆ ಬಳಸುತ್ತೀರಾ? ವಿಜಯೇಂದ್ರ ರಾಜ್ಯದಲ್ಲಿ ಪಕ್ಷ ಸಂಘಟಿಸಿಲ್ಲವಾ? ರಾಜ್ಯಾಧ್ಯಕ್ಷರ ಆಯ್ಕೆ ಮಾಡಿದ ರಾಷ್ಟ್ರೀಯ ನಾಯಕರಿಗೆ ಅವಮಾನಿಸುತ್ತಿದ್ದೀರಿ. ಸೋಮಣ್ಣ ನನಗೆ ಹಿರಿಯಣ್ಣನ ಸಮಾನ. ಈಗಲೂ ಬಾರಲೇ ತಮ್ಮ ಅಂತಲೇ ಮಾತನಾಡುವ ಸೋಮಣ್ಣ ನನ್ನ ಕ್ಷೇತ್ರಕ್ಕೆ ಸಾಕಷ್ಟು ಮನೆ ನೀಡಿದ್ದಾರೆ. ಏನೇ ಸಮಸ್ಯೆ ಇದ್ದರೂ ಪಕ್ಷದಲ್ಲಿ ಕುಳಿತು ಚರ್ಚಿಸಲಿ. ಅದನ್ನು ಬಿಟ್ಟು, ಹಾದಿ ರಂಪ, ಬೀದಿ ರಂಪ ಮಾಡುವುದು ಸರಿಯಲ್ಲ. ಮನೆಯನ್ನು ಕೂಡಿಸುವ ಕೆಲಸ ಮಾಡಲಿ. ಮನೆ ಒಡೆಯುವ ಕೆಲಸ ಬೇಡ ಎಂದು ಸೋಮಣ್ಣಗೆ ಮನವಿ ಮಾಡುವುದಾಗಿ ರೇಣುಕಾಚಾರ್ಯ ಹೇಳಿದರು.

ಸೋತರು ಸೋಮಣ್ಣ ಸಚಿವ

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದಿದ್ದೇ ಯಡಿಯೂರಪ್ಪನವರು. ಬಿಎಸ್‌ವೈ ರೆಡಿಮೇಡ್‌ ಫುಡ್ ಅಲ್ಲ. ತಳಹಂತದಿಂದ ತಾವೂ ಬೆಳೆದು, ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕ. ವಿ.ಸೋಮಣ್ಣ ಕಾಂಗ್ರೆಸ್ಸಿನಿಂದ ಬಂದವರು. ಪಕ್ಷ ಅಧಿಕಾರಕ್ಕೆ ಬಂದಿದ್ದು ಸೋಮಣ್ಣನವರಿಂದ ಅಲ್ಲ. ಕಾಂಗ್ರೆಸ್ ಬಿಟ್ಟು ಬಂದ ನಂತರ ಎರಡು ಸಲ ಸಚಿವರಾಗಿದ್ದು, ಸೋತಾಗಲೂ ಸೋಮಣ್ಣಗೆ ಎಂಎಲ್‌ಸಿ ಮಾಡಿ, ಸಚಿವರಾಗಿದ್ದು ಇದು ಯಡಿಯೂರಪ್ಪ ಮಾಡಿದ ತಪ್ಪಾ?

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವಸರ್ಕಾರ ಹೊಸದಾಗಿ ಜಾತಿಗಣತಿ ನಡೆಸಲಿ: ರೇಣುಕಾಚಾರ್ಯ

* ತರಾತುರಿಯಲ್ಲಿ ವರದಿ ಅಂಗೀಕರಿಸುವ ಸಾಹಸಬೇಡ

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಾತಿ ಗಣತಿ ಬಗ್ಗೆ ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿ ವಿವಿಧ ಸಮಾಜಗಳು ಆಕ್ಷೇಪಿಸಿದ್ದು, ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ, ಅಭಾವೀಮ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸೇರಿ ಅನೇಕ ಸಚಿವರು, ಶಾಸಕರು ಪಕ್ಷಾತೀತವಾಗಿ ವಿರೋಧಿಸಿದ್ದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಅವೈಜ್ಞಾನಿಕ ಜಾತಿ ಗಣತಿ ಬಗ್ಗೆ ವೀರಶೈವ ಲಿಂಗಾಯತ, ಒಕ್ಕಲಿಗ ಸಮುದಾಯಗಳು ತೀವ್ರವಾಗಿ ವಿರೋಧಿಸಿವೆ. ಜಾತಿ ಗಣತಿ ವರದಿ ಬಗ್ಗೆ ವೈಯಕ್ತಿಕವಾಗಿ ನನ್ನ ವಿರೋಧವೂ ಇದೆ. ಬಿಜೆಪಿ ನಾಯಕರು ವರದಿಯ ವಿರೋಧಿಸಿದ್ದಾರೆ. ಇಂತಹ ಅವೈಜ್ಞಾನಿಕ ಜಾತಿ ಗಣತಿ ಕೈಬಿಟ್ಟು, ಹೊಸದಾಗಿ, ವ್ಯವಸ್ಥಿತವಾಗಿ ಜಾತಿ ಗಣತಿ ಕಾರ್ಯ ಸರ್ಕಾರ ನಡೆಸಲಿ ಎಂದು ಒತ್ತಾಯಿಸಿದರು.

ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿ ಎಲ್ಲಾ ಜಾತಿ, ಜನಾಂಗಗಳಲ್ಲೂ ಆರ್ಥಿಕವಾಗಿ ಹಿಂದುಳಿದವರು, ಕಡು ಬಡವರು ಇದ್ದಾರೆ. ತರಾತುರಿಯಲ್ಲಿ ಜಾತಿ ಗಣತಿ ವರದಿ ಅಂಗೀಕರಿಸುವ ಕೆಲಸ ಸರ್ಕಾರ ಮಾಡಬಾರದು. ಜಾತಿ ಗಣತಿ ಮಾಡಿದವರು ಗಾಜಿನ ಮನೆಯಲ್ಲಿ ಕುಳಿತು, ವರದಿ ತಯಾರಿಸಿದ್ದಾರೆ. ಹೊಸದಾಗಿ ಜಾತಿ ಗಣತಿ ನಡೆಸಿ, ಮನೆ ಮನೆಗೆ ಹೋಗಿ, ವರದಿ ತಯಾರಿಸಲು ಸರ್ಕಾರ ಮುಂದಾಗಬೇಕು. ಅವಸರದಲ್ಲಿ ಈಗಿನ ವರದಿ ಅಂಗೀಕರಿಸುವ ದುಸ್ಸಾಹಸ ಸರ್ಕಾರ ಮಾಡಬಾರದು ಎಂದು ರೇಣುಕಾಚಾರ್ಯ ಕಿವಿಮಾತು ಹೇಳಿದರು.

Share this article