ಉತ್ತಮ ಶೈಕ್ಷಣಿಕ ಅವಕಾಶಗಳಿಲ್ಲದೇ ಗ್ರಾಮೀಣ ಪ್ರತಿಭೆಗಳಿಗೆ ಹಿನ್ನಡೆ

KannadaprabhaNewsNetwork | Published : Apr 15, 2024 1:16 AM

ಸಾರಾಂಶ

ಗ್ರಾಮೀಣ ಮಕ್ಕಳ ಪ್ರತಿಭೆ ಉನ್ನತ ಮಟ್ಟದಲ್ಲಿದ್ದರೂ ಕೂಡ, ಉತ್ತಮ ಶೈಕ್ಷಣಿಕ ಅವಕಾಶಗಳಿಲ್ಲದ ಕಾರಣದಿಂದಾಗಿ ಪ್ರತಿಭೆ ಬೆಳಗಲು ಹಿನ್ನಡೆಯಾಗುತ್ತಿರುವುದು ವಿಷಾದದ ಸಂಗತಿ ಎಂದು ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಿ.ಸಿ. ಮಹೇಶ ತಿಳಿಸಿದರು.

ಹಾನಗಲ್ಲ: ಗ್ರಾಮೀಣ ಮಕ್ಕಳ ಪ್ರತಿಭೆ ಉನ್ನತ ಮಟ್ಟದಲ್ಲಿದ್ದರೂ ಕೂಡ, ಉತ್ತಮ ಶೈಕ್ಷಣಿಕ ಅವಕಾಶಗಳಿಲ್ಲದ ಕಾರಣದಿಂದಾಗಿ ಪ್ರತಿಭೆ ಬೆಳಗಲು ಹಿನ್ನಡೆಯಾಗುತ್ತಿರುವುದು ವಿಷಾದದ ಸಂಗತಿ ಎಂದು ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಿ.ಸಿ. ಮಹೇಶ ತಿಳಿಸಿದರು.ಹಾನಗಲ್ಲಿನ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಆಯೋಜಿಸಿದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸಿಇಟಿ ತರಬೇತಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಈ ಮಕ್ಕಳಲ್ಲಿ ಆಸಕ್ತಿ ಇದೆ. ಅದಕ್ಕೆ ತಕ್ಕಂತೆ ಅವಕಾಶಗಳಿಲ್ಲ. ಶ್ರದ್ಧೆಯಿಂದ ಓದುತ್ತಾರೆ. ಸರಿಯಾದ ಮಾರ್ಗದರ್ಶನದ ಕೊರತೆ ಇದೆ. ಬದಲಾದ ಕಾಲಕ್ಕೆ ಬೇಕಾಗುವ ಎಲ್ಲ ಸವಾಲುಗಳನ್ನು ಎದುರಿಸಿ ಈಗ ಶಿಕ್ಷಣದಲ್ಲಿ ಮುಂದುವರಿಯಬೇಕಾಗಿದೆ. ಆದಾಗ್ಯೂ ಗ್ರಾಮೀಣ ಪ್ರದೇಶದ ಮಕ್ಕಳು ಎಲ್ಲ ಸವಾಲುಗಳನ್ನು ಎದುರಿಸಿ ಮುನ್ನಡೆಯುವ ಸಾಹಸ ಮಾಡುತ್ತಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾದರೆ ಈ ಮಕ್ಕಳು ದೇಶಕ್ಕೆ ಆಸ್ತಿಯಾಗುತ್ತಾರೆ ಎಂದರು.ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಿ.ಶ್ರೀಹರ್ಷ ಮಾತನಾಡಿ, ಮಕ್ಕಳೇ ಮೊಬೈಲ್‌ಗೆ ಕಟ್ಟಿ ಹಾಕಿಕೊಳ್ಳಬೇಡಿ. ಮೊಬೈಲ್ ಬೇಡವಾದುದರ ಕಡೆಗೆ ಆಕರ್ಷಿಸುತ್ತದೆ. ದೊಡ್ಡ ಪಟ್ಟಣಗಳಲ್ಲಿ ಓದುವವರು ಮಾತ್ರ ವಿದ್ಯಾವಂತರು ಎಂಬ ಭಾವನೆ ಬೇಡ. ಕೀಳರಿಮೆಯಿಂದ ಹೊರಬನ್ನಿ. ನಿಮ್ಮಲ್ಲಿರುವ ಕಲಿಯುವ ಆಸಕ್ತಿಯನ್ನು ಕುಂದಿಸಿಕೊಳ್ಳಬೇಡಿ. ಶ್ರದ್ಧೆಯ ಓದಿಗೆ ಪ್ರತಿಫಲ ಇದ್ದೇ ಇದೆ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ ಎಂದರು.ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶಕ ಧಾರವಾಡದ ಅನಂತ ಸಿಡೇನೂರ ಮಾತನಾಡಿ, ಮೋಜು ಮಸ್ತಿಯಿಂದ ಕಾಲಹರಣಕ್ಕೆ ಕಾರಣವಾದರೆ ಓದು ಸಾಧಿಸಲಾರದು. ಬಣ್ಣ ಬದುಕು ಮೋಹಕ ಆಕರ್ಷಣೆಗಳು ನಮ್ಮ ಸಮಯವನ್ನು ಹಾಳು ಮಾಡುತ್ತವೆ. ಬದುಕಿನ ಶಾಂತಿ ಕಳೆಯುತ್ತದೆ ಎಂದರು.ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ಅಧ್ಯಕ್ಷತೆವಹಿಸಿದ್ದರು.

Share this article