ಅಗತ್ಯಬಿದ್ದರೆ ಕೆಫೆ ಸ್ಫೋಟ ತನಿಖೆ ಎನ್‌ಐಎಗೆ: ಸಿಎಂ ಸಿದ್ದರಾಮಯ್ಯ

KannadaprabhaNewsNetwork | Updated : Mar 04 2024, 11:06 AM IST

ಸಾರಾಂಶ

ಅಗತ್ಯ ಬಿದ್ದರೆ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಆದರೆ, ಈ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಗತ್ಯ ಬಿದ್ದರೆ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಆದರೆ, ಈ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಮೇಶ್ವರಂ ಸ್ಫೋಟ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ತನಿಖೆ ನಡೆಯುತ್ತಿದೆ. ಆರೋಪಿ ಇನ್ನೂ ಸಿಕ್ಕಿಲ್ಲ ಎಂದರು. 

ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಇದೊಂದು ಸಿಲ್ಲಿ ಘಟನೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಾಂಬ್ ಸ್ಫೋಟ ಪ್ರಕರಣಗಳು ಸಿಲ್ಲಿ ಘಟನೆಗಳಾಗುವುದಿಲ್ಲ. 

ಜನರ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಸ್ಪಷ್ಟಪಡಿಸಿದರು.

ಬ್ರಾಂಡ್ ಬೆಂಗಳೂರು ಈಗ ಬಾಂಬ್ ಬೆಂಗಳೂರು ಆಗಿದೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ಅವರ ಕಾಲದಲ್ಲಿ ಸ್ಫೋಟವಾಗಿದ್ದಾಗ ಬೆಂಗಳೂರು ಏನಾಗಿತ್ತು?.

 2008 ರಿಂದ 4 ಬಾರಿ ಬಾಂಬ್ ಬ್ಲಾಸ್ಟ್ ಆಗಿದ್ದಕ್ಕೆ ಏನೆಂದು ಕರೆಯಬೇಕು?. ಇದು ಎನ್ಐಎ, ಆರ್‌ಎಡಬ್ಲ್ಯೂ ಅವರ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು. 

ನಾನು ಸ್ಫೋಟ ಪ್ರಕರಣವನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ, ಖಂಡಿಸುತ್ತೇನೆ. ಆದರೆ, ಈ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡಬಾರದು. 

ಮಂಗಳೂರಿನಲ್ಲಿ ಈ ಹಿಂದೆ ಕುಕ್ಕರ್ ಬಾಂಬ್‌ ಸ್ಫೋಟವಾಗಿತ್ತು. ಬಿಜೆಪಿ ಕಚೇರಿ ಮುಂದೆಯೇ ಸ್ಫೋಟ ನಡೆದಿತ್ತು. ಆಗ ಬಿಜೆಪಿ ಅಧಿಕಾರದಲ್ಲಿತ್ತು ಎಂಬುದು ನೆನಪಿರಲಿ ಎಂದರು.

Share this article