ಎನ್ ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ, ಮೋದಿ ಅವರಿಗೆ ಶಕ್ತಿ ತುಂಬಿ: ಎಚ್ ಡಿಡಿ

KannadaprabhaNewsNetwork | Published : Apr 15, 2024 1:22 AM

ಸಾರಾಂಶ

ಕಾವೇರಿ ಉಳಿವಿಗಾಗಿ ನಾನು ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಚಡ್ಡಿ ಮೆರವಣಿಗೆ ನಡೆಸಿ ಕಾವೇರಿ ರಕ್ಷಣೆ ಮಾಡುವ ಕೆಲಸ ಮಾಡಿದ್ದೇನೆ. ಕಾವೇರಿ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಕಾವೇರಿ ರಕ್ಷಣೆಗಾಗಿ ಕಾವೇರಿ ಕೊಳ್ಳದ ಎಲ್ಲಾ 10 ಎನ್ ಡಿಎ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಕಳುಹಿಸಿಕೊಟ್ಟು, ಆ ನಂತರ ಮೋದಿ ಅವರೊಂದಿಗೆ ಚರ್ಚಿಸಿ ಕಾವೇರಿ ನದಿ ನೀರಿನ ಸಮಸ್ಯೆ ಇತ್ಯರ್ಥ ಮಾಡಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಪಾಂಡವಪುರ

ಕಾವೇರಿ ಅಣೆಕಟ್ಟೆ ವ್ಯಾಪ್ತಿಯಲ್ಲಿ ಎಲ್ಲಾ ಎನ್ ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬಿ ನಂತರ ಕಾವೇರಿ ನದಿನೀರು ಹಂಚಿಕೆ ವಿವಾದ ಹಾಗೂ ಮೇಕೆದಾಟು ಯೋಜನೆಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.

ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಎನ್ ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿದ ನಂತರ ಡಾ.ಬಿ.ಆರ್. ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿ ಮಾತನಾಡಿದರು.

ಕಾವೇರಿ ಉಳಿವಿಗಾಗಿ ಎನ್ ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ:

ಕಾವೇರಿ ಉಳಿವಿಗಾಗಿ ನಾನು ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಚಡ್ಡಿ ಮೆರವಣಿಗೆ ನಡೆಸಿ ಕಾವೇರಿ ರಕ್ಷಣೆ ಮಾಡುವ ಕೆಲಸ ಮಾಡಿದ್ದೇನೆ. ಕಾವೇರಿ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಕಾವೇರಿ ರಕ್ಷಣೆಗಾಗಿ ಕಾವೇರಿ ಕೊಳ್ಳದ ಎಲ್ಲಾ 10 ಎನ್ ಡಿಎ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಕಳುಹಿಸಿಕೊಟ್ಟು, ಆ ನಂತರ ಮೋದಿ ಅವರೊಂದಿಗೆ ಚರ್ಚಿಸಿ ಕಾವೇರಿ ನದಿ ನೀರಿನ ಸಮಸ್ಯೆ ಇತ್ಯರ್ಥ ಮಾಡಿಸಿಕೊಳ್ಳಬೇಕು ಎಂದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಮಗೆ 200 ವರ್ಷಗಳಿಂದಲೂ ಅನ್ಯಾಯವಾಗುತ್ತಿದೆ. ಪ್ರಧಾನಿ ಮೋದಿ ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಮೋದಿ ಅವರಿಗೆ ಮೂರನೇ ಬಾರಿಗೆ ಈ ದೇಶವನ್ನು ಆಳುವ ಶಕ್ತಿಯನ್ನು ಚಾಮುಂಡೇಶ್ವರಿ ಕೊಡಲಿ ಎಂದು ಹಾರೈಸಿದರು.

