ಸರಕಾರಿ ಶಾಲೆಗಳನ್ನು ನಾವೇಕೆ ಉಳಿಸಬೇಕು, ಬೆಳೆಸಬೇಕು?

KannadaprabhaNewsNetwork | Published : Apr 12, 2025 12:48 AM

ಸಾರಾಂಶ

ಊರಿನ ಸರಕಾರಿ ಶಾಲೆ ವಿನಾಶವಾಗುತ್ತಿರುವುದು (ಹಲವಾರು ಶಾಲೆಗಳು ಬಂದ್ ಆಗಿರುವುದು) ಕಳವಳಕಾರಿಯೂ ಹೌದು, ಅಭಿವೃದ್ಧಿ ಹೊಂದುತ್ತಿರುವವರ ಸೋಲೂ ಹೌದು. ಇಂತಹ ಸಂದರ್ಭದಲ್ಲಿ ಗ್ರಾಮಸ್ಥರು ಹೇಗೆ ಶಾಲೆಯನ್ನು ಉಳಿಸಬಹುದು ಹಾಗೂ ಬೆಳೆಸಬಹುದು ಎಂಬ ಚಿಂತನೆಯೇ ಈ ಲೇಖನದ ಉದ್ದೇಶ.

ಊರಿಗೊಂದು ಶಾಲೆ ಅಂದರೆ ಅದು ದೇಗುಲ ಇದ್ದಂತೆ, ದೇಗುಲಗಳ ಜೀರ್ಣೋದ್ಧಾರದಂತೆ ವಿದ್ಯಾದೇಗುಲಗಳ ಜೀರ್ಣೋದ್ಧಾರದೊಂದಿಗೆ ಇನ್ನಷ್ಟು ಮಂದಿ ಪ್ರಯೋಜನ ಪಡೆಯುವಂತೆ ಮಾಡಬೇಕಾಗಿರುವುದು, ಊರಿನ ಫಲಾನುಭವಿಗಳ ಕರ್ತವ್ಯ, ಅದುವೇ ಜ್ಞಾನ.ಇಂದು ಊರು ಅಭಿವೃದ್ಧಿಯಾಗುತ್ತಿದ್ದರೂ ಪ್ರಜೆಗಳು ಅಭಿವೃದ್ಧಿಯಾಗುತ್ತದ್ದಂತೆ, ಊರಿನ ಸರಕಾರಿ ಶಾಲೆ ವಿನಾಶವಾಗುತ್ತಿರುವುದು (ಹಲವಾರು ಶಾಲೆಗಳು ಬಂದ್ ಆಗಿರುವುದು) ಕಳವಳಕಾರಿಯೂ ಹೌದು, ಅಭಿವೃದ್ಧಿ ಹೊಂದುತ್ತಿರುವವರ ಸೋಲೂ ಹೌದು. ಇಂತಹ ಸಂದರ್ಭದಲ್ಲಿ ಗ್ರಾಮಸ್ಥರು ಹೇಗೆ ಶಾಲೆಯನ್ನು ಉಳಿಸಬಹುದು ಹಾಗೂ ಬೆಳೆಸಬಹುದು ಎಂಬ ಚಿಂತನೆಯೇ ಈ ಲೇಖನದ ಉದ್ದೇಶ.ಯಾಕಾಗಿ ಸರಕಾರಿ ಶಾಲೆಗಳು ಬೇಕು?:ಸರಕಾರಿ ಶಾಲೆ ಕೇವಲ ಒಂದು ಕಟ್ಟಡವಲ್ಲ ಅದು ವಿದ್ಯಾ ದೇಗುಲ, ಆ ದೇಗುಲದಲ್ಲಿ ಸರ್ವ ಧರ್ಮದವರು ವಿಧ್ಯೆ ಪಡೆದು ಬಡವನಿಂದ ಶ್ರೀಮಂತರವರಗೂ ವಿದ್ಯೆಯಿಂದ ಬೆಳೆಯಬಹುದು. ಸರಕಾರಿ ಶಾಲಾ ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನವಲ್ಲದೆ ಸರ್ವರೀತಿಯ ಜ್ಞಾನವನ್ನು ಪಡೆಯಬಹುದಾದ ಜ್ಞಾನ ಕೇಂದ್ರ. ಸರಕಾರಿ ಶಾಲೆ ಕೇವಲ ವಿದ್ಯೆ ಕೊಡುವ ಕೇಂದ್ರವಲ್ಲದೆ ಗ್ರಾಮದ ಸಮಗ್ರ ಮಾಹಿತಿ ಇರುವ, ಪಡೆಯುವ, ದಾಖಲೆಗಳನ್ನು ಹೊಂದಿರುವ ಹಾಗೂ ಕೊಡುವ ಕೇಂದ್ರವಾಗಿರುತ್ತದೆ. ಸರಕಾರಿ ಶಾಲೆಯು ಮುಚ್ಚಿ ಹೋದರೆ ಮುಂದಿನ ದಿನಗಳಲ್ಲಿ ಮತದಾನಕ್ಕೆ, ಇನ್ನಿತರ ದಾಖಲೆಗಳಿಗೆ ದೂರದ ಊರಿಗೆ ಅಲೆದಾಡಬೇಕಾದ ಪರಿಸ್ಥಿತಿ ಬರಬಹುದು.ಎಲ್ಲದಕ್ಕಿಂತಲೂ ಮೇಲು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದರೆ ಸರಕಾರ ಹಲವಾರು ಸೌಲಭ್ಯಗಳನ್ನು ಪಡೆಯಬಹುದು ಅಂಗನವಾಡಿಯಿಂದ ಹಂತ ಹಂತವಾಗಿ ಎಲ್ಲಾ ಉನ್ನತ ಶಿಕ್ಷಣಕ್ಕೆ ಪ್ರಯೋಜನಕಾರಿ. ಉದಾಹರಣೆಗೆ ಉನ್ನತ ಶಿಕ್ಷಣಕ್ಕೆ ಕೃಪಾಂಕಗಳು, ಉದ್ಯೋಗ ಮೀಸಲಾತಿಗೆ ಇತ್ಯಾದಿ.ಇಂದೇಕೆ ಸರಕಾರಿ ಶಾಲೆಗಳು ಮುಚ್ಚುತ್ತಿವೆ?:ಹಿಂದಿನ ಕಾಲದಲ್ಲಿ ದೇಶ ವಿದೇಶಗಳಲ್ಲಿ ಸಾಧನೆ ಮಾಡಿದ ವೈದ್ಯಕೀಯ, ತಾಂತ್ರಿಕ, ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಸರಕಾರಿ ಶಾಲೆಯಲ್ಲಿ ಕಲಿತವರೂ ಇದ್ದಾರೆ. ಆದರೆ ಕ್ರಮೇಣ ಸ್ಪರ್ಧಾತ್ಮಕ ಪರೀಕ್ಷೆಗಳು, ಶಿಕ್ಷಣದ ಆಧುನಿಕ ಸೌಕರ್ಯಗಳು, ಮೂಲಭೂತ ಸೌಕರ್ಯಗಳು ಸರಕಾರಿ ಶಾಲೆಯಲ್ಲಿ ಸಿಗುವುದಕ್ಕಿಂತ ಉತ್ತಮ ಗುಣಮಟ್ಟದಲ್ಲಿ ಖಾಸಾಗಿ ಶಾಲೆಯಲ್ಲಿ ಸಿಗುಲು ಪ್ರಾರಂಭವಾದಾಗ, ಉದ್ಯೋಗ ಆಧಾರಿತ ವಿದ್ಯೆಗೆ ಮಕ್ಕಳನ್ನು ತಯಾರಿ ಮಾಡುವಾಗ ಸಹಜವಾಗಿ ಹೆತ್ತವರು ಖಾಸಾಗಿ ಶಾಲೆಗೆ ಒಲವು ತೋರಿಸಿರುವುದು, ಈ ಸೌಲಭ್ಯಗಳು ಸರಕಾರಿ ಶಾಲೆಯಲ್ಲಿ ಲಭ್ಯ ಇಲ್ಲ ಎಂದಾಗಿರುವುದು ಸರಕಾರಿ ಶಾಲೆಗಳಿಗೆ ಹಿನ್ನಡೆ ಎನ್ನಬಹುದು. ಜಾಗತಿಕವಾದ ಈ ಸಂದರ್ಭದಲ್ಲಿ ಆಂಗ್ಲ ಭಾಷೆಯ ಹಿಡಿತ ಚಿಕ್ಕ ಮಕ್ಕಳಿಂದಗೆ ಸಾಧಿಸಬೇಕಾಗಿರುವುದರಿಂದ ಆಂಗ್ಲ ಭಾಷಾ ಶಿಕ್ಷಣಕ್ಕಾಗಿ ಜನರು ಮೊರೆಹೋಗಿ ಸರ್ಕಾರಿ ಶಾಲೆಗಳ ಹಿನ್ನಡೆಗೆ ಒಂದು ಕಾರಣ.ಸರಕಾರಿ ಶಾಲೆಗಳನ್ನು ಹೇಗೆ ಉಳಿಸಿ ಬೆಳೆಸಬಹುದು?:ಸರಕಾರಿ ಶಾಲೆ ಸರಕಾರ ಸ್ವತ್ತು ಎಂಬ ಭಾವನೆ ಸಾಮಾನ್ಯ. ಆದರೆ ಅದು ಸಾರ್ವಜನಿಕ ಸ್ವತ್ತು. ಆ ಗ್ರಾಮದ ಸ್ವತ್ತು ಅಂತಹ ಶಾಲೆಯನ್ನು ಇಂದೂ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸಲು ಸರಕಾರವೇ ನಿರ್ಧಾರ ಮಾಡಿ ಕಾನೂನು ರೂಪಿಸಿದೆ. ಪೋಷಣಾ ಯೋಜನೆಯಡಿಯಲ್ಲಿ ಶಾಲಾ ದತ್ತು ಸ್ವೀಕಾರದ ಈ ನಿರ್ಣಯದೊಂದಿಗೆ ಸರಕಾರಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಸರಕಾರೇತರ ಸಂಸ್ಥೆಗಳು ಅಥವಾ ದಾನಿಗಳ ಶಾಲೆಯನ್ನು ಅಭಿವೃದ್ಧಿ ಪಡಿಸಬಹುದು.ಇಲ್ಲಿ ದತ್ತು ಸ್ವೀಕಾರ ಮಾಡಿದವರಿಂದ ಶಾಲೆಯ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳು ಶ್ರೇಯಸ್ಸಿಗೆ ಈ ಕೆಳಗಿನ ಸೌಲಭ್ಯಗಳನ್ನು ಒದಗಿಸಬಹುದು.೧) ಗೌರವ ಶಿಕ್ಷಕ/ಕಿ, ೨) ಡಿಜಿಟಲ್ ಶಿಕ್ಷಣಕ್ಕೆ ಸ್ಮಾರ್ಟ್ ಕ್ಲಾಸ್ ರೂಂ, ಶಾಲಾ ವಾಹನ, ಗ್ರಾಂಥಾಲಯ, ಕ್ರೀಡಾ ಸಾಮಾಗ್ರಿ, ಪೀಠೋಪಕರಣ, ಶಾಲಾ ತಡೆಗೋಡೆ, ಸಿಸಿ ಕ್ಯಾಮರಾ, ಪಾಕಶಾಲೆ, ತರಕಾರಿ, ಹೂವಿನ ತೋಟ ಇನ್ನಿತರ ಸೌಲಭ್ಯ ಒದಗಿಸಬಹುದು. ಇಂದು ಹೆಚ್ಚಿನ ಮಕ್ಕಳು ಮತ್ತು ಹೆತ್ತವರ ಆಂಗ್ಲ ಭಾಷಾ ಶಿಕ್ಷಣಕ್ಕೆ ಆಸಕ್ತಿ ಇರುವುದರಿಂದ ಸರಕಾರಿ ಶಾಲಾ ಮಕ್ಕಳಿಗೂ ಆಂಗ್ಲಭಾಷಾ ಶಿಕ್ಷಣ ಒದಗಿಸಬಹುದು (ಗೌರವ ಶಿಕ್ಷಕ/ಕಿ ಯರಿಂದ). ದತ್ತು ಸ್ವೀಕಾರ ಮಾಡಿದ ಸಂಸ್ಥೆಗಳಿಗೆ ಅದೇ ಶಾಲೆಯ ಹಳೆ ವಿದ್ಯಾರ್ಥಿಗಳಿಂದ, ಉನ್ನತ ಸಾಧನೆ ಮಾಡಿದ ಉದ್ಯಮಪತಿಗಳಿಂದ, ದೇವಾಲಯ, ದೈವಸ್ಥಾನ, ಮಸೀದಿ, ಚರ್ಚ್ಗಳಿಂದ ಶಿಕ್ಷಣ ದತ್ತಿನಿಧಿಯಾಗಿ ಆರ್ಥಿಕ ಸಹಕಾರ ಸ್ವೀಕರಿಸಬಹುದು. ದತ್ತು ಸ್ವೀಕಾರ ಮಾಡಿದ ಸಂಸ್ಥೆಯು ಬ್ಯಾಂಕ್‌ಗಳಿಂದ, ಕೈಗಾರಿಕಾ ಸಂಸ್ಥೆಯಿಂದ, ಖಾಸಗಿ ಬ್ಯಾಂಕ್, ಸಹಕಾರಿ ಸಂಘ ಇನ್ನಿತರ ಉದ್ಯಮ ವಲಯದಿಂದ ಸಿಎಸ್‌ಆರ್‌ ಫಂಡ್‌ ಸೌಲಭ್ಯ ಪಡೆಯಬಹುದು. ಈ ಎಲ್ಲಾ ಕ್ಷೇತ್ರದಲ್ಲಿ ವಿದ್ಯಾನಿಧಿಗಾಗಿ ಹಣವನ್ನು ಕಾಯ್ದಿರಿಸುತ್ತದೆ.ಇನ್ನು ಸ್ಥಳೀಯ ಗ್ರಾಮದ ಶ್ರೀಮಂತರಿಂದ, ದೊಡ್ಡ ಮಟ್ಟದ ಕೃಷಿಕರಿಂದ ಬೆಳ್ತಂಗಡಿ ಕೃಷಿಕ ಒಬ್ಬ ಅಡಿಕೆ ಕೃಷಿಕರು ವಿದ್ಯಾಭಿಮಾನಿ ಒಂದು ಶಾಲೆಗೆ ಗೌರವ ಶಿಕ್ಷಕೀಯ ಇಡೀ ವರ್ಷದ ಸಂಬಳ ದಾನ ನೀಡುವ ಉದಾಹರಣೆ ಇದೆ. ಸಾಧಾರಣ ಊರಿನ ದೊಡ್ಡ ಅಡಿಕೆ ಕೃಷಿಕರು ೧೦ ಕೆಜಿ ಅಡಿಕೆ ಮಾರಿ ಶಾಲೆಯನ್ನು ಉಳಿಸಲು ಎಂದು ಶಾಸಕರೊಬ್ಬರು ಮಾರ್ಗದರ್ಶನ ಮಾಡಿರುವುದು ಗಮನಾರ್ಹ ಸಲಹೆ. ಈ ಎಲ್ಲಾ ರೀತಿಯಿಂದ ಸಾಮಾಜಿಕ ಕಳಕಳಿಯಿಂದ ದತ್ತು ತೆಗೆದುಕೊಂಡು ಸಂಸ್ಥೆಗೆ ಸಹಕರಿಸಿದರೆ ಸ್ಥಳೀಯವಾಗಿಯೇ ಉನ್ನತ ಗುಣಮಟ್ಟದ ಶಿಕ್ಷಣವನ್ನು ಸ್ಥಳೀಯ ಮಕ್ಕಳಿಗೆ ಒದಗಿಸಬಹುದು.ಚಿಕ್ಕ ಮಕ್ಕಳಿಗೆ ಆಂಗ್ಲ ಭಾಷೆ ಮತ್ತು ಡಿಜಿಟಲ್ ಮಾದರಿ ಶಿಕ್ಷಣ ಯಾಕೆ?