ಬಿಜೆಪಿ ಕಾರ್ಯಕರ್ತರೇ ಪಾಕ್‌ ಪರ ಘೋಷಣೆ ಕೂಗಿದಾಗ ತನಿಖೆ ಏಕೆ ಮಾಡಲಿಲ್ಲ?: ಡಿ.ಕೆ. ಶಿವಕುಮಾರ

KannadaprabhaNewsNetwork |  
Published : Mar 07, 2024, 01:46 AM IST
ೇ್ | Kannada Prabha

ಸಾರಾಂಶ

ಬಿಜೆಪಿ ನಾಯಕರು ನಮ್ಮ ರಾಜೀನಾಮೆ ಕೇಳುತ್ತಿದ್ದಾರೆ. ಅವರಿಗೆ ಯಾವಾಗ ರಾಜೀನಾಮೆ ಬೇಕಂತೆ? ಯಾರಿಗೆ ರಾಜೀನಾಮೆ ನೀಡಬೇಕು ಎಂದು ಕೇಳಿ ಕೊಡೋಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಮ್ಮ ಸರ್ಕಾರದ ಅವಧಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಬಿಜೆಪಿ ತನ್ನ ಅವಧಿಯಲ್ಲಿ ಪಾಕ್ ಪರ ಘೋಷಣೆ ಕೂಗಿದಾಗ ತನಿಖೆಯೇ ನಡೆಸಲಿಲ್ಲ. ಅವರಿಗೆ ದೇಶದ ಬಗ್ಗೆ ಬದ್ಧತೆ ಇದೆಯಾ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರು ನಮ್ಮ ರಾಜೀನಾಮೆ ಕೇಳುತ್ತಿದ್ದಾರೆ. ಅವರಿಗೆ ಯಾವಾಗ ರಾಜೀನಾಮೆ ಬೇಕಂತೆ? ಯಾರಿಗೆ ರಾಜೀನಾಮೆ ನೀಡಬೇಕು ಎಂದು ಕೇಳಿ ಕೊಡೋಣ ಎಂದು ವ್ಯಂಗ್ಯವಾಡಿದರು.

ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಗ ಬಿಜೆಪಿ ಸರ್ಕಾರ ಅವರನ್ನು ಯಾಕೆ ಬಂಧನ‌ ಮಾಡಲಿಲ್ಲ? ಬಿಜೆಪಿಯವರು ಕೇಸರಿ ಶಾಲು ಹಾಕಿ‌ ಘೋಷಣೆ ಕೂಗಿದ್ದರು. ಈ ಪ್ರಕರಣಕ್ಕೆ ಯಾವುದೇ ಎಫ್ಎಸ್ಎಲ್ ವರದಿ ಅವಶ್ಯಕತೆ ಇಲ್ಲ. ನಾವು ರಾಜಕೀಯ ಮಾಡಬಾರದು ಎಂದು ಸುಮ್ಮನೆ ಇದ್ದೆವು. ಅವರ ಈ ಡೋಂಗಿ ಆಟಗಳನ್ನು ನೋಡಿ ನಮ್ಮ ಸ್ಥಳೀಯ ಶಾಸಕರು ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದೇವೆ.

ಕೊಲೆ ಕೊಲೆಯೇ, ಕಳ್ಳತನ ಕಳ್ಳತನವೇ, ನುಡಿಮುತ್ತು ನುಡಿಮುತ್ತೇ ಅಲ್ಲವೇ? ದೇಶದ್ರೋಹ ದೇಶದ್ರೋಹವೇ ಅಲ್ಲವೇ? ನಮ್ಮ ಸರ್ಕಾರದಲ್ಲಿ ಘೋಷಣೆ ಕೂಗಿದವರ ವಿರುದ್ಧ ವಿಚಾರಣೆ ನಡೆಸುತ್ತಿದ್ದೇವೆ. ದೇಶದ ಬಗ್ಗೆ ಬದ್ಧತೆ ನಮಗಿದೆಯೋ? ಬಿಜೆಪಿಯವರಿಗೆ ಇದೆಯಾ? ಎಂದು ತಿರುಗೇಟು ನೀಡಿದರು.

