ಸಕಲೇಶಪುರದ ನದಿ, ಹಳ್ಳಕೊಳ್ಳಗಳಿಂದ ಮೋಟರ್‌ಗಳಲ್ಲಿ ಕಾಫಿ ತೋಟಗಳಿಗೆ ನೀರೆತ್ತಲು ಅವಕಾಶ ನೀಡಿ ಎಂಬ ಕಾಫಿ ಬೆಳೆಗಾರ ಮುಖಂಡರ ವಾದಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಪ್ರಮಾಣದ ಟೀಕೆಗಳು ವ್ಯಕ್ತವಾಗುತ್ತಿವೆ.
ಶ್ರೀ ವಿದ್ಯಾ ಸಕಲೇಶಪುರ
ಸಕಲೇಶಪುರ : ನದಿ, ಹಳ್ಳಕೊಳ್ಳಗಳಿಂದ ಮೋಟರ್‌ಗಳಲ್ಲಿ ಕಾಫಿ ತೋಟಗಳಿಗೆ ನೀರೆತ್ತಲು ಅವಕಾಶ ನೀಡಿ ಎಂಬ ಕಾಫಿ ಬೆಳೆಗಾರರ ಮುಖಂಡರ ವಾದಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಪ್ರಮಾಣದ ಟೀಕೆಗಳು ವ್ಯಕ್ತವಾಗುತ್ತಿವೆ.
ಕಳೆದ ಬಾರಿಯ ವಾಡಿಕೆ ಮಳೆ ಆಗದಿರುವುದು ಈ ಬಾರಿ ಬೇಸಿಗೆ ಮುನ್ನವೇ ಜಲಮೂಲಗಳು ಬತ್ತಲು ಕಾರಣವಾಗಿದೆ. ಪ್ರತಿವರ್ಷ ವಾಡಿಕೆ ಮಳೆಗಿಂತ ಪ್ರತಿಶತ ೪ ಪಟ್ಟು ಹೆಚ್ಚು ಮಳೆ ಬೀಳುತ್ತಿದ್ದ ಕಾರಣ ಬಹುತೇಕ ಜಲಮೂಲಗಳಲ್ಲಿ ಅಂತರ್ಜಲ ಉಕ್ಕುತ್ತಿದ್ದರಿಂದ ಬೇಸಿಗೆ ಸಮಯದಲ್ಲೂ ಬಹುತೇಕ ಹಳ್ಳಕೊಳ್ಳಗಳು ಬತ್ತುತ್ತಿರಲಿಲ್ಲ. ಇದರಿಂದ ಸರ್ಕಾರಿ ಹಳ್ಳ, ನದಿ, ಕೆರೆಗಳಿಂದ ಕಾಫಿತೋಟಗಳಿಗೆ ನೀರು ಹಾಯಿಸಿದರೂ ತಾಲೂಕು ಆಡಳಿತ ಯಾವುದೇ ಕ್ರಮಕ್ಕೂ ಮುಂದಾಗುತ್ತಿರಲಿಲ್ಲ. ಇದರಿಂದಾಗಿ ಸಾಕಷ್ಟು ಬೆಳೆಗಾರರು ನದಿ ಸೇರಿದಂತೆ ಹಲವು ಜಲಮೂಲಗಳಿಗೆ ಮೋಟರ್‌ಗಳನ್ನಿಟ್ಟು ತಮಗೆ ಇಷ್ಟ ಬಂದಷ್ಟು ದಿನ ತಮಗೆ ಅಗತ್ಯವಿರುವಷ್ಟು ನೀರು ಹಾಯಿಸುತ್ತಿದ್ದರು.
ಸದ್ಯ ಈ ಬಾರಿ ಮಲೆನಾಡಿನಲ್ಲೂ ಬರದ ಛಾಯೆ ಕಾಣಿಸಿಕೊಂಡಿದ್ದ ಜೀವನದಿ ಹೇಮಾವತಿ ಸೇರಿದಂತೆ ಎಲ್ಲ ಜಲಮೂಲಗಳು ಈ ಬಾರಿ ಮಾರ್ಚ್ ತಿಂಗಳಲ್ಲೆ ಕಾಣಿಸಿಕೊಂಡಿರುವ ಅಧಿಕ ಉಷ್ಣಾಂಶದಿಂದಾಗಿ ಅಂತರ್‌ಜಲವಿಲ್ಲದೆ ಕೆರೆಕಟ್ಟೆ, ನದಿ, ಹಳ್ಳಗಳಲ್ಲಿ ನೀರು ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅವಿಯಾಗುವ ಮೂಲಕ ಬರಿದಾಗುತ್ತಿದೆ. ಇದರಿಂದ ಎಚ್ಚೆತ್ತಿರುವ ತಾಲೂಕು ಆಡಳಿತ ಸರ್ಕಾರಿ ಜಲಮೂಲಗಳಿಗೆ ಇಟ್ಟಿರುವ ಮೋಟರ್‌ಗಳ ತೆರವಿಗೆ ಕಾರ್ಯಚರಣೆ ನಡೆಸುತ್ತಿದೆ.
ಇದರಿಂದ ಕೆರಳಿರುವ ಸಾಕಷ್ಟು ಕಾಫಿ ಬೆಳೆಗಾರರು ತೆರವಿಗೆ ಮುಂದಾಗಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತಾಲೂಕು ಆಡಳಿತಕ್ಕೆ ದೂರು ನೀಡಿದ ಹಿನ್ನೆಲೆ ಉಪವಿಭಾಗಾಧಿಕಾರಿ ಡಾ.ಶೃತಿ ಹಾಗೂ ತಹಸೀಲ್ದಾರ್ ಮೇಘನಾ ನೇತೃತ್ವದಲ್ಲಿ ಕಳೆದ ಎರಡು ದಿನಗಳ ಹಿಂದೆ ಹಾಸನದಲ್ಲಿ ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳೊಂದಿಗೆ ಸಮನ್ವಯ ಸಭೆಯನ್ನು ಮಿನಿವಿಧಾನಸೌಧದಲ್ಲಿ ನಡೆಸುವ ಮೂಲಕ ಪರಿಸ್ಥಿತಿಯ ವಾಸ್ತವತೆಯನ್ನು ಬೆಳೆಗಾರರ ಮುಖಂಡರಿಗೆ ಮನದಟ್ಟು ಮಾಡಲು ಪ್ರಯತ್ನ ನಡೆಸಿದ್ದರು.
ಆದರೆ, ಈ ಅಧಿಕಾರಿಗಳ ಮಾತುಗಳನ್ನು ಕೇಳಲು ಸಿದ್ದರಿಲ್ಲದ ಬೆಳೆಗಾರರು ಕಾಫಿ ಬೆಳೆಗಾರರು ಪ್ರಕೃತಿಗೆ ಸಾಕಷ್ಟು ಕೊಡುಗೆ ನೀಡಿದ್ದು ತಮ್ಮಿಂದಲೇ ತಮ್ಮಿಂದಲೇ ಮಲೆನಾಡು ಉಳಿದಿದೆ, ಕಾಫಿ ಬೆಳೆಗಾರರು ೯ ಲಕ್ಷ ಕೋಟಿ ರು. ರಪ್ತು ಆದಾಯ ಗಳಿಸಿಕೊಡುತ್ತಿದ್ದೇವೆ. ಸದ್ಯ ನದಿಯಿಂದ ನೀರು ಮೇಲೆತ್ತಲು ಬಿಡದಿದ್ದರೆ ಬೆಳೆಗಾರರು ವಿಷ ಕುಡಿಯುವ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದು ಬೆಳೆಗಾರರು ಸಭೆಯಲ್ಲಿ ಹೇಳಿದ್ದರು. ಆದರೂ ಬೆಳೆಗಾರರ ಬೇಡಿಕೆಗೆ ಒಪ್ಪದ ಉಪವಿಭಾಗಾಧಿಕಾರಿ ಮಳೆಯಾಗುವವರೆಗೂ ಸಂಯಮ ಕಾಪಾಡುವಂತೆ ತಿಳಿಸಿದ್ದರು.
ಆದರೆ ಉಪವಿಭಾಗಾಧಿಕಾರಿಯ ಮಾತುಗಳನ್ನು ಕೇಳಲು ಸಿದ್ಧವಿಲ್ಲದ ಮುಖಂಡರು ಸಭೆಯಿಂದ ನಿರ್ಗಮಿಸಿದ್ದರು. ಸದ್ಯ ಈ ಸಮನ್ವಯ ಸಭೆಯಲ್ಲಿ ಚರ್ಚಿತಗೊಂಡ ವಿಚಾರಗಳ ಬಗ್ಗೆ ಪಟ್ಟಣದಲ್ಲಿ ವ್ಯಾಪಕ ವಿಮರ್ಶೆಗಳು ನಡೆಯುತ್ತಿದ್ದು ಮಲೆನಾಡಿನಲ್ಲಿ ಕಾಫಿ ಬೆಳೆ ಪ್ರವರ್ಧಮಾನಕ್ಕೆ ಬಂದು ಅರ್ಧ ಶತಮಾನ ಕಳೆಯುತ್ತಿದೆ.
ಸರ್ಕಾರಿ ಜಲಮೂಲಗಳಿಂದ ಖಾಸಗಿ ಉದ್ದೇಶಕ್ಕೆ ನೀರು ಬಳಸುವಂತಿಲ್ಲ ಎಂಬ ಕಾನೂನಿದ್ದರೂ ಬೆಳೆಗಾರರು ಕಾನೂನಿಗಿಂತ ದೊಡ್ಡವರ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ವ್ಯರ್ಥವಾಗಿ ಹರಿಯುವ ನೀರನ್ನು ಬೆಳೆಗಾರರು ಬಳಸಿದರೆ ತಪ್ಪೇನು. ನದಿಗಳಿಂದ ನೀರೆತ್ತಬೇಡಿ ಎನ್ನುವುದಾದರೆ ಬೆಳೆಗಾರರಿಗೆ ವಿಷ ನೀಡಿ, ಆ ಮೂಲಕ ಬೆಳೆಗಾರರ ಸಮಾಧಿಯ ಮೇಲೆ ತಾಲೂಕು ಆಡಳಿತ ನಡೆಸಲಿ.
ಲೋಹಿತ್ ಕೌಡಳ್ಳಿ. ಬೆಳೆಗಾರರ ಸಂಘದ ಮುಖಂಡ.
ಮಲೆನಾಡಿನಲ್ಲಿ ತೀವ್ರ ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಜಲಮೂಲಗಳು ಬತ್ತಲಾರಂಬಿಸಿವೆ ಇದರಿಂದ ನದಿಗಳಿಂದ ನೀರೆತ್ತದಂತೆ ಬೆಳೆಗಾರರಿಗೆ ಮನವಿ ಮಾಡಲಾಗಿದೆ.
ಡಾ.ಎಂ.ಕೆ ಶೃತಿ. ಉಪವಿಭಾಗಾಧಿಕಾರಿ.
ಇತ್ತೀಚೆಗೆ ಹಾಸನದ ಮಿನಿವಿಧಾನಸೌಧದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಬೆಳೆಗಾರರ ಮುಖಂಡರ ನಡುವೆ ಸಮನ್ವಯ ಸಭೆ ನಡೆಯಿತು.