ಮರವಾಗಿ ಬಗ್ಗದ್ದು ಗಿಡವಾಗಿ ಬಗ್ಗೀತ್ತೇ ಎಂದ ಗಾದೆಯಂತೆ ಆಂಗ್ಲ ಭಾಷೆಯಲ್ಲಿ ಪ್ರೌಢಿಮೆ ಪಡೆಯಲು ಚಿಕ್ಕ ಪ್ರಾಯದಲ್ಲಿ ಆಂಗ್ಲ ಭಾಷೆಯ ಮಾತುಗಾರಿಕೆ ಮತ್ತು ಬರವಣಿಗೆಯ ತರಬೇತಿ ಅಗತ್ಯ. ಇಂದು ಜಾಗತೀಕರಣದಲ್ಲಿ ಗ್ರಾಮೀಣ ಮಟ್ಟದ ಮಕ್ಕಳು ಸಹ ಜಾಗತಿಕ ಮಟ್ಟಕ್ಕೆ ತಲುಪಬೇಕಾದರೆ ಆಂಗ್ಲ ಭಾಷೆಯಲ್ಲಿ ಫ್ರೌಡಿಮೆ ಹೊಂದುವಂತದ್ದು ಶಿಕ್ಷಣದ ಮೂಲವಾಗಲಿ. ತಾಂತ್ರಿಕ ಬೆಳವಣಿಗೆಯ ವೇಗದಲ್ಲಿರುವ ಪ್ರಪಂಚವು ಇಂದು ಡಿಜಿಟಲ್ ಮತ್ತು ಸ್ಮಾರ್ಟ್ ಕ್ಲಾಸ್ ಮುಖಾಂತರ ಹಲವಾರು ಆ್ಯಪ್‌ಗಳನ್ನು ಬಳಸಿಕೊಂಡು ಅಂಗನವಾಡಿಯಿಂದ ಉನ್ನತ ಶಿಕ್ಷಣದ ತನಕ ವಿವಿಧ ತಜ್ಞರ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ಹೊಂದುವುದೇ ಡಿಜಿಟಲ್ ಮಾದರಿಯ ಶಿಕ್ಷಣ. ಇದರ ಸೌಲಭ್ಯವು ಸರಕಾರಿ ಶಾಲೆಗಳು ಹೊಂದಬೇಕಾಗಿರುವುದು ಪ್ರಸ್ತುತ ಅಗತ್ಯತೆ.ಚಿಕ್ಕ ಮಕ್ಕಳು ದೂರದ ಶಿಕ್ಷಣಕ್ಕೆ ಹೋದರೆ ಕಷ್ಟನಷ್ಟ ಏನು?ಮಕ್ಕಳ ಬಾಲ್ಯ ಬಹಳ ಅಮೂಲ್ಯವಾದುದು, ಉನ್ನತ ಗುಣ ಮಟ್ಟದ ಶಿಕ್ಷಣ ನೀಡಬೇಕೆಂದು ಮಕ್ಕಳನ್ನು ದೂರದ ಶಿಕ್ಷಣಕ್ಕೆ ಹೊರಡಿಸಿದರೆ ಬಾಲ್ಯದಲ್ಲಿಯೂ ಹಲವಾರು ಸಮಸ್ಯೆಗಳನ್ನು ಎದುರಿಸಿ ಅದು ದೀರ್ಘಕಾಲದ ತೊಂದರೆಯನ್ನು ಉಂಟುಮಾಡಬಹುದು. ಉದಾಹರಣೆಗೆ ಮಕ್ಕಳನ್ನು ಬೆಳಗ್ಗೆ ಬೇಗನೆ ಎಬ್ಬಿಸಿ ಸರಿಯಾದ ನಿದ್ರೆ ಒದಗಿಸದಿದ್ದರೆ, ಮಕ್ಕಳಿಗೆ ಮಮತೆಯ ಹಾರೈಕೆ ಮತ್ತು ಆಹಾರ ಸಿಗದಿದ್ದರೆ, ಚಿಕ್ಕ ಪ್ರಾಯದಲ್ಲಿಯೇ ನಿತ್ಯ ದೂರ ಪ್ರಯಾಣದಿಂದ ಸುಸ್ತಾಗಿದ್ದರೆ, ತರಗತಿಯ ಪಾಠ ಕೇಳುವ ತಾಳ್ಮೆ ಇಲ್ಲದಾದರೆ, ಶಾಲೆಯಿಂದ ಹಿಂತಿರುಗಿ ಮಗು ಸುಸ್ತಾದರೆ, ಸಂಜೆ ಆಟ ಮನರಂಜನೆಯಿಂದ ದೂರ ಉಳಿದರೆ, ಮಗುವಿನ ವಿದ್ಯಾಭ್ಯಾಸಕ್ಕೂ, ಆರೋಗ್ಯಕ್ಕೂ, ಹೆತ್ತವರ ಭರವಸೆಗೆ ತೊಂದರೆಯಾಗಬಹುದು. ಚಿಕ್ಕ ಮಕ್ಕಳ ಆರೋಗ್ಯ ಚೆನ್ನಾಗಿ ಇದ್ದಾಗ ಮಾತ್ರ ಕಲೆಕೆಯ ಉತ್ಸಾಹ ಹಾಗೂ ಗುಣಮಟ್ಟದ ವಿದ್ಯಾಭ್ಯಾಸ ಮಕ್ಕಳು ಪಡೆಯಬಹುದು.ಸರಕಾರಿ ಶಾಲೆಯನ್ನು ಉಳಿಸಲು ಜನಪ್ರತಿನಿಧಿಗಳ ಜವಾಬ್ದಾರಿ ಏನು?ಗ್ರಾಮ ಪಂಚಾಯತ್ ಸದಸ್ಯರಿಂದ ಲೋಕಸಭಾ ಪ್ರತಿನಿಧಿಗೂ ಸರ್ಕಾರಿ ಶಾಲೆಯನ್ನು ಉಳಿಸುವ ಜವಾಬ್ದಾರಿ ಇದೆ. ಗ್ರಾಮ ಪಂಚಾಯತ್ ಸದಸ್ಯನ ಮೊದಲ ಆಧ್ಯತೆ ಸರ್ಕಾರಿ ಸೌಲಭ್ಯಗಳನ್ನು ಸ್ಥಳೀಯರಿಗೆ ಸರಿಯಾಗಿ ಸಿಗುವ ಹಾಗೆ ನೋಡಿಕೊಳ್ಳುವುದು, ಶಾಲೆಯ ಸೌಲಭ್ಯಗಳು ಕೊರತೆಯಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದ ಜಾಗೃತರಾಗಿ, ಜಿಲ್ಲಾ ಪಂಚಾಯತ್‌ನಿಂದ , ರಾಜ್ಯ ಸರಕಾರದಿಂದ, ಕೇಂದ್ರ ಸರಕಾರದಿಂದ ಹಾಗೂ ಇನ್ನಿತರ ಮೂಲಗಳಿಂದ ಸೌಲಭ್ಯವನ್ನು ಒಂದಾಗಿ ಶಾಲೆಯನ್ನು ಉಳಿಸಿದರೆ ಅದು ಜನ ಪ್ರತಿನಿಧಿಯ ನಿಜವಾದ ಜವಾಬ್ದಾರಿ. ಸ್ಥಳೀಯವಾಗಿ ಯಾವುದೇ ಸಂಸ್ಥೆ, ಸಂಘಟನೆ, ವ್ಯಕ್ತಿ ಶಾಲೆಯ ಅಬಿವೃದ್ದಿಗೆ ತೊಡಗಿಸಿಕೊಂಡಾಗ ಅವರಿಗೆ ಸಂಪೂರ್ಣ ಸಹಕಾರ ನೀಡಬೇಕು ಹಾಗೂ ಆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ರಾಜಕೀಯ ಉದ್ದೇಶಕ್ಕೆ, ಜಾತಿ ವ್ಯಾಮೋಹಕ್ಕೆ, ಧರ್ಮದ ಅಭಿಮಾನಕ್ಕೆ, ಜೋತ್ತು ಬಿದ್ದು ಶಾಲಾಭಿವೃದ್ಧಿಯಲ್ಲಿ ಹಸ್ತಕ್ಷೇಪ ಮಾಡದೆ ಇದ್ದಾಗ, ಅಭಿವೃದ್ಧಿಯ ನೇತೃತ್ವ ವಹಿಸಿಕೊಂಡವರಿಗೆ ಕೆಲಸ ಮಾಡಲು ಸುಲಭವಾಗುತ್ತದೆ. ಇಬ್ಬರ ಜಗಳದಿಂದ ಕೂಸು ಬಡವಾಯಿತು ಎಂಬ ಪರಿಸ್ಥಿತಿ ನಿರ್ಮಾಣ ವಾಗದ ರೀತಿಯ ಚಿಂತನೆ ಬರಬೇಕು.