ಹಾನಗಲ್ಲ: ಉದ್ಯಮ ಸ್ಥಾಪನೆಗೆ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಸಹಾಯಧನ ಸೌಲಭ್ಯ ಕಲ್ಪಿಸುತ್ತಿದ್ದು, ವಿಶೇಷವಾಗಿ ಮಹಿಳೆಯರು ಧೈರ್ಯದಿಂದ ಮುಂದೆ ಬಂದು ಉದ್ಯಮ ಸ್ಥಾಪಿಸಿ, ಉದ್ಯೋಗ ನೀಡುವಂತೆ ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು.ಇಲ್ಲಿನ ಜನತಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜಿಪಂನ ಗ್ರಾಮೀಣ ಕೈಗಾರಿಕಾ ವಿಭಾಗ ಆಯೋಜಿಸಿದ್ದ ತಾಲೂಕಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿಯೂ ಸಹ ಕೈಗಾರಿಕೆ ಸ್ಥಾಪನೆ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಇದುವರೆಗೆ ಜಿಲ್ಲಾಮಟ್ಟಕ್ಕೆ ಸೀಮಿತವಾಗಿದ್ದ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ತಾಲೂಕು ಮಟ್ಟದಲ್ಲಿ ಆಯೋಜಿಸಲಾಗಿದೆ. ಕೈಗಾರಿಕೆ ಸ್ಥಾಪಿಸಿ ಉತ್ಪಾದಿಸಿದ ವಸ್ತು ಪ್ರದರ್ಶನದಿಂದ ಇನ್ನೊಬ್ಬರಿಗೂ ಸಹ ಪ್ರೇರಣೆ ಸಿಗಲಿದೆ. ಗುಡಿ ಕೈಗಾರಿಕೆ ಆರಂಭಿಸಿ ಮಹಿಳೆಯರು ಮನೆಗಳಲ್ಲಿಯೇ ವಸ್ತುಗಳನ್ನು ಉತ್ಪಾದಿಸಿ ಆರ್ಥಿಕ ಸ್ಥಿತಿಗತಿ ಸುಧಾರಿಸಿಕೊಳ್ಳಲು ಅವಕಾಶಗಳು ಹೆಚ್ಚಿವೆ. ಗಂಡ, ಹೆಂಡತಿ ಇಬ್ಬರೂ ಆದಾಯ ಗಳಿಸುವ ಪ್ರವೃತ್ತಿ ನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಇತ್ತೀಚಿಗೆ ಮೂಡುತ್ತಿದೆ ಎಂದು ಹೇಳಿದ ಅವರು ಹಾನಗಲ್ ತಾಲೂಕಿನಲ್ಲಿ ಕೈಗಾರಿಕಾ ವಲಯ ಸ್ಥಾಪಿಸುವ ನಿಟ್ಟಿನಲ್ಲಿ ಒಂದಿಷ್ಟು ಉದ್ಯಮಿಗಳ ಸಭೆ ಆಯೋಜಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಾರಕೇಶ ಮಾತನಾಡಿ, ಉದ್ಯಮ ಸ್ಥಾಪನೆಗೆ ಮುಂದೆ ಬಂದರೆ ಅವಕಾಶಗಳು ಹೆಚ್ಚಿವೆ. ೫೦ ಲಕ್ಷ ರು. ವರೆಗೆ ಸಾಲ ಸೌಲಭ್ಯ ಇದೆ. ಇಲಾಖೆಯ ಸಂಪರ್ಕದಲ್ಲಿದ್ದು ಮಾಹಿತಿ ಪಡೆದುಕೊಳ್ಳಲು ಗ್ರಾಮೀಣ ಪ್ರದೇಶದ ಜನತೆಗೆ ಅನಾನುಕೂಲವಾಗಲಿದೆ ಎನ್ನುವುದನ್ನು ಮನಗಂಡು ಹಾನಗಲ್‌ನಲ್ಲಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಸಲಾಗುತ್ತಿದೆ. ಉತ್ಪಾದಿಸಿದ ವಸ್ತುಗಳ ಮಾರಾಟಕ್ಕೂ ಜಿಲ್ಲಾಮಟ್ಟದ ಸಹಕಾರ ಸಂಘದಿಂದ ವ್ಯವಸ್ಥೆ ಕಲ್ಪಿಸಲಾಗುವುದು. ರಸಾಯನಿಕ ರಹಿತ ವಸ್ತುಗಳಿಗೆ ದೇಶ, ವಿದೇಶಗಳಲ್ಲಿ ಬೇಡಿಕೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಮಹಿಳಾ ಸಂಘಗಳು ಆಸಕ್ತಿ ವಹಿಸಬೇಕಿದೆ ಎಂದರು. ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷರಾದ ನಾಗಪ್ಪ ಸವದತ್ತಿ, ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಸದಸ್ಯರಾದ ಪರಶುರಾಮ ಖಂಡೂನವರ, ವಿರುಪಾಕ್ಷಪ್ಪ ಕಡಬಗೇರಿ, ಗನಿ ಪಾಳಾ, ಮುಖ್ಯಾಧಿಕಾರಿ ವೈ.ಕೆ.ಜಗದೀಶ, ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ, ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೈಗಾರಿಕಾ ವಸ್ತುಗಳ ಮಾರಾಟ ಮೇಳ ಗಮನ ಸೆಳೆಯಿತು. ಉತ್ತಮ ವಸ್ತು ಪ್ರದರ್ಶನ ತೋರಿದ ಮಹಿಳಾ ಸಂಘಗಳಿಗೆ ಶಾಸಕ ಶ್ರೀನಿವಾಸ ಮಾನೆ ಬಹುಮಾನ ವಿತರಿಸಿದರು. ಹಾನಗಲ್ ಲಿಂ.ಕುಮಾರ ಶಿವಯೋಗಿಗಳು ಆ ದಿನಗಳಲ್ಲಿಯೇ ಮಹಿಳಾ ಸಮಾನತೆ ಸಾರಿದ್ದಾರೆ. ಈಗಂತೂ ಮಹಿಳೆಯರಿಗೆ ಪ್ರತಿ ಕ್ಷೇತ್ರಗಳಲ್ಲಿಯೂ ವಿಫುಲ ಅವಕಾಶಗಳಿವೆ. ಉದ್ಯೋಗ ಸ್ಥಾಪನೆಗೆ ಹೆಚ್ಚು ಪ್ರೋತ್ಸಾಹ ಸಹ ಸಿಗುತ್ತಿದೆ. ಅಕ್ಕಿಆಲೂರಿನಲ್ಲಿ ಕಸಬರಿಗೆ ತಯಾರಿಕಾ ಘಟಕ ಶೀಘ್ರ ಆರಂಭವಾಗಲಿದ್ದು, ೭೫-೮೦ ಮಹಿಳೆಯರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.