ರಕ್ತ ಕೊಟ್ಟೇವು, ಕೋಳಿ ಅಂಗಡಿಗೆ ಅವಕಾಶವಿಲ್ಲ: ಛಲವಾದಿ ಮಹಾಸಭಾ ಅಧ್ಯಕ್ಷ ಮಂಜುನಾಥ್

KannadaprabhaNewsNetwork |  
Published : Mar 17, 2024, 01:49 AM IST
16ಎಚ್ಎಸ್ಎನ್11 : ಛಲವಾದಿ ಮಹಾ ಸಭಾ ಪದಾಧಿಕಾರಿಗಳಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು. | Kannada Prabha

ಸಾರಾಂಶ

ಚನ್ನಕೇಶವನ ದೇವಾಲಯ ಆವರಣದಲ್ಲಿ ಕೋಳಿ ಅಂಗಡಿಗಳನ್ನು ಈಗಾಗಲೇ ತೆರವುಗೊಳಿಸಲಾಗಿದ್ದು ಕೋಳಿ ಅಂಗಡಿ ಮಾಲೀಕರು ನ್ಯಾಯಾಲಯದ ತಡೆ ಆಜ್ಞೆ ತಂದು ಅಲ್ಲೇ ಅಂಗಡಿ ತೆರೆಯುವ ಹುನ್ನಾರ ನಡೆಸಿದ್ದು, ದಲಿತರ ರಕ್ತ ಹರಿದರೂ ಪರವಾಗಿಲ್ಲ, ಯಾವುದೇ ಕಾರಣಕ್ಕೂ ಮತ್ತೆ ವ್ಯಾಪಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಮಂಜುನಾಥ್ ಕಿಡಿಕಾರಿದರು. ಬೇಲೂರಿನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಸುದ್ದಿಗೋಷ್ಠಿ । ಕಾರ್ಯಾಧ್ಯಕ್ಷ ಪರ್ವತಯ್ಯ ಆಕ್ರೋಶ

ಕನ್ನಡಪ್ರಭ ವಾರ್ತೆ ಬೇಲೂರು

ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇಗುಲ ರಸ್ತೆಯ ಬಸ್ ನಿಲ್ದಾಣ ಮುಂಭಾಗ ಇರುವ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಹೊಂದಿಕೊಂಡಂತೆ ಇರುವ ಕೋಳಿ ಅಂಗಡಿಗಳನ್ನು ಈಗಾಗಲೇ ತೆರವುಗೊಳಿಸಲಾಗಿದ್ದು ಕೋಳಿ ಅಂಗಡಿ ಮಾಲೀಕರು ನ್ಯಾಯಾಲಯದ ತಡೆ ಆಜ್ಞೆ ತಂದು ಅಲ್ಲೇ ಅಂಗಡಿ ತೆರೆಯುವ ಹುನ್ನಾರ ನಡೆಸಿದ್ದು, ದಲಿತರ ರಕ್ತ ಹರಿದರೂ ಪರವಾಗಿಲ್ಲ, ಯಾವುದೇ ಕಾರಣಕ್ಕೂ ಮತ್ತೆ ವ್ಯಾಪಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಮಂಜುನಾಥ್ ಮತ್ತು ಕಾರ್ಯಾಧ್ಯಕ್ಷ ಪರ್ವತಯ್ಯ ಆಕ್ರೋಶ ವ್ಯಕ್ತಪಡಿಸಿದರು

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿನ ಅಂಬೇಡ್ಕರ್ ಭವನದ ಬಳಿ ಅಸ್ವಚ್ಛತೆಗೆ ಕಾರಣವಾದ ಕೋಳಿ ಅಂಗಡಿಗಳನ್ನು ತೆರವು ಮಾಡಬೇಕು ಎಂದು ದಲಿತರು ಸತತ ೨೬ ವರ್ಷದಿಂದ ನಿರಂತ ಹೋರಾಟ ನಡೆಸುತ್ತ ಬಂದಿದ್ದಾರೆ. ಜನನಾಯಕರ ಇಚ್ಛಾಶಕ್ತಿ ಕೊರತೆಯಿಂದ ಕೋಳಿ ಅಂಗಡಿ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಶಾಸಕ ಎಚ್.ಕೆ.ಸುರೇಶ್ ಎಸ್ಸಿ, ಎಸ್ಟಿ ಸಭೆಯಲ್ಲಿ ಕೋಳಿ ಅಂಗಡಿ ತೆರವುಗೊಳಿಸಲು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಇತ್ತೀಚಿಗೆ ನೂತನವಾಗಿ ಆಯ್ಕೆಯಾದ ಪುರಸಭಾ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್ ಮತ್ತು ಮುಖ್ಯಾಧಿಕಾರಿ ಕೋಳಿ ಅಂಗಡಿಗಳನ್ನು ತೆರವುಗೊಳಿಸಿದ್ದು ದಲಿತರ ಸಮುದಾಯಕ್ಕೆ ನ್ಯಾಯ ದೊರಕಿದಂತಾಗಿದೆ ಎಂದು ಹೇಳಿದರು.

