ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಬಾಡಗ ಪೊದುಕೇರಿ ಪಂದ್ಯನ್ ಪಾಡ್ ಎಂಬಲ್ಲಿ ಎರಡು ದಿನಗಳಿಂದ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಸುತ್ತಮುತ್ತಲಿನ ಕಾಫಿತೋಟಗಳಲ್ಲಿ ಬೆಳೆದಿರುವ ಕಾಫಿ ಗಿಡಗಳು, ಅಡಕೆ, ಬಾಳೆ ಹಾಗೂ ಇನ್ನಿತರ ಫಸಲು ನೀಡುತ್ತಿರುವ ಗಿಡಗಳನ್ನು ಹಾನಿಗೊಳಿಸಿದೆ.ಸುಮಾರು ಮೂವತ್ತುನಲ್ವತ್ತು ದಷ್ಟಪುಷ್ಟವಾಗಿ ಬೆಳೆದು ನಿಂತಿರುವ ಕಾಫಿಗಿಡಗಳು ಕಾಡಾನೆ ವನ್ಯಮೃಗಗಳಪಾಲಾಗಿದೆ. ಕಾಡಾನೆಯ ಉಪಟಳದಿಂದ ಹಾನಿಗೊಳಗಾದ ಸ್ಥಳಕ್ಕೆ ಅಧಿಕಾರಿಗಳು ಆಗಮಿಸುವಂತೆ ಗ್ರಾಮಸ್ಥರು ಪಟ್ಟುಹಿಡಿದರು. ಈ ಸಂದರ್ಭ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಂತ್ರಸ್ತ ಗ್ರಾಮಸ್ಥರೊಂದಿಗೆ ಘಟನೆಯ ಬಗ್ಗೆ ವಿಚಾರಿಸಿದರು. ಹಲವಾರು ಬಾರಿ ಅರಣ್ಯ ಇಲಾಖೆಗೆ ಮನವಿ ಪತ್ರ ನೀಡಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿರುವುದಿಲ್ಲ. ಈ ಭಾಗದಲ್ಲಿ ಕಾಫಿ ತೋಟಕ್ಕೆ ನೀರು ಹಾಯಿಸುವ ಕಾಯಕದಲ್ಲಿ ಕಾಫಿ ಬೆಳೆಗಾರರು ಇದ್ದಾರೆ. ತೋಟದಲ್ಲಿ ಅಳವಡಿಸಲಾಗಿರುವ ಪೈಪ್ ಗಳನ್ನು ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಕಾರ್ಮಿಕರು ಕಾಡಾನೆಗಳ ಮತ್ತು ವನ್ಯಮೃಗಗಳ ದಾಳಿಯ ಬೆದರಿಕೆಯಿಂದ ತೋಟಗಳಿಗೆ ದಿನನಿತ್ಯ ಕಾಯಕಕ್ಕೆ ಬಾರದೇ ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾನಿಗೆ ಒಳಗಾದ ತೋಟಕ್ಕೆ ಪರಿಶೀಲನೆ ನಡೆಸುವುದು ಸಾಮಾನ್ಯವಾಗಿದೆ. ಸನಿಹದಲ್ಲೇ ಅರಣ್ಯಇಲಾಖೆಯ ವಸತಿಗೃಹಗಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಿಬ್ಬಂದಿಗಳು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ.ಪರಿಹಾರದ ಮೊತ್ತಕ್ಕೆ ಹಲವಾರು ಬಾರಿ ಕಚೇರಿಗೆ ಅಲೆಯಬೇಕು. ಕಾಡಾನೆಗಳ ನಿಯಂತ್ರಣವು ಕನಸು ಎಂದಾಗಿದೆ ಎಂದು ಗ್ರಾಮಸ್ಥರು ಹೇಳಿದರು.