ಅಡಕೆ ತೋಟಕ್ಕೆ ವನ್ಯಜೀವಿಗಳ ಕಾಟ

KannadaprabhaNewsNetwork | Published : Oct 28, 2023 1:15 AM

ಸಾರಾಂಶ

ಬಿಸಿಲಿನ ವಾತಾವರಣದಲ್ಲಿ ಕೋತಿಗಳು ತೆಂಗು ಕೃಷಿಯಡೆಗೆ ಲಗ್ಗೆಯಿಟ್ಟರೆ, ಕಾಡು ಹಂದಿಗಳು ತೋಟಕ್ಕೆ ನುಗ್ಗಿ ಅಡಕೆ ಗಿಡ ನಾಶಪಡಿಸುತ್ತಿವೆ. ಕೋತಿಗಳು ಒಮ್ಮೆ ತೋಟಕ್ಕೆ ದಾಳಿ ಮಾಡಿದರೆ ಎಳನೀರು ಹಾಗೂ ತೆಂಗಿನಕಾಯಿ ಎಳೆದು ಕೆಡವುತ್ತವೆ.

ಹೊನ್ನಾವರ:

ತಾಲೂಕಿನ ಸಾಲ್ಕೋಡ್ ಗ್ರಾಮದ ಗೋಡಾಮಕ್ಕಿಯಲ್ಲಿ ಕಾಡುಪ್ರಾಣಿಗಳ ಉಪಟಳ ಮೀತಿ ಮೀರಿದ್ದು ವಿನಾಯಕ ಸುಬ್ರಹ್ಮಣ್ಯ ಭಟ್ ಎನ್ನುವವರ ತೋಟದಲ್ಲಿಯ ನೂರಾರು ಅಡಕೆ ಸಸಿಗಳು ಕಾಡುಹಂದಿ ಕಾಟದಿಂದ ಹಾನಿಯಾಗಿದೆ.

ರಾತ್ರಿ ತೋಟಕ್ಕೆ ಆಗಮಿಸುವ ಕಾಡುಹಂದಿ ರೈತರು ಬೆಳೆಸಿದ ಅಡಕೆ, ತೆಂಗು, ಬಾಳೆ ಗಿಡ ಮುರಿದು ಹಾಕುತ್ತಿವೆ. ಕೊಳೆರೋಗದಿಂದ ಅಡಕೆ ಬೆಳೆ ನಷ್ಟ ಒಂದೆಡೆಯಾದರೆ, ಇನ್ನೊಂದೆಡೆ ಮಿಶ್ರ ಬೆಳೆಗಳಾದ ಬಾಳೆ, ಕಾಳುಮೆಣಸು, ತೆಂಗು, ತರಕಾರಿಗಳು ಕಾಡು ಪ್ರಾಣಿಗಳ ದಾಳಿಯಿಂದಾಗಿ ನಾಶವಾಗುತ್ತಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.ಈ ಬಾರಿ ಸಕಾಲಕ್ಕೆ ಮಳೆ ಬರದೇ ಬೇಸಿಗೆಯಲ್ಲಿ ಅಡಕೆ ಚಂಡೆ ಒಣಗಿದರೆ ಜುಲೈ ತಿಂಗಳಿನಲ್ಲಿ ಒಮ್ಮೆಲೆ ಸುರಿದ ಮಳೆಯಿಂದ ಕೊಳೆರೋಗ ಕಾಡಿತ್ತು. ಬಿಸಿಲಿನ ವಾತಾವರಣದಲ್ಲಿ ಕೋತಿಗಳು ತೆಂಗು ಕೃಷಿಯಡೆಗೆ ಲಗ್ಗೆಯಿಟ್ಟರೆ, ಕಾಡು ಹಂದಿಗಳು ತೋಟಕ್ಕೆ ನುಗ್ಗಿ ಅಡಕೆ ಗಿಡ ನಾಶಪಡಿಸುತ್ತಿವೆ. ಕೋತಿಗಳು ಒಮ್ಮೆ ತೋಟಕ್ಕೆ ದಾಳಿ ಮಾಡಿದರೆ ಎಳನೀರು ಹಾಗೂ ತೆಂಗಿನಕಾಯಿ ಎಳೆದು ಕೆಡವುತ್ತವೆ.ಮಳೆಗಾಲದಲ್ಲಿ ನೆಟ್ಟು ಬೆಳೆಸಿದ ಅಡಕೆ, ಬಾಳೆ ಗಿಡ ಹಾಗೂ ಕಾಳು ಮೆಣಸಿನ ಬಳ್ಳಿ ಕಾಡು ಹಂದಿಗಳ ಪಾಲಾಗುತ್ತಿವೆ. ವರ್ಷದಿಂದ ವರ್ಷಕ್ಕೆ ಕೂಲಿ ವೆಚ್ಚ ಹಾಗೂ ಇತರೆ ಖರ್ಚು ಹೆಚ್ಚಳ ಆಗುತ್ತಿರುವುದರಿಂದ ಸಾಂಪ್ರದಾಯಿಕವಾಗಿ ನಡೆಸುತ್ತಾ ಬಂದಿದ್ದ ತೋಟಗಾರಿಕೆ ಪದ್ಧತಿ ಅನುಸರಿಸದೇ ಆಧುನಿಕ ಪದ್ಧತಿಗೆ ಹೊಂದಿಕೊಳ್ಳುದರಿಂದ ಇಳುವರಿ ಕಡಿಮೆವಾಗುತ್ತಿದೆ. ಈ ಮಧ್ಯೆ ಇರುವ ಬೆಳೆ ಇತ್ತಿಚೀನ ವರ್ಷದಲ್ಲಿ ಕಾಡು ಪ್ರಾಣಿಗಳಿಂದ ಕಾಪಾಡಿಕೊಳ್ಳುವುದೇ ಸವಾಲಾಗಿ ಮಾರ್ಪಟ್ಟಿದೆ. ಮಂಗನನ್ನು ಓಡಿಸಲು ಹಲವು ಬಗೆಯ ವಸ್ತುಗಳನ್ನು ಕಂಡುಹಿಡಿದರೂ ರಾತ್ರಿ ಹೊತ್ತು ನುಗ್ಗುವ ಕಾಡುಹಂದಿಯ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಈ ಹಿಂದೆ ಪ್ರತಿ ಮನೆಯಲ್ಲಿಯೂ ನಾಯಿ ಇರುತ್ತಿತ್ತು. ಇಂದು ಚಿರತೆ ಮನೆಯಂಗಳಕ್ಕೆ ಬಂದು ನಾಯಿ ಭೇಟಿಯಾಡುವುದರಿಂದ ನಾಯಿ ಸಾಕಲು ಹಿಂದೇಟು ಹಾಕುತ್ತಿದ್ದಾರೆ ರೈತರು.ತೋಟ ಹಾನಿಯಾದವರ ಮನೆಯಲ್ಲಿಯೇ ಕಳೆದ ಮೂರು ವರ್ಷದಲ್ಲಿ ನಾಲ್ಕು ನಾಯಿ ಚಿರತೆಯ ಪಾಲಾಗಿವೆ. ಕಷ್ಟಪಟ್ಟು ನೆಟ್ಟ ಅಡಕೆ ಸಸಿ ಈ ರೀತಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಕ್ರಮಕೈಗೊಂಡು ರೈತರು ಬೆಳೆದ ಬೆಳೆಗೆ ಆದ ಹಾನಿಗೆ ಪರಿಹಾರ ಒದಗಿಸಿ ನೆರವಾಗಬೇಕಿದೆ.

Share this article