ಬಿಬಿಎಂಪಿ ವ್ಯಾಪ್ತಿಯಲ್ಲಿ ವಸತಿ ಹಾಗೂ ವಸತಿಯೇತರ ಕಟ್ಟಡಗಳಲ್ಲಿ ವಾಹನ ನಿಲುಗಡೆಯ ಸ್ಥಳಕ್ಕೂ ದರ ನಿಗದಿ

KannadaprabhaNewsNetwork | Updated : Apr 02 2025, 09:01 AM IST

ಸಾರಾಂಶ

ವಾಹನಗಳ ಪಾರ್ಕಿಂಗ್‌ ಸ್ಥಳಕ್ಕೂ ಬಿಬಿಎಂಪಿ ದರ ನಿಗದಿ ಮಾಡಲು ಮುಂದಾಗಿದೆ. ಈ ಸಂಬಂಧ ಕರಡು ಪ್ರತಿ ಸಿದ್ಧಪಡಿಸಿದೆ.

  ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ವಸತಿ ಹಾಗೂ ವಸತಿಯೇತರ ಕಟ್ಟಡಗಳಲ್ಲಿ ವಾಹನ ನಿಲುಗಡೆಯ ಪ್ರತಿ ಚದರಡಿಗೆ ಪರಿಷ್ಕೃತ ದರ ನಿಗದಿಪಡಿಸುವ ಕುರಿತ ಕರಡು ಅಧಿಸೂಚನೆ ಹೊರಡಿಸಲಾಗಿದೆ.

ಈ ಕುರಿತು ಆಕ್ಷೇಪಣೆಗಳಿದ್ದರೆ, ಬಿಬಿಎಂಪಿಯ ಮುಖ್ಯ ಆಯುಕ್ತರು, ನರಸಿಂಹರಾಜ ಚೌಕ, ಬೆಂಗಳೂರು-560 002 ವಿಳಾಸಕ್ಕೆಏಳು ದಿನದಲ್ಲಿ ಸಲ್ಲಿಸುವುದಕ್ಕೆ ಕೋರಲಾಗಿದೆ.

ಬಿಬಿಎಂಪಿಯ ಕರಡು ಅಧಿಸೂಚನೆಯಲ್ಲಿ ವಸತಿ ಕಟ್ಟಡದಲ್ಲಿ 150 ಚದರಡಿ ವಾಹನ ಪಾರ್ಕಿಂಗ್‌ಗೆ ಸ್ಥಳವಕಾಶ ಮೀಸಲಿಟ್ಟಿದ್ದರೆ, ವಾರ್ಷಿಕವಾಗಿ ₹600 ಪಾವತಿ ಮಾಡಬೇಕಾಗಲಿದೆ. ವಸತಿಯೇತರ ಕಟ್ಟಡಗಳಲ್ಲಿ ₹1,125 ದರ ವಿಧಿಸುವುದಕ್ಕೆ ಮುಂದಾಗಿದೆ.

ಈ ಹಿಂದೆಯೂ ಬಿಬಿಎಂಪಿಯು ವಸತಿ ಹಾಗೂ ವಸತಿಯೇತರ ಕಟ್ಟಡಗಳಲ್ಲಿ ವಾಹನ ಪಾರ್ಕಿಂಗ್‌ಗೆ ದರ ನಿಗದಿ ಪಡಿಸಿದ ಸ್ಥಳಕ್ಕೆ ಆಸ್ತಿ ತೆರಿಗೆಯ ಶೇ.50 ರಷ್ಟು ದರದಂತೆ ತೆರಿಗೆ ವಸೂಲಿ ಮಾಡುತ್ತಿತ್ತು. ಇದೀಗ ವಸತಿ ಕಟ್ಟಡದ ಪಾರ್ಕಿಂಗ್‌ ಸ್ಥಳದ ಪ್ರತಿ ಚದರಡಿಗೆ ₹2 ಹಾಗೂ ವಸತಿಯೇತರ ಕಟ್ಟಡ ಪಾರ್ಕಿಂಗ್‌ ಸ್ಥಳದ ಪ್ರತಿ ಚದರಡಿಗೆ ₹3 ನಂತೆ ಇಡೀ ನಗರಕ್ಕೆ ಏಕರೂಪ ದರ ನಿಗದಿಪಡಿಸುವುದಕ್ಕೆ ತಯಾರಿ ಮಾಡಿಕೊಂಡಿದೆ.

ಆದರೆ, ವಲಯ ವರ್ಗೀಕರಣ ಆಧಾರದಲ್ಲಿ ತೆರಿಗೆಯೂ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಏರಿಳಿತ ಉಂಟಾಗುತ್ತಿತ್ತು. ವಸತಿ ಕಟ್ಟಡಕ್ಕೆ ಕಡಿಮೆ ಆಸ್ತಿ ತೆರಿಗೆ ವಿಧಿಸಿರುವುದರಿಂದ ಪಾರ್ಕಿಂಗ್‌ ತೆರಿಗೆಯೂ ಕಡಿಮೆಯಾಗಿತ್ತು. ಇನ್ನೂ ವಸತಿಯೇತರ ಕಟ್ಟಡದ ಆಸ್ತಿ ತೆರಿಗೆ ಪ್ರಮಾಣ ಹೆಚ್ಚಾಗಿದ್ದರಿಂದ ಹೆಚ್ಚಿನ ಮೊತ್ತದ ತೆರಿಗೆ ಪಾವತಿ ಮಾಡಲಾಗುತ್ತಿತ್ತು.ಇದೀಗ ರಾಜ್ಯ ಪತ್ರದಲ್ಲಿ ವಲಯ ವರ್ಗೀಕರಣ ಕೈ ಬಿಟ್ಟು ವಸತಿ ಹಾಗೂ ವಸತಿಯೇತರ ಆಧಾರದಲ್ಲಿ ದರ ನಿಗದಿ ಪಡಿಸುವುದಕ್ಕೆ ಮುಂದಾಗಿದೆ.ಉದ್ಯಮಿಗಳ ಲಾಬಿ?

ಬಿಬಿಎಂಪಿಯು ಹೊಸ ರೀತಿಯ ಪಾರ್ಕಿಂಗ್‌ ದರ ನಿಗದಿಪಡಿಸುವ ಹಿಂದೆ ನಗರದ ಮಾಲ್‌, ಹೋಟೆಲ್‌, ಆಸ್ಪತ್ರೆ ಸೇರಿದಂತೆ ದೊಡ್ಡ ದೊಡ್ಡ ವ್ಯಾಪಾರೋದ್ಯಮಿಗಳ ಸರ್ಕಾರದ ಮಟ್ಟದಲ್ಲಿ ಭಾರೀ ಲಾಬಿ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ವಸತಿಯೇತರ ಕಟ್ಟಡದಲ್ಲಿ ಬಿಬಿಎಂಪಿಯು ಈ ವರೆಗೆ ಆಸ್ತಿ ತೆರಿಗೆಯ ಶೇ.50 ರಷ್ಟು ವಾಣಿಜ್ಯ ಆಸ್ತಿ ತೆರಿಗೆಯ ದರದಲ್ಲಿ ಪಾರ್ಕಿಂಗ್‌ ಜಾಗಕ್ಕೆ ಶುಲ್ಕ ವಿಧಿಸಲಾಗುತ್ತಿತ್ತು. ಇದನ್ನು ತಪ್ಪಿಸಿಕೊಳ್ಳುವುದಕ್ಕೆ ಲಾಬಿ ನಡೆಸಲಾಗಿದೆ. ಆ ಲಾಬಿಗೆ ಮಣಿದ ಸರ್ಕಾರವು ಈ ಹೊಸ ಮಾದರಿಯ ಪಾರ್ಕಿಂಗ್‌ ದರ ಜಾರಿಗೊಳಿಸುವುದಕ್ಕೆ ಮುಂದಾಗಿದೆ ಎಂಬ ಗಂಭೀರ ಆರೋಪ ಹೇಳಿ ಬಂದಿದೆ. ಇದರಿಂದ ಮಾಲ್‌, ಆಸ್ಪತ್ರೆ, ಹೋಟೆಲ್‌ ಮಾಲೀಕರಿಗೆ ಕೋಟ್ಯಾಂತರ ರು. ಉಳಿತಾಯವಾಗಲಿದೆ. ಸದ್ಯದ ಪಾರ್ಕಿಂಗ್‌ ದರಕ್ಕೆ ಶೇ.75 ರಷ್ಟು ವಿನಾಯಿತಿ ಸಿಗಲಿದೆ ಎನ್ನಲಾಗಿದೆ.

