ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಬಿಜಿಕೆರೆ ಬಸವರಾಜಕೆರೆಗಳಿಗೆ ನೀರುಣಿಸುವ ಯೋಜನೆ ಸಾಕಾರಗೊಳ್ಳುವ ಮುನ್ನವೆ ಬರದ ನಾಡಿಗೆ ದಾಂಗುಡಿ ಇಟ್ಟಿರುವ ಪವನ ವಿದ್ಯುತ್ ಕಂಪನಿಗಳು ತೋರುವ ಹಣದ ಆಮಿಷಕ್ಕೆ ಸಿಲುಕುತ್ತಿರುವ ತಾಲೂಕಿನ ರೈತರು ಪಲವತ್ತಾದ ತುಂಡು ಕೃಷಿ ಭೂಮಿಯನ್ನು ಮಾರಾಟ ಮಾಡುವುದು ಸಾಮಾನ್ಯವಾಗಿ ಕಾಣಸಿಗುತ್ತಿದೆ.
ಹೌದು ದೂರದಲೆಲ್ಲೋ ಕಾಣಸಿಗುತ್ತಿದ್ದ ವಿಂಡ್ ಪ್ಯಾನ್ ಕಂಪನಿಗಳು ಬಯಲು ಸೀಮೆಗೆ ವಕ್ಕರಿಸಿವೆ. ಈಗಾಗಲೆ ಜಮೀನು ಖರೀದಿಸುವುದು ಸದ್ದಿಲ್ಲದೆ ನಡೆಯುತ್ತಿದೆ. ಸದಾ ಬರದ ನಷ್ಟದಿಂದ ಬೇಸೆತ್ತಿರುವ ಈ ಭಾಗದ ರೈತರು ಪುಡಿಗಾಸಿನ ಆಸೆಗೆ ಇರುವ ಜಮೀನನ್ನು ಕಂಪನಿಯವರಿಗೆ ಮಾರಾಟ ಮಾಡುತ್ತಿರುವುದು ಕಾಣಸಿಗುತ್ತಿವೆ. ಕೆರೆಗಳಿಗೆ ನೀರುಣಿಸುವ ಯೋಜನೆ ಜಾರಿಯಾಗಿದ್ದರೂ ರೈತರು ಜಮೀನು ಮಾರಾಟ ಮಾಡುತ್ತಿರುವುದು ಕಾಣಸಿಗುತ್ತಿದೆ.ಜೆಎಸ್‌ಡಬ್ಲ್ಯು, ರಿನಿವ್ ಸೇರಿದಂತೆ ವಿವಿಧ ಕಂಪನಿಗಳು ತಾಲೂಕಿನ ಕಸಬಾ ಹೋಬಳಿಯ ಮುತ್ತಿಗಾರಹಳ್ಳಿ, ಚಿಕ್ಕೊಬನಹಳ್ಳಿ, ಸೂರಮ್ಮನಹಳ್ಳಿ, ಬಿಜಿಕೆರೆ, ದುಪ್ಪಿ, ತುಮಕೂರ್ಲಹಳ್ಳಿ, ಚಿಕ್ಕುಂತಿ, ಯರಪೋತ ಜೋಗಿಹಳ್ಳಿ ಚಳ್ಳಕೆರೆ ತಾಲೂಕಿನ ಚೌಳಕೆರೆ, ಅಬ್ಬೇನಹಳ್ಳಿ, ಗ್ರಾಮಗಳನ್ನು ಗುರುತಿಸಿ ಜಮೀನು ಖರೀದಿಸುತ್ತಿವೆ. ಸಿದ್ದಯ್ಯನಕೋಟೆ, ತುಪ್ಪದಕ್ಕನಹಳ್ಳಿ ಸರ್ವೇ ನಂಬರ್‌ಗಳಲ್ಲಿ ಈಗಾಗಲೆ ಮೂರು ಕಂಬಗಳನ್ನು ಸ್ಥಾಪನೆ ಮಾಡಿವೆ. ಉಳಿದಂತೆ ಮೂರು ವಿದ್ಯುತ್ ಕಂಬಗಳ ನಿರ್ಮಾಣ ಪ್ರಗತಿಯಲ್ಲಿವೆ.
ಪ್ರತಿ ಕಂಬ ನಿರ್ಮಾಣಕ್ಕೆ 2 ಎಕರೆ ಜಮೀನು ಅಗತ್ಯವಿವೆ. ಒಂದು ಕಂಬದಿಂದ ಮತ್ತೊಂದು ಕಂಬಕ್ಕೆ 500 ಮೀ. ಅಂತರದಲ್ಲಿ ಸ್ಥಾಪಿಸಲಾಗುತ್ತಿದೆ ಎನ್ನಲಾಗಿದೆ. ತಾಲೂಕಿನಲ್ಲಿ 200ಕ್ಕೂ ಕಂಬಗಳನ್ನು ಸ್ಥಾಪನೆಗೆ ಮುಂದಾಗಿವೆ ಎನ್ನುವುದು ಗುತ್ತಿಗೆದಾರರೊಬ್ಬರ ಅಭಿಪ್ರಾಯವಾಗಿದೆ. ಇದಕ್ಕಾಗಿ ಜಮೀನು ಖರೀದಿಸಲಾಗುತ್ತಿದ್ದು ಕೆಲವೇ ತಿಂಗಳಲ್ಲಿ ನೂರಾರು ಸಂಖ್ಯೆಯ ಗಾಳಿಯಂತ್ರಗಳ ಸದ್ದು ಕೇಳಿಬರಲಿದೆ.ಬಹುತೇಕ ಸಣ್ಣ ಅತಿ ಸಣ್ಣ ರೈತರೇ ಹೆಚ್ಚಾಗಿರುವ ಈ ಭಾಗದಲ್ಲಿ ಕೆಲವರು ಹಣದ ಆಸೆಗೆ ಕೈಲಿರುವ ತುಂಡು ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ 10 ರಿಂದ 15 ಲಕ್ಷಕ್ಕೂ ಹೆಚ್ಚಿನ ಬೆಲೆಯಲ್ಲಿ ಜಮೀನು ನೀಡುತ್ತಿದ್ದು ರೈತರು ಮುಂಬರುವ ದಿನಗಳಲ್ಲಿ ಕೂಲಿ ಕಾರ್ಮಿಕರಾಗುವುದನ್ನು ಅಲ್ಲಗೆಳೆಯುವಂತಿಲ್ಲ.
