ಸುಮಲತಾಗೆ ಮೈತ್ರಿ ಧರ್ಮ ಪಾಲನೆ ಅನಿವಾರ್ಯ?

KannadaprabhaNewsNetwork | Published : Mar 14, 2024 2:01 AM

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಸಿಗುವ ಖಚಿತ ವಿಶ್ವಾಸದಲ್ಲಿದ್ದ ಹಾಲಿ ಸಂಸದೆ ಸುಮಲತಾ ಅವರಿಗೆ ಈಗ ನಿರಾಸೆಯಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿರುವುದರಿಂದ ಮೈತ್ರಿ ಧರ್ಮ ಪಾಲನೆ ಅವರಿಗೆ ಈಗ ಅನಿವಾರ್ಯವಾಗಿದೆ.

- ಮಂಡ್ಯ ಜೆಡಿಎಸ್‌ ಪಾಲಾಗುವುದು ಬಹುತೇಕ ಖಚಿತ । ಸಂಸದೆಯ ಮುಂದಿನ ನಡೆ ಏನು?: ಕುತೂಹಲ

ಕನ್ನಡಪ್ರಭ ವಾರ್ತೆ, ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಸಿಗುವ ಖಚಿತ ವಿಶ್ವಾಸದಲ್ಲಿದ್ದ ಹಾಲಿ ಸಂಸದೆ ಸುಮಲತಾ ಅವರಿಗೆ ಈಗ ನಿರಾಸೆಯಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿರುವುದರಿಂದ ಮೈತ್ರಿ ಧರ್ಮ ಪಾಲನೆ ಅವರಿಗೆ ಈಗ ಅನಿವಾರ್ಯವಾಗಿದೆ.

ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅವರು ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗದಿದ್ದರೂ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ನನಗೆ ಎಂಬ ಖಚಿತ ವಿಶ್ವಾಸದಲ್ಲಿದ್ದರು. ಅಲ್ಲದೆ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನನ್ನ ಸ್ಪರ್ಧೆ ಖಚಿತ ಎಂದು ಹೇಳುತ್ತಲೇ ಬರುತ್ತಿದ್ದ ಸುಮಲತಾ ಅವರಿಗೋಸ್ಕರ ಮಂಡ್ಯ ಕ್ಷೇತ್ರವನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳುವುದಕ್ಕಾಗಲಿ ಅಥವಾ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸುಮಲತಾ ಅವರಿಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿ ವರಿಷ್ಠರು ಒಲವು ತೋರಿಲ್ಲದಿರುವುದು ಇದೀಗ ಸ್ಪಷ್ಟವಾಗಿದೆ.

ಬಿಜೆಪಿ ಬಿಡುಗಡೆ ಮಾಡಿರುವ ಮೊದಲನೇ ಹಾಗೂ ಎರಡನೇ ಪಟ್ಟಿಯಲ್ಲಿ ಸುಮಲತಾ ಅವರ ಹೆಸರಿಲ್ಲ. ಇದರೊಂದಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ಸಿಗುವ ಸಾಧ್ಯತೆ ಬಹುತೇಕ ಇಲ್ಲವಾಗಿದೆ.

ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷದ ಟಿಕೆಟ್ ಪಡೆಯುವ ಸಲುವಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಬಂದಿದ್ದರು. ಈ ಬೆಳವಣಿಗೆ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಕುತೂಹಲವನ್ನು ಕೆರಳಿಸಿದ್ದವು. ಅಲ್ಲದೆ ಜೆಡಿಎಸ್ ಪಾಳೆಯದಲ್ಲಿ ಚುನಾವಣಾ ಕಾರ್ಯ ಚಟುವಟಿಕೆಗಳು ತಟಸ್ಥವಾಗಿ ಉಳಿದಿದ್ದರಿಂದ ಸುಮಲತಾ ಅವರಿಗೆ ಟಿಕೆಟ್ ಸಿಗಬಹುದೆಂದು ನಂಬಲಾಗಿತ್ತು. ಟಿಕೆಟ್ ಸಿಗುವ ಖಚಿತ ವಿಶ್ವಾಸದೊಂದಿಗೆ ಸುಮಲತಾ ಕೂಡ ಮಂಡ್ಯ ಜಿಲ್ಲಾ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ಮಾ.15ರ ಬಳಿಕ ಬಿಜೆಪಿ ಪಕ್ಷವನ್ನು ಸೇರುತ್ತೇನೆ. ಆನಂತರ ಪ್ರತಿ ತಾಲೂಕುಗಳಿಗೆ ತೆರಳಿ ಮುಖಂಡರೊಂದಿಗೆ ಸಭೆ ನಡೆಸುವುದಾಗಿ ರೂಪುರೇಷೆಗಳನ್ನು ತಯಾರಿಸಿಕೊಳ್ಳುತ್ತಿದ್ದರು. ಅಲ್ಲದೆ ಬೆಂಗಳೂರಿನಲ್ಲೂ ಆಪ್ತರು ಬೆಂಬಲಿಗರನ್ನು ಸೇರಿಸಿಕೊಂಡು ಸಭೆ ನಡೆಸಿ ಚುನಾವಣಾ ಅಖಾಡ ಪ್ರವೇಶಿಸುವ ಮುನ್ಸೂಚನೆಯನ್ನು ನೀಡಿದ್ದರು.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ಸುಮಲತಾ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಿಸದೇ ಇರುವುದು ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ. ಇದರ ನಡುವೆ ಸಂಸದೆ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳೂ ಇಲ್ಲವಾಗಿದೆ. ಒಮ್ಮೆ ಮೈತ್ರಿ ಪಕ್ಷದ ಟಿಕೆಟ್ ಸಿಗದಿದ್ದರೆ ಮೈತ್ರಿ ಧರ್ಮ ಪಾಲನೆ ಮಾಡುವುದಾಗಿ ಸುಮಲತಾ ಹೇಳಿರುವ ಮಾತಿಗೆ ಬದ್ಧರಾಗುವರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

Share this article