ವಸತಿಯೇತರಿಗೆ ಎಷ್ಟು ಲಾಭ ಗೊತ್ತಾ?

ಮೆಜೆಸ್ಟಿಕ್‌ ಸಮೀಪದ ಪ್ರಭಾವಿ ರಾಜಕಾರಣಿಯ ಮಾಲೀಕತ್ವದ ಮಾಲ್‌ನಲ್ಲಿ 3 ಲಕ್ಷ ಚದರಡಿಯಷ್ಟು ವಾಹನ ಪಾರ್ಕಿಂಗ್‌ ಸ್ಥಳ ಹೊಂದಿದೆ. ಈ ಸ್ಥಳಕ್ಕೆ ವಾರ್ಷಿಕ 1.77 ಕೋಟಿ ರು. ತೆರಿಗೆ ಪಾವತಿ ಮಾಡುತ್ತಿತ್ತು. ಬಿಬಿಎಂಪಿ ಹೊರಡಿಸಿರುವ ಕರಡು ಜಾರಿಗೆ ಬಂದರೆ ವಾರ್ಷಿಕ ಕೇವಲ 22 ಲಕ್ಷ ರು.ಗೆ ಪಾರ್ಕಿಂಗ್‌ ತೆರಿಗೆ ಇಳಿಕೆಯಾಗಲಿದೆ. ಬಿಬಿಎಂಪಿಗೆ ಪಾವತಿಸುವ ವಾರ್ಷಿಕ ತೆರಿಗೆಯನ್ನು ಮಾಲ್‌ ಮಾಲೀಕರು ಕೇವಲ ಒಂದು ತಿಂಗಳಿನಿಂದ ಸಾರ್ವಜನಿಕರ ವಾಹನ ಪಾರ್ಕಿಂಗ್‌ ನಿಂದ ವಸೂಲಿ ಮಾಡಲಿದ್ದಾರೆ.

ಜನಸಾಮಾನ್ಯರಿಗೆ ಹೊರೆ ಹೇಗೆ?

ವಲಯ ವರ್ಗೀಕರಣ ಆಧಾರಿಸಿ ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹಿಸುತ್ತಿದೆ. ಈ ಪ್ರಕಾರ ಎಫ್‌ ವಲಯದಲ್ಲಿರುವ ಆಸ್ತಿ ಮಾಲೀಕ ತನ್ನ ಕಟ್ಟಡದ ಪ್ರತಿ ಚದರಡಿಗೆ ₹1.20 ದರದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಲಿದ್ದಾನೆ. ಆದರೆ, ಹೊಸ ಕರಡು ಜಾರಿಗೆ ಬಂದರೆ, ಪಾರ್ಕಿಂಗ್‌ ಸ್ಥಳಕ್ಕೆ ಆಸ್ತಿ ತೆರಿಗೆಗಿಂತ ಹೆಚ್ಚು ಅಂದರೆ, ಪ್ರತಿ ಚದರಡಿಗೆ ₹2 ನಂತೆ ಪಾರ್ಕಿಂಗ್‌ ಶುಲ್ಕ ಪಾವತಿ ಮಾಡಬೇಕಾಗಲಿದೆ.

ಇದು ನಗರ ಎ ಮತ್ತು ಬಿ ವಲಯದ ವಸತಿ ಕಟ್ಟಡದ ಮಾಲೀಕರಿಗೆ ಹೊಸ ಪದ್ಧತಿ ಜಾರಿಗೆ ಬಂದರೆ ಹೆಚ್ಚು ಹೊರೆ ಆಗುವುದಿಲ್ಲ. ಆದರೆ, ಉಳಿದ ಎಲ್ಲಾ ವಲಯದ ವಸತಿ ಕಟ್ಟಡಗಳ ಮಾಲೀಕರಿಗೆ ಭಾರೀ ಹೊರೆ ಆಗುವುದು ನಿಶ್ಚಿತವಾಗಿದೆ ಎನ್ನಲಾಗಿದೆ.

Share this article