ನೆರೆಯ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರತಿ ಹಳ್ಳಿಗಳ ಮೂಲೆ ಮೂಲೆಯಲ್ಲಿಯೂ ವಿಂಡ್ ಪ್ಯಾನ್‌ನ್ ಗಳು ನೆಲೆಯೂರಿವೆ ಅಲ್ಲದೆ ವಿದ್ಯುತ್ ಸರಭರಾಜು ಲೈನುಗಳು ಜಮೀನುಗಳನ್ನು ಆಕ್ರಮಿಸಿಕೊಂಡು ಪಲವತ್ತಾದ ಕೃಷಿ ಭೂಮಿಗಳಲ್ಲಿ ಹಸಿರು ಕಾಣದಂತೆ ಮಾಡಿರುವ ಕಂಪನಿಗಳು ತಾಲೂಕಿಗೆ ಮೆಲ್ಲನೆ ದಾಪುಗಾಲಿಟ್ಟಿದ್ದು ಕೆಲವೇ ದಿನಗಳಲ್ಲಿ ಬರದ ನಾಡಿನ ರೈತರ ಭೂಮಿಯಲ್ಲಿ ಬೃಹದಾಕಾರದ ಕಂಬಗಳು ತಲೆ ಎತ್ತಿ ಕೃಷಿ ಭೂಮಿಯನ್ನು ಆಕ್ರಮಿಸಿಕೊಳ್ಳುವ ಕಾಲವೂ ದೂರವೇನಿಲ್ಲ. ಎನ್ನಲಾಗುತ್ತಿದೆ.ಬಯಲು ಸೀಮಯ ಜನರ ಬಹುದಿನದ ಬೇಡಿಕೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲೂಕಿನ 20 ಕೆರೆಗಳಿಗೆ ನೀರುಣಿಸುವ ಯೋಜನೆ ಮುಂಜೂರಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಯೋಜನೆ ಸಾಕಾರಗೊಂಡು ಎಲ್ಲಾ ಕೆರೆಗಳಿಗೆ ನೀರು ಬರಲಿದೆ ಎನ್ನಲಾಗಿದೆ. ಹೀಗಿದ್ದರೂ ಸದಾ ಬರ, ಬೆಳೆ ನಷ್ಟದ ಸುಳಿಯಲ್ಲಿ ಸಿಲುಕಿ ಬಸವಳಿದ ರೈತರು ತಾಲೂಕು ನೀರಾವರಿಯಾಗುವ ಮುನ್ನವೇ ಲಕ್ಷದ ಆಸೆಗೆ ನೂರಾರು ಎಕರೆ ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿದ್ದು ಕೃಷಿ ಭೂಮಿ ಕ್ಷೀಣಿಸುವುದನ್ನು ಅಲ್ಲಗೆಳೆಯುವಂತಿಲ್ಲ. ಕೆರೆ ತುಂಬಿಸುವ ಯೋಜನೆ ಇನ್ನಾದರೂ ತ್ವರಿತವಾಗಬೇಕೆನ್ನುವುದು ಜನತೆಯ ಆಗ್ರಹವಾಗಿದೆ.
ಕರಡಿಗಳ ಆವಾಸ್ಥಾನಕ್ಕೆ ದಕ್ಕೆಯಾಗುವ ಆತಂಕ:
ಬೆಟ್ಟ ಗುಡ್ಡದ ಸಾಲನ್ನೇ ಹೊದ್ದಿರುವ ತಾಲೂಕು ಕರಡಿಗಳ ಆವಾಸ ಸ್ಥಾನ ಜತೆಗೆ ಗುಡೇಕೋಟೆ ಕರಡಿಧಾಮದ ಗಡಿಯನ್ನು ಹಂಚಿಕೊಂಡಿದೆ. ಕರಡಿಗಳ ಚಲನ ವಲನ ಪ್ರದೇಶವಾಗಿದೆ. ಆಹಾರ ಹರಸಿ ನಿತ್ಯವೂ ಒಂದಿಲ್ಲೊಂದು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿವೆ. ಇಂತಹ ಪ್ರದೇಶದಲ್ಲಿ ಬೃಹತ್ ಗಾತ್ರದ ವಿಂಡ್ ಪ್ಯಾನ್‌ಗಳು ನಿರ್ಮಾಣದಿಂದ ಮತ್ತು ಬಾರಿ ವಾಹನ ಓಡಾಟ, ಪ್ಯಾನುಗಳು ಹೊರ ಸೂಸುವ ಶಬ್ದ ಮಾಲಿನ್ಯದಿಂದ ಕರಡಿಗಳ ಅವಾಸ್ಥಾನಕ್ಕೂ ದಕ್ಕೆಯಾಗುವ ಆತಂಕ ಎದುರಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಜಾಣತನ ಮೆರೆಯುತ್ತಿದ್ದಾರೆ.