ನನ್ನನ್ನು ಗೆಲ್ಲಿಸಿ, ಮೋದಿ ಕೈ ಬಲ ಪಡಿಸಿ: ಈಶ್ವರಪ್ಪ

KannadaprabhaNewsNetwork | Published : Apr 11, 2024 12:53 AM

ಸಾರಾಂಶ

ಬೈಂದೂರು ಕ್ಷೇತ್ರದ ಶಿರೂರು ಗ್ರಾಮಕ್ಕೆ ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಭೇಟಿ ಕಾರ್ಯಕರ್ತ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೈಂದೂರು

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಪ್ರಚಾರಕ್ಕೂ ಮೊದಲು ಈಶ್ವರಪ್ಪ ಕೊಲ್ಲೂರಿಗೆ ತೆರಳಿ ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದರು.

ದೇವರ ಕುಂದ, ನೆಂಪು, ಬಗ್ವಾಡಿ ಕ್ರಾಸ್, ಕಂಚಕೋಡು, ನಾಗೂರು, ಉಪ್ಪುಂದ, ಬೈಂದೂರು, ಶಿರೂರು ಗ್ರಾಮಗಳಿಗೆ ತೆರಳಿ ಕಾರ್ಯಕರ್ತ ಸಭೆ ನಡೆಸಿ ಚುನಾವಣಾ ಪೂರ್ವ ಭಾವಿ ಸಭೆ ನಡೆಸಿದರು.

ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಏ.12ರಂದು ನಾಮ ಪತ್ರ ಸಲ್ಲಿಸುತ್ತೇನೆ. ನೀವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಶಿವಮೊಗ್ಗಕ್ಕೆ ಆಗಮಿಸಿ ನನಗೆ ಆಶೀರ್ವಾದ ಮಾಡಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ, ಮೋದಿ ಕೈ ಬಲ ಪಡಿಸಲು ಬೆಂಬಲ ನೀಡುವಂತೆ ಮನವಿ ಮಾಡಿದರು.

ಪ್ರಚಾರ ಮಧ್ಯೆ ದೇವತಾ ಕಾರ್ಯದಲ್ಲಿ ಭಾಗಿ:

ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಮಧ್ಯೆ ಕೆ.ಎಸ್.ಈಶ್ವರಪ್ಪ ಕೊಲ್ಲೂರು ದೇವಸ್ಥಾನ ಭೇಟಿ ನಂತರ ಹಂಪಾರ ಗ್ರಾಮದಲ್ಲಿರುವ ಉದ್ಬವ ಶ್ರೀಮಹಾ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಹೋಮದಲ್ಲಿ ಪಾಲ್ಗೊಂಡು ಮಹಾಗಣಪತಿ ದರ್ಶನ ಪಡೆದರು.

ಬೆಣ್ಗೇರೆ ಗ್ರಾಮದ ಶ್ರೀನಾಗ ದೇವಸ್ಥಾನಕ್ಕೆ ಭೇಟಿ‌ ನೀಡಿ ನಾಗ ಮಂಡಲ ಕಾರ್ಯಕ್ರಮದಲ್ಲಿ ಭಾಗಿಯಾಗಿ‌ ನಾಗ ದೇವರ ದರ್ಶನ ಪಡೆದರು. ಕಂಚಗೋಡು ಗ್ರಾಮದ ಮೀನುಗಾರರ ಪ್ರದೇಶಕ್ಕೆ ತೆರಳಿ ಶ್ರೀಕಾಳಿಕಾಂಬ ದರ್ಶನ ಪಡೆದು ಉಪ್ರಾಳಿಯಲ್ಲಿ ಜನಾರ್ದನ ದೇವರ ದರ್ಶನ ನಂತರ ಬೈಂದೂರಿನಲ್ಲಿ ಶ್ರೀ ಸೇನೇಶ್ವರ ಸ್ವಾಮಿಯ ದರ್ಶನ ಪಡೆದು ಯುಗಾದಿ ಚಂದ್ರ ದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಮೊಗವೀರ ಸಮುದಾಯದ ಮುಖಂಡರಾದ ಲೋಹಿತಾಶ್ವ, ಜಯಂತ್, ಕಟ್ಟೆ ಬೆಲ್ತೂರು ಗ್ರಾಮ ಪಂಚಾಯತಿ ಸದಸ್ಯರಾದ ದಿನೇಶ್ ಕಾಂಚನ್, ಗಣೇಶ್ ಮಲ್ಲಾರಿ, ರಮೇಶ್ ಕಾಂಚನ್. ಮೀನುಗಾರ ಸಮಾಜದ ಗೋಪಾಲ್, ಕೆ.ನಾರಾಯಣ, ಕೊಲ್ಲೂರು ದೇವಸ್ಥಾನದ ಮಾಜಿ ಟ್ರಸ್ಟಿ ಗೋಪಾಲಕೃಷ್ಣ ನಾಡ, ದೇವಾಡಿಗ ಸಮಾಜದ ದಿನೇಶ್ ದೇವಾಡಿಗ, ರಾಜು, ಸುರೇಶ್ ದೇವಾಡಿಗ. ಉಪ್ರಳ್ಳಿ ಗ್ರಾಮದ ಮೀನುಗಾರ ಸಮಾಜದ ವೆಂಕಟೇಶ್, ವಿನೋದ್ ರಾಜ್, ದಾಮೋದರ್, ಸಂತೋಷ್ ಉಪಸ್ಥಿತರಿದ್ದರು.

Share this article