ಮಹದಾಯಿ ವಿಳಂಬ: ಜೋಶಿ ಉತ್ತರ ನೀಡಲಿ

ಮಹದಾಯಿ ಕಾಮಗಾರಿ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ‌ ಉತ್ತರ ನೀಡಬೇಕು. ಮಹದಾಯಿ ಒಪ್ಪಿಗೆ ಸಿಕ್ಕೇ ಬಿಟ್ಟಿತ್ತು ಎಂಬಂತೆ ಹುಬ್ಬಳ್ಳಿಯಲ್ಲಿ‌ ವಿಜಯೋತ್ಸವ ಮಾಡಿದ್ದರಲ್ಲ?. ಆದರೂ ಯಾಕೆ ಇನ್ನೂ ಮಹದಾಯಿ ತೊಡಕುಗಳ ನಿವಾರಣೆ ಮಾಡುತ್ತಿಲ್ಲ? ನಾನು ಸಚಿವನಾದ ನಂತರ ಇದಕ್ಕೆ ಟೆಂಡರ್ ಕರೆಯಲಾಗಿದೆ. ಅನುಮತಿ ಸಿಗುತ್ತಿದ್ದಂತೆ ಕೆಲಸ ಆರಂಭವಾಗಲಿದೆ. ಅನುಮತಿ ಕೊಡಿಸಿದರೆ ಅವರಿಗೂ ಒಂದು ಗೌರವ ಎಂದರು.

ಜೋಶಿ ಅವರಿಗೆ ಅಧಿಕಾರ ಇದೆ. ಅವರು ಅರ್ಧ ಗಂಟೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದರೆ ಕೆಲಸ ಆರಂಭಿಸುತ್ತೇವೆ. ಮಾಧ್ಯಮಗಳು ಉಲ್ಟಾ ಪಲ್ಟಾ ನನಗೆ ಪ್ರಶ್ನೆ ಕೇಳುತ್ತೀರಿ ಜೋಶಿ ಅವರನ್ನು ಯಾಕೆ ಕೇಳುವುದಿಲ್ಲ? ಜೋಶಿ ಯಾಕೆ ಈ ಬಗ್ಗೆ ಚಕಾರ ಎತ್ತುತ್ತಿಲ್ಲ? ಈ ಬಗ್ಗೆ ಅವರು ಉತ್ತರಿಸಲಿ ಎಂದರು.

ಮಾಧ್ಯಮಗಳು ಸುಮ್ಮನಾಗಿವೆ

ಇಡಿ ಪ್ರಕರಣ ರದ್ದು ವಿಚಾರವಾಗಿ ಕೇಳಿದಾಗ, "ಮಾಧ್ಯಮಗಳು ಇಡಿ ದಾಳಿಯಾದಾಗ ಒಂದು ರೀತಿ, ಬಂಧನ‌ ಆದಾಗ ಇನ್ನೊಂದು ರೀತಿ ತೋರಿಸ್ತೀರಿ. ಈಗ ನನ್ನ ವಿರುದ್ಧದ ಪ್ರಕರಣ ರದ್ದಾದ ಮೇಲೆ ಸುಮ್ಮನೇ ಇದ್ದೀರಿ ಅಲಾ ಎಂದು ಪ್ರಶ್ನಿಸಿದರು.

ಟಿಕೆಟ್ ನಿರ್ಧಾರ:

ನಾಳೆ (ಮಾ.7ರಂದು) ಪಕ್ಷದ ಚುನಾವಣಾ ಸಮಿತಿ ಸಭೆ ದೆಹಲಿಯಲ್ಲಿ ನಡೆಯಲಿದೆ. ಸಭೆಯ ನಂತರ ಕಾಂಗ್ರೆಸ್ ಟಿಕೆಟ್ ವಿಚಾರದ‌ ಬಗ್ಗೆ ಎಐಸಿಸಿ‌ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದಾಗ, ಕೇವಲ ಇಬ್ಬರು‌ ಮೂವರಲ್ಲ ಬಿಜೆಪಿಯಿಂದ ಅನೇಕ‌ ಜನ ಕಾಂಗ್ರೆಸ್ ಗೆ ಆಗಮಿಸಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಶೆಟ್ಟರ್ ಪಶ್ಚಾತ್ತಾಪ

ಶೀಘ್ರವೇ ಫ್ಲಡ್ ಗೇಟ್ ಓಪನ್ ಆಗುತ್ತೆ ಎಂಬ ಮಾಜಿ‌ ಸಿಎಂ‌ ಜಗದೀಶ ಶೆಟ್ಟರ್ ಹೇಳಿಕೆ ಬಗ್ಗೆ ಕೇಳಿದಾಗ, ಈ ತಿಂಗಳು ಕಳೆದ ಮೇಲೆ‌ ಶೆಟ್ಟರ್ ಅವರಿಂದ ಪಶ್ಚಾತ್ತಾಪದ ಹೇಳಿಕೆ ಹೊರಬರುತ್ತೆ ನೋಡ್ತಾ ಇರಿ ಎಂದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