ಕಾಡಾನೆಗಳು ಮತ್ತು ವನ್ಯಮೃಗಗಳ ದಾಳಿಯು ಈ ಭಾಗದಲ್ಲಿ ನಿರಂತರವಾಗಿದೆ. ಕೆಲವು ವರ್ಷಗಳ ಹಿಂದೆ ಕಾಡಾನೆಗಳ ನಿಯಂತ್ರಣ ಮಾಡುವ ನೆಪದಲ್ಲಿ ಅರಣ್ಯ ಇಲಾಖೆಯು ಅರಣ್ಯ ಅಂಚಿನಲ್ಲಿ ಕಂದಕ ನಿರ್ಮಾಣ ಮಾಡಿತ್ತು. ಆದರೆ ಪೂರ್ಣವಾಗಿರುವುದಿಲ್ಲ. ಕಾಡಾನೆಗಳ ನಿಯಂತ್ರಣವು ಕಡಿಮೆಯಾಗಲಿಲ್ಲ, ಇಲಾಖೆಯ ಪ್ರಯೋಗ ಸೋಲಾರ್ ಬೇಲಿ ಅಳವಡಿಸಲಾಯಿತು. ಸೋಲಾರ್ ಬೇಲಿಯು ನಿರ್ವಹಣೆ ಇಲ್ಲದೆ ಸೊರಗಿ ಹೋಗಿದೆ. ಸರ್ಕಾರವು ಕಾಡಾನೆಗಳ ನಿಯಂತ್ರಣ ಮಾಡಲು ಹಲವು ಯೋಜನೆಗಳು ಜಾರಿಗೆ ತಂದರೂ, ಕಾಡಾನೆಗಳ ನಿಯಂತ್ರಣ ಸಾಧ್ಯವಾಗಿಲ್ಲ. ಸರ್ಕಾರದ ಕೋಟಿ ಕೋಟಿ ಹಣ ಪೋಲಾಗುತ್ತಿದೆ ವಿನಃ ಬೆಳೆಗಾರರು ಸಂಕಷ್ಟದಲ್ಲೇ ಜೀವನ ಸಾಗಿಸುವಂತಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸುವಂತೆ ಪತ್ರ ಬರೆದರೂ ಎರಡು ವರ್ಷಗಳಿಂದ ಇಲಾಖೆಯು ಮೀನಾಮೇಷ ಮಾಡುತ್ತಿದೆ. ಸರ್ಕಾರವು ಮತ್ತು ಅರಣ್ಯ ಇಲಾಖೆಯು ಕಾಡಾನೆಗಳ ಮತ್ತು ವನ್ಯಜೀವಿಗಳ ನಿಯಂತ್ರಣಗೊಳಿಸಲು ಶಾಶ್ವತ ಪರಿಹಾರ ಕಾಣುವಂತಾಗಬೇಕು ಎಂದು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯೆ ಕಂಜಿತಂಡ ಸಂಧ್ಯಾಉತ್ತಪ್ಪ ಹೇಳಿದರು.
ಈ ಭಾಗದಲ್ಲಿ ತಿಂಗಳ ಕಾಲ ಕಾಡಾನೆಗಳು ಅರಣ್ಯವನ್ನು ಬಿಟ್ಟು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದೆ. ಕಾಡಾನೆಗಳು ತೋಟಗಳಲ್ಲಿ ದಾಂದಲೆ ನಡೆಸಿ ಇದೀಗ ಅಪಾರ ಪ್ರಮಾಣದಲ್ಲಿ ನಷ್ಟ ಉಂಟುಮಾಡಿದೆ. ಮಳೆಯು ಬರುವಿಕೆಯು ನಿಧಾನವಾಗಿರುವುದರಿಂದ ತೋಟಗಳಿಗೆ ನೀರು ಹಾಯಿಸುತಿದ್ದೇವೆ. ಈ ಸಮಯದಲ್ಲಿ ಕಾಡಾನೆಗಳ ಅಟ್ಟಹಾಸದಿಂದ ಅಳವಡಿಸಲಾಗಿದ್ದ ಪೈಪ್‌ಗಳನ್ನು ಹಾನಿ ಮಾಡಿದೆ. ಅಲ್ಲದೆ 50 ವರ್ಷಗಳ ಕಾಫಿಗಿಡಗಳು ಹಾನಿಗೀಡಾಗಿದೆ. ಫಸಲು ನೀಡುತ್ತಿದ್ದ ಅಡಕೆ ಮರಗಳು ನೆಲಕಚ್ಚಿವೆ. ತೋಟಗಳನ್ನು ನಂಬಿ ಜೀವನ ನಡೆಸುತ್ತಿರುವ ನಾವುಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳು ಒಂದೆಡೆಯಾದರೆ ಕಾಡುಕೋಣಗಳ ಹಿಂಡು ಒಂದೆಡೆಯಾಗಿದೆ. ಹುಲಿ ಚಿರತೆ ಬೇರೆ. ಜಾನುವಾರುಗಳು ಸಾಕುವುದು, ಕಾರ್ಮಿಕರ ಕೊರತೆ ವಾತಾವರಣದ ವ್ಯತಿರಿಕ್ತ ಪರಿಣಾಮದಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಅರಣ್ಯ ಇಲಾಖೆಯು ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥ ಕಂಜಿತಂಡ ಟೇರಿನ್ ನಾಣಯ್ಯ ತಿಳಿಸಿದರು.ಬ್ರಹ್ಮಗಿರಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬರುವ ವಿ.ಬಾಡಗ ಎಂಬಲ್ಲಿ ಕಾಡಾನೆ ಮಾನವ ಸಂಘರ್ಷದ ಬಗ್ಗೆ ಮಾಹಿತಿ ಲಭ್ಯದ ಮೇರೆಗೆ ಭೇಟಿಯಾಗಿದ್ದೇನೆ. ಗ್ರಾಮಸ್ಥರು ಹೇಳಿರುವಂತೆ ಅರಣ್ಯ ಅಂಚಿನಲ್ಲಿ ಕಂದಕ ನಿರ್ಮಾಣ ಅಪೂರ್ಣಗೊಂಡಿರುವುದು, ಮತ್ತು ಸೋಲಾರ್ ಬೇಲಿ ನಿರ್ವಹಣೆ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ನಮ್ಮ ಮೇಲಾಧಿಕಾರಿಗಳಿಗೆ ಸ್ಥಿತಿಯ ಬಗ್ಗೆ ಪತ್ರ ಬರೆಯಲಾಗುತ್ತದೆ. ಕಂದಕ ನಿರ್ಮಾಣ ಕಾರ್ಯ ಮುಂದುವರೆಸಲಾಗುತ್ತದೆ, ಅಲ್ಲದೆ ಸೋಲಾರ್ ಬೇಲಿ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ಎರಡು ವರ್ಷದ ಅವಧಿಗೆ ನೀಡಲಾಗುತ್ತಿದೆ. ಕಾಡಾನೆಗಳು ಅರಣ್ಯದಿಂದ ದಾಟುವ ಸಂದರ್ಭ ಹಾಗೂ ವಾತಾವರಣದ ವ್ಯತಿರಿಕ್ತ ಪರಿಣಾಮದಿಂದ ಸೋಲಾರ್ ಬೇಲಿ ವಿದ್ಯುತ್ ಹಾನಿಯಾಗಿದೆ. ಕೆಲವು ತಾಂತ್ರಿಕ ದೋಷಗಳಿಂದ ಸೋಲಾರ್ ಬೇಲಿಯಲ್ಲಿ ದೋಷಗಳು ಕಂಡುಬಂದಿದೆ. ಅತೀ ಶೀಘ್ರದಲ್ಲಿ ನ್ಯೂನ್ಯತೆ ಸರಿಪಡಿಸಲಾಗುವುದು ಮತ್ತು ಗ್ರಾಮಸ್ಥರ ಬೇಡಿಕೆಗಳನ್ನು ಆಲಿಸಲು ಉನ್ನತಮಟ್ಟದ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸಭೆಯನ್ನು ಕರೆಯಲಾಗುತ್ತದೆ. ಸಮಸ್ಯೆ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಮಾಕುಟ್ಟವಲಯ ವನ್ಯಜೀವಿ ಸಂರಕ್ಷಣಾ ಅಧಿಕಾರಿ ಸಂತೋಷ್ ಹೇಳಿದರು.
ಈ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ, ಕಂಜಿತಂಡಪೂವಣ್ಣ, ಮಳವಂಡ ಗಿರೀಶ್, ಅನೂಪ್ ಗಣಪತಿ, ತಮ್ಮಯ್ಯ, ಕಲನ್, ಬೋಪಯ್ಯ ಮತ್ತು ಗ್ರಾಮಸ್ಥರು ಹಾಜರಿದ್ದರು.