ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿ ಕಾಡಾನೆ ಪರದಾಟ!

KannadaprabhaNewsNetwork |  
Published : Mar 15, 2024, 01:22 AM IST
ಚಿತ್ರ : 14ಎಂಡಿಕೆ6: ರೈಲ್ವೆ ಬ್ಯಾರಿಕೇಡ್ ಗೆ ಸಿಲುಕಿದ ಕಾಡಾನೆ.  | Kannada Prabha

ಸಾರಾಂಶ

ರೈಲ್ವೆ ಬ್ಯಾರಿಕೇಡ್ ಗೆ ಸಿಲುಕಿ ಕಾಡಾನೆ ಪರದಾಟ ನಡೆಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸಜ್ಜಳ್ಳಿಯಲ್ಲಿ ಗುರುವಾರ ನಡೆದಿದೆ. ಗ್ರಾಮದ ಕೆಲವರನ್ನು ಹೆಣ್ಣಾನೆ ಆಕ್ರಮಣ ಮಾಡಲು ಯತ್ನಿಸಿದ್ದು ಆರ್.ಆರ್.ಟಿ ತಂಡದ ವಿನೋದ್, ದರ್ಶನ್, ಹರ್ಷಿತ್ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿಕಾಡಾನೆ ಹಾವಳಿ ತಡೆಗೆ ಕೋಟ್ಯಾಂತರ ರುಪಾಯಿ ವೆಚ್ಚ ಮಾಡಿ ಹಾಕಲಾಗಿರುವ ರೈಲ್ವೆ ಬ್ಯಾರಿಕೇಡ್ ಗೆ ಸಿಲುಕಿ ಕಾಡಾನೆ ಪರದಾಟ ನಡೆಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸಜ್ಜಳ್ಳಿಯಲ್ಲಿ ಗುರುವಾರ ನಡೆದಿದೆ.ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಳಿ ಭಾಗದಲ್ಲಿ ಬುಧವಾರ ರಾತ್ರಿ ಹೆಣ್ಣು ಕಾಡಾನೆ ಮರಿಯೊಂದಿಗೆ ಸಜ್ಜಳಿ ಭಾಗದ ಆಹಾರ ಹುಡುಕಿ ತೋಟಕ್ಕೆ ಬಂದಿತ್ತು. ಆದರೆ ಗುರುವಾರ ಬೆಳಿಗ್ಗೆ 7.30ರ ಸಮಯದಲ್ಲಿ ಅರಣ್ಯಕ್ಕೆ ಹಿಂತಿರುಗುವ ಸಂದರ್ಭದಲ್ಲಿ ಮರಿ ಆನೆ ರೈಲ್ವೆ ಬ್ಯಾರಿಕ್ಯಾಡ್ ಒಳಗಿನಿಂದ ಅರಣ್ಯ ಪ್ರವೇಶಿಸಿದ್ದು ತಾಯಿ ಆನೆಗೆ ರೈಲ್ವೆ ಬ್ಯಾರಿಕ್ಯಾಡ್ ದಾಟಲು ಸಾಧ್ಯವಾಗದೆ ಒಂದು ಕೀ.ಮೀ.ನಷ್ಟು ಸಜ್ಜಳ್ಳಿ ಮುಖ್ಯ ರಸ್ತೆಯ ಪಕ್ಕದಲ್ಲೇ ಸಂಚರಿಸಿ ಅರಣ್ಯ ಪ್ರವೇಶಿಸಿದೆ.ಈ ಸಮಯದಲ್ಲಿ ಗ್ರಾಮದ ಕೆಲವರನ್ನು ಹೆಣ್ಣಾನೆ ಆಕ್ರಮಣ ಮಾಡಲು ಯತ್ನಿಸಿದ್ದು ಆರ್.ಆರ್.ಟಿ ತಂಡದ ವಿನೋದ್, ದರ್ಶನ್, ಹರ್ಷಿತ್ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಿದ್ದರು.ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕ್ಯಾಡ್ ಕೆಲಸ ಮುಗಿದಿದ್ದರೂ ಕಾಡಾನೆಗಳು ಮಾತ್ರ ನಾಡಿಗೆ ಬರುತ್ತಿದ್ದು, ದೊಡ್ಡ ಗಾತ್ರದ ಆನೆಗಳು ರೈಲ್ವೆ ಬ್ಯಾರಿಕ್ಯಾಡ್ ದಾಟಿ ಬರುತ್ತಿದೆ. ಕಾಡಾನೆಗಳು ಕಾಜೂರು ಗ್ರಾಮದಲ್ಲಿ ರೈಲ್ವೆ ಬ್ಯಾರಿಕ್ಯಾಡ್ ಗೇಟ್ ತಳ್ಳಿ ತೋಟ ಪ್ರವೇಶಿದವು. ಇದರಿಂದಾಗಿ ಕೋಟಿಗಟ್ಟಲೇ ಖರ್ಚು ಮಾಡಿ ರೈಲ್ವೆ ಬ್ಯಾರಿಕ್ಯಾಡ್ ಆಳವಡಿಸಿ ಪ್ರಯೋಜನ ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬಲಿ:ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆನ್ನಂಗಿ ಅಬ್ಬೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಅಜಬಾನು (37) ಆನೆ ದಾಳಿಯಿಂದ ಮೃತಪಟ್ಟವರು.ಅಬ್ಬೂರು ಬಳಿಯ ಬೀಚ್ ಲ್ಯಾಂಡ್ ಕಾಫಿ ತೋಟವೊಂದರಲ್ಲಿ ಘಟನೆ ನಡೆದಿದ್ದು, ಕಾರ್ಮಿಕರೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ಮಹಿಳೆಯನ್ನು ಪಾಲಿಬೆಟ್ಟ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು.ಪಾಲಿಬೆಟ್ಟ ಆಸ್ಪತ್ರೆ ಮುಂಭಾಗ ಸ್ಥಳೀಯರು ಜಮಾಯಿಸಿ ಕಾಡಾನೆ ಹಾವಳಿ ತಡೆಗಟ್ಟುವಲ್ಲಿ ವಿಫಲ ಎಂದು ಅಸಮಾಧಾನ ವ್ಯಕ್ತಪಡಿಸಿ. ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಾರ್ಮಿಕರು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಪೊಲೀಸರು, ಅರಣ್ಯ ಅಧಿಕಾರಿಗಳ ಭೇಟಿ ನೀಡಿದರು.ಒಂಟಿ ಸಲಗ ಸಂಚಾರ:ಕಾಜೂರು ಮೀಸಲು ಅರಣ್ಯದ ಬಳಿ ಮಡಿಕೇರಿ ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲಿ ಒಂಟಿಸಲಗ ಬೆಳ್ಳಂಬೆಳಗ್ಗೆಯೇ ಸಂಚರಿಸುತ್ತಿದ್ದು, ಜನಸಾಮಾನ್ಯರು ಭಯಭೀತರಾಗಿದ್ದಾರೆ.ಈ ಭಾಗದಲ್ಲಿ ಟ್ರಂಚ್, ಸೋಲಾರ್ ತಂತಿ ಹಾಗೂ ರೇಲ್ವೇ ಬ್ಯಾರಿಕ್ಯಾಡ್ ಅಳವಡಿಸಲಾಗಿದೆ. ಆದರೂ ರಸ್ತೆಯಲ್ಲಿ ಆನೆ ಸಂಚಾರ ಮಾತ್ರ ಕಡಿಮೆಯಾಗಿಲ್ಲ. ಸರ್ಕಾರದ ಯೋಜನೆಗಳು ಯಾವುದೂ ಸರಿಯಾಗಿ ಅನುಷ್ಠಾನವಾಗದೆ, ಕೋಟ್ಯಾಂತರ ಹಣವೆಲ್ಲಾ ನೀರು ಪಾಲಾಗುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.ಕಾಡನೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಕಾಡಿನಲ್ಲಿ ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆಯಾಗದ ಹೊರತು ಕಾಡಾನೆಗಳ ನಿಯಂತ್ರಣ ಸಾಧ್ಯವಿಲ್ಲ ಎಂದು ಯಡವಾರೆ ಗ್ರಾಮದ ಕೃಷಿಕ ಅಶೋಕ್ ದೂರಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