ಕನ್ನಡಪ್ರಭ ವಾರ್ತೆ ದಾವಣಗೆರೆ
ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಸಮಸ್ತ ಮತದಾರರ ಆಶೀರ್ವಾದ, ಸಹಕಾರದಿಂದ ಗೆದ್ದೇ ಗೆಲ್ಲುತ್ತೇವೆ. ಗೆದ್ದ ನಂತರ ತಾವರೆ (ಕಮಲ) ಹೂವು ಮುಡಿದುಕೊಂಡೇ ಸಂಸತ್‌ಗೆ ಪ್ರವೇಶಿಸುವೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಹಿರಿಯರು, ಮುಖಂಡರು ದೇಶ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈವರೆಗೆ ನಮ್ಮ ಮನೆಯೇ ನನ್ನ ಕುಟುಂಬವಾಗಿತ್ತು. ಇದೀಗ ನನಗೆ ದಾವಣಗೆರೆ ಜಿಲ್ಲೆಯೇ ಕುಟುಂಬವಾಗಿದ್ದು,ಇಡೀ ಕ್ಷೇತ್ರದ ಜನರಿಗೆ ಎಲ್ಲಾ ರೀತಿಯಲ್ಲೂ ಸ್ಪಂದಿಸುವೆ ಎಂದರು.
ತಮ್ಮ ಮಾವ ದಿವಂಗತ ಜಿ.ಮಲ್ಲಿಕಾರ್ಜುನಪ್ಪ 7 ವರ್ಷ, ತಮ್ಮ ಪತಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ 20 ವರ್ಷ ಕ್ಷೇತ್ರದ ಸೇವೆ ಸಲ್ಲಿಸಿದ್ದಾರೆ. ಕಳೆದ 28 ವರ್ಷದಿಂದಲೂ ಕ್ಷೇತ್ರದ ಜೊತೆಗೆ, ಕಾರ್ಯಕರ್ತರೊಂದಿಗೆ ಒಡನಾಟವಿದೆ. ಚುನಾವಣೆ ಪ್ರಚಾರದ ವೇಳೆ ಎಲ್ಲಾ ಮನೆಗಳಿಗೂ ಹೋಗಿದ್ದೇನೆ. ಸಕ್ರಿಯ ರಾಜಕಾರಣವಂತೂ ನನಗೇನೂ ಹೊಸದು ಅನಿಸುತ್ತಿಲ್ಲ ಎಂದು ಹೇಳಿದರು.ಸಂಸದ ಸಿದ್ದೇಶ್ವರರು ಕ್ಷೇತ್ರದ ಜನರೊಂದಿಗೆ ನಿರಂತರವಾಗಿ ಇದ್ದೇ ಇರುತ್ತಾರೆ. ಕಳೆದ 2 ದಶಕದಿಂದಲೂ ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಮುಂದೆಯೂ ಸಿದ್ದೇಶ್ವರರ ಸಲಹೆ, ಸಹಕಾರ ಪಡೆದು, ಕೆಲಸ ಮಾಡುತ್ತೇನೆ. ಈವರೆಗೆ ಮನೆ, ವ್ಯವಹಾರ, ತೋಟ ನೋಡಿಕೊಳ್ಳುವುದು ನನ್ನ ಕೆಲಸವಾಗಿತ್ತು. ಇದೀಗ ರಾಜಕೀಯಕ್ಕೆ ನಾನೇ ಬರುತ್ತಿದ್ದೇನೆ. ಸಣ್ಣ ಕುಟುಂಬದಿಂದ ಈಗ ದೊಡ್ಡ ಕುಟುಂಬಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ ಎಂದು ಗಾಯತ್ರಿ ಸಿದ್ದೇಶ್ವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
................ವಿರೋಧಗಳೆಲ್ಲ ಸರಿಯಾಗಲಿದೆ
ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ಗಾಯತ್ರಿ ಸಿದ್ದೇಶ್ವರ ಅಂತಾ ಹೆಸರು ಬರುತ್ತಿದ್ದಂತೆ ಖುಷಿಯಾಯಿತು. ಅಲ್ಲಿವರೆಗೆ ನನಗೆ ಟಿಕೆಟ್ ಸಿಗುತ್ತದೆಂದು ಅನಿಸಿರಲಿಲ್ಲ. ರಾಷ್ಟ್ರ ನಾಯಕರು ನನಗೆ ಅವಕಾಶ ನೀಡಿದ್ದಾರೆ, ಯಾವುದೇ ಕಳಂಕ ಬಾರದಂತೆ, ಎಲ್ಲರ ಸಹಕಾರದಿಂದ ಗೆದ್ದು ಬರಲಿದ್ದೇನೆ. ಪತಿ ಜಿ.ಎಂ.ಸಿದ್ದೇಶ್ವರರ ಸಹಕಾರದಿಂದ ಎಲ್ಲಾ ಕೆಲಸ ಸಮರ್ಥವಾಗಿ ನಿಭಾಯಿಸುತ್ತೇನೆ. ವಿರೋಧ ಎಂಬುದು ಎಲ್ಲಿ ಇಲ್ಲ ಹೇಳಿ ನೋಡೋಣ. ದೇಶದಲ್ಲಿ ಎಲ್ಲಾ ಕಡೆ ವಿರೋಧ ಇದ್ದೇ ಇರುತ್ತದೆ. ಅವರೇನೂ ವಿರೋಧ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ.ಗಾಯತ್ರಿ ಸಿದ್ದೇಶ್ವರ, ದಾವಣಗೆರೆ ಬಿಜೆಪಿ ಅಭ್ಯರ್ಥಿ.
.......