ಸರಕಾರಿ ಶಾಲೆಗಳಲ್ಲಿ ಈ ಸೌಲಭ್ಯಗಳು ಸಿಗಲಿ:ಆಂಗ್ಲ ಭಾಷೆಯ ಅಗತ್ಯ ಹಾಗೂ ಅನಿವಾರ್ಯ ಇಂದಿನ ಶಿಕ್ಷಣದ ಪ್ರಮುಖ ಭಾಗ, ಸರಕಾರಿ ಶಾಲೆಯಲ್ಲಿಯೂ ಅಂಗನವಾಡಿಯೆಂದರೆ ಮಾತೃ ಭಾಷೆಯೊಂದಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಸಿಗಲಿ. ಆಧುನಿಕರಣದ ಭಾಗವಾದ ಡಿಜಿಟಲ್ ಶಿಕ್ಷಣದ ಮೂಲಕ ದೃಶ್ಯ ಹಾಗೂ ಶ್ರವಣ ಮಾದರಿಯ ಸ್ಮಾರ್ಟ್ ಕ್ಲಾಸ್‌ಗಳ ಸರಕಾರಿ ಶಾಲೆಯಲ್ಲಿ ಇರಲಿ, ವ್ಯಕ್ತಿತ್ವ ವಿಕಸನದ ಆಟೋಟಗಳು ಸಾಂಸ್ಕೃತಿಕ ಕಲೆಗಳ ತರಬೇತಿ, ಜ್ಞಾನ-ವಿಜ್ಞಾನದ ಪ್ರಯೋಗಾಲಯ ಹಾಗೂ ಗ್ರಂಥಾಲಯಗಳು, ಯೋಗ ಧ್ಯಾನ, ಆಧ್ಯಾತ್ಮಿಕ ಜ್ಞಾನದ ತರಬೇತಿ, ಉತ್ತಮ ಆಹಾರ, ಆರೋಗ್ಯ ಶೈಕ್ಷಣಿಕ ಪ್ರವಾಸದ ಅವಕಾಶ, ವಾಹನದ ವ್ಯವಸ್ಥೆ, ಇವೆಲ್ಲವು ಸರಕಾರಿ ಶಾಲೆಯಲ್ಲಿಯೂ ಸಿಕ್ಕಾಗ ಸಹಜವಾಗಿಯೂ ಗ್ರಾಮೀಣ/ಸ್ಥಳೀಯ ಮಟ್ಟದ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ವಿದ್ಯೆಯನ್ನು ಹೊಂದಬಹುದು. ನೆನಪಿರಲಿ, ವಿದ್ಯೆ, ಆಹಾರ, ಆರೋಗ್ಯ ವ್ಯಾಪಾರದ ವಸ್ತುವಾಗಿರದೆ, ಭವ್ಯ ಭವಿಷ್ಯತ್ತಿಗೆ ಸೌಲಭ್ಯವಾಗಲಿ..................................ಲೇಖಕರು: ಕುಶಾಲಪ್ಪ ಗೌಡ ನೆಕ್ಕರಜೆಯೋಗ ಗುರು, ಅಧ್ಯಕ್ಷ ಮುಗೇರಡ್ಕ ಸರಕಾರಿ ಶಾಲಾ

ಸೇವಾ ಟ್ರಸ್ಟ್ (ರಿ) ಮೊಗ್ರು ಬೆಳ್ತಂಗಡಿ.

Share this article