ವಿಶ್ವವಿಖ್ಯಾತ ಪ್ರವಾಸಿ ಕೇಂದ್ರ ಬೇಲೂರು ಪಟ್ಟಣದ ಪ್ರವೇಶ ದ್ವಾರದಲ್ಲಿ ಕೋಳಿ ಅಂಗಡಿ ವಾಸನೆಯಿಂದ ಮೂಗು ಮುಚ್ಚಿ ದೇಗುಲಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಳಿ ಅಂಗಡಿ ಮಾಲೀಕರು ತಮಗೆ ಸೂಚಿಸಿರುವ ಸ್ಥಳದಲ್ಲಿ ಕೋಳಿ ಅಂಗಡಿ ಸ್ಥಾಪನೆ ಮಾಡಿದರೆ ಅಭ್ಯಂತರವಿಲ್ಲ. ಇದನ್ನು ಮೀರಿ ಈಗಿರುವ ಸ್ಥಳದಲ್ಲೇ ಕೋಳಿ ಅಂಗಡಿ ವ್ಯಾಪಾರ ಆರಂಭಿಸಿದರೆ ದಲಿತರು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಛಲವಾದಿ ಮಹಾಸಭಾ ಗೌರವಾಧ್ಯಕ್ಷ ಎಂ.ಜಿ.ವೆಂಕಟೇಶ್ ಮಾತನಾಡಿ ಪುರಸಭೆಗೆ ಎರಡು ಬಾರಿ ಅಧ್ಯಕ್ಷರಾಗಿ ಮತ್ತು ರಾಜ್ಯ ಕರ್ಮಚಾರಿ ಅಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಂ.ಆರ್.ವೆಂಕಟೇಶ್ ಅಂಬೇಡ್ಕರ್ ಬಳಿ ಇರುವ ಕೋಳಿ ಅಂಗಡಿಯನ್ನು ತೆರವು ಮಾಡಲು ಮೌನ ವಹಿಸಿರುವ ಬಗ್ಗೆ ಉತ್ತರಿಸಬೇಕಿದೆ ಎಂದು ಹೇಳಿದರು.

ಅಂಬೇಡ್ಕರ್ ಸಮುದಾಯ ಭವನ ಕೇವಲ ದಲಿತ ಸಮುದಾಯಕ್ಕೆ ಮೀಸಲಾಗಿಲ್ಲ, ಕೆಲ ಮುಖಂಡರು ಕೋಳಿ ಅಂಗಡಿ ಮಾಲೀಕರ ಪರವಾಗಿ ನಿಂತಿದ್ದಾರೆ. ಈ ಹಿಂದೆ ಆಡಳಿತ ನಡೆಸಿದ ಶಾಸಕರು ಕೋಳಿ ಅಂಗಡಿ ತೆರವುಗೊಳಿಸುವಲ್ಲಿ ಹಿನ್ನಡೆ ಸಾಧಿಸಿದ್ದರು. ಆದರೆ ಶಾಸಕ ಎಚ್‌.ಕೆ.ಸುರೇಶ್ ಯಾವುದೇ ಆಸೆ ಆಮಿಷ ಲಾಬಿಗೆ ಒಳಗಾಗದೆ ದಿಟ್ಟ ನಿರ್ಧಾರವನ್ನು ಕೈಗೊಂಡು ಕೋಳಿ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ಶಾಸಕ ಸುರೇಶ್‌ ಸಫಲರಾಗಿದ್ದಾರೆ. ಅವರಿಗೆ ತಾಲೂಕಿನ ದಲಿತ ಸಮುದಾಯ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ ಎಂದರು.

ತಾಲೂಕು ಮಹಾ ಛಲವಾದಿ ಗೌರವಾಧ್ಯಕ್ಷ ಎಂ.ಜಿ.ವೆಂಕಟೇಶ್, ಉಪಾಧ್ಯಕ್ಷ ರಮೇಶ್, ತಾಲೂಕು ಯೂತ್ ಉಪಾಧ್ಯಕ್ಷ ಹರೀಶ್ ಇದ್ದರು. ಛಲವಾದಿ ಮಹಾ ಸಭಾ ಪದಾಧಿಕಾರಿಗಳಿಂದ ಬೇಲೂರಲ್ಲಿ ಮಾಧ್ಯಮಗೋಷ್ಠಿ ನಡೆಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