ಕುಮಾರಸ್ವಾಮಿ ಎದುರು ನಿಂತಿರುವ ವ್ಯಕ್ತಿ ಹಣದಲ್ಲಿ ಗಟ್ಟಿಯಾಗಿದ್ದಾನೆ. ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸ್ವಚ್ಛ ರಾಜಕಾರಣ ಮಾಡಿದ್ದಾರೆ. ರೈತರ ಸಾಲಮನ್ನಾ, ಜನ, ರೈತಪರ, ಮಹಿಳೆಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಂಡ್ಯ ಜಿಲ್ಲೆಗೆ ಸಾಕಷ್ಟು ಕೆಲಸ ಮಾಡಿ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಎಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಗೆದಿದ್ದಾರೆ ಎಂದು ಹೇಳಿದ್ದಾರೆ. ಜಿಲ್ಲೆಯ ಜನತೆ ಶಕ್ತಿ ತೋರಿಸಿ ಕುಮಾರಸ್ವಾಮಿ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ಸರಕಾರ ಕೊಡುವ ಗ್ಯಾರಂಟಿಗೆ ಮೋಸ ಹೋಗಬೇಡಿ. ಮೋದಿ ಬಹಳ ಗ್ಯಾರಂಟಿ ಕೊಟ್ಟಿದ್ದಾರೆ. ಕರ್ನಾಟಕದ ನೀರಾವರಿ ಮಂತ್ರಿ ತುಂಬಾ ತಜ್ಞರು, ಬರೀ ನೀರಾವರಿ ಅಲ್ಲ. ಇಡೀ ಬೆಂಗಳೂರನ್ನೇ ಬಾಚಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿದರು.ಸಮಾರಂಭದಲ್ಲಿ ಮಾಜಿ ಸಂಸದ ಕುಪೆಂದ್ರರೆಡ್ಡಿ, ಕೆ.ಆರ್‌.ಪೇಟೆ ಶಾಸಕ ಎಸ್.ಟಿ.ಮಂಜು, ಮಾಜಿ ಶಾಸಕರಾದ ಅನ್ನದಾನಿ, ಕೆ.ಟಿ.ಶ್ರೀಕಂಠೆಗೌಡ, ಮುಖಂಡರಾದ ಅಂಬುಜಮ್ಮ, ನಾಗಮ್ಮ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲೇಶ್, ಧನಂಜಯ್ಯ, ಜಿಪಂ ಮಾಜಿ ಸದಸ್ಯ ಸಿ.ಆಶೋಕ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಯಶವಂತ್, ದ್ಯಾವಪ್ಪ, ಡೈರಿ ಅಧ್ಯಕ್ಷ ಸಿ.ಶಿವಕುಮಾರ್, ತಾಲೂಕು ವೀರಶೈವ ಮಹಸಭಾ ಅಧ್ಯಕ್ಷ ನಿರಂಜನ್ ಬಾಬು, ಮೈಷುಗರ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ ಸೇರಿ ಹಲವರು ಇದ್ದರು.

ಜನರ ಆಶೀರ್ವಾದದಿಂದ ಎಚ್ ಡಿಕೆ ಆರೋಗ್ಯ ಸ್ಥಿರ

ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಳಿ ವಯಸ್ಸಿನಲ್ಲೂ ಕಾವೇರಿ ನದಿ ನೀರು ಹಾಗೂ ಮೇಕೆದಾಟು ಯೋಜನೆಗಾಗಿ ರಾಜ್ಯಸಭೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ದೇವೇಗೌಡರು ಜೀವನದೊದ್ದಕ್ಕೂ ಕಾವೇರಿ ನೀರಿಗಾಗಿ ಹೋರಾಟ ನಡೆಸಿದ್ದಾರೆ ಎಂದರು.

ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಕೆಲವರು ಲಘುವಾಗಿ ಮಾತನಾಡಿದ್ದಾರೆ. ಅನುಮಾನ ವ್ಯಕ್ತಪಡಿಸುವ ನಾಯಕರು ಹೋಗಿ ಪರಿಶೀಲನೆ ನಡೆಸಬಹುದು. ರಾಜ್ಯದ ಜನರ ಆಶೀರ್ವಾದ ಹಾಗೂ ಅವರು ಮತ್ತು ತಂದೆ-ತಾಯಿ ಮಾಡಿದ ಧಾನ, ಧರ್ಮ, ಒಳ್ಳೆಯ ಕೆಲಸಗಳ ಫಲದಿಂದ ಕುಮಾರಸ್ವಾಮಿ ಅವರು ಬದುಕಿ ಬಂದಿದ್ದಾರೆ ಎಂದು ಟೀಕಕಾರರಿಗೆ ಉತ್ತರಿಸಿದರು.

Share this article